ಕೇಂದ್ರದ ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್ ಅಡಿಯಲ್ಲಿ ಡಿಜಿಟಲ್ ಹೆಲ್ತ್ ಐಡಿ ಪಡೆಯಲು ಶೇಕಡಾ 60 ರಷ್ಟು ಜನರು ಒಲವು ತೋರಿದ್ದಾರೆ ಎಂದು ಸರ್ವೆ ತಿಳಿಸಿದೆ. ಆದರೆ ಆರೋಗ್ಯ ಮತ್ತು ವೈದ್ಯಕೀಯ ದಾಖಲೆಗಳನ್ನು ಬಿಟ್ಟು ಸೂಕ್ಷ್ಮವಾದ ವೈಯಕ್ತಿಕ ಡೇಟಾವನ್ನು ಹಂಚಿಕೊಳ್ಳಲು ಬಯಸುವುದಿಲ್ಲ ಎಂದು ಇತ್ತೀಚಿನ ಸಮೀಕ್ಷೆಯೊಂದು ತಿಳಿಸಿದೆ.
ಮಹತ್ವಾಕಾಂಕ್ಷೆಯ ಎನ್‌ಡಿಎಚ್‌ಎಂ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಘೋಷಿಸಿದ್ದರು.
ಸಮುದಾಯ ಸಾಮಾಜಿಕ ಮಾಧ್ಯಮ ವೇದಿಕೆಯಾದ ಲೋಕಲ್ ಸರ್ಕಲ್ಸ್ ಈ ಸಮೀಕ್ಷೆಯನ್ನು ನಡೆಸಿದ್ದು, ಇದರಲ್ಲಿ ಡಿಜಿಟಲ್ ಹೆಲ್ತ್ ಐಡಿ ರಚಿಸಬೇಕೆ ಎಂಬ ಪ್ರಶ್ನೆಗೆ ಸುಮಾರು 9,000 ಜನರು ಪ್ರತಿಕ್ರಿಯಿಸಿದ್ದಾರೆ. ಇದರ ಪ್ರಕಾರ ಶೇಕಡಾ 59 ರಷ್ಟು ಜನರು ಡಿಜಿಟಲ್ ಹೆಲ್ತ್ ಮಿಷನ್ ಕಾರ್ಯಕ್ರಮದಡಿಯಲ್ಲಿ ಡಿಜಿಟಲ್ ಹೆಲ್ತ್ ಐಡಿ ಪಡೆಯಲು ಬಯಸಿದ್ದಾರೆ. ಶೇಕಡಾ 23 ಪ್ರತಿಶತದಷ್ಟು ಜನರು ಆರೋಗ್ಯ ID ಯನ್ನು ರಚಿಸಲು ಬೆಂಬಲಿಸಿದ್ದಾರೆ. ಶೇಕಡಾ 18 ರಷ್ಟು ಜನರು ಇದನ್ನು ರಚಿಸಬಾರದು ಎಂದಿದ್ದಾರೆ.
ಇದನ್ನೂ ಓದಿ: ವಿಎಚ್‌ಪಿ ಸದಸ್ಯನಿಗೆ ಬೆದರಿಕೆ ಕರೆ ಪ್ರಕರಣ: ಯುಪಿ ಪೊಲೀಸರಿಂದ ಮುಸ್ಲಿಂ ವ್ಯಕ್ತಿ ಬಂಧನ
ಎಲ್ಲಾ ಭಾರತೀಯರಿಗಾಗಿ ಡಿಜಿಟಲ್ ಹೆಲ್ತ್ ಐಡಿಗಳನ್ನು ರಚಿಸಲು ಪ್ರಸ್ತಾಪಿಸಿರುವ ರಾಷ್ಟ್ರೀಯ ಆರೋಗ್ಯ ದತ್ತಾಂಶ ನಿರ್ವಹಣಾ ನೀತಿಗೆ ಸಂಬಂಧಿಸಿ ಲೋಕಲ್ ಸರ್ಕಲ್ಸ್ ನೀಡಿದ್ದ ನಾಲ್ಕು ಪ್ರಶ್ನೆಗಳಿಗೆ ಸುಮಾರು 34,000 ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ.
ಇನ್ನು ಡಿಜಿಟಲ್ ಹೆಲ್ತ್ ಐಡಿ ಡೇಟಾವನ್ನು ಹೇಗೆ ಮತ್ತು ಎಲ್ಲಿ ಸಂಗ್ರಹಿಸಬೇಕು ಎಂಬ ಪ್ರಶ್ನೆಗೆ ಸುಮಾರು 8,600 ಪ್ರತಿಕ್ರಿಯೆಗಳು ಬಂದಿದ್ದು, ಇದರಲ್ಲಿ ಶೇಕಡಾ 57 ರಷ್ಟು ಜನರು ಡೇಟಾ ಸಂಗ್ರಹಣೆಯನ್ನು ಆರೋಗ್ಯ ಮಾಹಿತಿಗಾಗಿ ಮಾತ್ರ ಮಾಡಬೇಕು ಮತ್ತು ಅದು ಕೇಂದ್ರ ಮಟ್ಟದಲ್ಲಿ ಮಾಡಬೇಕು ಎಂದು ಹೇಳಿದ್ದಾರೆ.
ಸಮೀಕ್ಷೆಯ ಫಲಿತಾಂಶಗಳನ್ನು ಕೇಂದ್ರದ ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್ ಅಡಿಯಲ್ಲಿ ಡಿಜಿಟಲ್ ಹೆಲ್ತ್ ಐಡಿ ಮಾಡುವವರಿಗೆ ಸಲ್ಲಿಸಲಾಗುವುದು. ಇದರಿಂದ ಜನರ ಅಭಿಪ್ರಾಯ ಸರ್ಕಾರಕ್ಕೆ ತಲುಪಲಿದೆ ಎನ್ನುತ್ತಾರೆ ಲೋಕಲ್ ಸರ್ಕಲ್ಸ್‌ನ ಜನರಲ್ ಮ್ಯಾನೇಜರ್ ಅಕ್ಷಯ್ ಗುಪ್ತಾ.
ಇದನ್ನೂ ಓದಿ: ಭೀಮಾ ಕೋರೆಗಾಂವ್ ಪ್ರಕರಣ : ಪ್ರೊ.ಪಾರ್ಥೋಸಾರಥಿ ರಾಯ್ ಗೆ NIA ನೋಟೀಸ್
ವ್ಯಕ್ತಿಯ ವೈಯಕ್ತಿಕ ಡೇಟಾವನ್ನು ಆತನ ಒಪ್ಪಿಗೆಯ ಮೇರೆಗೆ ಮಾತ್ರ ಸಂಗ್ರಹಿಸಬಹುದು. ಎನ್‌ಡಿಎಚ್‌ಎಂ ಅಡಿಯಲ್ಲಿ ಜನರಿಂದ ಸಂಗ್ರಹಿಸಲಾದ ಗೌಪ್ಯ ಆರೋಗ್ಯ ದತ್ತಾಂಶವನ್ನು ಕಾಪಾಡಲು, ದತ್ತಾಂಶ ಗೌಪ್ಯತೆ ಸಂರಕ್ಷಣೆಗಾಗಿ ಮಂಡಳಿ ಅನ್ವಯವಾಗುವ ಕಾನೂನು ಮತ್ತು ಕನಿಷ್ಠ ಮಾನದಂಡಗಳನ್ನು ಅನುಸರಿಸಬೇಕು ಎಂದು ಸರ್ಕಾರ ತಿಳಿಸಿದೆ.
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ), ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ ಅನುಷ್ಠಾನದ ಜವಾಬ್ದಾರಿಯನ್ನು ಹೊಂದಿದೆ. ಜೊತೆಗೆ ದೇಶದಲ್ಲಿ ಎನ್‌ಡಿಎಚ್‌ಎಂ ವಿನ್ಯಾಸಗೊಳಿಸಲು ಅದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದೆ.
ಸರ್ಕಾರದ ಪ್ರಸ್ತಾವನೆ ಪ್ರಕಾರ, ಎನ್‌ಡಿಎಚ್‌ಎಂಗಾಗಿ ದಾಖಲಾದ ಪ್ರತಿಯೊಬ್ಬರೂ ಆರೋಗ್ಯ ಐಡಿಯನ್ನು ಉಚಿತವಾಗಿ ಪಡೆಯುತ್ತಾರೆ ಮತ್ತು ತಮ್ಮ ವೈಯಕ್ತಿಕ ಡೇಟಾದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತಾರೆ ಎಂದು ತಿಳಿಸಲಾಗಿದೆ.
ಸಾರ್ವಜನಿಕರಿಂದ ಪ್ರತಿಕ್ರಿಯೆಗಳು ಮತ್ತು ಪ್ರತಿಕ್ರಿಯೆಗಳನ್ನು ಕೋರಿ ಈ ದಾಖಲೆಯನ್ನು ಎನ್‌ಡಿಎಚ್‌ಎಂನ ಅಧಿಕೃತ ವೆಬ್‌ಸೈಟ್‌ನಲ್ಲಿ ಇರಿಸಲಾಗಿದೆ. ಸಲಹೆ, ಸೂಚನೆಗಳನ್ನು ನೀಡಲು ಸೆಪ್ಟೆಂಬರ್ 21 ರವರೆಗೆ ಸಮಯ ನೀಡಿದೆ.


