ಭಾರತದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಕುರಿತು ಮೋದಿ ನಾಯಕತ್ವದ ವಿರುದ್ಧ ಯುವಸಮೂಹ ತಿರುಗಿಬಿದ್ದಿದೆ. ದೇಶಾದ್ಯಂತ ತಟ್ಟೆ, ಲೋಟಗಳನ್ನು ಬಡಿಯುತ್ತಾ ನಿರುದ್ಯೋಗದ ವಿರುದ್ಧ ವಿಭಿನ್ನ ಪ್ರತಿಭಟನೆ ನಡೆಸುತ್ತಿದ್ದಾರೆ. ಮೊದಲೇ ಹೆಚ್ಚುತ್ತಿದ್ದ ನಿರುದ್ಯೋಗ ಕೊರೊನಾ ಲಾಕ್‌ಡೌನ್ ಕಾರಣಕ್ಕೆ ಗರಿಷ್ಟ ಮಟ್ಟ ತಲುಪಿದೆ. ಆದರೆ ಸರ್ಕಾರ ಯಾವುದೇ ರೀತಿಯಲ್ಲೂ ಯುವಜನರ ಸಂಕಷ್ಟಗಳಿಗೆ ಸ್ಪಂದಿಸದಿರುವುದು ಅವರು ರೊಚ್ಚಿಗೇಳುವಂತೆ ಪ್ರೇರೇಪಿಸಿದೆ ಎನ್ನಲಾಗುತ್ತಿದೆ.
ಇಷ್ಟು ದಿನ ರಸ್ತೆಗಳಲ್ಲಿ, ಕಚೇರಿಗಳ ಮುಂದೆ ಭಿತ್ತಿಪತ್ರಗಳನ್ನು ಹಿಡಿದು ನಡೆಯುತ್ತಿದ್ದ ಪ್ರತಿಭಟನೆ ಈಗ ವಿಭಿನ್ನ ಸ್ವರೂಪ ಪಡೆದುಕೊಂಡಿದೆ. ದೇಶಾದ್ಯಂತ ವಿದ್ಯಾರ್ಥಿಗಳು ಒಂದಾಗಿ ತಟ್ಟೆ, ಲೋಟಗಳನ್ನು ಬಡಿಯುತ್ತಾ, ಹಾಡುಗಳನ್ನು ಹಾಡುತ್ತಾ ರಸ್ತೆಗಳಲ್ಲಿ ಸಾಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೊರೋನಾ ಓಡಿಸಲು ತಟ್ಟೆ ಬಡಿಯುವ ಸಲಹೆ ನೀಡಿದ್ದನೇ ಇವರು ನಿರುದ್ಯೋಗ ಓಡಿಸಲು ತಟ್ಟೆ, ಲೋಟಗಳನ್ನು ಬಡಿದು ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.
ದೇಶದ ಜಿಡಿಪಿ ಅತ್ಯಂತ ಕೆಳಮಟ್ಟದಲ್ಲಿದೆ, ಲಾಕ್‌ಡೌನ್ ಸಮಯದಲ್ಲಿ ಕೋಟ್ಯಾಂತರ ಜನರ ಉದ್ಯೋಗಗಳು ಕಳೆದುಹೋಗಿವೆ, ಕಳೆದ 45 ವರ್ಷಗಳಲ್ಲಿ ನಿರುದ್ಯೋಗವು ಅತ್ಯಧಿಕವಾಗಿದೆ, ಇದಕ್ಕೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಸ್ಪಷ್ಟವಾಗಿ ಕಾರಣವಾಗಿವೆ ಎಂದು ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಉದ್ಯೋಗ ನೀಡಿ ಆತ್ಮಹತ್ಯೆ ನಿಲ್ಲಿಸಿ: ಯೂತ್ ಕಾಂಗ್ರೆಸ್ ಅಭಿಯಾನ
ಯುವಜನತೆ ಉದ್ಯೋಗಕ್ಕಾಗಿ ತಟ್ಟೆ, ಲೋಟ ಬಡಿದು ಪ್ರತಿಭಟನೆ ನಡೆಸುತ್ತಿರುವುದನ್ನು ವಾಯಸೇನೆಯ ನಿವೃತ್ತ ಪೈಲಟ್ ರಾಜೀವ್ ತ್ಯಾಗಿ ಅವರು ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಹಂಚಿಕೊಂಡಿದ್ದು, ಆ ಪೋಸ್ಟ್ ಅನ್ನು 300ಕ್ಕೂ ಅಧಿಕ ಮಂದಿ ಹಂಚಿಕೊಂಡಿದ್ದಾರೆ.
Young citizens on 5th at 5 PM for 5 minutes, beating thaali for jobs… 🙂
Posted by Rajiv Tyagi on Sunday, September 6, 2020
ಇತ್ತ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಹ ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಖಾಸಗೀಕರಣದ ವಿರುದ್ಧ ಲಂಕಾ ಗೇಟ್‌ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ನಿರುದ್ಯೋಗ ಹೆಚ್ಚಾಗಲೂ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳೇ ಕಾರಣ ಎಂದು ಚಪ್ಪಾಳೆ ತಟ್ಟಿ, ತಟ್ಟೆಗಳನ್ನು ಬಡಿಯುವ ಮೂಲಕ ಪ್ರತಿರೋಧ ದಾಖಲಿಸಿದ್ದಾರೆ.
ಸಾಂಕ್ರಾಮಿಕ ರೋಗ ಮತ್ತು ನಿರುದ್ಯೋಗದಿಂದ ದೇಶದ ಕೋಟ್ಯಂತರ ಬಡಜನರು ತೊಂದರೆಗೀಡಾದಾಗ, ಕೇಂದ್ರ ಸರ್ಕಾರವು ತನ್ನ ಸಾರ್ವಜನಿಕ ಆಸ್ತಿಯನ್ನು ದೇಶದ ಕೆಲವು ದೊಡ್ಡ ಕೈಗಾರಿಕೋದ್ಯಮಿಗಳಿಗೆ ನಿರಂತರವಾಗಿ ಮಾರಾಟ ಮಾಡುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಈ ಕುರಿತು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸಂಚಾಲಕರಾದ ಸರೋವರ್ ಬೆಂಕಿಕೆರೆಯವರನ್ನು ನಾನುಗೌರಿ.ಕಾಂ ಮಾತನಾಡಿಸಿತು. ಅವರು “ನರೇಂದ್ರ ಮೋದಿಯವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದರು. ಆದರೆ ಅವರ ನೋಟು ರದ್ಧತಿ ಮತ್ತು ಅವೈಜ್ಞಾನಿಕ ಜಿಎಸ್‌ಟಿ, ಮುಂದಾಲೋಚನೆಯಿಲ್ಲದ ಲಾಕ್‌ಡೌನ್‌ನಿಂದಾಗಿ ದೇಶದಲ್ಲಿ ನಿರುದ್ಯೋಗ ಮಿತಿ ಮೀರಿದೆ. ಇದನ್ನು ಒಪ್ಪಿಕೊಂಡು ಸರಿಪಡಿಸಬೇಕಾದ ಸರ್ಕಾರ ಮತ್ತೆ ಜಾತಿ, ಧರ್ಮಗಳ ಹೆಸರಿನಲ್ಲಿ ಯುವ ಜನರನ್ನು ದಿಕ್ಕುತಪ್ಪಿಸಲು ಯತ್ನಿಸುತ್ತಿದೆ. ಆದರೆ ಯುವಜನರು ಇದರಿಂದ ರೋಸಿಹೋಗಿ ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಮೋದಿ ವಿಡಿಯೋಗಳಿಗೆ ಡಿಸ್‌ಲೈಕ್ ಒತ್ತುತ್ತಿದ್ದಾರೆ” ಎಂದರು.
ಕೊರೊನಾ ವಿರುದ್ಧದ ಹೋರಾಟದಲ್ಲಿ ಸಮರ್ಪಕ ಕ್ರಮಗಳನ್ನು ತೆಗೆದುಕೊಳ್ಳದೇ, ವೈದ್ಯರು ಮತ್ತು ಇತರರಿಗೆ ಸಹಾಯ ಮಾಡದೇ ಕೇವಲ ತಟ್ಟೆ ಲೋಟ ಬಡಿಯಿರಿ ಎಂದರು ಪ್ರಧಾನಿ. ಆದರೆ ಕೊರೊನಾ ಜಾಸ್ತಿ ಆಗಿದೆ. ಅದೇ ರೀತಿ ನಾವು ತಟ್ಟೆ ಲೋಟ ಬಡಿಯುವುದರಿಂದ ಉದ್ಯೋಗ ಜಾಸ್ತಿಯಾಗುವುದಿಲ್ಲ ಬದಲಿಗೆ ಸರ್ಕಾರ ಇದರಿಂದ ಎಚ್ಚೆತ್ತುಕೊಳ್ಳಬೇಕು. ಆದರೆ ಅವೈಜ್ಞಾನಿಕವಾಗಿ ಚಿಂತಿಸುವ ಸರ್ಕಾರಕ್ಕೆ ಯುವಜನರು ತಟ್ಟೆ ಲೋಟ ಬಡಿಯುವ ಮೂಲಕ ಅವೈಜ್ಞಾನಿಕ ರೀತಿಯಲ್ಲಿ ಎದುರೇಟು ನೀಡುತ್ತಿದ್ದಾರೆ. ಈಗಲಾದರು ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಭಾರೀ ಅನಾಹುತವನ್ನು ಎದುರಿಸಬೇಕಾಗುತ್ತದೆ ಎಂದು ಸರೋವರ್ ತಿಳಿಸಿದ್ದಾರೆ.
ಯುವಸಮೂಹ ಉದ್ಯೋಗಕ್ಕಾಗಿ ಪಟ್ಟುಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ, ಪ್ರಧಾನಿ ಮೋದಿ ವಿರುದ್ಧ ಸಮರ ಸಾರಿದ್ದಾರೆ. ಜಾಲತಾಣಗಳಲ್ಲಿನ ಪ್ರಧಾನಿ ವಿಡಿಯೋಗಳನ್ನು ಡಿಸ್‌ಲೈಕ್ ಮಾಡುವ ಮೂಲಕ ಉದ್ಯೋಗ ನೀಡಿ ಎಂದು ಕೇಳುತ್ತಿದ್ದಾರೆ. ಪ್ರಧಾನಿಯವರ ಪ್ರತಿ ವಿಡಿಯೋಗಳ ಕಾಮೆಂಟ್ ಸೆಕ್ಷನ್‌ನಲ್ಲಿ ರೋಜ್‌ಗಾರ್ ದೋ, ಉದ್ಯೋಗ ನೀಡಿ ಎಂಬ ಕಾಮೆಂಟ್‌ಗಳು ಸಾಮಾನ್ಯವಾಗಿಬಿಟ್ಟಿವೆ.
ಯುವ ಸಮೂಹದ ಈ ಪ್ರಯತ್ನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ದಿನ ದಿನಕ್ಕೂ ನಿರುದ್ಯೋಗ ಹೆಚ್ಚಾಗುತ್ತಿದೆ. ಕೊರೊನಾ ಕಾರಣಕ್ಕೆ ಕೆಲಸ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರತಿಭಟನೆ, ವಿಭಿನ್ನ ಪ್ರತಿಭಟನೆಗಳು ಮತ್ತಷ್ಟು ತೀವ್ರಗೊಂಡರೂ ಆಶ್ಚರ್ಯವಿಲ್ಲ.


