ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮಾದಕವಸ್ತು ಸಂಬಂಧಿತ ಆರೋಪಕ್ಕೆ ಮೂರು ದಿನಗಳ ಕಾಲ ಪ್ರಶ್ನಿಸಿದ ನಂತರ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ರಿಯಾ ಚಕ್ರವರ್ತಿ ಅವರನ್ನು ಇಂದು ಬಂಧಿಸಿದೆ.
“ರಿಯಾ ಅವರನ್ನು ಬಂಧಿಸಿದ ಮಾಹಿತಿಯನ್ನು ಕುಟುಂಬಕ್ಕೆ ಈಗಾಗಲೇ ನೀಡಲಾಗಿದೆ” ಎಂದು ಎನ್‌ಸಿಬಿಯ ಉಪನಿರ್ದೇಶಕ ಕೆಪಿಎಸ್ ಮಲ್ಹೋತ್ರಾ ತಿಳಿಸಿದ್ದಾರೆ.
ಬಂಧನದ ನಂತರ ಆಕೆಯನ್ನು ವೈದ್ಯಕೀಯ ತಪಾಸಣೆ ಮತ್ತು ಕೊರೊನಾ ಪರೀಕ್ಷೆಗಳಿಗಾಗಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಸುಶಾಂತ್ ಸಿಂಗ್ ರಜಪೂತ್ ಜೂನ್ 14 ರಂದು ತನ್ನ ಬಾಂದ್ರಾ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ತನ್ನ ಮಗನನ್ನು ಆತ್ಮಹತ್ಯೆಗೆ ದೂಡಿದ್ದಾರೆ ಮತ್ತು ಅವನ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಪಾಟ್ನಾದಲ್ಲಿ ರಿಯಾ ಚಕ್ರವರ್ತಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಆದರೆ ರಿಯಾ ಹಲವಾರು ಸಂದರ್ಭಗಳಲ್ಲಿ ಆರೋಪಗಳನ್ನು ನಿರಾಕರಿಸಿದ್ದರು.
ಸುಶಾಂತ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ರಿಯಾ ಸೇರಿದಂತೆ ಸಾಕಷ್ಟು ಮಂದಿಯನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ ರಿಯಾಗೆ ಡ್ರಗ್ ಜಾಲದೊಂದಿಗೆ ಸಂಪರ್ಕವಿದೆ ಎಂದು ಅನುಮಾನಿಸಲಾಗಿತ್ತು. ಅಲ್ಲದೆ ಡ್ರಗ್ಸ್ ಬಗ್ಗೆ ರಿಯಾ ಅವರ ಮೊಬೈಲ್ನಲ್ಲಿ ನಡೆಸಲಾಗಿದ್ದ ಸಂಭಾಷಣೆಯ ದಾಖಲೆ ಹೊರ ಬಿದ್ದಿತ್ತು. ಇದೇ ಕಾರಣದಿಂದ NCB ರಿಯಾ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.
ಇದನ್ನೂ ಓದಿ: ಸುಶಾಂತ್ ಸಾವನ್ನು ಬಿಹಾರ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಬಿಜೆಪಿ!
ಇಂದು ಮೂರನೇ ದಿನ ರಿಯಾ ಎಂದಿನಂತೆ NCB ನಡೆಸುತ್ತಿರುವ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ನಟಿ ರಿಯಾ ಅವರನ್ನು NCB ಅಧಿಕಾರಿಗಳು ಬಂಧಿಸಿದ್ದಾರೆ. ಅದಕ್ಕೂ ಮೊದಲು ಇದೇ ಪ್ರಕರದಲ್ಲಿ ರಿಯಾ ಅವರ ಸಹೋದರ ಶೋವಿಕ್, ಸುಶಾಂತ್ ಮನೆಯಲ್ಲಿ ಕೆಲಸಕ್ಕಿದ್ದ ದೀಪೇಶ್ ಸಾವಂತ್ ಹಾಗೂ ಸುಶಾಂತ್ ಅವರ ಮನೆಯ ವ್ಯವಸ್ಥಾಪಕ ಸ್ಯಾಮುಯೆಲ್ ಮಿರಾಂಡ ಅವರನ್ನು NCB ಅಧಿಕಾರಿಗಳು ವಿಚಾರಣೆ ನಡೆಸಿ ವಶಕ್ಕೆ ಪಡೆದಿದ್ದರು.
ಇಂದು ವಿಚಾರಣಗೆ ಹಾಜರಾಗಿದ್ದ ರಿಯಾ ತೊಟ್ಟಿದ್ದ ಕಪ್ಪು ಬಣ್ಣದ ಟೀಶರ್ಟ್ ಚರ್ಚಾ ವಿಷಯವಾಗಿದೆ. ಈ ಟೀಶರ್ಟ್ ‘Roses are Red’ ಬ್ರಾಂಡ್ ನದ್ದಾಗಿದ್ದು, ಈ ಬ್ರಾಂಡ್ ಬಟ್ಟೆಗಳ ಮೇಲೆ ಕ್ರಾಂತಿಕಾರಕ ಮತ್ತು ಪ್ರಗತಿಪರ ಬರವಣಿಗೆಗಳನ್ನು ಬರೆಯಲಾಗಿರುತ್ತದೆ. ಅಂತಹ ಬರವಣಿಗೆಯಿರುವ ಬಟ್ಟೆಯೊಂದನ್ನು ಇಂದು ರಿಯಾ ಧರಿಸಿದ್ದು ಗಮನ ಸೆಳೆದಿದೆ.
ಅದರ ಮೇಲೆ “Roses are Red, Violets are Blue, Lets Smash Patriarchy, Me and You” (ಗುಲಾಬಿಗಳು ಕೆಂಪು, ನೇರಳೆಗಳು ನೀಲಿ, ಪಿತೃಪ್ರಧಾನತೆಯನ್ನು ಅಳಿಸೋಣ, ನಾನು ಮತ್ತು ನೀವು” ಎಂದು ಬರೆದಿತ್ತು. ಇದು ಈಗ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ಪ್ರಕರಣ:ರಿಯಾ ಜೊತೆ ಮಾಧ್ಯಮಗಳ ನಡೆ ಖಂಡನೀಯ


