ರಾಮಮಂದಿರದ ನಿರ್ಮಾಣದ ಹೊಣೆ ಹೊತ್ತಿರುವ ಅಯೋಧ್ಯೆಯ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಎರಡು ನಕಲಿ ಚೆಕ್‌ಗಳನನ್ನು ಬಳಸಿ 6 ಲಕ್ಷ ರೂಪಾಯಿಗಳನ್ನು ವಂಚಿಸಲಾಗಿದೆ. ಮೂರನೇ ನಕಲಿ ಚೆಕ್ ಪರಿಶೀಲನೆ ಪ್ರಕ್ರಿಯೆಯಲ್ಲಿ ಈ ವಂಚನೆ ಪತ್ತೆಯಾಗಿದ್ದು, ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ದೂರಿನ ಮೇರೆಗೆ ಅಯೋಧ್ಯೆ ಪೊಲೀಸರಿಗೆ ಎಫ್‌ಐಆರ್ ದಾಖಲಿಸಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಯಾ ಘಾಟ್ ಶಾಖೆಯಲ್ಲಿ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಂಖ್ಯೆ 39200235062 ಅಡಿಯಲ್ಲಿ ಅಕೌಂಟ್ ಹೊಂದಿದೆ. ಈ ಅಕೌಂಟ್‌ನಿಂದ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಡಾ.ಅನಿಲ್ ಮಿಶ್ರಾ ಸಹಿ ಮೂಲಕ ಹಣ ತೆಗೆಯಬಹುದಾಗಿದೆ.
ಇದನ್ನೂ ಓದಿ: ನಿನ್ನೆಯ ಡಿಸ್‌ಲೈಕ್ ದಾಖಲೆ ಮುರಿದ ಪ್ರಧಾನಿ ಮೋದಿಯವರ ಮತ್ತೊಂದು ವೀಡಿಯೋ!!!
ಸೆಪ್ಟೆಂಬರ್ 1 ರಂದು 2,50,000 ರೂಗಳನ್ನು ಚೆಕ್ ಸಂಖ್ಯೆ 740799 ಮೂಲಕ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಒಂದು ವಾರದ ನಂತರ ಮತ್ತೆ ಸೆಪ್ಟೆಂಬರ್ 8 ರಂದು 3,50,000 ರೂಗಳನ್ನು ಚೆಕ್ ಸಂಖ್ಯೆ 740800ರ ಮೂಲಕ ಅದೇ ಪಿಎನ್‌ಬಿ ಖಾತೆಗೆ ವರ್ಗಾಯಿಸಲು ಬಳಸಲಾಗಿದೆ. ಈ ಚೆಕ್ ವರ್ಗಾವಣೆಯನ್ನು ಫೋರ್ಜರಿ ಮೂಲಕ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತದನಂತರ ಸೆಪ್ಟೆಂಬರ್ 9 ರಂದು ಬ್ಯಾಂಕ್ ಆಫ್ ಬರೋಡಾಗೆ 9,86,000 ರೂಗಳನ್ನು ಚೆಕ್ ಸಂಖ್ಯೆ 740798 ಮೂಲಕ ವರ್ಗಾಹಿಸುವಂತೆ ಮನವಿ ಬಂದಿತ್ತು. ಆದರೆ ಈ ಬಾರಿ, ಮೊತ್ತವು ತುಸು ಹೆಚ್ಚಾಗಿದ್ದರಿಂದ, ಚೆಕ್ ಪರಿಶೀಲನೆಗಾಗಿ ಬ್ಯಾಂಕ್ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಅವರನ್ನು ಕರೆಸಿದಾಗ ವಂಚನೆ ಪ್ರಕರಣ ಬಯಲಿಗೆ ಬಂದಿದೆ.
ಚಂಪತ್ ರಾಯ್ ಚೆಕ್ ಬುಕ್ ಪರಿಶೀಲಿಸಿದೆರೇ, ಆ ಸಂಖ್ಯೆಯ ಚೆಕ್ ಪ್ರತಿ ಇನ್ನೂ ತನ್ನ ಬಳಿ ಇದೆ ಎಂಬುದು ತಿಳಿದುಬಂದಿದೆ. ತಕ್ಷಣ ಚೆಕ್ ತಡೆ ಹಿಡಿದು, ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಪೊಲೀಸರು ಮೋಸ, ಅಪ್ರಾಮಾಣಿಕತೆ, ಖೋಟಾ ಮತ್ತು ಪ್ರಮುಖ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಐಪಿಸಿಯ 419, 420, 467, 468, 471 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಆತ್ಮಹತ್ಯೆ ತಡೆ ದಿನ: ತಮ್ಮವರ ಬಗೆಗಿನ ಕೊಂಚ ಕಾಳಜಿಯೂ ಸಹ ಆತ್ಮಹತ್ಯೆ ತಡೆಯಬಹುದು!
“ನಾವು ಪ್ರಸ್ತುತ ಈ ಪ್ರಕರಣದಲ್ಲಿ ಪ್ರಾಥಮಿಕ ತನಿಖೆ ನಡೆಸುತ್ತಿದ್ದೇವೆ. ಪಿಎನ್‌ಬಿಯಲ್ಲಿ ಎರಡು ಚೆಕ್‌ಗಳನ್ನು ಪ್ರಸ್ತುತಪಡಿಸುವ ಮೂಲಕ ರಾಮ್ ಮಂದಿರ ಟ್ರಸ್ಟ್‌ನ ಖಾತೆಯಿಂದ ಮೋಸದಿಂದ ಹಣವನ್ನು ತೆಗೆಯಲಾಗಿದೆ ಎಂದು ಇದುವರೆಗೂ ತಿಳಿದುಬಂದಿದೆ. ಇದನ್ನು ಯಾರು ಮಾಡಿದ್ದಾರೆಂದು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ ಮತ್ತು ಬ್ಯಾಂಕ್ ಶಾಖೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತೇವೆ” ಎಂದು ಸಿಒ ರಾಜೇಶ್ ಕುಮಾರ್ ರೈ ತಿಳಿಸಿದರು.
ಇದು ಟ್ರಸ್ಟ್‌ನ ಸದಸ್ಯರಿಗೆ ಸಾಕಷ್ಟು ಹತ್ತಿರವಿರುವ ವ್ಯಕ್ತಿಯ ಕೆಲಸವಾಗಿರಬಹುದು ಅಥವಾ ಅವರೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿರುವ ವ್ಯಕ್ತಿಯ ಕೆಲಸವಾಗಿರಬಹುದು ಎಂಬ ಅನುಮಾನವಿದೆ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ.
ಇತ್ತ ಚಂಪತ್ ರಾಯ್, ಅಪರಾಧಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂಬ ವಿಶ್ವಾಸವಿದೆ ಮತ್ತು ಭವಿಷ್ಯದಲ್ಲಿ ಇದೇ ರೀತಿಯ ಘಟನೆಗಳಾಗದಂತೆ ಟ್ರಸ್ಟ್ ಗಮನಹರಿಸಲಿದೆ ಎಂದಿದ್ದಾರೆ.


