ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷ ಗೆಲ್ಲಲೇಬೇಕು. ಇದು ನಮಗೆ ಸತ್ವ ಪರೀಕ್ಷೆಯಾಗಿದೆ. ಗೆಲುವಿಗೆ ಕಾರ್ಯಕರ್ತರ ವಿಶ್ವಾಸ ಮುಖ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಶಿರಾ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಉಪಚುನಾವಣೆ ಸಾಮಾನ್ಯವಲ್ಲ, ಇದನ್ನು ಕಾರ್ಯಕರ್ತರು ಅರ್ಥಮಾಡಿಕೊಂಡು ಪಕ್ಷದ ಅಭ್ಯರ್ಥಿಯನ್ನು ಒಗ್ಗಟ್ಟಿನಿಂದ ಗೆಲ್ಲಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಉಪಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ. ದೇವಾಲಯಗಳಿಗೆ ಹಣ ನೀಡುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪ್ರಚಾರ ಆರಂಭಿಸಿವೆ. ಜೆಡಿಎಸ್ ನಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಗಳು ಬರುತ್ತಿರುವುದನ್ನು ಗಮನಿಸುತ್ತಿದ್ದೇನೆ’. ಬಿಜೆಪಿ ಮುಖಂಡರ ದಂಡೇ ಶಿರಾದತ್ತ ಹೋಗುತ್ತಿದೆ. ಆಮಿಷಗಳನ್ನು ಒಡ್ಡುತ್ತಿದೆ. ದೇವಾಲಯಗಳಿಗೆ ಹಣ ನೀಡುವುದಾಗಿ ಹೇಳುತ್ತಿದೆ. ಆದರೆ ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವ ಭರವಸೆ ಈಡೇರಿಸಿಲ್ಲ. ಕೊರೊನ ನಿಯಂತ್ರಣವನ್ನೂ ಸಮರ್ಪಕವಾಗಿ ನಿರ್ವಹಿಸಿಲ್ಲ. ಕೊರೊನ ಹಣವನ್ನು ಲೂಟಿ ಮಾಡುತ್ತಿದೆ. ನಿತ್ಯವೂ ಪತ್ರಿಗಳಲ್ಲಿ ಸರ್ಕಾರದ ವೈಫಲ್ಯದ ಕುರಿತು ಸುದ್ದಿ ಬರುತ್ತಲೇ ಇದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಶಿರಾ ಉಪಚುನಾವಣೆ: ಜಯಚಂದ್ರ ಅವರಿಗೆ ‘ಒಳೇಟು’ ನೀಡುವರೇ ಕೆಎನ್ಆರ್?
ಮಳೆಯಿಂದ ಸಂತ್ರಸ್ತರಾದ ಕುಟುಂಬಗಳಿಗೆ ಸರ್ಕಾರ 5 ಲಕ್ಷ ನೀಡುವುದಾಗಿ ಭರವಸೆ ನೀಡಿತು. ಆದರೆ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಸರ್ಕಾರ ಕೊಟ್ಟಿಲ್ಲ. ಈ ಹಿಂದೆ ಹಲವು ಗ್ರಾಮಗಳನ್ನು ದತ್ತು ಪಡೆಯುವುದಾಗಿ ಹೇಳಿದ್ದರು. ಎಷ್ಟು ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಿದ್ದಾರೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಈ ಹಿಂದೆ ಕಾಂಗ್ರೆಸ್ ಜೊತೆ ಸರ್ಕಾರ ರಚಿಸಿದಾಗ ನಾನು ಕಾರಕೂನನಂತೆ ಕೆಲಸ ಮಾಡಬೇಕಾಯಿತು. ಕಾಂಗ್ರೆಸ್ ಮುಖಂಡರು ಸಹಿ ಹಾಕಬೇಕೆಂದ ಕಡೆ ಸಹಿ ಹಾಕುವಂತಹ ಪರಿಸ್ಥಿತಿ ಇತ್ತು. ಇಂತಹ ಪರಿಸ್ಥಿತಿಯ ನಡುವೆಯೂ ನಾನು ಸ್ವಾಮೀಜಿ ಜೊತೆ ನ್ಯೂಜರ್ಸಿಗೆ ಹೋದೆ. ಸರ್ಕಾರ ಬಿದ್ದುಹೋಗುತ್ತೆ, ಹೋಗಬೇಡಿ ಎಂದು ಹೇಳಿದರು. ಆದರೂ ಹೋದೆ. ಕಾಂಗ್ರೆಸ್ ಹಿಂಸೆಯನ್ನು ಸಹಿಸಲು ಆಗಲಿಲ್ಲ. ಹಾಗಾಗಿಯೇ ನ್ಯೂಜರ್ಸಿಗೆ ಹೋಗಿ ಎಂಟು ದಿನ ಉಳಿದೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನನಗೆ ಆರೋಗ್ಯ ಸರಿಯಿಲ್ಲ. ದೇವೇಗೌಡರಿಗೆ ವಯಸ್ಸಾಗಿದೆ. ಇಂತಹ ಸಂದರ್ಭದಲ್ಲಿ ಶಿರಾ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರು ಒಂದೆಡೆ ಕುಳಿತು ಚರ್ಚೆ ಮಾಡಬೇಕು. ವಿಶ್ವಾಸಕ್ಕೆ ಬರಬೇಕು. ನಾನು ನಿಮ್ಮನ್ನು ಇಲ್ಲಿ ಕರೆದಿರುವುದು ಅಭ್ಯರ್ಥಿಯ ಹೆಸರನ್ನು ಘೋಷಿಸಲು ಅಲ್ಲ. ನೀವು ಸಭೆ ಸೇರಿ ಒಮ್ಮತದ ತೀರ್ಮಾನಕ್ಕೆ ಬನ್ನಿ. ನಿಮ್ಮ ವಿಶ್ವಾಸವಿಲ್ಲದೆ ನಾನು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದರು.
ಇದೇ ವೇಳೆ ಶಿರಾ ಕ್ಷೇತ್ರದ ಮುಖಂಡರು ಮತ್ತು ಕುಮಾರಸ್ವಾಮಿ ರಹಸ್ಯ ಸಭೆ ನಡೆಸಿದ್ದು ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಕೈಗೊಳ್ಳಬೇಕಾದ ತಂತ್ರಗಳ ಕುರಿತು ಚರ್ಚೆ ನಡೆಯುತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಶಿರಾ ಉಪ ಚುನಾವಣೆ: ಶಿರಾ ಕ್ಷೇತ್ರದಿಂದ ಬಿ.ಸುರೇಶ್ ಗೌಡ ಕಣಕ್ಕೆ!


