Homeಅಂಕಣಗಳುಹಿಂದಿ ಹೇರಿಕೆಯೆಂಬ ಸಾಂಸ್ಕೃತಿಕ ಸರ್ವಾಧಿಕಾರ! ದಕ್ಷಿಣದ ಭಾಷೆಗಳಿರಲಿ, ಉತ್ತರದ ತಾಯ್ನುಡಿಗಳನ್ನೂ ತಿಂದು ತೇಗಿದೆ ಹಿಂದಿ!

ಹಿಂದಿ ಹೇರಿಕೆಯೆಂಬ ಸಾಂಸ್ಕೃತಿಕ ಸರ್ವಾಧಿಕಾರ! ದಕ್ಷಿಣದ ಭಾಷೆಗಳಿರಲಿ, ಉತ್ತರದ ತಾಯ್ನುಡಿಗಳನ್ನೂ ತಿಂದು ತೇಗಿದೆ ಹಿಂದಿ!

ಉತ್ತರ ಭಾರತ ನಿಜವಾಗಿಯೂ ಹಿಂದಿ ಭಾಷಿಕ ಸೀಮೆಯೇ ಆಗಿದ್ದಲ್ಲಿ ಪ್ರತಿವರ್ಷ ಅಲ್ಲಿ ಲಕ್ಷಾಂತರ ಶಾಲಾಮಕ್ಕಳು ಹಿಂದಿ ಭಾಷೆಯ ಪರೀಕ್ಷೆಯಲ್ಲಿ ಫೇಲಾಗುತ್ತಿರುವುದು ಯಾಕೆ?

- Advertisement -
- Advertisement -

‘ನನ್ನ ತಾಯಿನುಡಿಯು ನಿನ್ನ ಪ್ರಭುತ್ವದ ಅಡಿಪಾಯಗಳನ್ನು ಅಲ್ಲಾಡಿಸತೊಡಗಿದ್ದರೆ, ನೀನು ನಿನ್ನ ರಾಜ್ಯವನ್ನು ನನ್ನ ನೆಲದ ಮೇಲೆ ಕಟ್ಟಿದ್ದೀಯಾ ಎಂದೇ ಅರ್ಥ’- ತುರ್ಕಿ ಸರ್ಕಾರ 1992ರಲ್ಲಿ ಹತ್ಯೆ ಮಾಡಿದ ಕುರ್ಡಿಶ್ ಬರೆಹಗಾರ ಮೂಸಾ ಅ್ಯಂಟರ್‌ನ ಈ ನುಡಿಗಳಲ್ಲಿ ಸಾರ್ವತ್ರಿಕ ಸತ್ಯವೊಂದು ನಿಹಿತವಾಗಿದೆ.

ರಾಜಕೀಯ ಜನತಾಂತ್ರಿಕ ವ್ಯವಸ್ಥೆಯನ್ನು ಒಂದೆಡೆ ಗೌರವಿಸುತ್ತ, ಮತ್ತೊಂದೆಡೆ ಭಾಷಾ ಜನತಂತ್ರವನ್ನು ತುಳಿಯುವುದು ಆಷಾಡಭೂತಿತನ ಅಲ್ಲವೇ? ‘ಒಂದು ದೇಶ, ಒಂದು ಧರ್ಮ, ಒಂದು ಭಾಷೆ, ಒಂದು ಪಕ್ಷ, ಒಬ್ಬ ನಾಯಕ’ ಎಂಬುದು ಪರಿಶುದ್ಧ ಫ್ಯಾಸಿಸಮ್ಮೇ ವಿನಾ ಜನತಂತ್ರ ಅಲ್ಲ. ಹಿಂದಿ-ಹಿಂದು-ಹಿಂದುಸ್ತಾನ ಎಂಬ ಸಾಂಸ್ಕೃತಿಕ ರಾಷ್ಟ್ರವಾದದ ಘೋಷಣೆ ಕೋಮುವಾದ- ಬಹುಸಂಖ್ಯಾತವಾದದ ಹೆಗ್ಗುರುತು.

ನರೇಂದ್ರ ಮೋದಿ ಸರ್ಕಾರದ ಸೈದ್ಧಾಂತಿಕ ಬೇರುಗಳು ಹಿಂದೀ-ಹಿಂದು-ಹಿಂದುತ್ವವಾದಿ ಚಿಂತನೆಯ ಮೂಲದವು. ಹೀಗಾಗಿ ಅವರು ಅಧಿಕಾರ ಹಿಡಿದೊಡನೆ ಹಿಂದೀ ಭಾಷೆಗೆ ದೊರೆಯತೊಡಗಿರುವ ಅಗ್ರಪ್ರಾಶಸ್ತ್ಯವು ಕಳೆದ ಐದಾರು ವರ್ಷಗಳಲ್ಲಿ ‘ಹಿಂದೀ ಸಾಮ್ರಾಜ್ಯಶಾಹಿ’ಯ ಆತಂಕವನ್ನು ಹುಟ್ಟಿಹಾಕಿದೆ.

2011ರ ಜನಗಣತಿಯ ಪ್ರಕಾರ ಭಾರತದಲ್ಲಿ ದಾಖಲಿಸಿರುವ ಆಡು ಭಾಷೆಗಳು 19,569. ಹತ್ತು ಲಕ್ಷಕ್ಕಿಂತ ಹೆಚ್ಚು ಮಂದಿ ಮಾತಾಡುವ ಭಾಷೆಗಳು 40. ಒಂದು ಲಕ್ಷಕ್ಕಿಂತ ಹೆಚ್ಚು ಮಂದಿ ಮಾತಾಡುವ ಭಾಷೆಗಳು 60. ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಆಡುವ ಭಾಷೆಗಳ ಸಂಖ್ಯೆ 122. ಸಂಸ್ಕೃತವನ್ನು ತಮ್ಮ ತಾಯಿನುಡಿ ಎಂದು ಈ ಜನಗಣತಿಯಲ್ಲಿ ಬರೆಯಿಸಿರುವವರ ಸಂಖ್ಯೆ 24,821. ಕೇಂದ್ರ ಸರ್ಕಾರದ ಭಾಷಾ ಅಭಿವೃದ್ಧಿ ಯೋಜನೆಗಳ ಸಿಂಹಪಾಲು ಸಲ್ಲುತ್ತಿರುವುದು ಸಂಸ್ಕೃತಕ್ಕೇ.

19ನೆಯ ಶತಮಾನದಲ್ಲಿ ಮುಸಲ್ಮಾನರ ಭಾಷೆಯೆಂದು ಹಣೆಪಟ್ಟಿ ಹಚ್ಚಲಾದ ಉರ್ದುವನ್ನು (ಪರ್ಷಿಯನೀಕೃತ ಹಿಂದುಸ್ತಾನಿ) ತೊಲಗಿಸಿ ಅದರ ಜಾಗದಲ್ಲಿ ಸಂಸ್ಕೃತೀಕೃತ ಹಿಂದುಸ್ತಾನಿಯಾದ ಹಿಂದಿಗೆ ಪಟ್ಟ ಕಟ್ಟುವ ಮೇಲಾಟ ಜರುಗಿತು. ಉರ್ದು ಮುಸ್ಲಿಮ್ ಆದರೆ ಹಿಂದೀ ಹಿಂದೂ ಆಯಿತು. ಹಿಂದೀ ಭಾಷಿಕರ ಸಂಖ್ಯೆಯನ್ನು ಉಬ್ಬಿಸಿ ಸತ್ಯದೂರ ಕಥನ ಕಟ್ಟಲಾಯಿತು. ಅಂದಿನ ಬ್ರಿಟಿಷ್ ಆಡಳಿತವನ್ನು ನಂಬಿಸುವ ಈ ತಂತ್ರ ಫಲ ನೀಡಿತು. ಉರ್ದು ಅದಾಗಲೇ ಆಡಳಿತ ಭಾಷೆಯಾಗಿತ್ತು. ಅದರೊಂದಿಗೆ ಹಿಂದಿಗೂ ಆಡಳಿತ ಭಾಷೆಯ ಸ್ಥಾನ ಗಿಟ್ಟಿತು. ಅಲ್ಲಿಯತನಕ ನ್ಯಾಯಾಲಯದ ದಾಖಲೆ ದಸ್ತಾವೇಜುಗಳು ಕೇವಲ ಉರ್ದುವಿನಲ್ಲೇ ಇರುತ್ತಿದ್ದ ಕಾರಣ, ಆ ಭಾಷೆಯನ್ನು ಅರಿಯದ ಜನಕ್ಕೆ ದಾಖಲೆಗಳಲ್ಲಿ ಏನು ಬರೆದಿದೆಯೆಂದೇ ಅರ್ಥವಾಗುತ್ತಿರಲಿಲ್ಲ. ದೇಶವಿಭಜನೆಯ ನಂತರ ಇದೇ ಪರಿಸ್ಥಿತಿಯನ್ನು ಹಿಂದೀ ಭಾಷಿಕರಲ್ಲದವರು ಎದುರಿಸಬೇಕಾಯಿತು. ಉದಾಹರಣೆಗೆ ಐಎಎಸ್-ಐಪಿಎಸ್ ಮುಂತಾದ ಸಿವಿಲ್ ಸರ್ವೀಸಸ್ ಪ್ರವೇಶ ಪರೀಕ್ಷೆಗಳು, ಐಐಟಿ ಮತ್ತು ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆಗಳ ಪ್ರವೇಶ ಪರೀಕ್ಷೆಗಳನ್ನು ಹಿಂದಿಯ ವಿನಾ ಉಳಿದ ಯಾವುದೇ ಮಾತೃಭಾಷಾ ಮಾಧ್ಯಮಗಳಲ್ಲಿ ಬರೆಯುವಂತಿಲ್ಲ. ಅಲಹಾಬಾದ್ ಹೈಕೋರ್ಟ್ ತನ್ನ ವ್ಯವಹಾರಗಳನ್ನು ಹಿಂದಿಯಲ್ಲಿ ನಡೆಸಲು ಅವಕಾಶ ನೀಡಲಾಗಿದೆ. ಆದರೆ ದಕ್ಷಿಣ ರಾಜ್ಯಗಳ ಹೈಕೋರ್ಟುಗಳು ಪ್ರಾದೇಶಿಕ ಭಾಷೆಗಳಲ್ಲಿ ವ್ಯವಹರಿಸಲು ಅವಕಾಶ ನಿರಾಕರಿಸಲಾಗಿದೆ. ಕಡೆಗೆ ಸಂವಿಧಾನದ ಪಠ್ಯದ ವಿಷಯದಲ್ಲೂ ಅಷ್ಟೇ. ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಪಠ್ಯಗಳು ಮಾತ್ರವೇ ಸರ್ಕಾರದಿಂದ ಮಾನ್ಯತೆ ಪಡೆದ ಪಠ್ಯಗಳು.

ಹಿಂದಿಯ ದೈತ್ಯ ರಥಚಕ್ರಗಳಡಿ ದಕ್ಷಿಣದ ಭಾಷೆಗಳಿರಲಿ, ಉತ್ತರ ಭಾರತದ ತಾಯಿನುಡಿಗಳೂ ನುಗ್ಗಾಗತೊಡಗಿವೆ. ಉತ್ತರ ಮತ್ತು ಮಧ್ಯಭಾರತದ 50ಕ್ಕೂ ಹೆಚ್ಚು ಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡು ಅಳಿವಿನ ಅಂಚು ತಲುಪಿವೆ. ಭೋಜಪುರಿ, ಅವಧಿ, ಹರಿಯಾಣ್ವಿ, ಆದಿವಾಸಿ ಭಾರತದ ಗೊಂಡಿ, ಒರಾನಿ, ಸಂತಾಲ್, ಮುಂದಾರಿ ಇತ್ಯಾದಿ ಭಾಷೆಗಳು, ಬಿಹಾರ, ಝಾಖರ್ಂಡ ಹಾಗೂ ಪಶ್ಚಿಮ ಬಂಗಾಳದಲ್ಲಿ ಮಾತಾಡುವ ಮಗಧಿ, ಮೈಥಿಲಿ, ಬಿಹಾರಿ, ಚಾದ್ರಿ, ಪಹಾಡಿ, ಗಢವಾಲಿ, ಡೋಗ್ರಿ, ಆಂಗಿಕ, ಬುಂದೇಲಿ, ರಾಜಸ್ತಾನಿ, ಛತ್ತೀಸಗಢೀ, ಬ್ರಜಭಾಷಾ ಹಾಗೂ ಖಡೀಬೋಲಿ ಹಿಂದೀ ಹೇರಿಕೆ- ದಬ್ಬಾಳಿಕೆಯ ಕಾರಣ ತಮ್ಮ ಸ್ಥಾನಮಾನ ಕಳೆದುಕೊಂಡಿವೆ. ಅವಧಿ ಮಾತಾಡುವವರ ಸಂಖ್ಯೆ 3.80 ಕೋಟಿ ಮಂದಿ. ವಿಶ್ವದ 29ನೆಯ ಅತಿಹೆಚ್ಚು ಜನಸಂಖ್ಯೆ ಮಾತಾಡುವ ಭಾಷೆಯಿದು. ಫಿಜಿ ಹಿಂದೀ ಎಂಬ ಹೆಸರು ಪಡೆದು ಆ ದೇಶದಲ್ಲಿ ಈ ನುಡಿಗಟ್ಟು ಬದುಕಿರುವುದು ವಿಡಂಬನೆಯೇ ಸರಿ. ಹಾಗೆಯೇ ಭೋಜಪುರಿ ಭಾಷಿಕರ ಸಂಖ್ಯೆ ನಾಲ್ಕು ಕೋಟಿ. ಇದನ್ನೂ ಹಿಂದಿಯ ಲೆಕ್ಕಕ್ಕೆ ಸೇರಿಸಿ ಎಣಿಸಿಕೊಳ್ಳಲಾಗಿದೆ. ಈ ಎಲ್ಲವೂ ಹಿಂದಿ ಭಾಷೆಯ ಭಿನ್ನ ನುಡಿಗಟ್ಟುಗಳು ಎಂಬ ಸುಳ್ಳನ್ನು ಪ್ರಚಾರ ಮಾಡಿಕೊಂಡು ಬರಲಾಗಿದೆ. ಈ ಭಾಷಿಕರನ್ನೂ ಹಿಂದಿ ಮಾತೃಭಾಷಿಕರೆಂಬ ಲೆಕ್ಕಕ್ಕೆ ಸೇರಿಸಿಕೊಂಡಿರುವುದು ಜನಗಣತಿಗಳ ಮಹಾಮೋಸ. ಮುತ್ತಿಗೆ ಹಾಕಿರುವ ಹಿಂದಿ ದಬ್ಬಾಳಿಕೆಯನ್ನು ಈ ನುಡಿಗಟ್ಟುಗಳು ಒಪ್ಪಿಕೊಳ್ಳತೊಡಗಿವೆ. ತಮ್ಮ ಭಾಷೆ ಹಿಂದಿ ಎಂದೇ ಬರೆಯಿಸತೊಡಗಿವೆ. ಈ ವಂಚನೆಯ ಲೆಕ್ಕ ಹಿಡಿದರೆ ಅಸಲಿ ಹಿಂದಿ ಸಮುದ್ರದ ಪುಟ್ಟ ದ್ವೀಪಗಳಾಗಿರುವ ಅವುಗಳಿಗೆ ಕನ್ನಡ, ತೆಲುಗು, ತಮಿಳು ಮಲೆಯಾಳದಂತಹ ರಕ್ಷಣೆ, ಮೂಲಸೌಲಭ್ಯಗಳು ಇಲ್ಲ. ಹೀಗಾಗಿ ಶರಣಾಗದೆ ವಿಧಿಯಿಲ್ಲ. ಹೀಗಾಗಿ ಹೊಸ್ತಿಲೊಳಗಣ ಭಾಷೆಗಳಾಗಿಯೂ, ಅಡಿಗೆ ಮನೆ, ಹಿತ್ತಿಲ ಭಾಷೆಗಳಾಗಿಯೂ ಮೂಲೆಗುಂಪಾಗತೊಡಗಿವೆ. ಹಿಂದಿ ಭಾಷಿಕರ ಪ್ರಮಾಣ ಶೇ.43.63 ರಿಂದ ಶೇ.20ಕ್ಕೆ ಕುಸಿಯುತ್ತದೆ.

ಹಿಂದಿ
Courtesy: Facebook

ಉತ್ತರ ಭಾರತ ನಿಜವಾಗಿಯೂ ಹಿಂದಿ ಭಾಷಿಕ ಸೀಮೆಯೇ ಆಗಿದ್ದಲ್ಲಿ ಪ್ರತಿವರ್ಷ ಅಲ್ಲಿ ಲಕ್ಷಾಂತರ ಶಾಲಾಮಕ್ಕಳು ಹಿಂದಿ ಭಾಷೆಯ ಪರೀಕ್ಷೆಯಲ್ಲಿ ಫೇಲಾಗುತ್ತಿರುವುದು ಯಾಕೆ? ಉದಾಹರಣೆಗೆ 2019ರಲ್ಲಿ ಹತ್ತು ಮತ್ತು ಹನ್ನೆರಡನೆಯ ತರಗತಿಗಳ ಹಿಂದಿ ಪರೀಕ್ಷೆಗಳಲ್ಲಿ ಹತ್ತು ಲಕ್ಷ ವಿದ್ಯಾರ್ಥಿಗಳು ಫೇಲಾದರು. ಈ ಬೆಳವಣಿಗೆಯ ಹಿಂದಿನ ಕಟುಸತ್ಯವೆಂದರೆ ಉತ್ತರ ಭಾರತದ ಬಹುತೇಕರ ಮಾತೃಭಾಷೆ ಹಿಂದಿ ಅಲ್ಲ. ಅವರ ಮಾತೃಭಾಷೆಗಳು ನೂರಾರು ಇಲ್ಲವೇ ಸಾವಿರಾರು ವರ್ಷಗಳಿಂದ ವಿಕಾಸಗೊಂಡು ಭಾಷಿಕರ ಬಾಯಲ್ಲಿ ನಲಿಯುವಂತಹವು. ಅವರ ಬದುಕುಗಳೊಂದಿಗೆ ಬೆಸೆದುಕೊಂಡಂತಹವು. ಸಂಸ್ಕೃತ ಭೂಯಿಷ್ಟ ಹಿಂದಿ ಭಾಷೆಗೆ ಹೋಲಿಸಿದರೆ ಸುಲಿದ ಬಾಳೆ ಅಥವಾ ತಣಿದ ಉಷ್ಣದ ಹಾಲಿನಂತಹವು.

ಭಾಷೆಯೊಂದು ಸಾಯುವುದೆಂದರೆ ಸಂವಹನದ ಮಾಧ್ಯಮವೊಂದು ಸತ್ತಂತೆ. ಆ ಭಾಷೆಯನ್ನು ಆಡುವ ಜನರ ಇತಿಹಾಸ, ಪರಂಪರೆ, ನಂಬಿಕೆಗಳು, ಪದ್ಧತಿಗಳು, ಸಂಸ್ಕೃತಿಯ ಮುಂದುವರಿಕೆ ಮುರಿದುಬಿದ್ದಂತೆ. ರಾಜಸ್ತಾನಿ ಭಾಷೆಯಲ್ಲಿ ಒಂಟೆಗೆ 45 ಭಿನ್ನ ಹೆಸರುಗಳಿವೆಯಂತೆ. ಅಂತೆಯೇ ತಿಂಗಳು ತಿಂಗಳಿಗೂ ಬದಲಾಗುವ ಮೋಡಗಳಿಗೂ ಅಷ್ಟೇ ಸಂಖ್ಯೆಯ ಹೆಸರುಗಳಿವೆಯಂತೆ. ಈಗ ಅಳಿದುಹೋಗಿರುವ ಭಾಷೆಗಳಲ್ಲೂ ಇಂತಹ ಸಿರಿವಂತಿಕೆ ಇದ್ದಿರಬಹುದು. ಕಳೆದ ಐವತ್ತು ವರ್ಷಗಳಲ್ಲಿ 220 ಭಾರತೀಯ ಭಾಷೆಗಳನ್ನು ಕೊಂದು ಹುಗಿಯಲಾಗಿದೆ.

ಹಿಂದಿ ಭಾಷಿಕರ ಪ್ರಮಾಣ ಶೇ.43 ಎಂದು ವಾದಕ್ಕಾಗಿ ಒಂದು ಗಳಿಗೆ ಒಪ್ಪಿಕೊಂಡರೂ, ಹಿಂದಿ ಮಾತೃಭಾಷೆ ಅಲ್ಲದವರ ಪ್ರಮಾಣ ಶೇ.57ರಷ್ಟಿದೆ ಎಂದಾಯಿತು. ಶೇ. 20 ಮಂದಿ ಆಡುವ ಭಾಷೆಯನ್ನು ಶೇ.80 ಮಂದಿಯ ಮೇಲೆ ಹೇರುವುದು ಸಾಂಸ್ಕೃತಿಕ ಸರ್ವಾಧಿಕಾರ.


ಇದನ್ನೂ ಓದಿ: ಕೃಷಿ ಮಸೂದೆಯನ್ನು ವಿರೋಧಿಸಿ ರಾಜಿನಾಮೆ ನೀಡಿದ ಕೇಂದ್ರ ಸಚಿವೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...