ಇತ್ತೀಚೆಗೆ ಕೇಂದ್ರ ಸರ್ಕಾರ ಅಂಗೀಕರಿಸಿದ ವಿವಾದಾತ್ಮಕ ಕೃಷಿ ಮಸೂದೆಗಳ ವಿರುದ್ಧ ವಿವಿಧ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದವು.
ಪ್ರತಿಭಟನಾ ನಿರತ ಸಂಸದರು ಮಹಾತ್ಮ ಗಾಂಧಿ ಪ್ರತಿಮೆಯಿಂದ ಸಂಸತ್ತು ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಯವರೆಗಿನ ಮೆರವಣಿಗೆಯಲ್ಲಿ “ರೈತರನ್ನು ಉಳಿಸಿ, ಕಾರ್ಮಿಕರನ್ನು ಉಳಿಸಿ, ಪ್ರಜಾಪ್ರಭುತ್ವವನ್ನು ಉಳಿಸಿ” ಎಂಬ ಸಂದೇಶಗಳುಳ್ಳ ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟಿಸಿದರು.
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿಪಿಐ, ಸಿಪಿಐ-ಎಂ, ಡಿಎಂಕೆ, ರಾಷ್ಟ್ರೀಯ ಜನತಾದಳ (ಆರ್‌ಜೆಡಿ), ಆಮ್ ಆದ್ಮಿ ಪಕ್ಷ (ಎಎಪಿ), ಸಮಾಜವಾದಿ ಪಕ್ಷ ಮತ್ತು ಎನ್‌ಸಿಪಿ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಕೃಷಿ ಮಸೂದೆ ವಿರೋಧಿಸಿ ಸೆ.25ಕ್ಕೆ ಕರ್ನಾಟಕ ಬಂದ್: ಕರವೇ ಬೆಂಬಲ
“ಕಾಂಗ್ರೆಸ್‌ನ ಎಲ್ಲಾ ಸಂಸದರು ಮತ್ತು ಸಮಾನ ಮನಸ್ಕ ಪಕ್ಷಗಳು ಸಂಸತ್ತಿನಲ್ಲಿ ಗಾಂಧಿ ಪ್ರತಿಮೆಯಿಂದ ಅಂಬೇಡ್ಕರ್ ಪ್ರತಿಮೆಯವರೆಗೆ ಮೌನ ಮೆರವಣಿಗೆ ನಡೆಸುತ್ತಿವೆ. ಈ ಮೂಲಕ, ಮೋದಿ ಸರ್ಕಾರವು ಸಂಸತ್ತಿನಲ್ಲಿ ರಬ್ಬರ್ ಸ್ಟ್ಯಾಂಪ್ ಮಾಡಿರುವ ರೈತ ವಿರೋಧಿ, ಕಾರ್ಮಿಕ ವಿರೋಧಿ ಮಸೂದೆಗಳನ್ನು ಪ್ರತಿಭಟಿಸುತ್ತಿದ್ದೇವೆ” ಎಂದು ಕಾಂಗ್ರೆಸ್ ಮುಖ್ಯಸ್ಥ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
All MPs of the Congress and like-minded parties are marching from Gandhi statue to Ambedkar statue in Parliament protesting the anti-Farmers, anti-Workers Bills that have been rubberstamped in Parliament in the most undemocratic manner by the Modi government. pic.twitter.com/xzHVnwxN9u
— Jairam Ramesh (@Jairam_Ramesh) September 23, 2020
ಇದನ್ನೂ ಓದಿ: ಕೃಷಿ ಮಸೂದೆ ವಿರೋಧಿಸಿ ಒಂದಾದ 31 ರೈತ ಸಂಘಟನೆಗಳು: ಸೆ.25ರಂದು ಪಂಜಾಬ್ ಬಂದ್‌ಗೆ ಕರೆ
ಕೃಷಿ ಮಸೂದೆಗಳ ವಿರುದ್ಧ ತಮ್ಮ ಮುಂದಿನ ಕಾರ್ಯತಂತ್ರವನ್ನು ರೂಪಿಸಲು ಪ್ರತಿಪಕ್ಷದ ಸದಸ್ಯರು ಇದಕ್ಕೂ ಮೊದಲು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಅವರ ಕಛೇರಿಯಲ್ಲಿ ಸಭೆ ನಡೆಸಿದರು.
ವಿವಿಧ ಪ್ರತಿಪಕ್ಷಗಳು ಸಂಸತ್ತಿನಲ್ಲಿ ಕೃಷಿ ಮಸೂದೆಗಳನ್ನು ಅಂಗೀಕರಿಸುವುದನ್ನು ವಿರೋಧಿಸಿ, ಉಭಯ ಸದನಗಳ ವಿಚಾರಣೆಯನ್ನು ಬಹಿಷ್ಕರಿಸಿವೆ.
ವಿವಾದಾತ್ಮಕ ಮಸೂದೆಗಳಿಗೆ ಸಹಿ ಮಾಡದಂತೆ ಒತ್ತಾಯಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪ್ರತಿಪಕ್ಷಗಳು ಪತ್ರ ಬರೆದು, ಮತಗಳ ವಿಭಜನೆಯಿಲ್ಲದೇ ಈ ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದು ಆರೋಪಿಸಿವೆ.
ಈ ಕುರಿತು ಮಾತನಾಡಲು ಗುಲಾಂ ನಬಿ ಆಜಾದ್ ಇಂದು ಸಂಜೆ 5 ಗಂಟೆಗೆ ರಾಷ್ಟ್ರಪತಿಯವರನ್ನು ಭೇಟಿಯಾಗಲಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಕೃಷಿ ಮಸೂದೆ ವಿರೋಧಿಸುವ ರೈತರನ್ನು ಭಯೋತ್ಪಾದಕರು ಎಂದ ನಟಿ ಕಂಗನಾ!


