ರೈತ ಸಂಘಟನೆಗಳು

ಪಂಜಾಬ್‌ನ ಇತಿಹಾಸದಲ್ಲಿ ಮೊದಲ ಬಾರಿಗೆ ಡೊಡ್ಡ-ಸಣ್ಣ ಸೇರಿದಂತೆ 31 ರೈತ ಸಂಘಟನೆಗಳು ಒಟ್ಟುಗೂಡಿವೆ. ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ಸೆಪ್ಟಂಬರ್ 25ರಂದು ಬೃಹತ್ ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಿವೆ.

ಈ ರೈತ ಸಂಘಟನೆಗಳು ಸಹ ವಿಭಿನ್ನ ಸೈದ್ಧಾಂತಿಕ ನಿಲುವುಗಳನ್ನು ಹೊಂದಿವೆ. ಆದರೂ ಕೇಂದ್ರ ಸರ್ಕಾರ ತರಲೊರಟಿರುವ ಮೂರು ಕೃಷಿ ಮಸೂದೆಗಳು ಈ ಸಂಘಟನೆಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದುಗೂಡುವಂತೆ ಮಾಡಿವೆ. ಅವರೆಲ್ಲರೂ ಕೇಂದ್ರದ ಕೃಷಿ ಮಸೂದೆಗಳನ್ನು ಹಿಂಪಡೆಯಬೇಕೆಂಬ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿ ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದಾರೆ.

31 ರೈತ ಸಂಘಟನೆಗಳಲ್ಲಿ ಉತ್ತರ ಪ್ರದೇಶದ ರೈತನಾಯಕ ಮಹೇಂದ್ರ ಸಿಂಗ್ ಟಿಕಾಯತ್ ನೇತೃತ್ವದ ಭಾರತೀಯ ಕಿಸಾನ್ ಯೂನಿಯನ್ ಅತಿ ದೊಡ್ಡ ಸಂಘಟನೆಯಾಗಿದೆ. ಪಂಜಾಬ್‌ನಲ್ಲಿ ಅದನ್ನು ಅಜ್ಮೀರ್ ಸಿಂಗ್ ಲಾಕೋವಾಲ್ ಮುನ್ನೆಡೆಸುತ್ತಿದ್ದಾರೆ. ಇದೇ ಸಂಘಟನೆಯಿಂದ ವಿಘಟಿತರಾದ ಹಲವಾರು ಸಣ್ಣ ರೈತ ಸಂಘಗಳು ಸಹ ಪಂಜಾಬ್‌ ಬಂದ್‌ಗೆ ಬೆಂಬಲ ನೀಡಿವೆ.

31 ಸಂಘಟನೆಗಳಲ್ಲಿ ಕನಿಷ್ಟ 18 ಸಂಘಟನೆಗಳು ರಾಜ್ಯಾದ್ಯಂತ ತಮ್ಮ ಪ್ರಭಾವವನ್ನು ಹೊಂದಿವೆ ಎಂದು ಹೇಳಲಾಗುತ್ತಿದೆ. ಇವು ಪ್ರತಿ ತಾಲ್ಲೂಕು, ಜಿಲ್ಲಾ, ರಾಜ್ಯ ಘಟಕಗಳಿಗೂ ಪ್ರಜಾತಾಂತ್ರಿಕ ರೀತಿಯ ಚುನಾವಣೆ ನಡೆಸಿ ಪದಾಧಿಕಾರಿಗಳನ್ನು ನೇಮಿಸಿಕೊಂಡಿವೆ. 10000 ದಿಂದ 1 ಲಕ್ಷದವರೆಗೂ ಸದಸ್ಯತ್ವ ಹೊಂದಿವೆ ಎನ್ನಲಾಗಿದೆ. ಇನ್ನುಳಿದ ರೈತ ಸಂಘಟನೆಗಳು ಸಣ್ಣ ಸಂಘಟನೆಗಳಾಗಿದ್ದು ಒಂದೆರೆಡು ಜಿಲ್ಲೆಗಳಲ್ಲಿ ಮಾತ್ರ ತಮ್ಮ ಪ್ರಭಾವ ಹೊಂದಿವೆ.

ಈ ರೈತ ಸಂಘಟನೆಗಳು ಅಕಾಲಿ ದಳ, ಕಾಂಗ್ರೆಸ್, ಆಪ್, ಎಡಪಕ್ಷಗಳು ಸೇರಿದಂತೆ ಹಲವು ರಾಜಕೀಯ ಪಕ್ಷಗಳಿಗೆ ಬೆಂಬಲ ನೀಡಿವೆ. ಆದರೂ ಈ ಬಾರಿ ಅವರೆಲ್ಲರೂ ಕೇಂದ್ರ ಸರ್ಕಾರದ ವಿರುದ್ಧ ಒಟ್ಟಾಗಿವೆ. ಸೆಪ್ಟಂಬರ್ 25ರ ಪಂಜಾಬ್ ಬಂದ್ ಅವರ ಮೊದಲ ಒಕ್ಕೂಟದ ಹೋರಾಟವಾದರೆ ನಂತರವೂ ಸಹ ಕೃಷಿ ಮತ್ತು ರೈತರ ವಿಚಾರದಲ್ಲಿ ಒಗ್ಗೂಡಿ ಹೋರಾಡುತ್ತೇವೆ ಎಂದು ಬಿಕೆಯು ಪ್ರಧಾನ ಕಾರ್ಯದರ್ಶಿ ಸುಖದೇವ್ ಸಿಂಗ್ ಕೋಖ್ರಿಕಾಲನ್ ಹೇಳಿದ್ದಾರೆ.

ಕ್ರಾಂತಿಕಾರಿ ಕಿಸಾನ್ ಯುನಿಯನ್ ಪಂಜಾಬ್‌ನ ಡಾ.ದರ್ಶನ್ ಪಾಲ್ ಮಾತನಾಡಿ “ನಾವು ಈ ಮೊದಲು ಆಲ್ ಇಂಡಿಯಾ ಕಿಸಾನ್ ಸಂಘರ್ಷ ಕೋಆರ್ಡಿನೇಷನ್ ಸಮಿತಿಯ (ಎಐಕೆಎಸ್‌ಸಿಸಿ) ಭಾಗವಾಗಿದ್ದೆವು. ಇದು ದೇಶದ ಸುಮಾರು 250ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟವಾಗಿದೆ. ಈಗ ಪಂಜಾಬ್‌ನಲ್ಲಿಯೂ ಸಹ 31 ರೈತ ಸಂಘಟನೆಗಳು ಒಂದೂಗೂಡಿರುವುದು ಸಕರಾತ್ಮಕ ಬೆಳವಣಿಗೆಯಾಗಿದ್ದು ನಾವೆಲ್ಲರೂ ಸೇರಿ ಹೋರಾಟ ಮುನ್ನೆಡೆಸುತ್ತೇವೆ” ಎಂದಿದ್ದಾರೆ.

ಹರಿಯಾಣದಲ್ಲಿ ರೈತರ ಬೃಹತ್ ಪ್ರತಿಭಟನೆ

ಈ ಮೊದಲು ಸಹ ಎಐಕೆಎಸ್‌ಸಿಸಿ ನೇತೃತ್ವದಲ್ಲಿ ದೇಶಾದ್ಯಂತ ಜಾಥಾ ನಡೆಸಿ ಬೃಹತ್ ಹೋರಾಟ ನಡೆಸಿದ್ದೇವೆ. ಆದರೆ ರಾಜ್ಯದಲ್ಲಿ ನಾವು ಬಿಡಿ ಬಿಡಿಯಾಗಿಯೇ ಹೋರಾಟ ಮಾಡಬೇಕಾದ ಪರಿಸ್ಥಿತಿ ಇತ್ತು. ಆದರೆ ಈಗ ರಾಜ್ಯದಲ್ಲಿಯೂ ಸಹ ರೈತಸಂಘಟನೆಗಳು ಒಗ್ಗೂಡಿರುವುದರಿಂದ ಹೆಚ್ಚಿನ ಬಲಬಂದಿದೆ. ಜೊತೆಗೂಡಿ ಹೋರಾಡುವುದಕ್ಕೆ ಖುಷಿಯಾಗುತ್ತಿದೆ ಎಂದಿದ್ದಾರೆ.

ಇನ್ನು ಹರಿಯಾಣದಲ್ಲಿಯೂ ಸಹ ಅಲ್ಲಿನ ರೈತಸಂಘಟನೆಗಳು ಕೇಂದ್ರ ಸರ್ಕಾರದ ಕೃಷಿ ಮಸೂದೆಗಳ ವಿರುದ್ಧ ತಿರುಗಿಬಿದ್ದಿವೆ. ನಿನ್ನೆ 50 ಸಾವಿರಕ್ಕೂ ಹೆಚ್ಚು ರೈತರು ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಬೃಹತ್ ಹೋರಾಟ ನಡೆಸಿದ್ದಾರೆ. 

ಅದೇ ರೀತಿಯಾಗಿ ಕರ್ನಾಟಕದಲ್ಲಿಯೂ ಸಹ ರೈತ-ದಲಿತ-ಕಾರ್ಮಿಕ ಸಂಘಟನೆಗಳು ಒಟ್ಟುಗೂಡಿ ಮೂರು ದಿನದಿಂದ ಐಕ್ಯ ಹೋರಾಟ ನಡೆಸುತ್ತಿವೆ. ರೈತಸಂಘಟನೆಗಳು, ಭೂಹೀನರು, ಎಡಪಕ್ಷಗಳು ಕಾರ್ಮಿಕ ಸಂಘಟನೆಗಳು ಜೊತೆಸೇರಿ ಪರ್ಯಾಯ ಜನತಾ ಅಧಿವೇಶನ ನಡೆಸುತ್ತಿವೆ.


ಇದನ್ನೂ ಓದಿ: ಆಗ ಉಳುವವನೆ ಭೂಮಿಯ ಒಡೆಯ, ಈಗ ದುಡ್ಡಿದ್ದವನೇ ಭೂಮಿಯ ಒಡೆಯ: ಸಿದ್ದರಾಮಯ್ಯ ಆತಂಕ

LEAVE A REPLY

Please enter your comment!
Please enter your name here