ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ ಇಂದು ಕೊರೊನಾದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ರಾಜಕಾರಣಿಗಳು ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, “ಮೊದಲ ಸಲ ಶಾಸಕರಾಗಿ ಭರವಸೆಯ ನಾಯಕನಾಗಿ ಬೆಳೆಯುತ್ತಿದ್ದ ಬಿ.ನಾರಾಯಣ ರಾವ್ ನಡುಹಾದಿಯಲ್ಲಿ ಬಾಳಪಯಣ ಕೊನೆಗೊಳಿಸಿ ನಮ್ಮನ್ನು ಶೋಕದಲ್ಲಿ ಮುಳುಗಿಸಿದ್ದಾರೆ. ವೈಯಕ್ತಿಕವಾಗಿ ನನಗೆ ಆತ್ಮೀಯರಾಗಿದ್ದ ನಾರಾಯಣ ರಾವ್, ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದ ಸಾಮಾಜಿಕ ಬದ್ದತೆಯ ನಾಯಕ. ಹೀಗಾಗಬಾರದಿತ್ತು. ನನ್ನ ಸಂತಾಪಗಳು” ಎಂದು ಬರೆದುಕೊಂಡಿದ್ದಾರೆ.
ಮೊದಲ ಸಲ ಶಾಸಕರಾಗಿ ಭರವಸೆಯ ನಾಯಕನಾಗಿ ಬೆಳೆಯುತ್ತಿದ್ದ
ಬಿ.ನಾರಾಯಣ ರಾವ್ ನಡುಹಾದಿಯಲ್ಲಿ
ಬಾಳಪಯಣ ಕೊನೆಗೊಳಿಸಿ ನಮ್ಮನ್ನು ಶೋಕದಲ್ಲಿ ಮುಳುಗಿಸಿದ್ದಾರೆ.ವೈಯಕ್ತಿಕವಾಗಿ ನನಗೆ ಆತ್ಮೀಯರಾಗಿದ್ದ ನಾರಾಯಣ ರಾವ್, ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದ ಸಾಮಾಜಿಕ ಬದ್ದತೆಯ ನಾಯಕ. ಹೀಗಾಗಬಾರದಿತ್ತು.
ನನ್ನ ಸಂತಾಪಗಳು. pic.twitter.com/8DJS6SieXZ— Siddaramaiah (@siddaramaiah) September 24, 2020
ಇದನ್ನೂ ಓದಿ: ಲಿಂಗಾಯಿತರು ನನಗೆ ಮತ ಕೊಡದಿದ್ದರೂ ಪರವಾಗಿಲ್ಲ, ಬಸವ ತತ್ವದ ಮೇಲೆ ನಡೆದರೆ ಸಾಕು: ಶಾಸಕ ಬಿ.ನಾರಾಯಣರಾವ್ ಸಂದರ್ಶನ…
ಶಾಸಕ. ಬಿ. ನಾರಾಯಣರಾವ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, “ನಿನ್ನೆಯಷ್ಟೇ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯವರನ್ನು ಕಳೆದುಕೊಂಡಿರುವ ದು:ಖದಿಂದ ಚೇತರಿಸಿಕೊಳ್ಳುವ ಮುನ್ನವೇ ಶಾಸಕ. ಬಿ. ನಾರಾಯಣರಾವ್ ಅವರು ಮೃತಪಟ್ಟಿರುವುದು ಮತ್ತೊಂದು ಆಘಾತ ತಂದಿದೆ. 2018ರ ವಿಧಾನಸಭೆಯ ಚುನಾವಣೆಯಲ್ಲಿ ಬಸವಕಲ್ಯಾಣ ಕ್ಷೇತ್ರದಿಂದ ಸ್ಪರ್ಧಿಸಿ ನಾರಾಯಣರಾವ್ ಅವರು ಗೆಲುವು ಸಾಧಿಸಿದ್ದರು. ವಿಧಾನಸಭೆಯಲ್ಲಿ ಜ್ವಲಂತ ಸಮಸ್ಯೆಗಳ ಕುರಿತು ಧ್ವನಿ ಎತ್ತುತ್ತಿದ್ದ ಅವರು ಅಸಾಧರಣ ವಾಗ್ಮಿಗಳಾಗಿದ್ದರು. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದು, ಬಸವಕಲ್ಯಾಣ ಕ್ಷೇತ್ರದ ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಅವರ ನಿಧನದಿಂದ ಅತ್ಯುತ್ತಮ ಶಾಸಕರೊಬ್ಬರನ್ನು ಕಳೆದುಕೊಂಡಂತಾಗಿದೆ. ಮೃತರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ” ಎಂದು ತಿಳಿಸಿದ್ದಾರೆ.
ಶಾಸಕರಾದ ಕೆ.ಜೆ.ಜಾರ್ಜ್ ಸಂತಾಪ ಸೂಚಿಸಿ, “ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀ ಬಿ. ನಾರಾಯಣ ರಾವ್ ಅವರ ನಿಧನದ ಸುದ್ದಿ ತಿಳಿದು ಬಹಳ ಆಘಾತವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಮಾಜಿ ಶಾಸಕರಾದ ಸತೀಶ್ ಕೆ.ಸೈಲ್ ಟ್ವೀಟ್ ಮಾಡಿ, “ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಬಿ. ನಾರಾಯಣ ರಾವ್ ಅವರ ನಿಧನದ ಸುದ್ದಿ ತಿಳಿದು ಬಹಳ ಆಘಾತವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.
ನೇರ, ನಿಷ್ಟುರ ಮತ್ತು ಪ್ರಾಮಾಣಿಕ ರಾಜಕಾರಣಿಯಾಗಿದ್ದ ಬಿ.ನಾರಾಯಣರಾವ್ ಅವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದ್ದು, ಹಲವರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಸದನದಲ್ಲಿ ಮಿಂಚಿದ ಬಸವ ಪ್ರಣೀತ ಶಾಸಕ ನಾರಾಯಣರಾವ್


