ವ್ಯಕ್ತಿಯೊಬ್ಬನ ಸಾಧನೆಗಳು ಆತನ ಚೈತನ್ಯವನ್ನು ಮೂಲ ಸ್ಥಿತಿಯಿಂದ ಅನೇಕ ಎತ್ತರಗಳಿಗೆ ತೆಗೆದುಕೊಂಡು ಹೋಗುತ್ತವೆ. ಏರಿದ ಎತ್ತರದಲ್ಲೂ ಆತ ಮನುಷ್ಯನಾಗಿರಲು ಪ್ರಯತ್ನಿಸಿದರೆ ಲೌಕಿಕದ ಬದುಕಿಗೆ ಆತ ಹೊಸ ಭಾಷ್ಯವನ್ನೇ ಬರೆಯುತ್ತಾನೆ. ತಾನು ಬದುಕುವ ಈ ಜಗತ್ತು ಹೆಚ್ಚು ಮಾನವೀಯವಾಗಬೇಕು ಎಂದು ಬಯಸುವ ಪ್ರತಿ ವ್ಯಕ್ತಿ ಈ ಎತ್ತರಗಳಿಗೆ ತಲುಪುತ್ತಾನೆ. ಅದು ರೈತನಿರಲಿ, ರಾಜಕಾರಣಿಯಾಗಿರಲಿ, ಕಲಾವಿದನಾಗಿರಲಿ, ಲೇಖಕನೇ ಆಗಿರಲಿ, ಬದುಕಿನ ಧ್ಯಾನಕ್ಕೆ ಮನಸ್ಸೊಡ್ಡುವ ವ್ಯಕ್ತಿ ತನ್ನ ಸುತ್ತಲ ಜಗತ್ತನ್ನು ಬದಲಿಸಲು ಪ್ರಯತ್ನಿಸುತ್ತಾನೆ. ಹೀಗೆ ಸಾಧಾರಣ ಮನುಷ್ಯನೊಬ್ಬ ತನ್ನ ಇರುವನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಾಗ ಅವನು ಸಮುದಾಯದ ಆಸ್ತಿಯಾಗುತ್ತಾನೆ.
ನಮ್ಮ ನಡುವಿನ ಸಾಮಾನ್ಯನೊಬ್ಬ ಮಾನವ ಸಹಜ ಕ್ಷುದ್ರತೆಯನ್ನು ಮೀರಿದಾಗೆಲ್ಲ ಈ ಬಗೆಯ ಆದರ್ಶದ ವಾತಾವರಣವೊಂದು ನಿರ್ಮಾಣವಾಗುತ್ತದೆ. ಇಂತಹ ಆದರ್ಶದ ನಿರ್ಮಾಣ ಪ್ರವಾದಿಗಳಿಗೆ ಮಾತ್ರ ಸಾಧ್ಯವೆಂದೇನೂ ಇಲ್ಲ. ಲಾಭ ಸಾಧ್ಯವೇ ಇಲ್ಲ ಎಂಬ ಅರಿವಿದ್ದೂ ಆಶೆಯಿಂದ ಮುಗಿಲ ಕಡೆ ನೋಡುತ್ತ ಉತ್ತಿ, ಬಿತ್ತಿ, ಬೆಳೆ ಬೆಳೆವ ರೈತನೂ ತನ್ನ ದುಡಿಮೆಯಲ್ಲಿ ಈ ಬಗೆಯ ಆಧ್ಯಾತ್ಮವನ್ನು ಬದುಕುತ್ತಾನೆ. ಬಸವಕಲ್ಯಾಣದ ಶಾಸಕರಾಗಿದ್ದ ಬಿ ನಾರಾಯಣರಾವ್ ಹೀಗೆಯೇ ಬದುಕಿದ್ದವರು. ನಾರಾಯಣರಾವ್ ಶೋಷಿತರ ಏಳ್ಗೆಯನ್ನು ಕನಸುತ್ತ, ಅದಕ್ಕಾಗಿ ನೂರಾರು ಯೋಜನೆಗಳನ್ನು ಹಾಕಿಕೊಂಡು ಅವುಗಳನ್ನು ಹಠ ಹಿಡಿದು ಸಕಾರಗೊಳಿಸುವಲ್ಲಿ ಸದಾ ಕ್ರಿಯಾಶೀಲರಾಗಿದ್ದವರು. ಹೀಗಿದ್ದ ನಾರಾಯಣರಾವ್ ಅವರನ್ನು ಮೊನ್ನೆ (ದಿ: 24.09.2020) ಸಾವು ಕರೆದೊಯ್ದಿದೆ.
ನಾರಾಯಣರಾವ್, ಅರಸು ಯುಗದ ಆದರ್ಶಗಳನ್ನು ಆಚರಣೆಗೆ ತರಲೆಂದೇ ಸಾರ್ವಜನಿಕ ಬದುಕನ್ನು ಆಯ್ಕೆ ಮಾಡಿಕೊಂಡವರು. ತಮ್ಮ ಸಾರ್ವಜನಿಕ ಬದುಕನ್ನು ಅದಕ್ಕಾಗಿಯೇ ಅಹರ್ನಿಶಿ ಮುಡುಪಾಗಿಟ್ಟರು. ಕರ್ನಾಟಕದ ಉತ್ತರದ ತುದಿಯಲ್ಲಿರುವ ಬಸವಕಲ್ಯಾಣದಿಂದ ಪ್ರಾರಂಭವಾಗುವ ಅವರ ರಾಜಕೀಯ ಜೀವನ ಸುಲಭದ್ದಾಗಿರಲಿಲ್ಲ. ಶಕ್ತಿರಾಜಕಾರಣದ ಯಾವ ಹಂತದಲ್ಲೂ ನಿರ್ಣಾಯಕರಲ್ಲದ ಶೋಷಿತ ಸಮುದಾಯಗಳನ್ನು 70ರ ದಶಕದಲ್ಲಿಯೇ ಸಂಘಟಿಸುವ ಮೂಲಕ ನಾರಾಯಣರಾವ್ ತಮ್ಮ ರಾಜಕೀಯ ಬದುಕನ್ನು ಆರಂಭಿಸುತ್ತಾರೆ. ದಿಕ್ಕಿಲ್ಲದವರ ದುಮ್ಮಾನಗಳನ್ನು ಸ್ವತಃ ಅನುಭವಿಸಿ ಅವುಗಳ ನಿವಾರಣೆಗೆಂದೇ ಸಕ್ರಿಯ ರಾಜಕಾರಣಕ್ಕೆ ಇಳಿಯುತ್ತಾರೆ. ಯಾವತ್ತೋ ಒಮ್ಮೆ ಜಿಲ್ಲಾ ಪಂಚಾಯ್ತಿಯ ಸದಸ್ಯರಾಗಿ ಆಯ್ಕೆಯಾದದ್ದನ್ನು ಹೊರತಾಗಿಸಿ ಅವರು ಚುನಾವಣೆಗಳಲ್ಲಿ ಸೋತಿದ್ದೇ ಹೆಚ್ಚು. ಸಕ್ರಿಯ ರಾಜಕಾರಣದಲ್ಲಿದ್ದೂ ಅವರು ಶಾಸಕರಾಗಿ ಆಯ್ಕೆಯಾದದ್ದು ಸರಿಸುಮಾರು ಮೂರವರೆ ದಶಕಗಳ ನಂತರ. (2018ರ ಚುನಾವಣೆಯಲ್ಲಿ ಅವರು ಬೀದರಿನ ಬಸವಕಲ್ಯಾಣದಿಂದ ಶಾಸಕರಾಗಿ ಆಯ್ಕೆಯಾಗುತ್ತಾರೆ.) ಇತ್ತೀಚೆಗೆ ರಾಜಕಾರಣಕ್ಕೆ ಯಾರೆಲ್ಲ ಧಾವಿಸುತ್ತಿದ್ದಾರೆ? ಯಾವ `ಆದರ್ಶಗಳ’ ಭಾಗವಾಗಿ ಅವರು ಪಾರ್ಲಿಮೆಂಟ್ ಮತ್ತು ವಿಧಾನಸಭೆಗಳನ್ನು ಪ್ರವೇಶಿಸುತ್ತಿದ್ದಾರೆ? ಎಂದು ಪ್ರಶ್ನಿಸಿಕೊಂಡಾಗೆಲ್ಲ ನಾರಾಯಣರಾವ್ ತರಹದವರು ಅಳಿವಿನಂಚಿನಲ್ಲಿರುವ ಜೀವಿಗಳಂತೆ ಗೋಚರಿಸಿಬಿಡುತ್ತಾರೆ.
ನಾರಾಯಣರಾವ್ ಅವರು ತಾನೊಬ್ಬ ರಾಜಕೀಯ ನಾಯಕನಾಗಬೇಕೆಂದು ಸಾರ್ವಜನಿಕ ಬದುಕಿಗೆ ಕಾಲಿಟ್ಟವರಲ್ಲ. ತಾನು ಓದುತ್ತಿದ್ದ ಶಾಲೆ ಮತ್ತು ಹಾಸ್ಟೆಲ್‍ಗಳಲ್ಲಿ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಆಗುತ್ತಿದ್ದ ಅನ್ಯಾಯ ಮತ್ತು ತಾರತಮ್ಯಗಳನ್ನು ಖಂಡಿಸುತ್ತಲೇ ವಿದ್ಯಾರ್ಥಿ ನಾಯಕರಾಗಿ ರೂಪುಗೊಂಡರು. 1975ರಲ್ಲಿ ದೇವರಾಜ ಅರಸು ಒಮ್ಮೆ ಬೀದರ್‍ನಲ್ಲಿ ಸಾರ್ವಜನಿಕ ಭಾಷಣ ಮಾಡಲು ಹೋಗಿರುತ್ತಾರೆ. ಅರಸು ಭಾಷಣ ಮಾಡುತ್ತಿದ್ದಾಗಲೆ, ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್‍ಗಳಲ್ಲಿ ಆಗುತ್ತಿದ್ದ ಅನ್ಯಾಯಗಳನ್ನು ಒಬ್ಬ ಸಭಿಕನಾಗಿ ವಿವರಿಸಲು ಪ್ರಯತ್ನಿಸುತ್ತಾರೆ. ಮುಖ್ಯಮಂತ್ರಿಯನ್ನು ಸಾರ್ವಜನಿಕ ಸಭೆಯಲ್ಲಿ ಪ್ರಶ್ನಿಸಿದ `ತಪ್ಪಿಗೆ’ ಪೋಲೀಸರು ಅವರನ್ನು ಠಾಣೆಗೆ ಎಳೆದೊಯ್ಯುತ್ತಾರೆ. ಸೂಕ್ಷ್ಮಸಂವೇದಿ ರಾಜಕಾರಣಿ ದೇವರಾಜ ಅರಸರು ತನ್ನನ್ನು ಸಾರ್ವಜನಿಕವಾಗಿ ಪ್ರಶ್ನಿಸಿದ್ದ ಆ ವಿದ್ಯಾರ್ಥಿ ನಾಯಕನನ್ನು ತಾವು ಉಳಿದಕೊಂಡಿದ್ದ ವಿಶ್ರಾಂತಿಗೃಹಕ್ಕೆ ಕರೆಯಿಸಿಕೊಂಡು ಸಮಸ್ಯೆಗಳನ್ನು ಆಲಿಸುತ್ತಾರೆ. ಜೊತೆಗೆ ತಾವು ಬೆಂಗಳೂರಿಗೆ ಹಿಂದಿರುಗಿದ ನಂತರ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್‍ಗಳನ್ನು ತೆರೆಯುವ ಭರವಸೆ ನೀಡಿ ಹೊರಡುತ್ತಾರೆ.
ಬಡತನದ ಹಿನ್ನೆಲೆಯಿಂದ ಬಂದ ಅನಾಮಧೇಯ ವಿದ್ಯಾರ್ಥಿಯನ್ನು ಮುಖ್ಯಮಂತ್ರಿಗಳು ಕರೆದು ಮಾತನಾಡಿಸಿದ್ದು ಸುದ್ದಿಯಾಗುತ್ತದೆ. ನಂತರ ನಾರಾಯಣರಾವ್ ಎಂಬ ವಿದ್ಯಾರ್ಥಿಯು ಮುಖ್ಯಮಂತ್ರಿಯ ಆ ಭೇಟಿಯಿಂದ ವಿದ್ಯಾರ್ಥಿಗಳ ನಾಯಕರಾಗಿಬಿಡುತ್ತಾರೆ. ಬೆಂಗಳೂರಿಗೆ ಹಿಂದಿರುಗಿದ ಅರಸುರವರು ನಾರಾಯಣರಾವ್ ಅವರಿಗೆ ಕೊಟ್ಟ ಭರವಸೆಯನ್ನು ಮರೆಯುತ್ತಾರೆ. ಆಗ ನಾರಾಯಣರಾವ್ ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ಬೆಂಗಳೂರಿಗೆ ತೆರಳಿ ವಿಧಾನಸೌಧದ ಮುಂದೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮುಂಜೂರು ಮಾಡಿಸಲು ಧರಣಿ ಕೂರುತ್ತಾರೆ. ಎಂಟು ಹತ್ತು ದಿನಗಳ ನಂತರ ಪೊಲೀಸರಿಂದ ವಿದ್ಯಾರ್ಥಿಗಳ ಧರಣಿಯ ಬಗ್ಗೆ ಮಾಹಿತಿ ಪಡೆದ ಅರಸುರವರು ಅಂದೇ ವಿದ್ಯಾರ್ಥಿಗಳನ್ನು ಕರೆದು ಮಾತನಾಡಿ, ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯಗಳನ್ನು ತೆರೆಯಲು ಅಧಿಕಾರಿಗಳಿಗೆ ಸೂಚಿಸುತ್ತಾರೆ.
ರಾಜ್ಯಾದ್ಯಂತ 245 ವಿದ್ಯಾರ್ಥಿ ನಿಲಯಗಳು ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಪ್ರಾರಂಭವಾಗುತ್ತವೆ. ಇಂದು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಬಿಸಿಎಂ ವಿದ್ಯಾರ್ಥಿ ನಿಲಯಗಳು ನಾರಾಯಣರಾವ್ ಅವರ ಹೋರಾಟದ ಫಲ ಎಂದು ಅನೇಕರಿಗೆ ಗೊತ್ತಿರಲಾರದು. ನಂತರ ನಾರಾಯಣರಾವ್ ಅವರು ಅರಸು ಅವರ ನೆಚ್ಚಿನ ಶಿಷ್ಯನಾಗಿಬಿಡುತ್ತಾರೆ. ಒಳ್ಳೆಯ ಉದ್ದೇಶ, ಸಾಮಾಜಿಕ ಬದ್ಧತೆ ಮತ್ತು ಪಟ್ಟುಹಿಡಿದು ಸಾಧಿಸುವ ಛಲಗಳಿದ್ದಲ್ಲಿ ವ್ಯಕ್ತಿಯೊಬ್ಬ ಪವಾಡಗಳನ್ನು ಮಾಡಿಬಿಡಬಲ್ಲ ಎಂಬುದಕ್ಕೆ ನಾರಾಯಣರಾವ್ ಉದಾಹರಣೆಯಾಗಿ ನಿಲ್ಲುತ್ತಾರೆ.
ನಾರಾಯಣರಾವ್ ಅವರು ರಾಜಕೀಯ ಹಿನ್ನೆಲೆಯಿಂದ ಬಂದವರಲ್ಲ. ಬೀದರ್ ಜಿಲ್ಲೆಯ ಸಣ್ಣ ಹಳ್ಳಿ ಬಸಂತಪುರದ ಟೋಕ್ರಿಕೋಳಿ ಸಮುದಾಯದ ಒಂದು ಬಡಕುಟುಂಬದಲ್ಲಿ ಇವರು 1955ರಲ್ಲಿ ಜನಿಸಿದರು. ಕಾಲೇಜು ದಿನಗಳಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣದ ಆಶಯಗಳನ್ನು ಪ್ರಕಟಿಸುತ್ತ ನಾಯಕರಾಗಿ ಬೆಳೆದರು. ಅದರಲ್ಲೂ ಉಳುವವನೇ ಭೂಮಿಗೆ ಒಡೆಯ, ಜೀತ ಪದ್ಧತಿಯ ನಿಷೇಧಂತಹ ಕೆಳವರ್ಗಗಳ ಪರವಾದ ಸಮಾಜವಾದಿ ಸುಧಾರಣೆಗಳನ್ನು ತಂದ ಅರಸು ಅಂದಿನ ಪ್ರಗತಿಪರ ಯುವಕರು ಚಳುವಳಿ ರಾಜಕಾರಣಕ್ಕೆ ಬರಲು ಪ್ರೇರಣೆಯನ್ನು ನೀಡಿದ್ದರು. ನಾರಾಯಣರಾವ್ ಸಹಜವಾಗಿ ಈ ಸಮಾಜವಾದಿ ಸಿದ್ಧಾಂತಕ್ಕೆ ಮಾರುಹೋದರು. ವಿಶೇಷವಾಗಿ ಲೋಹಿಯಾ ಮತ್ತು ಅಂಬೇಡ್ಕರ್ ಅವರ ತೀವ್ರ ಪರಿವರ್ತನೆಯ ಥಿಯರಿಗಳನ್ನು ಅಭ್ಯಸಿಸಿದರು. ಒಂದು ರೀತಿಯಲ್ಲಿ ನಾರಾಯಣರಾವ್ ಲೋಹಿಯಾ ಅಂಬೇಡ್ಕರರನ್ನು ಸಿಂಥಸೈಜ್ ಮಾಡಿ ತಮ್ಮ ನೋಟಕ್ರಮವನ್ನು ರೂಪಿಸಿಕೊಂಡಿದ್ದರು.
ಇವರು, ಕೇವಲ ಹಿಂದುಳಿದ ವರ್ಗಗಳ ಟಿಪಿಕಲ್ ರಾಜಕಾರಣಿಯಾಗಿರಲಿಲ್ಲ. ಎಂಬತ್ತರ ದಶಕದಲ್ಲಿ ಉತ್ತರ ಕರ್ನಾಟಕದ ಅಲೆಮಾರಿ ಗೊಂಡ ಸಮುದಾಯದ ಸಮಸ್ಯೆಗಳನ್ನು ಮುಂಚೂಣಿಗೆ ತಂದರು. ಪ್ರಾಯಶಃ ಮೊದಲ ಬಾರಿಗೆ ಕರ್ನಾಟಕದಲ್ಲೂ ಅಲೆಮಾರಿಗಳಿದ್ದಾರೆ, ಅವರೂ ಸಹ `ಶೋಷಿತರಲ್ಲಿ ಶೋಷಿತರು’ ಎಂಬ ಅರಿವು ಬಂದದ್ದೇ ಎಂಬತ್ತರ ಆ ದಶಕದಲ್ಲಿ. ಹಾವನೂರು ವರದಿಯ ಶಿಫಾರಸುಗಳನ್ನು ಅರಸು ಜಾರಿಗೆ ತರುವ ಸಂದರ್ಭದಲ್ಲಿ ನಾರಾಯಣರಾವ್ ಅವರು ಅನೇಕ ದಿಕ್ಕಿಲ್ಲದ ಸಮುದಾಯಳಿಗೆ ಕನಿಷ್ಠ ಜಾತಿ ಪ್ರಮಾಣ ಪತ್ರ ದೊರೆಯುವಂತೆ ಮಾಡಿದರು. ಕೆಲವು ಅಲೆಮಾರಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಕೆಲ ಸಮುದಾಯಗಳು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರುವಂತಾಯಿತು. ಮೇಲ್ನೋಟಕ್ಕೆ ಅಷ್ಟೇನು ಕ್ರಾಂತಿಕಾರಿಯಲ್ಲದ ಈ ಕೆಲಸವು ಅಲೆಮಾರಿ ಸಮುದಾಯಗಳಿಗೆ ಒಂದು ರಾಜಕೀಯ ಚಹರೆಯನ್ನು ಕಲ್ಪಿಸಿತ್ತು.
ಅರಸು ಸ್ವತಃ ಹಕ್ಕಿಪಿಕ್ಕಿ, ಡೊಂಬರು, ಗೊಂಡ, ಪಾರ್ದಿ, ಹರಿಣಿ ಶಿಕಾರಿಗಳಂತಹ ಸಮುದಾಯಗಳಿಗೆ ಸ್ವತಂತ್ರ ಗ್ರಾಮಗಳನ್ನು ರೂಪಿಸಿದ್ದಲ್ಲದೆ, ಅವರಿಗೂ ಕೃಷಿ ಭೂಮಿ ದೊರೆಯುವಂತೆ ಮಾಡಿದರು. ಉತ್ತರ ಕರ್ನಾಟಕದ ಭೂಮಾಲಿಕರು ಅಲೆಮಾರಿ ಕುರಿಗಾರ ಸಮುದಾಯಗಳಿಗೆ ಕಿರುಕುಳ ನೀಡುತ್ತಿದ್ದ ಸಂದರ್ಭದಲ್ಲಿ ಅವರ ಪರ ನಿಂತ ನಾರಾಯಣರಾವ್ ಆ ಮೂಕ ಸಮುದಾಯಗಳ ದನಿಯಾದರು. ಗೊಂಡ ಮತ್ತು ರಾಜಗೊಂಡ ಸಮುದಾಯಗಳನ್ನು ನೆಲೆನಿಲ್ಲಿಸಿ ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ‘ಶ್ರೀ ಬೊಮ್ಮಗೊಂಡೇಶ್ವರ ಶಿಕ್ಷಣ ಸಂಸ್ಥೆ’ಯನ್ನು ಬೀದರನಲ್ಲಿ ಸ್ಥಾಪಿಸಿದರು. ಅಲೆಮಾರಿ ಸಮುದಾಗಳ ಮಕ್ಕಳಿಗೆ ವಸತಿ ಶಾಲೆಗಳನ್ನು ತೆರದು ಅವರು ಶಿಕ್ಷಣ ಪಡೆಯಲು ಒತ್ತಾಸೆಯಾಗಿ ನಿಂತರು. ಬಳ್ಳಾರಿ ಬಳಿ ಅಲೆಮಾರಿಗಳಿಗೆ `ಗುಡಾರ ನಗರ’ ಮತ್ತು ಹರಿಹರದ ಬೆಳ್ಳೂಡಿ ಬಳಿ ಅಲೆಮಾರಿ ರಾಜಗೊಂಡ ಸಮುದಾಯಗಳಿಗೆ `ರಾಜಗೊಂಡ ಕಾಲೋನಿ’ಯನ್ನು ನಿರ್ಮಾಣ ಮಾಡುವುದರ ಹಿಂದೆ ನಾರಾಯಾಣರಾವ್ ಅವರ ಸತತ ಪರಿಶ್ರಮವಿದೆ. ಅಲೆಮಾರಿ ಸಮುದಾಯಗಳು ನೆಲೆನಿಲ್ಲುವುದರ ಜೊತೆಗೆ, ಅವರ ಮಕ್ಕಳು ವಿದ್ಯಾಭ್ಯಾಸ ಪಡೆದು ಮುಖ್ಯವಾಹಿನಿಯ ಸ್ಪರ್ಧೆಗಳಲ್ಲಿ ಮುಂಚೂಣಿಯಲ್ಲಿರಬೇಕೆಂದು ನಾರಾಯಣರಾವ್ ಬಯಸುತ್ತಿದ್ದರು.
2019 ರಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರ ಪಕ್ಷಾಂತರಿಗಳಿಂದ ಉರುಳಿ ಹೋಗುವ ಸಂದರ್ಭದಲ್ಲಿ ನಾರಾಯಣರಾವ್ ಪಕ್ಷಾಂತರ ಮಾಡುತ್ತಾರೆ ಎಂಬ ಸುದ್ದಿಗಳು ಹರಿದಾಡಿದವು. ಆದರೆ ಇದೇ ಸಂದರ್ಭದಲ್ಲಿ ವಿಧಾನ ಸಭೆಯಲ್ಲಿ ಅವರು ಮಾಡಿದ ಭಾಷಣ ಅದ್ಭುತವಾಗಿತ್ತು. ತೀವ್ರ ವಿಷಾದ ಮತ್ತು ದೀನ ಆಕ್ರೋಶದಲ್ಲಿ ನಾರಾಯಣರಾವ್ ಮಾತಾಡಿದರು. ಅಪ್ಪಟ ಉತ್ತರ ಕರ್ನಾಟಕದ ಶೈಲಿಯ ಅವರ ಮಾತುಗಳಲ್ಲಿದ್ದ ವ್ಯಂಗವನ್ನು ವಿಧಾನಸಭಾ ಸದಸ್ಯರು ಗುರುತಿಸದೇ ಹೋದದ್ದು ವಿಪರ್ಯಾಸ.
ಇದನ್ನೂ ಓದಿ: ಸದನದಲ್ಲಿ ಮಿಂಚಿದ ಬಸವ ಪ್ರಣೀತ ಶಾಸಕ ನಾರಾಯಣರಾವ್
‘ಅಲೆಮಾರಿ ಬಂಧು’ ಪತ್ರಿಕೆಗೆ ಕಳೆದ ತಿಂಗಳು ನಾರಾಯಣರಾವ್ ಒಂದು ಸಂದರ್ಶನ ನೀಡುತ್ತಾ ಕೊನೆಯಲ್ಲಿ ಹೀಗೆ ಮಾತಾಡಿದ್ದಾರೆ. ‘ಅರಸು ಅವರಿಗೆ ನಾನು ಶಾಸಕನಾಗಬೇಕೆಂಬ ಬಯಕೆ ಇತ್ತು. ಅವರಿದ್ದಾಗ ನಾನು ಶಾಸಕನಾಗಿ ಆಯ್ಕೆಯಾಗಲಿಲ್ಲ. ಈಗ ಶಾಸಕನಾಗಿ ಆಯ್ಕೆಯಾಗಿದ್ದೇನೆ, ಆದರೆ ನೋಡಲು ಅವರೇ ಇಲ್ಲ. ನಾಳೆ ನಾನು ಅವರ ಹತ್ತಿರ, ಅಂದರೆ ಮೇಲೆ ಹೋಗುತ್ತೇನಲ್ಲ, ಆಗ ಅವರಿಗೆ ಹೇಳುತ್ತೇನೆ. ಶಾಸಕನಾಗಿಯೇ ಇಲ್ಲಿಗೆ ಬಂದಿದ್ದೇನೆ ಅಂತ’. ನಾರಾಯಣರಾವ್ ತಾವಂದುಕೊಂಡಂತೆಯೇ ಶಾಸಕನಾಗಿದ್ದಾಗಲೆ ಅರಸು ಅವರನ್ನು ಭೇಟಿ ಮಾಡಲು ಹೊರಟುಬಿಟ್ಟರು. ಅರಸು ತಂದ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಅವರ ಕನಸುಗಳನ್ನು ಭಗ್ನಗೊಳಿಸಿದ್ದನ್ನು ನೋಡಲಾರದೆ ನಾರಾಯಣರಾವ್ ಹೊರಟುಬಿಟ್ಟರೆ? ಗೊತ್ತಿಲ್ಲ. ಆದರೆ ಅರಸು ಯುಗದ ಕನಸುಗಳನ್ನು ಸಕಾರಗೊಳಿಸುವ ಸೇನಾನಿಯಂತಿದ್ದ ನಾರಾಯಣರಾವ್ ಅವರಂತಹ ಬದ್ಧತೆಯ ಸಾಮಾಜಿಕ ಕಾರ್ಯಕರ್ತನನ್ನು ಕಳೆದುಕೊಂಡ ಈ ನಾಡು ನಿಜಕ್ಕೂ ಬಡವಾಗಿದೆ.
- ಎ ಎಸ್ ಪ್ರಭಾಕರ
(ಕನ್ನಡ ವಿವಿ ಬುಡಕಟ್ಟು ವಿಭಾಗದ ಪ್ರಾಧ್ಯಾಪಕರಾಗಿರುವ ಡಾ. ಪ್ರಭಾಕರ್ ಕರ್ನಾಟಕದ ಜನಜೀವನ, ಸಾಮಾಜಿಕ ಬದುಕುಗಳ ಜೊತೆ ಸಾವಯವ ಸಂಬಂಶ ಹೊಂದಿರುವ ಚಿಂತಕರು.)


