ಹತ್ರಾಸ್ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿಯಾಗಲು ಹೊರಟಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಇಂದು ಸಂತ್ರಸ್ತೆಯ ಕುಟುಂಬದವರನ್ನು ನೋಡಲು ರಾಹುಲ್ ಮತ್ತು ಪ್ರಿಯಾಂಕ ಹೊರಟಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಹತ್ರಾಸ್ ಜಿಲ್ಲೆಯಲ್ಲಿ ಅಕ್ಟೋಬರ್‌ 31 ರವರೆಗೆ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಕೆ.ಲಕ್ಷಕಾರ್‌ ತಿಳಿಸಿದ್ದಾರೆ.

ನಿಷೇದಾಜ್ಞೆ ನಡುವೆಯೂ ಹೊರಟ ಅವರನ್ನು ಯಮುನಾ ಎಕ್ಸ್‌ಪ್ರೆಸ್ ವೇ ಬಳಿಯೇ ತಡೆಹಿಡಿಯಲಾಗಿದೆ. ಅವರ ಕಾರಿಗೆ ಅವಕಾಶ ನೀಡದಿದ್ದಾಗ ಅವರು ಪಾದಯಾತ್ರೆ ಮೂಲಕ ಹತ್ರಾಸ್ ತಲುಪಲು ಮುಂದಾಗಿದ್ದಾರೆ. ಈ ನಡುವೆ ಉತ್ತರ ಪ್ರದೇಶ ಪೊಲೀಸರು ಮತ್ತು ರಾಹುಲ್ ಗಾಂಧಿ ನಡುವೆ ಮಾತಿನ ಚಕಮಕಿ ನಡೆದಿದೆ.

ಇದನ್ನೂ ಓದಿ: ಹತ್ರಾಸ್ ಗ್ಯಾಂಗ್ ರೇಪ್ ಕೇಸ್: ಸಾಮಾಜಿಕ ಮಾಧ್ಯಮಗಳಲ್ಲಿ ಸ್ಫೋಟಗೊಂಡ ಆಕ್ರೋಶ

ಕಾರ್ಯಕರ್ತರ ಜೊತೆ ನಡೆದು ಹೋಗುತ್ತಿದ್ದ ರಾಹುಲ್ ಗಾಂಧಿಗೆ ಮತ್ತೆ ಪೊಲೀಸರು ಅಡ್ಡಹಾಕಿದ್ದಾರೆ. ಪಟ್ಟು ಬಿಡದೇ ಮುಂದೆ ಸಾಗಿದಾಗ ಪೊಲೀಸರೊಬ್ಬರು ರಾಹುಲ್ ಗಾಂಧಿಯನ್ನು ತಳ್ಳುತ್ತಿರುವ ದೃಶ್ಯ ವೈರಲ್ ಆಗಿದೆ. ಪೊಲೀಸರು ತಳ್ಳಾಡಿದ್ದರಿಂದ ರಾಹುಲ್ ಕುಸಿದು ಬಿದ್ದ ಘಟನೆ ಜರುಗಿದೆ. ನಿಷೇದಾಜ್ಞೆ ಆದೇಶದ ಉಲ್ಲಂಘನೆ ಆರೋಪದ ಮೇಲೆ ಬಂಧಿಸುವುದಾಗಿ ಹೇಳಿ ಸೆಕ್ಷನ್ 188 ಐಪಿಸಿ ಅಡಿಯಲ್ಲಿ ರಾಹುಲ್ ಗಾಂಧಿ  ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಹುಲ್ ಗಾಂಧಿಯವರ ಬಂಧನವನ್ನು ಖಂಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂಸಾಚಾರವು ಅಸಮರ್ಥರ ಕೊನೆಯ ಆಶ್ರಯ ತಾಣವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಆದಿತ್ಯನಾಥ್ ಹಿಂಸೆಯಿಂದ ಸ್ಪೂರ್ತಿ ಪಡೆಯುತ್ತಾರೆ ಎಂದು ಸಾಬೀತು ಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಇಬ್ಬರು ನಾಯಕರ ಬಂಧನ ಮತ್ತು ಅವರ ಜೊತೆಗಿನ ಪೊಲೀಸರ ದುರ್ವರ್ತನೆಗೆ ಆದಿತ್ಯನಾಥ್ ಬೆಲೆ ತೆರಬೇಕಾಗುತ್ತದೆ ಎಂದಿದ್ದಾರೆ.

ಮೊರಾದಾಬಾದ್, ಸಹರಾನ್ಪುರ್, ಜಲೌನ್ ಮತ್ತು ಕಾಸ್‌ಗಂಜ್ ಸೇರಿದಂತೆ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ವಾಲ್ಮೀಕಿ ಸಮುದಾಯ ಪ್ರತಿಭಟನೆ ಘೋಷಿಸಿದೆ. ಪ್ರತಿಭಟನೆ ತೀವ್ರಗೊಂಡಿದ್ದು, ಸಂಜೆ 5 ರ ಸುಮಾರಿಗೆ ದೆಹಲಿಯಲ್ಲಿ ಆಂದೋಲನವನ್ನು ಸಹ ಹಮ್ಮಿಕೊಳ್ಳಲಾಗಿದೆ.


ಇದನ್ನೂ ಓದಿ: ಅನ್ಯಾಯದ ಈ ಘೋರ ಸಾವು ಯಾವ ಹೆಣ್ಣಿಗೂ ಬರದಿರಲಿ: ಎಚ್.ಎಸ್.ಅನುಪಮ

LEAVE A REPLY

Please enter your comment!
Please enter your name here