ಪುಲ್ವಾಮಾ ಭಯೋತ್ಪಾದಾಕ ದಾಳಿ ನಡೆದು ಸರಿಯಾಗಿ ಆರು ದಿನಗಳ ನಂತರ ಫೆಬ್ರವರಿ 20ರಂದು ಪ್ರಧಾನಿ ಮೋದಿಯವರು ಮತ್ತು ಸೌದಿ ಅರೇಬಿಯಾದ ರಾಜಕುಮಾರ ಅಬ್ದುಲ್ಲಾ (ಎಂಬಿಎಸ್) ಜೊತೆಯಾಗಿ ಬಿಡುಗಡೆ ಮಾಡಿದ ಉಭಯ ದೇಶಗಳ ಜಂಟಿ ಹೇಳಿಕೆ ಮೋದಿಯವರ ಸಮರ್ಥಕರಿಗೆ, ಮುಖ್ಯವಾಗಿ ಮೀಡಿಯಾದಲ್ಲಿ ಅವರ ಪರ ಚಿಯರ್ ಮಾಡುವ ಅರ್ನಾಬ್ ಗೋಸ್ವಾಮಿಯಂತಹ ಆಂಕರುಗಳಿಗೆ ಭಾರೀ ನಿರಾಸೆ ಉಂಟುಮಾಡಿತ್ತು. ಯಾಕೆಂದರೆ ಪುಲ್ವಾಮಾ ದಾಳಿಗೆ ಪಾಕಿಸ್ತಾನವನ್ನು ಖಂಡಿಸುವಂತ ಒಂದೇಒಂದು ಸಾಲೂ ಅದರಲ್ಲಿ ಇರಲಿಲ್ಲ. ಅರ್ಥಾತ್, ಸೌದಿ ರಾಜಕುಮಾರನಿಗೆ ಪಾಕಿಸ್ತಾನದ ಡಬಲ್ ಸ್ಟಾಂಡರ್ಡ್ ಅರ್ಥ ಮಾಡಿಸುವ ವಿಚಾರದಲ್ಲಿ ಮೋದಿ ಸಂಪೂರ್ಣವಾಗಿ ಸೋತುಹೋಗಿದ್ದರು. ಬದಲಿಗೆ ಆ ಹೇಳಿಕೆಯಲ್ಲಿ ಭಾರತ-ಪಾಕಿಸ್ತಾನದ ನಡುವೆ ಸಂಬಂಧ ವೃದ್ಧಿಯಾಗಬೇಕು ಎಂಬ ಆಶಯವಿತ್ತು. ದಾಯಾದಿ ದೇಶಗಳ ನಡುವೆ ಸಂಬಂಧ ಸುಧಾರಿಸಬೇಕು ಎನ್ನುವುದೇನೊ ಒಪ್ಪಬಹುದಾದ ಸಂಗತಿ, ಆದರೆ ಇಂಥಾ ಭಯೋತ್ಪಾದನೆ ದಾಳಿ ನಡೆದ ಸಂದರ್ಭದಲ್ಲಿ ಹೇಳುವ ಮಾತಾ ಇದು. ಅದರಲ್ಲು, ಪುಲ್ವಾಮಾ ದಾಳಿಯ ಸುದ್ದಿ ತಿಳಿದ ಮೇಲೆ ಝಾನ್ಸಿ ರ್ಯಾಲಿಯಲ್ಲಿ ಸ್ವತಃ ಮೋದಿಯವರೇ `ಮೋದಿಯ ಆಳ್ವಿಕೆಯಲ್ಲಿ ಭಾರತ ಏಳಿಗೆ ಆಗುತ್ತಿರೋದನ್ನು ಸಹಿಸದ ಹೊಟ್ಟೆಕಿಚ್ಚಿನ ದೇಶದವಾದ ಪಾಕಿಸ್ತಾನ ಇಂಥಾ ದಾಳಿ ನಡೆಸಿದೆ’ ಎಂದು ದೂರಿದ್ದರು. ಹಾಗಿರುವಾಗ ಇಂಡಿಯಾ-ಸೌದಿ ಜಂಟಿ ಹೇಳಿಕೆಯಲ್ಲಿ ಪಾಕಿಸ್ತಾನವನ್ನು ಖಂಡಿಸದೆ ಅದರ ಜೊತೆ ಸಂಬಂಧ ವೃದ್ಧಿಯ ಪ್ರಸ್ತಾಪ ಬಂದಿದೆಯೆಂದರೆ ಮೋದಿ ಜಾಗತಿಕ ವೇದಿಕೆಯಲ್ಲಿ ಸೋತಿದ್ದಾರೆ ಅಂತ ತಾನೇ ಅರ್ಥ!
ಜಂಟಿ ಹೇಳಿಕೆಯಲ್ಲಿ ಪುಲ್ವಾಮ ದಾಳಿಯನ್ನು ಖಂಡಿಸಲಾಗಿದೆಯಾದರು, ಅದಕ್ಕೆ ಪಾಕಿಸ್ತಾನವನ್ನು ಹೊಣೆ ಎಂದು ಎಲ್ಲೂ ಕರೆದಿಲ್ಲ. “ಜಮ್ಮು ಮತ್ತು ಕಾಶ್ಮೀರಾದ ಪುಲ್ವಾಮಾದಲ್ಲಿ 14 ಫೆಬ್ರವರಿ 2019ರಂದು ಭಾರತ ಭದ್ರತಾ ಪಡೆಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನ ಮಂತ್ರಿಗಳು ಮತ್ತು ಘನತೆವೆತ್ತ ದೊರೆಗಳು ಖಂಡಿಸುತ್ತಾರೆ” ಎಂದಷ್ಟೇ ಅದರಲ್ಲಿದೆ.
ಇದೇ ಜಂಟಿ ಹೇಳಿಕೆಯಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿರುವ ರಾಷ್ಟ್ರಗಳ ಬಗ್ಗೆ ಮಾತಾಡುವಾಗಲೂ ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸಿಲ್ಲ! “ಭಯೋತ್ಪಾದನೆಯನ್ನು ತಮ್ಮ ಆಡಳಿತ ನೀತಿಯ ಒಂದು ಅಸ್ತ್ರವನ್ನಾಗಿ ಮಾಡಿಕೊಂಡ ಎಲ್ಲಾ ರಾಷ್ಟ್ರಗಳು ಅದನ್ನು ತ್ಯಜಿಸಬೇಕು ಎಂದು ಉಭಯ ದೇಶಗಳು ಕರೆಕೊಡುತ್ತವೆ. ಬೇರೆ ದೇಶಗಳ ಮೇಲೆ ಭಯೋತ್ಪಾದಕ ದಾಳಿಗಳನ್ನು ನಡೆಸಲು ಮಿಸೈಲ್ ಮತ್ತು ಡ್ರೋಣ್ ಗಳನ್ನು ಒಳಗೊಂಡಂತೆ ಯಾವ ಶಸ್ತ್ರಾಸ್ತ್ರಗಳನ್ನೂ ಪೂರೈಕೆ ಮಾಡಬಾರದು ಎಂಬುದಾಗಿಯೂ ನಾವು ಕರೆಕೊಡುತ್ತೇವೆ”.
ಹೀಗೆ ಮುಂದುವರೆಯುವ ಹೇಳಿಕೆಯು, “ಉಗ್ರವಾದ ಮತ್ತು ಭಯೋತ್ಪಾದನೆಗಳು ಎಲ್ಲಾ ದೇಶಗಳು ಮತ್ತು ಸಮಾಜಗಳಿಗೆ ಕಂಟಕ ಪ್ರಾಯವಾದವು ಎಂಬುದನ್ನು ದೃಢಪಡಿಸುತ್ತಲೇ, ಈ ಜಾಗತಿಕ ಪಿಡುಗನ್ನು ಯಾವುದೇ ನಿರ್ದಿಷ್ಟ ಜನಾಂಗ, ಧರ್ಮ ಅಥವಾ ಸಂಸ್ಕೃತಿಗೆ ತಳುಕು ಹಾಕುವ ಯಾವುದೇ ಪ್ರಯತ್ನವನ್ನು ಉಭಯ ರಾಷ್ಟ್ರಗಳು ತಿರಸ್ಕರಿಸುತ್ತವೆ. ಇತರೆ ದೇಶಗಳ ಮೇಲೆ ಭಯೋತ್ಪಾದನೆಯನ್ನು ಒಂದು ಅಸ್ತ್ರವಾಗಿ ಪ್ರಯೋಗಿಸದಂತೆ; ಈಗಾಗಲೇ ತಮ್ಮ ಒಳಗೆ ಭಯೋತ್ಪಾದಕ ಸಂಘಟನೆಗಳು ಇದ್ದರೆ ಅವುಗಳನ್ನು ನಾಶ ಮಾಡುವಂತೆ ಮತ್ತು ಬೇರೆ ರಾಷ್ಟ್ರಗಳ ಮೇಲೆ ಭಯೋತ್ಪಾದನಾ ದಾಳಿಗೆ ಯಾವುದೇ ರೀತಿಯ ನೆರವು, ಹಣಕಾಸು ನೀಡದಂತೆ; ಮತ್ತು ಭಯೋತ್ಪಾದಕ ಕೃತ್ಯಗಳನ್ನು ನಡೆಸುವ ಸಮಾಜಘಾತುಕರನ್ನು ನ್ಯಾಯಾಲಯದ ವ್ಯಾಪ್ತಿಗೆ ತರುವಂತೆ ಎಲ್ಲಾ ದೇಶಗಳಿಗೆ ಉಭಯ ದೇಶಗಳು ಕರೆಕೊಡುತ್ತೇವೆ.”
ಇಲ್ಲು ಸಹಾ ಎಲ್ಲೂ ಪಾಕಿಸ್ತಾನದ ಹೆಸರನ್ನೇ ತರಲಾಗಿಲ್ಲ. ಪುಲ್ವಾಮಾ ದಾಳಿ ನಡೆಯುತ್ತಿದ್ದಂತೆಯೇ ಸ್ವತಃ ಪ್ರಧಾನಿ ಮೋದಿಯವರಲ್ಲದೆ ಅವರ ಹಿಂಬಾಲಕರೆಲ್ಲ ಪಾಕಿಸ್ತಾನವೇ ಇದನ್ನು ಮಾಡಿಸಿರುವುದಾಗಿ ಬಹಳ ಸ್ಪಷ್ಟವಾಗಿ ಹೇಳುತ್ತಾ ಬಂದಿದ್ದಾರೆ. ಈಗಲೂ ಬಿಜೆಪಿಯ ಸಂಬಂಧಿತ ಸೋಶಿಯಲ್ ನೆಟ್ ವರ್ಕ್ ಗಳು ಪಾಕಿಸ್ತಾನವನ್ನು ಮುಂದಿಟ್ಟುಕೊಂಡು ದೇಶಪ್ರೇಮದ ಹೆಸರಲ್ಲಿ ಲೋಡುಗಟ್ಟಲೆ ಮೆಸೇಜುಗಳನ್ನು ಹರಿಬಿಡುತ್ತಿವೆ. ಆದರೆ ಸ್ವತಃ ಮೋದಿಯವರೇ ಸೌದಿ ಅರೇಬಿಯಾದ ರಾಜನಿಗೆ ಇದನ್ನು ಮನವರಿಕೆ ಮಾಡಿಕೊಡಲು ಸೋತು ಹೋಗಿದ್ದಾರೆ.
ಇಡೀ ಜಂಟಿ ಹೇಳಿಕೆಯಲ್ಲಿ ಪಾಕಿಸ್ತಾನದ ಹೆಸರು ಕಾಣಿಸಿಕೊಂಡಿರುವುದು ಒಂದೇ ಕಡೆ, ಅದೂ `ಭಾರತ-ಪಾಕಿಸ್ತಾನ’ ನಡುವೆ ಮತ್ತೆ ಮಾತುಕತೆ ಶುರುವಾಗಬೇಕೆಂಬ ಫ್ರೆಂಡ್ಲಿ ಅಡ್ವೈಸಿಂಗ್ ನ ಬಿಟ್ಟಿ ಸಲಹೆಯಲ್ಲಿ. “ಉಭಯ ದೇಶಗಳು ಪ್ರಾದೇಶಿಕ ಸ್ಥಿರತೆ ಮತ್ತು ನೆರೆ ರಾಷ್ಟ್ರಗಳ ಜೊತೆ ಸೌಹಾರ್ದಯುತ ಸಂಬಂಧದ ಪ್ರಾಮುಖ್ಯತೆಗೆ ಒತ್ತು ನೀಡುತ್ತವೆ. ಈ ನಿಟ್ಟಿನಲ್ಲಿ ಪಾಕಿಸ್ತಾನದ ಜೊತೆ ಸ್ನೇಹವನ್ನು ವೃದ್ಧಿಸಲು ಮೇ 2014ರಲ್ಲಿ ತಾವು ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ಮೋದಿಯವರು ಕೈಗೊಂಡಿರುವ ನಿರಂತರ ಪ್ರಯತ್ನಗಳನ್ನು ಘನತೆವೆತ್ತ ರಾಜಕುಮಾರರು ಪ್ರಶಂಸಿಸುತ್ತಾರೆ. ಇದಕ್ಕೆ ಸಂಬಂಧಿಸಿದಂತೆ, ಭಾರತ ಮತ್ತು ಪಾಕಿಸ್ತಾನಗಳ ನಡುವೆ ಸಮಗ್ರ ಮಾತುಕತೆಗಳು ಪುನರಾರಂಭಗೊಳ್ಳುವಂತಹ ವಾತಾವರಣ ನಿರ್ಮಿಸಲು ಉಭಯ ರಾಷ್ಟ್ರಗಳು ಬಯಸುತ್ತವೆ”.
ಒಟ್ಟಿನಲ್ಲಿ ಮೋದಿ ಪರ ಮೀಡಿಯಾ ಚಿಯರ್ ಆಂಕರುಗಳು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು `ಸಮರ್ಥ ನಾಯಕ’ ಭಾರತಕ್ಕೆ ಬೇಕಾಗಿದೆ ಅಂತ ಮೋದಿಯನ್ನೇ ಮತ್ತೊಮ್ಮೆ ಕದ್ದುಮುಚ್ಚಿ ಪ್ರೊಜೆಕ್ಟ್ ಮಾಡಲು ಹೆಣಗಾಡುತ್ತಿರುವಾಗಲೇ, ಹಿಂದೊಮ್ಮೆ (ಪ್ರಧಾನಿಯಾಗುವುದಕ್ಕೂ ಮುನ್ನ) `ಪಾಕಿಸ್ತಾನಕ್ಕೆ ಅದರದೇ ಭಾಷೆಯಲ್ಲಿ ಉತ್ತರ ಕೊಡಬೇಕು’ ಎಂದು ಗುಡುಗಿದ್ದ ಮೋದಿ, ಭಾರತದ ಪ್ರಧಾನಿಯ ಹುದ್ದೆಯಲ್ಲಿ ಕೂತುಕೊಂಡು ದೇಶದ ಮೇಲೆ ಮತ್ತೊಂದು ಡಿಪ್ಲೊಮ್ಯಾಟಿಕ್ ದುರಂತವನ್ನು ಎಳೆದುಬಿಟ್ಟಿದ್ದಾರೆ! ಪಾಪಾ, ಪುಲ್ವಾಮ ಘಟನೆಯಲ್ಲಿ ಮಡಿದ ನಮ್ಮ 45 ಸೈನಿಕರ ಜೀವಗಳನ್ನೇ ಬಂಡವಾಳ ಮಾಡಿಕೊಂಡು #boycottpakistan ಅನ್ನೋ ಹ್ಯಾಷ್ಟ್ಯಾಗ್ ಓಡಿಸುತ್ತಿದ್ದ ಅರ್ನಾಬ್ ಗೋಸ್ವಾಮಿ ಥರದ ಚಿಯರ್ ಆಂಕರುಗಳು ಮೋದಿಯ ಜಂಟಿ ಹೇಳಿಕೆಯಿಂದ ಗಪ್.ಚುಪ್ ಆಗಿದ್ದಾರೆ.
ಆಧಾರ: janta ka reporter


