ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ದಲಿತ ಯುವತಿಯ ಕುಟುಂಬಕ್ಕೆ ಕಿರುಕುಳ ನೀಡಿರುವ ಉತ್ತರಪ್ರದೇಶ ಪೊಲೀಸರು ಅನುಮಾನಾಸ್ಪದವಾಗಿ ಮತ್ತು ಕೆಟ್ಟ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಸತ್ಯ ಶೋಧನಾ ಸಮಿತಿ ಆರೋಪಿಸಿದೆ.
’ಫ್ಯಾಕ್ಟ್ ಫೈಂಡಿಂಗ್ ರಿಪೋರ್ಟ್ ಆನ್ ಬ್ರೂಟಲ್ ಗ್ಯಾಂಗ್ ರೇಪ್, ಅಸಾಲ್ಟ್ ಆ್ಯಂಡ್ ಮರ್ಡರ್ ಆಫ್ ಎ ದಲಿತ್ ಗರ್ಲ್ ಬೈ ಅಪ್ಪರ್ ಕಾಸ್ಟ್ ಠಾಕೂರ್ ಮೆನ್ ಇನ್ ಬುಲ್‌ಗರ್ಹಿ ವಿಲೇಜ್, ಹತ್ರಾಸ್’ ಎಂಬ ಹೆಸರಿನ ಸಾಮಾಜಿಕ ಹೋರಾಟಗಾರರು ನಡೆಸಿರುವ ಸತ್ಯಶೋಧನಾ ವರದಿಯಲ್ಲಿ, ತಡವಾಗಿ ಪರೀಕ್ಷೆ ನಡೆಸುವುದು ಅತ್ಯಾಚಾರವನ್ನು ಸಾಬೀತುಪಡಿಸಲು ಅಸಾಧ್ಯವಾಗಿರುವುದರಿಂದ, ದೌರ್ಜನ್ಯದ ವೈದ್ಯಕೀಯ ತನಿಖೆ ನಡೆಸಲು ಉದ್ದೇಶಪೂರ್ವಕವಾಗಿ ಸಮಯ ವ್ಯರ್ಥ ಮಾಡಲಾಗಿದೆ. ಶಾಶ್ವತವಾಗಿ ಪುರಾವೆಯನ್ನು ನಾಶಮಾಡುವುದು ಇದರ ಉದ್ದೇಶ ಎಂದು ಸಮಿತಿ ಹೇಳಿದೆ.
ಇದನ್ನೂ ಓದಿ: ಹತ್ರಾಸ್ ಪ್ರಕರಣ ತನಿಖೆ: CBI ತಂಡದಲ್ಲಿ SC/ST/OBC ಸಮುದಾಯದವರಿಲ್ಲ- ಚಂದ್ರಶೇಖರ್ ಆಜಾದ್
ಅಲ್ಲದೆ ದೌರ್ಜನ್ಯಕ್ಕೊಳಗಾದ ಯುವತಿಯ ತಂದೆಗೆ ತನಿಖೆ ಹಾಗೂ ಚಿಕಿತ್ಸೆಯಿಂದ ತಾನು ಮತ್ತು ಕುಟುಂಬ ಸಂತೃಪ್ತರಾಗಿದ್ದೇವೆಂದು ಎಲ್ಲರಿಗೂ ತಿಳಿಸುವಂತೆ ಜಿಲ್ಲಾಡಳಿತ ಒತ್ತಡ ಹೇರಿತ್ತು ಎಂದು ಸಮಿತಿ ಹೇಳಿದೆ. ಇದು ಸತ್ಯವನ್ನು ಮುಚ್ಚಿಡಲು ಹಾಗೂ ಪ್ರಕರಣವನ್ನು ಶಾಶ್ವತವಾಗಿ ಮುಗಿಸಲು ರಾಜ್ಯ ಸರಕಾರ ನಡೆಸಿದ ಸಿದ್ಧತೆ ಎಂಬುದನ್ನು ತಿಳಿಸುತ್ತದೆ ಎಂದು ವರದಿ ಹೇಳಿದೆ.
ಸತ್ಯಶೋಧನಾ ಸಮಿತಿಯಲ್ಲಿ, ‘ನರ್ಮದಾ ಬಚಾವೊ’ ಆಂದೋಲನದ ಮೇಧಾ ಪಾಟ್ಕರ್, ಮ್ಯಾಗ್ಸಸೆ ಪ್ರಶಸ್ತಿ ಪುರಷ್ಕೃತ ಸಂದೀಪ್ ಪಾಂಡೆ, ಆರ್‌ಟಿಐ ಕಾರ್ಯಕರ್ತೆ ಹಾಗೂ ಲೇಖಕಿ ಮಣಿಮಾಲಾ, ‘ದಿಲ್ಲಿ ಏಕತಾ’ ಗುಂಪಿನ ಇಬ್ಬರು ಸದಸ್ಯರು ಸೇರಿದಂತೆ 9 ಸದಸ್ಯರಿದ್ದು ಸಂತ್ರಸ್ಥ ಯುವತಿಯ ಮನೆಗೆ ಅಕ್ಟೋಬರ್ 9 ರಂದು ಭೇಟಿ ನೀಡಿತ್ತು.
ವರದಿಯಲ್ಲಿ, ಪ್ರಜ್ಞೆ ಮರುಕಳಿಸುವವರೆಗೆ ಯುವತಿಯನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸಬಾರದು ಎಂದು ಕೆಲವು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ಅನಗತ್ಯ ಆತುರ ತೋರಿಸಿ ಅಲಿಗಢದ ಜವಾಹರ್‌ಲಾಲ್ ನೆಹರೂ ವೈದ್ಯಕೀಯ ಕಾಲೇಜಿನಿಂದ ದಿಲ್ಲಿಗೆ ವರ್ಗಾಯಿಸಲಾಗಿದೆ ಎಂದು ಹೇಳಿದೆ.
‘‘ಈ ಪರಿಸ್ಥಿತಿಯಲ್ಲಿ ಯುವತಿಯನ್ನು ವರ್ಗಾಯಿಸುವುದು ಅಪಾಯಕಾರಿ ಎಂದು ಅರಿತ ಕುಟುಂಬ ವರ್ಗಾವಣೆಗೆ ಒಪ್ಪಿಗೆ ನೀಡಲು ನಿರಾಕರಿಸಿತ್ತು. ಸಂತ್ರಸ್ಥೆಗೆ ತೀವ್ರ ನೋವು ಸೇರಿದಂತೆ ನರಕ್ಕೆ ಆದ ಘಾಸಿಯಿಂದ ಬೆನ್ನು ಹುರಿಯ ಮೇಲೆ ಪರಿಣಾಮ ಉಂಟಾಗಿರುವುದು ಹಾಗೂ ಕತ್ತು ಮತ್ತು ಹಿಂಭಾಗದ ಚಲನೆ ಸಾಧ್ಯವಾಗುತ್ತಿರಲಿಲ್ಲ. ಸಂತ್ರಸ್ಥೆಯನ್ನು ದಿಲ್ಲಿ ಏಮ್ಸ್‌ಗೆ ವರ್ಗಾಯಿಸಲು ಕುಟುಂಬವು ಜಿಲ್ಲಾಡಳಿತಕ್ಕೆ ಅನುಮತಿ ನೀಡಿಲ್ಲ ಎಂಬುವುದು ಸುಳ್ಳಾಗಿದ್ದು, ಈಗ ಬಹಿರಂಗಗೊಂಡಿದೆ’’ ಎಂದು ವರದಿ ಹೇಳಿದೆ.
ವಾಸ್ತವವಾಗಿ ಸಂತ್ರಸ್ಥೆಯನ್ನು ಏಮ್ಸ್‌ನ ಸನಿಹದಲ್ಲಿರುವ ಕೇಂದ್ರ ಸರಕಾರದ ಸ್ವಾಮ್ಯದ ಸಪ್ಧರಂಜಂಗ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಈ ಬಗ್ಗೆ ಆಕೆಯ ಕುಟುಂಬ ಪ್ರಶ್ನಿಸಿದಾಗ, ಎರಡೂ ಆಸ್ಪತ್ರೆ ಒಂದೇ ಎಂದು ಜಿಲ್ಲಾಡಳಿತ ಹೇಳಿತ್ತು ಎಂದು ಸತ್ಯಶೋಧನ ವರದಿಯು ಆರೋಪಿಸಿದೆ.
ಇದನ್ನೂ ಓದಿ: ಹತ್ರಾಸ್ ಭೇಟಿಯ ಫೋಟೋದಲ್ಲಿ ಪ್ರಿಯಾಂಕಾ ಗಾಂಧಿ ಅಪ್ಪಿಕೊಂಡಿದ್ದ ಮಹಿಳೆ ಯಾರು?


