ಶಿರಾ ಉಪಚುನಾವಣೆಯು ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವು ಖಚಿತ ಎಂದು ಹೇಳುತ್ತಿದ್ದಾರೆ. ರಾಜ್ಯಮಟ್ಟದ ನಾಯಕರು ಬಂದು ಪ್ರಚಾರದಲ್ಲಿ ತೊಡಗಿದ್ದಾರೆ. ಕೆಲ ಮುಖಂಡರು ಕ್ಷೇತ್ರದಲ್ಲೇ ಬೀಡುಬಿಟ್ಟು ಜನರ ನಾಡಿಮಿಡಿತ ಅರಿಯುವ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ. ಬೇರೆ ಜಿಲ್ಲೆಗಳ ಮುಖಂಡರು ಪ್ರಚಾರ ನಡೆಸುತ್ತಿದ್ದಾರೆ. ಪ್ರತಿ ಹೋಬಳಿಗೆ ಒಬ್ಬ ಮುಖಂಡರನ್ನು ನೇಮಕ ಮಾಡಿ ಅವರೇ ಖರ್ಚುವೆಚ್ಚ ನೋಡಿಕೊಳ್ಳುವಂತೆ ಜವಾಬ್ದಾರಿ ವಹಿಸಲಾಗಿದೆ.
ಬಿಜೆಪಿ ಪರವಾಗಿ ಪ್ರಚಾರ ನಡೆಸಲು ಮಂಡ್ಯ ಮತ್ತು ಹಾಸನ ಜಿಲ್ಲೆಗಳಿಂದ ಕಾರ್ಯಕರ್ತರು ಬಂದಿದ್ದಾರೆ. ಹಾಸನ ಜಿಲ್ಲೆಯ ಬಿಜೆಪಿ ಶಾಸಕ ಪ್ರೀತಂ ಗೌಡ ಅವರಿಗೆ ಹುಲಿಕುಂಟೆ ಹೋಬಳಿ ಜವಾಬ್ದಾರಿ ನೀಡಿದ್ದು ಆ ಹೋಬಳಿಯಲ್ಲಿ ಪ್ರಚಾರದ ನೇತೃತ್ವ ವಹಿಸಿದ್ದಾರೆ. ಹುಲಿಕುಂಟೆ ಹೋಬಳಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಅವರ ಹುಟ್ಟೂರು. ವಿಶೇಷವಾಗಿ ಯುವ ಮತದಾರರನ್ನು ಸೆಳೆಯಲು ಯುವ ಶಾಸಕ ಪ್ರೀತಂಗೌಡ ಅವರಿಗೆ ಈ ಹೋಬಳಿಯ ಜವಾಬ್ದಾರಿ ನೀಡಲಾಗಿದೆ.
ಇದರ ನಡುವೆ ಕ್ಷೇತ್ರದಲ್ಲಿ ಹಣದ ಹರಿವು ಜೋರಾಗಿದೆ. ಹಿರಿಯರು ಮತ್ತು ವಿಶೇಷಚೇತನರಿಗೆ ಹಣ ಹಂಚಿಕೆ ಮಾಡಿರುವ ಸಂಬಂಧ ಆಡಿಯೋಗಳು ಸದ್ದುಮಾಡುತ್ತಿವೆ. ದ್ವಾರಾಳು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಹಿರಿಯ ನಾಗರಿಕರು ಮತ್ತು ವಿಶೇಷಚೇತನರಿಗೆ ಪ್ರತಿ ಮತಕ್ಕೆ 2 ರಿಂದ 3 ಸಾವಿರ ರೂಪಾಯಿ ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಹಿರಿಯರೊಬ್ಬರು ಬಿಜೆಪಿ ಕಾರ್ಯಕರ್ತರಿಗೆ ತರಾಟೆಗೆ ತೆಗೆದುಕೊಂಡಿರುವ ಬಗೆಗಿನ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಸುಮಾರು 8 ನಿಮಿಷದಷ್ಟು ಇರುವ ಆಡಿಯೋದಲ್ಲಿ ದ್ವಾರಾಳು ಗ್ರಾಮದ ಹಿರಿಯರಾದ ನರಸಿಂಹಯ್ಯ ಎಂಬ ಹೆಸರಿನವರು “ಬಿಜೆಪಿ ಕಾರ್ಯಕರ್ತರಾದ ಸುರೇಶ, ರಮೇಶ್ ಸೇರಿದಂತೆ ಎಂಟು ಹತ್ತು ಮಂದಿ ನನಗೆ ಹಣ ಕೊಡಲು ಬಂದರು. ನಾನು ಉಗಿದು ಅಟ್ಟಿದೆ. ನಾನು ಹಿಂದಿನಿಂದಲೂ ಹಣ ಪಡೆದು ಓಟು ಹಾಕಿಲ್ಲ. ಲಂಚ ಪಡೆದು ಓಟು ಹಾಕಬೇಕೇ? ಹಣ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆ. ಚನ್ನಾಗಿ ಬೈದೆ. 500 ರೂ ನ ಆರು ನೋಟುಗಳನ್ನು ಎಣಿಸಿದರು. ನಾನು ಬೈದ ಮೇಲೆ ಹಣವನ್ನು ಜೋಬಿಗೆ ಇಟ್ಟುಕೊಂಡು ಹೋದರು. ಊರಲ್ಲಿ ಹಲವರಿಗೆ ಹಣ ಹಂಚಿಕೆ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
“ಈ ಗುಂಪಿನಲ್ಲಿ ಮಂಡ್ಯದಿಂದ ಬಂದವರು ಇದ್ದರು. ಇವರು ಯಾರು ಅಂತ ಕೇಳಿದೆ. ಆತ ನಾನು ಮಂಡ್ಯ ದಿಂದ ಬಂದಿದ್ದೇನೆ. ಬಿಜೆಪಿಯ ರಾಜೇಶ್ ಗೌಡರ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ ಎಂದು ಹೇಳಿದ. ಗ್ರಾಮದ ಕೆಲವರ ಜೊತೆ ಮಂಡ್ಯದಿಂದ ಬಂದವರು ಇದ್ದರು. ಅವರಿಂದ ತಿಳಿದುಕೊಂಡ ಮೇಲೆ ಅವರು ಮಂಡ್ಯದವರು ಎಂದು ಗೊತ್ತಾಯಿತು” ಎನ್ನುತ್ತಾರೆ ಹಿರಿಯರಾದ ನರಸಿಂಹಯ್ಯ.
ಮತ್ತೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರ ಇಡೀ ಕುಟುಂಬವೇ ಪ್ರಚಾರದಲ್ಲಿ ನಿರತವಾಗಿ ಇರುವುದು ಇಲ್ಲಿನ ವಿಶೇಷ. ಪತ್ನಿ, ಪುತ್ರ ಸಂತೋಷ್ ಜಯಚಂದ್ರ, ಸೊಸೆಯಾದಿಯಾಗಿ ಎಲ್ಲರೂ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಮತದಾರರ ಮನವೊಲಿಸುವ ಪ್ರಯತ್ನ ಮುಂದುವರಿಸಿದ್ದಾರೆ. ಇದು ಶಿರಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ನಡುವಿನ ಪೈಪೋಟಿಯ ತೀವ್ರತೆಯನ್ನು ತೋರಿಸುತ್ತದೆ.
ಪರಸ್ಪರ ಕೆಸರೆರೆಚಾಟವೂ ಜೋರಾಗಿದೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಪರಸ್ಪರ ದೂರಿಕೊಳ್ಳುವುದು ಸಾಮಾನ್ಯವಾಗಿದೆ. ಕಾಂಗ್ರೆಸ್ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದ ಸಂದರ್ಭದಲ್ಲಿ ಕುಡಿಯುವ ನೀರು ಪೂರೈಕೆ ಮಾಡಿರುವುದನ್ನು ಪ್ರಚಾರದಲ್ಲಿ ಮತದಾರರಿಗೆ ನೆನಪಿಸುತ್ತಿದೆ. ಜೆಡಿಎಸ್ ತನ್ನ ಆಡಳಿತದ ಅವಧಿಯ ಸಾಧನೆಗಳನ್ನು ಬೊಟ್ಟುಮಾಡಿ ತೋರಿಸುತ್ತಿದೆ. ಬಿಜೆಪಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಹೇಳುತ್ತಿದೆ. ಮತದಾರರು ಎಲ್ಲವನ್ನೂ ಗಮನಿಸುತ್ತ ಕೇಳಿಸಿಕೊಳ್ಳುತ್ತಿದ್ದಾರೆ. ಜಣಜಣಜಣ ಕಾಂಚಣದಲ್ಲಿ ಮೂರು ಪಕ್ಷಗಳ ಲಾಂಚನದಲ್ಲಿ ಎಲ್ಲಾ ಮಾಯ ಎನ್ನುವಂತಹ ಪರಿಸ್ಥಿತಿ ಇದೆ.
- ಸಿದ್ದಯ್ಯ ಕೆ.ಈ
ಇದನ್ನೂ ಓದಿ: ಶಿರಾ: ಹಣದ ಹೊಳೆ! ನೆಲೆ ಕಾಣುವುದೇ ಕಮಲ, ಬಲಗೊಳ್ಳುವುದೇ ತೆನೆ, ಒಲವು ಗಳಿಸುವುದೇ ಹಸ್ತ?


