ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನಡುವಿನ ವಾಕ್ಸಮರ ಮುಂದುವರೆದಿದೆ. ಮಹಾರಾಷ್ಟ್ರದಲ್ಲಿ ಬೀಫ್ ಬ್ಯಾನ್ ಮಾಡಲಾಗಿದೆ. ಆದರೆ ಗೋವಾದಲ್ಲಿ ಬೀಫ್ ಬ್ಯಾನ್ ಯಾಕಿಲ್ಲ, ಇದ ನಿಮ್ಮ ಹಿಂದುತ್ವ? ಎಂದು ರಾಜ್ಯಪಾಲರನ್ನು ಪ್ರಶ್ನಿಸಿದ ಉದ್ಧವ್, ಬಿಜೆಪಿಯ ದ್ವಂದ್ವ ನೀತಿಯನ್ನು ಕಟುವಾಗಿ ಟೀಕಿಸಿದ್ದಾರೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ರವರ ನಿನ್ನೆಯ ಭಾಷಣವನ್ನು ಉಲ್ಲೇಖಿಸಿದ ಉದ್ಧವ್, “ಭಾಗವತ್ ಪ್ರಕಾರ ಹಿಂದುತ್ವವೆಂದರೆ ಕೇವಲ ಪೂಜೆಯಲ್ಲ. ಅವರ ಮಾತುಗಳನ್ನು ನೀವು ಅನುಸರಿಸಿ. ನಮಗೆ ಜಾತ್ಯಾತೀತತೆ ಮತ್ತು ಹಿಂದುತ್ವದ ಪಾಠ ಮಾಡಲು ಬರಬೇಡಿ. ನಮಗೆ ಸವಾಲು ಹಾಕಲು ಮುಂದಾದರೆ ಅದರ ಪರಿಣಾಮಗಳನ್ನು ಎದುರಿಸಲು ಸಿದ್ದರಾಗಿ” ಎಂದಿದ್ದಾರೆ.
ಈ ತಿಂಗಳ ಆರಂಭದಲ್ಲಿ ಕೊರೊನಾ ಸಾಂಕ್ರಾಮಿಕದ ಕಾರಣದಿಂದ ದೇವಾಲಯಗಳ ಬಾಗಿಲು ತೆರೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದರು. ಇದರಿಂದ ಕುಪಿತಗೊಂಡಿದ್ದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ, “ಕಾಂಗ್ರೆಸ್, ಎನ್‌ಸಿಪಿ ಜೊತೆ ಸೇರಿ ಉದ್ಧವ್ ಠಾಕ್ರೆ ಹಿಂದುತ್ವವನ್ನು ಮರೆತು ಜಾತ್ಯತೀತರಾಗಿಬಿಟ್ಟಿದ್ದಾರೆ” ಎಂದು ಟೀಕಿಸಿದ್ದರು.
ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಅಂದಿನಿಂದ ಉದ್ಧವ್ ರಾಜ್ಯಪಾಲರ ವಿರುದ್ಧ ಟೀಕಾಪ್ರಹಾರ ಮುಂದುವರೆಸಿದ್ದಾರೆ. “ನಾವು ದೇವಾಲಯಗಳ ಬಾಗಿಲು ತೆರೆಯದಿದ್ದುದರಿಂದ ನಮ್ಮ ಹಿಂದುತ್ವವನ್ನು ಪ್ರಶ್ನಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಬೀಫ್ ಬ್ಯಾನ್ ಮಾಡಿ ಅದೇ ಬಿಜೆಪಿ ಸರ್ಕಾರ ಗೋವಾದಲ್ಲಿ ಬೀಫ್ ಮಾರಾಟ ಮಾಡುತ್ತಿದೆ. ಇದ ನಿಮ್ಮ ಹಿಂದುತ್ವ? ನಿಮ್ಮಿಂದ ನನಗೆ ಹಿಂದುತ್ವದ ಸರ್ಟಿಫಿಕೇಟ್ ಬೇಕಿಲ್ಲ” ಎಂದು ಗುಡುಗಿದ್ದಾರೆ.
ಈ ವಿವಾದಗಳ ಹಿನ್ನೆಲೆಯಲ್ಲಿ ರಾಜ್ಯಪಾಲ ಕೋಶ್ಯಾರಿ ಬಿಜೆಪಿಯ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ ಎಂದು ಮಹಾರಾಷ್ಟ್ರದ ಸರ್ಕಾರ ಆರೋಪಿಸಿದೆ.
ಇದನ್ನೂ ಓದಿ: ಬಿಜೆಪಿಯಿಂದ ದೂರ ಸರಿದಿದ್ದೇನೆಯೆ ಹೊರತು ಹಿಂದುತ್ವದಿಂದ ಅಲ್ಲ: ಉದ್ಧವ್ ಠಾಕ್ರೆ