ಆಜಾದ್ ಸಮಾಜ್ ಪಕ್ಷದ ಪರವಾಗಿ ಉತ್ತರ ಪ್ರದೇಶದ ಬುಲಂದ್‌ಶಹರ್ ನಲ್ಲಿ ಪ್ರಚಾರ ಮುಗಿಸಿ ವಾಪಸಾಗುತ್ತಿದ್ದಾಗ ಚಂದ್ರಶೇಖರ್ ಆಜಾದ್‌ರವರ ಬೆಂಗಾವಲು ವಾಹನದ ಮೇಲೆ ಕೆಲ ಅಪರಿಚಿತ ಗೂಂಡಾಗಳು ಗುಂಡು ಹಾರಿಸಿದ್ದಾರೆ ಎಂದು ಭೀಮ್ ಆರ್ಮಿ ಆರೋಪಿಸಿದೆ.
ನವೆಂಬರ್ 3 ರಂದು ನಡೆಯುವ ಬುಲಂದ್ ಶಹರ್‌ನ ಸದರ್ ಕ್ಷೇತ್ರದ ಉಪಚುನಾವಣೆಯಲ್ಲಿ ಅಜಾದ್ ಸಮಾಜ್ ಪಕ್ಷದಿಂದ ಸ್ಪರ್ಧಿಸಿರುವ ಹಾಜಿ ಯಾಮಿನ್‌ರವರ ಪರವಾಗಿ ಚಂದ್ರಶೇಖರ್ ಆಜಾದ್‌ರವರು ಪ್ರಚಾರ ಮುಗಿಸಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅಜಾದ್ ಮಾಧ್ಯಮ ಸಂಯೋಜಕ ಕುಷ್ ತಿಳಿಸಿದ್ದಾರೆ.
ಬುಲಂದ್ ಶಹರ್‌ನ ಉಪಚುನಾವಣೆಗೆ ಆಜಾದ್ ಸಮಾಜ್ ಪಕ್ಷ ಧುಮುಕಿದೆ. ಇದು ಎದುರಾಳಿ ಪಕ್ಷಗಳನ್ನು ಭಯಭೀತರನ್ನಾಗಿಸಿದೆ. ಅಷ್ಟೇ ಅಲ್ಲದೆ ಇಂದಿನ ನಮ್ಮ ರ್ಯಾಲಿ ನೋಡಿ ಅವರ ನಿದ್ರೆಕೆಡಿಸಿದೆ. ಹಾಗಾಗಿ ಅವರು ನಮ್ಮ ಬೆಂಗಾವಲು ವಾಹನದ ಮೇಲೆ ದಾಳಿ ಮಾಡಿದ್ದಾರೆ. ವಾತವಾರಣವನ್ನು ಕೆಡಿಸುವುದು ಅವರ ಉದ್ದೇಶ. ಅದಕ್ಕೆ ನಾವು ಆಸ್ಪದ ಕೊಡುವುದಿಲ್ಲ ಎಂದು ಚಂದ್ರಶೇಖರ್ ಆಜಾದ್ ಟ್ವೀಟ್ ಮಾಡಿದ್ದಾರೆ.
बुलन्दशहर के चुनाव में हमारे प्रत्याशी उतारने से विपक्षी पार्टीयां घबरा गई है और आज की रैली ने इनकी नींद उड़ा दी है जिसकी वजह से अभी कायरतापूर्ण तरीके से मेरे काफिले पर गोलियां चलाई गई है। यह इनकी हार की हताशा को दिखाता है ये चाहते है कि माहौल खराब हो लेकिन हम ऐसा नही होने देंगे।
— Chandra Shekhar Aazad (@BhimArmyChief) October 25, 2020
ಅಜಾದ್‌ರವರ ಬೆಂಗಾವಲು ವಾಹನದ ಮೇಲೆ ಗುಂಡು ಹಾರಿಸಿ ಅಪರಿಚಿತ ಗೂಂಡಾಗಳು ಪಲಾಯನಗೈದರು. ವಿಷಯ ತಿಳಿಯುತ್ತಿದ್ದಂತೆ ಭೀಮ್ ಆರ್ಮಿಯ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಭೀಮ್ ಆರ್ಮಿ ಪಕ್ಷವು ಈ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.
ಇದನ್ನೂ ಓದಿ: ಬಹುಜನರಿಗೆ ಬಂದೂಕು ನೀಡಿ: ಹತ್ರಾಸ್‌ಗೆ ಹೊರಟ ಭೀಮ್ ಆರ್ಮಿ ಮುಖ್ಯಸ್ಥ ಆಜಾದ್
ಆದರೆ ಗುಂಡಿನ ದಾಳಿಯ ಘಟನೆಯನ್ನು ಬುಲಂದ್‌ಶಹರ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಎಸ್‌ಕೆ ಸಿಂಗ್ ನಿರಾಕರಿಸಿದ್ದಾರೆ. ಸ್ಥಳೀಯರು ಗುಂಡಿನ ದಾಳಿ ನಡೆದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ (ಎಐಎಂಐಎಂ) ಅಭ್ಯರ್ಥಿ ದಿಲಾಶಾದ್ ಮತ್ತು ಅಜಾದ್ ಸಮಾಜ್ ಪಕ್ಷದ ಹಾಜಿ ಯಾಮಿನ್ ಅವರ ಬೆಂಬಲಿಗರ ನಡುವೆ ಜಗಳ ನಡೆದು ಪರಸ್ಪರ ಕುರ್ಚಿ ಎಸೆಯುವುದು ನಡೆದಿದೆ ಎಂದಿದ್ದಾರೆ.
ಬುಲಂದ್ ಶಹರ್‌ನ ಸದರ್ ಕ್ಷೇತ್ರದ ಬಿಜೆಪಿ ಶಾಸಕ ವೀರೇಂದ್ರ ಶಿರೋಲಿ ಮರಣ ಹೊಂದಿದ ಕಾರಣಕ್ಕಾಗಿ ಉಪಚುನಾವಣೆ ನಡೆಯತ್ತಿದೆ.
ಇದನ್ನೂ ಓದಿ: ಅಡೆತಡೆ ದಾಟಿ ಹತ್ರಾಸ್ ತಲುಪಿದ ಭೀಮ್ ಆರ್ಮಿ ಆಜಾದ್‌ಗೆ ಠಾಕೂರ್ ಯುವಕರಿಂದ ಬಹಿರಂಗ ಬೆದರಿಕೆ


