ಭೀಮ್‌ ಆರ್ಮಿ ಮುಖಂಡ ಚಂದ್ರಶೇಖರ್ ಆಜಾದ್ ಕೊನೆಗೂ ಹತ್ರಾಸ್ ತಲುಪಿ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿದ್ದಾರೆ. ಹತ್ರಾಸ್ ಪ್ರಯಾಣದಲ್ಲಿ ಉತ್ತರ ಪ್ರದೇಶ ಪೊಲೀಸರು ಅವರನ್ನು ಎರಡು ಬಾರಿ ತಡೆದಿದ್ದಾರೆ. ನಂತರ ಅವರು ಕಾರಿನಿಂದಿಳಿದು 5 ಕಿ.ಮೀ ನಡೆದು ಹತ್ರಾಸ್ ತಲುಪಿದ್ದಾರೆ. ಹತ್ರಾಸ್‌ನಲ್ಲಿಯೂ ಪೊಲೀಸರು ಅವರನ್ನು ತಡೆದು ಎಲ್ಲಾ ಕಾರ್ಯಕರ್ತರಿಗೂ ಗ್ರಾಮಕ್ಕೆ ಪ್ರವೇಶವಿಲ್ಲವೆಂಬ ಷರತ್ತು ವಿಧಿಸಿದ್ದಾರೆ.

ಬರ್ಬರ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ 19 ವರ್ಷದ ದಲಿತ ಬಾಲಕಿಯ ಕುಟುಂಬವನ್ನು ಕೊನೆಗೂ ಭೇಟಿಯಾದ ಆಜಾದ್ ಧೈರ್ಯತುಂಬಿದ್ದಾರೆ. ನಂತರ ಮಾತನಾಡಿದ ಅವರು “ಮೇಲ್ಜಾತಿ ಠಾಕೂರರು ಸಭೆ ನಡೆಸಿ ಸಂತ್ರಸ್ತ ಕುಟುಂಬದ ವಿರುದ್ಧ ಹರಿಹಾಯ್ದಿದ್ದಾರೆ. ಇಂತಹ ಸಮಯದಲ್ಲಿ ಕುಟುಂಬ ರಕ್ಷಣೆ ಬೇಕು. ಹಾಗಾಗಿ ಕೂಡಲೇ ಕೇಂದ್ರ ಸರ್ಕಾರ ವೈ ಪ್ಲಸ್ ಭದ್ರತೆ ಒದಗಿಸಬೇಕೆಂದು” ಆಗ್ರಹಿಸಿದ್ದಾರೆ.

ಕಂಗನಾ ರಾಣಾವತ್‌ಗೆ ಕೇಂದ್ರ ವೈ ಪ್ಲಸ್ ಭದ್ರತೆ ಒದಗಿಸುವುದಾದರೆ ಈ ಪುಟ್ಟ ಹಳ್ಳಿಯಲ್ಲಿ ದಿನನಿತ್ಯ ನಿಂದನೆಗೊಳಗಾಗುತ್ತಿರುವ ಈ ಕುಟುಂಬಕ್ಕೆ ರಕ್ಷಣೆ ಒದಗಿಸಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ ಅವರು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಬಹುಜನರಿಗೆ ಬಂದೂಕು ನೀಡಿ: ಹತ್ರಾಸ್‌ಗೆ ಹೊರಟ ಭೀಮ್ ಆರ್ಮಿ ಮುಖ್ಯಸ್ಥ ಆಜಾದ್


ಈ ಗ್ರಾಮದಲ್ಲಿ ಸಂತ್ರಸ್ತ ಕುಟುಂಬಕ್ಕೆ ರಕ್ಷಣೆಯಿಲ್ಲ. ಸರ್ಕಾರ ವೈ ಪ್ಲಸ್ ಭದ್ರತೆ ನೀಡದಿದ್ದರೆ ಈ ಕುಟುಂಬ ಸದಸ್ಯರನ್ನು ನನ್ನ ಮನೆಗೆ ಕರೆದುಕೊಂಡು ಹೋಗಿ ನಾನು ರಕ್ಷಣೆ ನೀಡುತ್ತೇನೆ ಎಂದು ಚಂದ್ರಶೇಖರ್ ಆಜಾದ್ ಗುಡುಗಿದ್ದಾರೆ.

ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಶಿಕ್ಷೆಯಾಗಬೇಕು. ನಮ್ಮ ಹಕ್ಕೊತ್ತಾಯಗಳು ಈಡೇರದಿದ್ದರೆ ವಿಧಾನಸೌಧ ಮುತ್ತಿಗೆ ಹಾಕಿಯೇ ತೀರುತ್ತೇವೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ ‘ಸವರ್ಣ ಜಾಗೋ’ ಹೆಸರಿನಲ್ಲಿ ಆರೋಪಿಗಳ ಪರ ಪ್ರತಿಭಟನೆ ನಡೆಸುತ್ತಿರುವ ಠಾಕೂರ್ ಯುವಕರಿಬ್ಬರು ಚಂದ್ರಶೇಖರ್ ಆಜಾದ್‌ಗೆ ಪೊಲೀಸರ ಸಮ್ಮುಖದಲ್ಲಿ ಬಹಿರಂಗ ಬೆದರಿಕೆ ಹಾಕಿದ್ದಾರೆ. ನಿಮಗೆ ಎಸ್‌ಐಟಿ ತನಿಖೆ ಮೇಲೆ ನಂಬಿಕೆಯಿಲ್ಲ, ಕಾನೂನಿನ ಮೇಲೆ ನಂಬಿಕೆಯಿಲ್ಲದಿದ್ದರೆ ಒಮ್ಮೆ ನನ್ನ ಬಳಿಗೆ ಬಾ ನಿನಗೆ ನಂಬಿಕೆ ತೋರಿಸುತ್ತೇನೆ. ನೀನೇನು ರಾಜಕೀಯ ಮಾಡುತ್ತಿದ್ದೀಯ ಒಮ್ಮೆ ನನ್ನ ಬಳಿಗೆ ಬಾ ತೋರಿಸುತ್ತೇನೆ” ಎಂದು ಆ ಯುವಕ ಕಿರುಚಾಡಿದ್ದಾನೆ. ಆತ ಕುಳಿತುಕೊಂಡು ಈ ಬೆದರಿಕೆ ಹಾಕುತ್ತಿದ್ದರೆ ಅವನ ಹಿಂದೆ ಪೊಲೀಸರು ಕೈಕಟ್ಟಿ ನಿಂತಿರುವ ವಿಡಿಯೋ ವೈರಲ್ ಆಗಿದೆ.

ಚಂದ್ರಶೇಖರ್ ಆಜಾದ್ ಕಳೆದೊಂದು ವಾರದಿಂದಲೂ ಹತ್ರಾಸ್ ಅತ್ಯಾಚಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಹದಿನೈದು ದಿನದ ಹಿಂದೆಯೇ ಭೀಮ್ ಆರ್ಮಿ ಕಾರ್ಯಕರ್ತರು ಸಂತ್ರಸ್ತ ಕುಟುಂಬ ಮತ್ತು ಸಂತ್ರಸ್ತ ಬಾಲಕಿಯನ್ನು ಭೇಟಿಯಾಗಿ ನ್ಯಾಯಕ್ಕಾಗಿ ದನಿಯತ್ತಿದ್ದರು. ಕೆಲ ದಿನಗಳ ಹಿಂದೆ ಆಜಾದ್‌ರವರನ್ನು ಪೊಲೀಸರು ಗೃಹಬಂಧನದಲ್ಲಿಟ್ಟಿದ್ದರು.


ಇದನ್ನೂ ಓದಿ: ಯೋಗಿಯ ರಾಮರಾಜ್ಯ ದಲಿತರ ಪಾಲಿಗೆ ಸ್ಮಶಾನವಾಗಿದೆ : ಚಂದ್ರಶೇಖರ್‌ ರಾವಣ್‌ 

LEAVE A REPLY

Please enter your comment!
Please enter your name here