PC:The Quint

ಹತ್ರಾಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಚಿತ್ರಹಿಂಸೆ ಅನುಭವಿಸಿ ಮೃತಪಟ್ಟ ದಲಿತ ಯುವತಿಯ ಕುಟುಂಬದ ಭೇಟಿಗೆ ಹೊರಟಿದ್ದ ರಾಷ್ಟ್ರೀಯ ಲೋಕ ದಳ ಮತ್ತು ಸಮಾಜವಾದಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಯುಪಿ ಪೊಲೀಸರು ಅಮಾನುಷವಾಗಿ ಲಾಠಿಚಾರ್ಜ್ ಮಾಡಿದ್ದಾರೆ.

ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಸೂಚನೆಯಂತೆ ಎಸ್​​ಪಿಯ 11 ಮಂದಿ ತಂಡದ ನಿಯೋಗ ಇಂದು ಹತ್ರಾಸ್​​ಗೆ ಭೇಟಿ ನೀಡಲು ಮುಂದಾಗಿತ್ತು. ಈ ವೇಳೆ ಉತ್ತರ ಪ್ರದೇಶದ ಪೊಲೀಸರು ಅವರನ್ನ ತಡೆದಿದ್ದಾರೆ. ಮಾತಿನ ಚಕಮಕಿ ನಡೆಯುತ್ತಿದ್ದಾಗ ಏಕಾಏಕಿ ಪೊಲೀಸರು ದಾಳಿ ನಡೆಸಿರುವ ವಿಡಿಯೋ ವೈರಲ್ ಆಗಿದೆ.

ಎಸ್‌ಪಿ ಜಿಲ್ಲಾಧ್ಯಕ್ಷ ಗಿರೀಶ್ ಯಾದವ್ ಸೇರಿದಂತೆ ಅನೇಕ ಕಾರ್ಯಕರ್ತರು ಲಾಠಿಚಾರ್ಜ್‌ನಲ್ಲಿ  ಗಾಯಗೊಂಡಿದ್ದಾರೆ. ಹತ್ರಾಸ್​​ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಆಗಿರೋದ್ರಿಂದ ಯಾರಿಗೂ ಸಂತ್ರಸ್ತ ಕುಟುಂಬದ ಭೇಟಿಗೆ ಅವಕಾಶ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕೆ ಎಸ್​ಪಿ ನಿಯೋಗ ವಿರೋಧ ವ್ಯಕ್ತಪಡಿಸಿದೆ. ಪಕ್ಷದ ಕಾರ್ಯಕರ್ತರು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ತಳ್ಳಿ ಒಳ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಎಸ್​ಪಿ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್​ ಮಾಡಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: ಸಂತ್ರಸ್ತ ಕುಟುಂಬದ ಮೇಲೆ FIR ದಾಖಲಿಸಿ: ಮೇಲ್ಜಾತಿಗಳ ಬೃಹತ್ ಸಭೆಯಲ್ಲಿ ಒತ್ತಾಯ!


ಎಸ್​ಪಿ ನಿಯೋಗದಲ್ಲಿ ಉತ್ತರ ಪ್ರದೇಶದ ಎಸ್​ಪಿ ಅಧ್ಯಕ್ಷ ನರೇಶ್ ಉತ್ತಮ್ ಪಟೇಲ್, ರಾಮ್‌ಜಿ ಲಾಲ್ ಸುಮನ್, ಧರ್ಮೇಂದ್ರ ಯಾದವ್, ಅಕ್ಷಯ್ ಯಾದವ್, ಜುಗಲ್ ಕಿಶೋರ್ ವಾಲ್ಮೀಕಿ, ಜಸ್ವಂತ್ ಯಾದವ್, ಉದಯವೀರ್ ಸಿಂಗ್, ಸಂಜಯ್ ಲೆದರ್, ಅತುಲ್ ಪ್ರಧಾನ್, ರಾಮ್ ಕರಣ್ ನಿರ್ಮಲ್, ರಾಮ್ ಗೋಪಾಲ್ ಬಾಗೆಲ್ ಮೊದಲಾದವರು ಇದ್ದರು.

ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಮುಖಂಡ ಜಯಂತ್ ಚೌಧರಿ ಮೇಲೂ ಪೊಲೀಸರು ದಾಳಿ ನಡೆಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದಾಗ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಈ ವೇಳೆ ಪಕ್ಷದ ಕೆಲವು ಕಾರ್ಯಕರ್ತರು ತಮ್ಮ ನಾಯಕನನ್ನು ಲಾಠಿಗಳಿಂದ ರಕ್ಷಿಸಲು ತಡೆಗೋಡೆ ರಚಿಸಿದ್ದರು. ಕೊನೆಗೂ ಅವರು ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿಯಾದರು.

ಪೊಲೀಸರು ನಡೆಸಿರುವ ಲಾಠಿಚಾರ್ಜ್ ದೃಶ್ಯಾವಳಿಯನ್ನು ಗಮನಿಸಿ

’ಲಾಠಿ ಚಾರ್ಜ್‌ಗೆ ಒಳಗಾದ ಆರ್‌ಎಲ್‌ಡಿ ಮುಖಂಡ ಜಯಂತ್ ಚೌಧರಿ ಟ್ವೀಟ್ ಮಾಡಿ, ನಿಮಗೆ ಲಾಠಿ ಚಲಾಯಿಸುವ ಹಕ್ಕು ಇದ್ದರೇ, ನಮಗೆ ನಮ್ಮ ಜನರ ಜೊತೆ ನಿಲ್ಲುವ ಹಕ್ಕು ಇದೆ. ಇನ್ನು ಹೆಚ್ಚು ಲಾಠಿಗಳನ್ನು ಬಳಸಿ, ನಮ್ಮ ನಿಶ್ವಯವು ಅಷ್ಟೇ ಬಲವಾಗುತ್ತದೆ. ಅಕ್ಟೋಬರ್‌ 8ರಂದು ಮುಜಫರ್ ನಗರದಲ್ಲಿ ಭೇಟಿಯಾಗೋಣ’ ಎಂದಿದ್ದಾರೆ.

“ಹಳ್ಳಿಯೊಳಗೆ 5ಕ್ಕಿಂತ ಹೆಚ್ಚು ಜನರ ನಿಯೋಗದ ಭೇಟಿಯನ್ನ ನಿರ್ಬಂಧಿಸಲಾಗಿದೆ. ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕ ದಳದ (ಆರ್‌ಎಲ್‌ಡಿ) ನಿಯೋಗಗಳು ಬಂದವು, ನಾವು 5 ಹೆಸರುಗಳನ್ನು ಪಟ್ಟಿ ಮಾಡಿದ್ದೇವೆ ಮತ್ತು ಅವರಿಗೆ ಅಲ್ಲಿಗೆ ಹೋಗಲು ಅವಕಾಶ ಮಾಡಿಕೊಟ್ಟಿದ್ದೇವೆ. ಆದರೆ ಅವರ ಕಾರ್ಯಕರ್ತರು  ಮಹಿಳಾ ಸಿಬ್ಬಂದಿಯೊಂದಿಗೆ ಕೆಟ್ಟದಾಗಿ ವರ್ತಿಸಲು ಪ್ರಾರಂಭಿಸಿದರು. ಹಾಗಾಗಿ ಲಾಠಿಚಾರ್ಜ್ ಮಾಡಬೇಕಾಯಿತು” ಎಂದು ಹತ್ರಾಸ್ ಸದರ್ ಎಸ್‌ಡಿಎಂ ಹೇಳಿದ್ದಾರೆ.

ಹತ್ರಾಸ್ ಅತ್ಯಾಚಾರ ಪ್ರಕರಣದ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟಿದ್ದ ಕಾಂಗ್ರೆಸ್​​ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಕೂಡ ಮೊದಲ ಪ್ರಯತ್ನದಲ್ಲಿ ತಡೆ ಹಿಡಿದು ಬಂಧಿಸಲಾಗಿತ್ತು. ನಂತರ ನಿನ್ನೆ ಅವರು ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿದ್ದರು. ಇಂದು ಭೀಮ್ ಆರ್ಮಿ ಮುಖಂಡ ಚಂದ್ರಶೇಖರ್ ಆಜಾದ್ ಕೂಡ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿದ್ದಾರೆ.


ಇದನ್ನೂ ಓದಿ: ಹತ್ರಾಸ್ ಸಂತ್ರಸ್ತ ಕುಟುಂಬಕ್ಕೆ ವೈ ಪ್ಲಸ್ ಭದ್ರತೆ ಕೊಡಿ: ಚಂದ್ರಶೇಖರ್ ಆಜಾದ್

LEAVE A REPLY

Please enter your comment!
Please enter your name here