ಕೊರೊನಾ ನಿಯಮಾಗಳನ್ನು ರಾಜಕಾರಣಿಗಳು, ಸಿನಿಮಾ ತಾರೆಯರು ಉಲ್ಲಂಘಿಸಿದರೂ ಅವರ ವಿರುದ್ಧ ಯಾಕೆ ಎಫ್‍ಐಆರ್ ದಾಖಲಿಸಿಲ್ಲ? ಗಂಭೀರ ಸೆಕ್ಷನ್‍ಗಳಡಿ ಯಾಕೆ ಬಂಧಿಸಿಲ್ಲ? ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ಪಡೆದಿರುವ ಹೈಕೋರ್ಟ್ ಈ ಕುರಿತು ಕ್ರಮ ಕೈಗೊಂಡ ಬಗ್ಗೆ ವರದಿ ಸಲ್ಲಿಸಲು ಸೂಚನೆ ನೀಡಿದೆ.
ಈ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಜನಸಾಮಾನ್ಯರಿಗೆ 250 ರೂಪಾಯಿ ದಂಡ ವಿಧಿಸುತ್ತೀರಿ ಆದರೆ, ರಾಜಕಾರಣಿಗಳಿಗೆ, ಸಿನಿಮಾ ತಾರೆಯರ ವಿರುದ್ಧ ಎಫ್‍ಐಆರ್ ಯಾಕೆ ದಾಖಲಿಸಲ್ಲ. ಅವರ ವಿರುದ್ದ ಯಾವುದೇ ಕ್ರಮ ಯಾಕಿಲ್ಲ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ಪಡೆಯಿತು.
ಇದನ್ನೂ ಓದಿ: ಕೊರೊನಾ ಸಂಕಷ್ಟದ ನಡುವೆ ’ವಿದ್ಯುತ್ ಬರೆ’ ಎಳೆಯುತ್ತಿರುವ ರಾಜ್ಯ ಸರ್ಕಾರ!
ರಾಜ್ಯ ಸರ್ಕಾರದ ಪರ ಹಾಜರಾದ ವಕೀಲ ವಿಕ್ರಮ ಹುಯಿಲ್ಗೋಳ್, ಕೊರೊನಾ ನಿಯಮ ಉಲ್ಲಂಘಿಸುವವರ ವಿರುದ್ಧ ಈಗಾಗಲೇ ಕೇಸ್ ದಾಖಲಿಸಲಾಗಿದೆ. 4.33 ಕೋಟಿಗೂ ಅಧಿಕ ದಂಡ ಸಂಗ್ರಹಿಸಲಾಗಿದೆ. ನಗರದ ಬಿಜೆಪಿ ಯುವ ಮೋರ್ಚಾ ಚುನಾವಣಾ ರ‍್ಯಾಲಿ ಸಂಬಂಧ ಕೇಸ್ ದಾಖಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಅರ್ಜಿದಾರರ ಪರ ವಾದಿಸಿದ ವಕೀಲರು, ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಸಂಸದ ತೇಜಸ್ವಿ ಸೂರ್ಯ ಆಯ್ಕೆಯಾದ ಬಳಿಕ ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೇಜಸ್ವಿ ಸೂರ್ಯ ಅವರ ಮೆರವಣಿಗೆ ಮಾಡಿದ್ದು, ನೂರಾರು ಜನ ಸೇರಿ ಮೆರವಣಿಗೆ ಮಾಡುವ ಮೂಲಕ ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಇದನ್ನೂ ಓದಿ: ಆಂಧ್ರ ಪ್ರದೇಶ: 262 ವಿದ್ಯಾರ್ಥಿಗಳಿಗೆ ಕೊರೊನಾ, ಆತಂಕ ಬೇಡ ಎಂದ ಇಲಾಖೆ!


