ಹೂಡಿಕೆ ವಂಚನೆ ಪ್ರಕರಣದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನ ಮಂಜೇಶ್ವರ ಶಾಸಕ ಎಂ ಸಿ ಕಮರುದ್ದೀನ್ ಅವರನ್ನು ವಿಶೇಷ ತನಿಖಾ ತಂಡ ಬಂಧಿಸಿದೆ. ಅವರು ಅಧ್ಯಕ್ಷರಾಗಿರುವ ಪಕ್ಷದ ಸಹೋದ್ಯೋಗಿ ಟಿ.ಕೆ. ಪೂಕೋಯಾ ತಂಙಲ್ ನಡೆಸುತ್ತಿದ್ದ ಚಿನ್ನಾಭರಣ ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದ ಹಲವಾರು ಜನರು, ತಾವು ಕಷ್ಟಪಟ್ಟು ಸಂಪಾದಿಸಿದ ಹಣಕ್ಕೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದರು.
“ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಮಾಹಿತಿಗಳು ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಕಮರುದ್ದೀನ್ ಅವರನ್ನು ಬಂಧಿಸಲಾಗಿದೆ” ಎಎಸ್ಪಿ ವಿವೇಕ್ ಕುಮಾರ್ ಹೇಳಿದರು.
ಇದನ್ನೂ ಓದಿ: ಜೈಲು ಖೈದಿಗಳ ಮಕ್ಕಳ ಶಿಕ್ಷಣಕ್ಕೆ 20 ಲಕ್ಷ ಮೀಸಲಿಟ್ಟ ಕೇರಳ ಸರ್ಕಾರ!
ಕಮರುದ್ದೀನ್ ಮತ್ತು ಪೋಕೋಯ ತಂಙಲ್ ನಡೆಸುತ್ತಿರುವ ಫ್ಯಾಶನ್ ಗೋಲ್ಡ್ ಇಂಟರ್‌ನ್ಯಾಷನಲ್‌ನಲ್ಲಿ ಹೂಡಿಕೆ ಮಾಡಿದ ಹಲವಾರು ಜನರಿಗೆ ಸುಮಾರು 100 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಶಂಕಿಸಲಾಗಿಸದ್ದು, ಸಂಸ್ಥೆಯಲ್ಲಿ ಕಮರುದ್ದೀನ್ ಅಧ್ಯಕ್ಷ ಮತ್ತು ಪೂಕೋಯಾ ತಂಙಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
ಚಂದೇರಾ ಮತ್ತು ಕಾಸರಗೋಡು ಪೊಲೀಸ್ ಠಾಣೆಗಳಾದ್ಯಂತ ಎರಡು ಡಜನ್‌ಗೂ ಹೆಚ್ಚು ದೂರುಗಳು ಬಂದ ಹಿನ್ನಲೆಯಲ್ಲಿ ಅವರ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ಮೋಸ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆರೋಪಿಗಳು ಆಭರಣ ಸರಪಳಿ ಸ್ಥಾಪಿಸಿ ಸುಮಾರು 800 ಜನರಿಂದ ಹಣವನ್ನು ಸಂಗ್ರಹಿಸಿ ಕಂಪನಿಯ ಲಾಭದಿಂದ ಮಾಸಿಕ ಲಾಭಾಂಶದ ಭರವಸೆ ನೀಡಿದ್ದರು. ಕಳೆದ ವರ್ಷದವರೆಗೆ ಹೂಡಿಕೆದಾರರು ನಿಯಮಿತವಾಗಿ ಲಾಭಾಂಶ ಪಡೆದಿದ್ದು, ಪಾವತಿ ಪಡೆಯಲು ವಿಫಲವಾದಾಗ ಪೊಲೀಸ್ ದೂರುಗಳನ್ನು ದಾಖಲಿಸಿದ್ದರು.
ಇದನ್ನೂ ಓದಿ: ಕೇರಳ: ದಲಿತ ವ್ಯಕ್ತಿಯನ್ನು ಅರ್ಚಕರಾಗಿ ನೇಮಿಸುತ್ತಿರುವ ದೇವಸ್ವಂ ಬೋರ್ಡ್!
ಕಮರುದ್ದೀನ್ ಅವರ ಹಣಕಾಸಿನ ವ್ಯವಹಾರಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಐಯುಎಂಎಲ್ ಹೇಳಿದ್ದು, ಬಾಕಿ ಹಣವನ್ನು ಪಾವತಿಸುವಂತೆ ಪಕ್ಷವು ಕಮರುದ್ದೀನ್ ಅವರನ್ನು ಕೇಳಿಕೊಂಡಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಸರಗೋಡು ಜಿಲ್ಲೆಯ ಮಂಜೇಶ್ವರಂ ಕ್ಷೇತ್ರದಿಂದ ಕಮರುದ್ದೀನ್ ಐಯುಎಂಎಲ್ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಬಲಿಪಶುವನ್ನಾಗಿ ಮಾಡಲಾಯಿತು: ಶಾಸಕ
ಬಂಧನದ ನಂತರ ನೀಡಿದ ತನ್ನ ಮೊದಲ ಪ್ರತಿಕ್ರಿಯೆಯಲ್ಲಿ, “ತನ್ನದೇ ಆದ ಅಪರಾಧಗಳನ್ನು ಮುಚ್ಚಿಹಾಕುವ ಉದ್ದೇಶದಿಂದ ಸಿಪಿಎಂ ನೇತೃತ್ವದ ಸರ್ಕಾರವು ನನ್ನನ್ನು ಬಲಿಪಶು ಮಾಡುತ್ತಿದೆ. ಪೊಲೀಸ್ ಕ್ರಮ ರಾಜಕೀಯ ಪ್ರೇರಿತ. ಬಂಧನಕ್ಕೆ ಮುಂಚಿತವಾಗಿ ತನಗೆ ನೋಟಿಸ್ ನೀಡಿಲ್ಲ” ಎಂದ ಆರೋಪಿಸಿದ್ದಾರೆ.
ಶಾಸಕರು ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ ಎಂದು ಕಮರುದ್ದೀನ್ ಪರ ವಕೀಲ ವಿನೋದ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಕೇರಳ ಅತ್ಯುತ್ತಮ ಆಡಳಿತ ರಾಜ್ಯ: ಉತ್ತರ ಪ್ರದೇಶಕ್ಕೆ ಕೊನೆಯ ಸ್ಥಾನ!


