ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ, “ರಾಹುಲ್ ಗಾಂಧಿ ಅಸ್ಥಿರ ಮತ್ತು ಅಪಕ್ವ ಗುಣ ಹೊಂದಿದ್ದು, ಶಿಕ್ಷಕನನ್ನು ಮೆಚ್ಚಿಸಲು ಉತ್ಸುಕನಾಗಿರುವ ಆದರೆ ಯಾವುದೇ ವಿಷಯದಲ್ಲಿ ಕರಗತ ಹೊಂದದ ಹಾಗೂ ಉತ್ಸಾಹವಿಲ್ಲದ ವಿದ್ಯಾರ್ಥಿಯಂತೆ ಕಾಣುತ್ತಾರೆ” ಎಂದು, ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆಂದು ವರದಿಯಾಗಿದೆ.
ಬರಾಕ್ ಒಬಾಮ ಅವರ ಆತ್ಮಚರಿತ್ರೆ ‘ಎ ಪ್ರಾಮಿಸ್ಡ್ ಲ್ಯಾಂಡ್’ ಕುರಿತು ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಮಾಡಿದ ವಿಮರ್ಶೆಯಲ್ಲಿ ಈ ಕುರಿತು ಹೇಳಲಾಗಿದೆ. ಪುಸ್ತಕದಲ್ಲಿ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಮತ್ತು ವ್ಲಾಡಿಮಿರ್ ಪುಟಿನ್ ಸೇರಿದಂತೆ ಹಲವಾರು ಅಮೆರಿಕ ಮತ್ತು ವಿಶ್ವ ನಾಯಕರ ಕುರಿತು ಅನಿಸಿಕೆಗಳಿವೆ ಎನ್ನಲಾಗಿದೆ.
ಇದನ್ನೂ ಓದಿ:“ಮೈ ಫ್ರೆಂಡ್ ’ಡೊಲಾಂಡ್’ ಭಾರತವನ್ನಷ್ಟೇ ಹೊಲಸು ಎಂದರು; ನನ್ನನ್ನು ಇನ್ನೂ ಪ್ರೀತಿಸುತ್ತಿದ್ದಾರೆ”
“ಚಾರ್ಲ್ ಕ್ರಿಸ್ಟ್ ಮತ್ತು ರಹಾಮ್ ಎಮ್ಯುನಲ್‌ನಂಥ ವ್ಯಕ್ತಿಗಳ ಸೌಂದರ್ಯದ ಬಗ್ಗೆ ಉಲ್ಲೇಖವಿದೆ. ಆದರೆ ಸೋನಿಯಾಗಾಂಧಿಯವರ ಉಲ್ಲೇಖದಂಥ ಒಂದೆರಡು ನಿದರ್ಶನಗಳನ್ನು ಹೊರತುಪಡಿಸಿದರೆ ಮಹಿಳೆಯ ಚೆಲುವಿನ ಬಗ್ಗೆ ಉಲ್ಲೇಖವಿಲ್ಲ ಎಂದು ಹೇಳಲಾಗಿದೆ” ಎಂದು ವಿಮರ್ಶೆ ತಿಳಿಸಿದೆ.
ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಬಾಬ್ ಗೇಟ್ಸ್ ಮತ್ತು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇಬ್ಬರೂ ಒಂದು ರೀತಿಯ “ನಿರ್ಭಾವುಕ ಪ್ರಮಾಣಿಕತೆ ಹೊಂದಿದ್ದ ಪ್ರಭಾವಶಾಲಿ ವ್ಯಕ್ತಿಗಳು” ಎಂದು ಪುಸ್ತಕ ಹೇಳುತ್ತದೆಂದು ವಿಮರ್ಶೆಯು ಉಲ್ಲೇಖಿಸುತ್ತದೆ.
ಆತ್ಮಚರಿತ್ರೆಗಳನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಾಶನ ಸಂಸ್ಥೆ ತಿಳಿಸಿದೆ. ಮೊದಲನೆಯದು ನವೆಂಬರ್ 17 ರಂದು ಜಾಗತಿಕ ಬಿಡುಗಡೆಗೆ ನಿರ್ಧರಿಸಲಾಗಿದೆ. ಎರಡನೇ ಸಂಪುಟದ ಪ್ರಕಟಣೆಯ ದಿನಾಂಕವನ್ನು ನಿರ್ಧರಿಸಲಾಗಿಲ್ಲ.
ಇದನ್ನೂ ಓದಿ: ಟ್ರಂಪ್ ಸೋತರೂ, ಟ್ರಂಪ್‌ಯಿಸಂ ಉಳಿದಿದೆ: ಆದರೂ ಯುವ ಅಮೆರಿಕ ಭರವಸೆ ಮೂಡಿಸಿದೆ!


