ಹರಿಗೆ ಎಂದು ಗುಡಿಯನೊಂದು
ಕಟ್ಟುತ್ತಿರುವೆಯಾ?
ದೀನಗಿಂತ ದೇವ ಬಡವನೆಂದು ಬಗೆದೆಯಾ?
ಎಂದು ಹಾಡಿದ ಅಂಕೋಲೆಯ “ಚುಟುಕು ಬ್ರಹ್ಮ” ದಿನಕರ ದೇಸಾಯಿಯವರ ಮಾತೃಭಾಷೆ ಕೊಂಕಣಿ! ರೈತ-ಕಾರ್ಮಿಕ ಹೋರಾಟ ಕಟ್ಟಿದ ದೇಸಾಯಿ ಕನ್ನಡ ಕಟ್ಟುವ ಕೈಂಕರ್ಯದಲ್ಲೂ ಹಿಂದಿರಲಿಲ್ಲ. ವಿಭಿನ್ನ ಜನ-ಜಾತಿ ಮತ್ತು ವಿವಿಧ ಭಾಷೆಯ ಉತ್ತರ ಕನ್ನಡದ ಮಣ್ಣಿನ ಸೊಗಡು-ಕಸುವುಗಳೇ ಅಂಥದ್ದು. ವಿಭಿನ್ನ ಭಾಷೆ-ಸಂಸ್ಕೃತಿಗಳಿದ್ದರೂ ಕನ್ನಡ ನಾಡು, ನುಡಿಯ ಜೊತೆಗೆ ಬಾಂಧವ್ಯ ಉಳಿಸಿಕೊಂಡೇ ಬಂದಿದೆ ಉತ್ತರ ಕನ್ನಡ.
ಮಲೆನಾಡು, ಕರಾವಳಿ, ಅರೆಬಯಲುಸೀಮೆಯಂಥ ವಿಶಿಷ್ಟ ಭೌಗೋಳಿಕ ಪರಿಸರದ ಈ ಜಿಲ್ಲೆಯ ಹಲವು ಕೊಂಕಣಿ ಮತ್ತು ಮರಾಠಿಗರು ಕನ್ನಡ ಸಾಹಿತ್ಯ, ಸಂಗೀತ, ಸಿನಿಮಾ, ರಂಗಭೂಮಿ, ರಾಜಕೀಯ, ಸಾಮಾಜಿಕ, ಮಾಹಿತಿ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಿಗೆ ಎಂದೆಂದೂ ಅಳಿಸಲಾಗದ ದೊಡ್ಡ ಕೊಡುಗೆಗಳನ್ನೇ ಕೊಟ್ಟಿದ್ದಾರೆ. ಜಿಲ್ಲೆಗೊಂದು ನಿಜ ನಾಯಕತ್ವ ನೀಡಿದ್ದ ದಿನಕರ ದೇಸಾಯಿ ಲೋಕಸಭಾ ಸದಸ್ಯರೂ ಆಗಿದ್ದರು. ತ್ರಿಭಾಷಾ ಸಾಹಿತಿಯಾಗಿದ್ದ ಈ ಗೇಣಿದಾರರ-ಕೂಲಿಕಾರರ ಗೆಣೆಗಾರ ಲಲಿತ ಸಾಹಿತ್ಯ ಮತ್ತು ವೈಚಾರಿಕ ಬರಹಗಳಿಂದ ಪ್ರಸಿದ್ಧಿ ಪಡೆದಿದ್ದರು. ಜನರಲ್ಲಿ ತಿಳಿವು ಅರಿವು ಮೂಡಿಸಲೆಂದು “ಜನಸೇವಕ” ಎಂಬ ಪತ್ರಿಕೆ ಹೊರತರುತ್ತಿದ್ದ ದೇಸಾಯಿ ಹತ್ತಾರು ಹೈಸ್ಕೂಲು, ಕಾಲೇಜು ತೆರೆದು ಹಳ್ಳಿಗಾಡಿನಲ್ಲಿ ವಿದ್ಯಾಪ್ರಸಾರದ ಅಭೂತಪೂರ್ವ ಸಾಹಸ-ಸಾಧನೆ ಮಾಡಿದ್ದರು.
ಕನ್ನಡ, ಮರಾಠಿ, ಕೊಂಕಣಿ ಮತ್ತು ಇಂಗ್ಲಿಷ್‌ನಲ್ಲಿ ಸಾಹಿತ್ಯ ರಚಿಸಿರುವ ಗೋಕರ್ಣದ ಡಾ. ಗೌರೀಶ್ ಕಾಯ್ಕಿಣಿ ವೃತ್ತಿಯಲ್ಲಿ ಶಿಕ್ಷಕರಾಗಿದ್ದರು. ಮೂರ್ತಿಭಂಜಕ ಪ್ರವೃತ್ತಿಯ ಕೊಂಕಣಿ ಮನೆಮಾತಾಗಿರುವ ಕಾಯ್ಕಿಣಿ ಅವರು ಮುಂದಿನ ತತ್ವಜ್ಞಾನವೆಂದರೆ ವಿಜ್ಞಾನ ಎನ್ನುತ್ತಿದ್ದರು. ಹರಿತ ವೈಚಾರಿಕ ಸಾಹಿತ್ಯದಿಂದ ಖ್ಯಾತಿ ಪಡೆದಿದ್ದ ಕಾಯ್ಕಿಣಿ ಪತ್ರಿಕೋದ್ಯಮಿಯೂ ಆಗಿದ್ದರು. ಮೆದು ಮಾತು-ಮೆಲುದನಿಯ ಕಥೆಗಾರ ಜಯಂತ್ ಕಾಯ್ಕಿಣಿ ಗೌರೀಶ್ ಕಾಯ್ಕಿಣಿಯವರ ಪುತ್ರ. ಕನ್ನಡಿಗರ ಅಚ್ಚುಮೆಚ್ಚಿನ ಸಾಹಿತಿ ಜಯಂತ್ 2006ರ ಬಳಿಕ ಸಿನಿಮಾ ಸಾಹಿತ್ಯದ ಮೂಲಕ ತಮ್ಮ ಪ್ರತಿಭೆಯ ಮತ್ತೊಂದು ಆಯಾಮವನ್ನು ತೆರೆದಿಟ್ಟಿದ್ದಾರೆ.
ಕಾಯ್ಕಿಣಿಗಳಂತೆ ಗೋಕರ್ಣ ಹತ್ತಿರದ ಹನೇಹಳ್ಳಿಯ ಖ್ಯಾತ ಕಥೆಗಾರ, ಕಾದಂಬರಿಕಾರ ಯಶವಂತ ಚಿತ್ತಾಲರೂ ಕೊಂಕಣಿ ಆಡುಮಾತಿನವರು. ‘ಶಿಕಾರಿ’ ಕಾದಂಬರಿಯಿಂದ ಕನ್ನಡ ಸಾರಸ್ವತ ಲೋಕದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಚಿತ್ತಾಲರ ಅಣ್ಣ ಗಂಗಾಧರ ಚಿತ್ತಾಲರು ಕವಿಯಾಗಿ ಗುರುತಿಸಿಕೊಂಡವರು. ಗೋಕರ್ಣಕ್ಕೆ ಹತ್ತಿರವೇ ಇರುವ ಬಂಕಿಕೊಡ್ಲದ ಅರವಿಂದ ನಾಡಕರ್ಣಿ ಮತ್ತು ಸುಂದರ ನಾಡಕರ್ಣಿ ಸೋದರರು ಹಲವು ಕನ್ನಡಕವನ ಸಂಕಲನ ಪ್ರಕಟಿಸಿದ್ದಾರೆ. ಇವರೂ ಕೊಂಕಣಿ ಭಾಷೆಯ ಸಾರಸ್ವತ ಕುಟುಂಬದ ರೇ.ದಾಮೋದರ ಚಿತ್ತಾಲರೂ ಕನ್ನಡ ಸಾಹಿತ್ಯ ಕ್ಷೇತ್ರದ ಗಮನ ಸೆಳೆದ ಬರಹಗಾರರು.
ಕನ್ನಡ ಕಾದಂಬರಿ ಲೋಕಕ್ಕೆ ನವ್ಯಮಾರ್ಗ ತಂದ ಶಾಂತಿನಾಥ ದೇಸಾಯಿ ಹಳಿಯಾಳದವರು. ಸಣ್ಣಕತೆ, ಪ್ರಬಂಧ, ವಿಮರ್ಶೆ…ಮುಂತಾದ ಪ್ರಕಾರಗಳಲ್ಲಿ ಪ್ರಯೋಗಶೀಲತೆ ಅಳವಡಿಸಿ ನಾಲ್ಕು ದಶಕಗಳ ಕಾಲ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖ ಬರಹಗಾರನೆಂದು ಖ್ಯಾತರಾಗಿದ್ದ ದೇಸಾಯಿ ಕೊಂಕಣಿಗರು. ಕೊಂಕಣಿ ಮಾತಾಡುವ ಕುಟುಂಬದ ಉತ್ತರಕನ್ನಡಿಗ ವಿವೇಕ್ ಶಾನ್‍ಭಾಗ್ ಕನ್ನಡದ ಪ್ರಮುಖ ಕತೆಗಾರ, ಕಾದಂಬರಿಕಾರ ಮತ್ತು ನಾಟಕಕಾರರಲ್ಲಿ ಒಬ್ಬರು.
1950-60ರ ದಶಕದಲ್ಲಿ ಕನ್ನಡ ಸಿನಿಮಾರಂಗದಲ್ಲಿ ಮನೋಜ್ಞ ಅಭಿನಯದಿಂದ ಪ್ರಖ್ಯಾತರಾಗಿದ್ದ ಅಭಿನೇತ್ರಿಯರಾದ ಮೈನಾವತಿ ಮತ್ತು ಪಂಡರಿಬಾಯಿ ಮೂಲ ಭಟ್ಕಳ. ಕೊಂಕಣಿ ಮನೆಮಾತಿನ ಈ ಸಹೋದರಿಯರ ತಂದೆ ರಂಗರಾವ್ ಹರಿಕಥೆ, ಸಂಗೀತ, ಸಾಹಿತ್ಯ, ಅಭಿನಯದಲ್ಲಿ ಪರಿಣಿತರಾಗಿದ್ದರು. ಮೈನಾವತಿ ಸರಿಸುಮಾರು ನೂರು ಚಿತ್ರಗಳಲ್ಲಿ ನಟಿಸಿದ್ದರೆ, ಪಂಡರಿಬಾಯಿ ಕನ್ನಡ ಸಿನಿಮಾಗಳ ಮೊದಲ ಯಶಸ್ವೀ ತಾರೆ. ಡಾ. ರಾಜ್‍ಕುಮಾರ್ ಅವರಿಗೆ ನಾಯಕಿಯಾಗಿ ಮಿಂಚಿದ ಪಂಡರಿಬಾಯಿ ಆನಂತರ ಕನ್ನಡ ಚಿತ್ರರಂಗದ “ಅಮ್ಮ”ನೆಂದೇ ಹೆಸರಾಗಿದ್ದರು.
ಕುಮಟಾದ ಮಲ್ಲಾಪುರ ಗ್ರಾಮದ ಸಾರಸ್ವತ ಕೊಂಕಣಿ ಕುಟುಂಬದ ಅನಂತ್‍ನಾಗ್ ಮತ್ತು ಶಂಕರ್‌ನಾಗ್ ಇವತ್ತಿಗೂ ಕನ್ನಡ ಸಿನಿಮಾ ಲೋಕದಲ್ಲಿ ಮಾಂತ್ರಿಕ ಹೆಸರು. ಅನನ್ಯ ಪ್ರತಿಭೆಯ ಈ ಸಹೋದರರ ನಟನಾಕೌಶಲ್ಯ ಕನ್ನಡ ಸಿನಿಮಾರಂಗದಲ್ಲಿ ಸರ್ವಕಾಲಿಕ ದಾಖಲೆ! ಸಿನಿಮಾ ನಟಿ ರಾಧಿಕಾಪಂಡಿತ್ ಭಟ್ಕಳದ ಚಿತ್ರಾಪುರ ಮೂಲದ ಸಾರಸ್ವತ ಕೊಂಕಣಿ. ಉತ್ತರ ಕನ್ನಡದ ಯು.ಎಸ್. ಕೃಷ್ಣರಾವ್ ಮತ್ತವರ ಮಡದಿ ಚಂದ್ರಭಾಗಾದೇವಿ ಶಾಸ್ತ್ರೀಯ ನೃತ್ಯದ ಮೂಲಕ ಹೆಸರು ಮಾಡಿದ್ದಾರೆ. ಕೊಳಲುವಾದಕ ನಿತ್ಯಾನಂದ ಹಳದಿಪುರ್, ಸಂಗೀತಗಾರ ಮೋಹನ್‍ಚಿತ್ರಮನೆ, ತಬಲಾ ವಾದಕ ಆದಿತ್ಯ ಕಲ್ಯಾಣ್‍ಪುರ್, ಸಂಗೀತಗಾರ ಭರತ್ ಬಳವಳ್ಳಿ, ನಟ ವೆಂಕಟರಾವ್ ತಲಗೇರಿ, ಅನುಪಮಾ (ಕಾಯ್ಕಿಣಿ), ದೇಶಪಾಂಡೆ(ಸಂಗೀತ), ಆರ್.ಡಿ ಕಾಮತ್ (ರಂಗಭೂಮಿ) ಲೀನಾ ಚಂದಾವರ್ಕರ್ (ಪ್ರಸಿದ್ಧ ಗಾಯಕಿ), ಅನುರಾಧಾ ಪೋಡ್ವಾಲ್, ಅನುರಾಧಾ ಧಾರೇಶ್ವರ್ (ಹಾಡುಗಾರ್ತಿ) ಕೊಂಕಣಿಗರಾದರೂ ಕನ್ನಡ ಪ್ರತಿಭೆಗಳೆಂದೇ ಗುರುತಿಸಲ್ಪಡುವವರು!
ಸುಮಾರು ಮೂರೂಮುಕ್ಕಾಲು ದಶಕದಿಂದ ಕರ್ನಾಟಕದ ರಾಜಕಾರಣದಲ್ಲಿ ಪ್ರಮುಖ ರಾಜಕಾರಣಿಯಾಗಿರುವ ಹಳಿಯಾಳದ ರಘುನಾಥ್ ವಿಶ್ವನಾಥ್‍ರಾವ್ ದೇಶಪಾಂಡೆ ಕೊಂಕಣಿ ಮನೆ ಮಾತಿನವರು. ಅಧಿಕಾರ ರಾಜಕಾರಣದ ಹಲವು ಆಯಕಟ್ಟಿನ ಸ್ಥಾನದಲ್ಲಿದ್ದ ದೇಶಪಾಂಡೆ ಒಂದು ಸಂದರ್ಭದಲ್ಲಿ ಸಿಎಂ ಮಟೇರಿಯಲ್ ಅನಿಸಿಕೊಂಡವರು! ಸಮಾಜವಾದಿ ದಿನಕರ ದೇಸಾಯಿ ಒಡನಾಡಿ ಅಂಕೋಲೆಯ ದಯಾನಂದ ನಾಡಕರ್ಣಿ ಶಾಸಕರೂ ಆಗಿದ್ದರು. ಕುಮಟೆಯಲ್ಲಿ ವಸಂತಲತಾ ಮಿರ್ಜಾನ್‍ಕರ್ ಶಾಸಕಿಯಾಗಿದ್ದರು. ಇವರಿಬ್ಬರೂ ಸಾರಸ್ವತ ಕೊಂಕಣಿಗರು. ದಟ್ಟ ಕೊಂಕಣಿ ಪ್ರಭಾವದ ಕಾರವಾರದ ಬಿ.ಪಿ. ಕದಮ್ ವಿಧಾನಸಭೆಯ ಉಪಾಧ್ಯಕ್ಷರಾಗಿ, ಸಂಸದರಾಗಿದ್ದ ಕೊಂಕಣಿ ಭಾಷಿಕ. ವಿಧಾನಪರಿಷತ್‍ನ ಸಭಾಪತಿಯಾಗಿದ್ದ ಇದೇ ಕಾರವಾರದ ಎಸ್.ಡಿ. ಗಾಂವ್ಕರ್ ಕೂಡ ಕೊಂಕಣಿ ಮನೆ ಮಾತಿನವರಾಗಿದ್ದರು. ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರಲ್ಲೊಬ್ಬರಾಗಿರುವ ನಂದನ್ ನೀಲೇಕಣಿ ಶಿರಸಿ ಮೂಲದ ಸಾರಸ್ವತ ಕೊಂಕಣಿಗರು. ಕಾರಾವಾರದ ಶಾಸಕಿ ರೂಪಾಲಿ ನಾಯ್ಕ್ ಮನೆಮಾತು ಕೊಂಕಣಿ.
ಕನ್ನಡದ ಗಂಧಗಾಳಿಯೇ ಇಲ್ಲದ ಹಲವು ಪ್ರದೇಶವಿರುವ ಉತ್ತರಕನ್ನಡದ ಎರಡನೇ ಪ್ರಮುಖ ವ್ಯಾವಹಾರಿಕ ಭಾಷೆ ಕೊಂಕಣಿ. ಕನ್ನಡಾಂಬೆಯ ತೇರು ಎಳೆಯುವಾಗ ಎಲ್ಲರೂ ಒಂದೇ. ಇದೇ ಉತ್ತರ ಕನ್ನಡದ ಭಾಷಾ ಸಹಿಷ್ಣುತೆ, ಸಾಮರಸ್ಯದ ವೈಶಿಷ್ಟ್ಯ!


