Homeಕರ್ನಾಟಕಹಿಂದುತ್ವದ ಬೀಜಗಳನ್ನು ತೊರೆದು ಬಹುತ್ವದ ಕನ್ನಡ ರಾಷ್ಟ್ರೀಯತೆ ಕಟ್ಟುವ ಸವಾಲುಗಳು

ಹಿಂದುತ್ವದ ಬೀಜಗಳನ್ನು ತೊರೆದು ಬಹುತ್ವದ ಕನ್ನಡ ರಾಷ್ಟ್ರೀಯತೆ ಕಟ್ಟುವ ಸವಾಲುಗಳು

ಕುವೆಂಪು ‘ಜಯ ಭಾರತ ಜನನಿಯ ತನುಜಾತೆ’ ಪದ್ಯದಲ್ಲಿ ಆಚಾರ್ಯತ್ರಯರಲ್ಲಿ ಶಂಕರ, ರಾಮಾನುಜರನ್ನು ಸೇರಿಸಿದರೂ, ಕನ್ನಡ ನೆಲದವರೇ ಆದ ಮಧ್ವರನ್ನು ಹೆಸರಿಸುವುದಿಲ್ಲ. ಅವರಿಗೆ ಕನ್ನಡ/ಕರ್ನಾಟಕದ ಈ ಕಲ್ಪಿತ ಸಮುದಾಯವನ್ನು ಕಟ್ಟುವಾಗ ಯಾವುದನ್ನು ಈ ನಾಡಿನ ಪರಂಪರೆಯಾಗಿ ಒಳಗೊಳ್ಳಬೇಕು ಮತ್ತು ಯಾವುದನ್ನು ಬಿಡಬೇಕು ಎನ್ನುವ ಪ್ರಜ್ಞೆಯಿತ್ತು

- Advertisement -
- Advertisement -

ಕರ್ನಾಟಕದಲ್ಲಿ ಕನ್ನಡ ರಾಷ್ಟ್ರೀಯತೆಯ ಆಧಾರದ ಮೇಲೆ ಪ್ರಾದೇಶಿಕ ಪಕ್ಷವೊಂದು ಏಕೆ ಹುಟ್ಟಿಲ್ಲ ಎಂಬ ಪ್ರಶ್ನೆ ಇತ್ತೀಚೆಗೆ ಹಲವರನ್ನು ಕಾಡುತ್ತಿದೆ. ಇವತ್ತು ನಮ್ಮನ್ನು ಗುಮ್ಮನಂತೆ ಕಾಡುತ್ತಿರುವ ಹಿಂದುತ್ವದ ದಬ್ಬಾಳಿಕೆಯ ವಿರುದ್ಧ ಕನ್ನಡ ರಾಷ್ಟ್ರೀಯತೆಯು ಒಂದು ಶಕ್ತ ಪರ್ಯಾಯವಾಗಬಲ್ಲದು ಎಂಬ ಆಭಿಪ್ರಾಯ ಹಲವರಲ್ಲಿ ಮೂಡುತ್ತಿದೆ. ಕನ್ನಡವನ್ನು ಒಂದು ರಾಜಕೀಯ ಪ್ರಶ್ನೆಯಾಗಿ ರೂಪಿಸುವ ಬೌದ್ಧಿಕ ಪ್ರಯತ್ನ ಈಗ ನಡೆಯುತ್ತಿದೆ. ಆದರೆ ಇದು ಐತಿಹಾಸಿಕ ಮತ್ತು ಸಾಂಸ್ಕೃತಿಕ ಕಾರಣಗಳಿಗಾಗೆ ಈ ಸಂಗತಿ ಸರಳವಾಗಿಲ್ಲ. ಯಾವುದನ್ನು ಎದುರಿಸಲು ಕನ್ನಡವನ್ನು ಸಜ್ಜುಗೊಳಿಸಲು ಹೊರಟಿದ್ದೇವೆಯೋ ಅದರೋಳಗೆ ಅದೇ ಬೀಜಗಳಿವೆ. ಐತಿಹಾಸಿಕವಾಗಿಯೂ ಈ ಬಗ್ಗೆ ನಮ್ಮಲ್ಲಿ ಎಚ್ಚರ ಕಡಿಮೆ. ಈ ಹಾದಿಗುಂಟ ಹೋಗುವ ಮೊದಲು ಈ ಬಗ್ಗೆ ನಾವು ಆಳವಾಗಿ ಯೋಚಿಸಬೇಕಿದೆ. ಒಂದು ಸ್ಪಷ್ಟತೆ ತಂದುಕೊಳ್ಳಬೇಕಿದೆ.

ಸ್ವಾತಂತ್ರ್ಯಾನಂತರ ಭಾಷಾವಾರು ರಾಜ್ಯ ರಚನೆಯಾದಾಗ ಉದಯಿಸಿದ ಈ ಕನ್ನಡನಾಡು, ಬಹುಶಃ ಹೀಗೆ ಒಂದು ಕನ್ನಡ ಆಡಳಿತ-ಸರ್ಕಾರದ ಕೆಳಗೆ ಬಂದದ್ದು ಅದೇ ಮೊದಲಿರಬೇಕು. ಅದಕ್ಕೂ ಮೊದಲು ಈ ಪ್ರಾಂತ್ಯವು ಮತ್ತು ಇಲ್ಲಿನ ಕನ್ನಡ ಭಾಷಿಕರು ಬಹುಪ್ರಾಂತ್ಯಗಳು ಶತಮಾನಗಳ ಕಾಲ ಹಲವಾರು ಕನ್ನಡವಲ್ಲದ ಆಡಳಿತಗಳಿಗೊಳಪಟ್ಟಿತ್ತು. ಕರ್ನಾಟಕದ ಏಕೀಕರಣದ ಕನಸು 19ನೇ ಶತಮಾನದಲ್ಲಿ ಬಾಂಬೆ ಮತ್ತು ಹೈದರಾಬಾದಿನ ಆಡಳಿತಗಳಲ್ಲಿದ್ದ ಇವತ್ತಿನ ಉತ್ತರ ಕರ್ನಾಟಕದಲ್ಲಿ ಮೊದಲಾಗಿ 1956ರಲ್ಲಿ ನನಸಾಯಿತು. ಅಸಲು ಶತಮಾನಗಳ ಕಾಲ ಒಂದು ಆಡಳಿತಕ್ಕೆ ಎಂದೂ ಒಳಪಡದಿದ್ದ ಒಂದು ಸಮಾಜವನ್ನು ಬೆಸೆದಿದ್ದು ಭಾಷೆ ಮಾತ್ರ. 1983ರಲ್ಲಿ ಬೆನೆಡಿಕ್ಟ್ ಆಂಡರ್ಸನ್ ಎಂಬ ರಾಜಕೀಯ ಶಾಸ್ತ್ರವೇತ್ತನು ರಾಷ್ಟ್ರೀಯತೆಯ ಬಗ್ಗೆ ಬರೆದ ಪ್ರಬಂಧದಲ್ಲಿ ರಾಷ್ಟ್ರವನ್ನು “Imagined Communities” (ಕಲ್ಪಿತ ಸಮುದಾಯಗಳು) ಎಂದು ಕರೆದನು. “A nation is a socially constructed community, imagined by the people who perceive themselves as part of that group” ಎಂದು ಆತ ಬಣ್ಣಿಸುತ್ತಾನೆ. 19ನೇ ಶತಮಾನದ ಕಡೆಯ ದಶಕಗಳಲ್ಲಿ ಕನ್ನಡದಿಂದ ಬೆಸೆಯುವ ಈ ಕಲ್ಪಿತ ಸಮುದಾಯವನ್ನು ಕಟ್ಟುವ ಒಂದು ಜಾಗೃತ ಪ್ರಯತ್ನ ಆರಂಭವಾಯಿತು.

ಭಾರತ ಎಂಬ ರಾಷ್ಟ್ರದ ಕಲ್ಪನೆ ಕೂಡ ಹೊಸತಿರುವಂತೆ, ಕನ್ನಡ ರಾಷ್ಟ್ರೀಯತೆ ಕೂಡ ಹೊಸ ಕಟ್ಟುವಿಕೆಯೇ ಸರಿ. ಆದರೆ ಇದನ್ನು ಜನಮಾನಸದಲ್ಲಿ ನೆಲೆಯೂರುವಂತೆ ಮಾಡಲು ಎರಡು ಊರುಗೋಲುಗಳನ್ನು ಬಳಸಿಕೊಳ್ಳಲಾಯಿತು. ಮೊದಲನೆಯದು ಭಾಷಾ ಪರಂಪರೆ. ಅದಕ್ಕೆ ಸಾಹಿತ್ಯ ಆಧಾರವಾಯಿತು. ಇದನ್ನು ಅರ್ಥಮಾಡಿಕೊಳ್ಳಲು ಕುವೆಂಪು ಅವರ ಒಂದು ಪದ್ಯ ಸಹಾಯ ಮಾಡುತ್ತದೆ. ಸ್ವಾತಂತ್ರ್ಯಾನಂತರ ಮೈಸೂರು ರಾಜ್ಯದಲ್ಲಿ ಏಕೀಕರಣಕ್ಕೆ ಇನ್ನೂ ವಿರೋಧ ಇತ್ತು. ಆಗ ಸರ್ಕಾರಿ ಪ್ರಾಧ್ಯಾಪಕರಾಗಿದ್ದ ಕುವೆಂಪು ಅವರು ಏಕೀಕರಣವನ್ನು ಬೆಂಬಲಿಸುತ್ತಾರೆ. ಸರ್ಕಾರ ಅವರಿಗೆ ನೋಟಿಸು ಜಾರಿ ಮಾಡುತ್ತದೆ. ಅದಕ್ಕೆ ಮಾರುತ್ತರವಾಗಿ ಅವರು ಅಖಂಡ ಕರ್ನಾಟಕ ಎಂಬ ಪದ್ಯ ಬರೆದು ಕಳಿಸುತ್ತಾರೆ. ಆ ಪದ್ಯದ ಕೆಲವು ಸಾಲುಗಳು ಹೀಗಿವೆ:

ಅಖಂಡ ಕರ್ನಾಟಕ,
ಅಲ್ತೋ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ!
ನೃಪತುಂಗನೇ ಚಕ್ರವರ್ತಿ!
ಪಂಪನಲ್ಲಿ ಮುಖ್ಯಮಂತ್ರಿ!
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ:
ಸರಸ್ವತೊಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ!

ಇಲ್ಲಿ ನೃಪತುಂಗನಿರುವುದೂ ಕವಿರಾಜಮಾರ್ಗದ ಕರ್ತೃ ಆಗಿಯೇ ಹೊರತು, ರಾಜನಾಗಿಯಲ್ಲ ಎಂಬುದು ವಿದಿತ. ಇವತ್ತು ಕನ್ನಡವು ಒಂದು ಸಾಂಸ್ಕೃತಿಕ ಪ್ರಶ್ನೆಯಾಗಿಯೇ ಉಳಿದು, ಅದೊಂದು ರಾಜಕೀಯ ಪ್ರಶ್ನೆಯಾಗಿ ರೂಪಾಂತರ ಆಗದಿರುವುದಕ್ಕೂ ಈ ಪದ್ಯದಲ್ಲಿ ಉತ್ತರಗಳನ್ನು ಹುಡುಕಬಹುದಾಗಿದೆ.

ಮತ್ತೊಂದು ದಾರಿ ಕನ್ನಡಕ್ಕೊಂದು ರಾಜಕೀಯ ಇತಿಹಾಸವನ್ನು ಸೃಷ್ಟಿಸುವುದು. ಆ ಪ್ರಯತ್ನವೂ ನಡೆದಿದೆ. ಕನ್ನಡದ ಕುಲಪುರೋಹಿತ ಎಂದೇ ಬಿರುದಾಂಕಿತರಾಗಿರುವ ಆಲೂರು ವೆಂಕಟರಾವ್ ಅವರು ಹೀಗೆ ಕನ್ನಡ ಸಮುದಾಯವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದರು. 1915ರಲ್ಲಿ ‘ಕರ್ನಾಟಕದ ಗತವೈಭವ’ ಎಂಬ ಪುಸ್ತಕವನ್ನು ಇವರು ರಚಿಸಿದರು. ಈ ಪುಸ್ತಕದ ಹೆಸರೇ ಸೂಚಿಸುವಂತೆ ಇಂದಿನ ದುಸ್ಥಿತಿಯ ಬಗ್ಗೆ ಹಳಹಳಿಕೆಯೊಂದಿಗೆ ಮಂಡಿಸುತ್ತಾ ಕನ್ನಡಿಗರ ಗತವೈಭವವನ್ನು ಮರಳಿ ಪಡೆಯಲು ಕರೆ ಕೊಡುತ್ತದೆ.

ಈ ಪ್ರಬಂಧದ ಮುನ್ನುಡಿಯಲ್ಲಿ ಆಲೂರು ವೆಂಕಟರಾಯರು ಹೀಗೆ ಬರೆಯುತ್ತಾರೆ: “ವರ್ತಮಾನ ಕಾಲವೆಂಬ ವೃಕ್ಷಕ್ಕೆ ಭೂತಕಾಲವೇ ಬೀಜ; ಭವಿಷ್ಯಕಾಲವೇ ಫಲ; ಭವಿಷ್ಯಕಾಲದ ರಾಷ್ಟ್ರೀಯ ಫಲವನ್ನು ಪಡೆಯಲಪೇಕ್ಷಿಸುವವರು ಭೂತಕಾಲದ ಬೀಜಸಾಮರ್ಥ್ಯವನ್ನು ಅರಿತುಕೊಳ್ಳುವುದು ಅವಶ್ಯವು. ಈ ದೃಷ್ಟಿಯಿಂದ ನೋಡಲು, ರಾಷ್ಟ್ರೀಯ ಕಾರ್ಯಕ್ಕೆ ಇತಿಹಾಸವು ಹೇಗೆ ಸಾಧನವಾಗುವುದೆಂಬುವದು ಮನವರಿಕೆಯಾಗುವುದು…. ಆದುದರಿಂದ ಕರ್ನಾಟಕದ ‘ಮಹಾತ್ಮ್ಯ’ವನ್ನು ಹೊಗಳಿ, ಇನ್ನೂ ಎಚ್ಚರಾಗದಿದ್ದ ತರುಣರನ್ನು ಎಚ್ಚರಿಸಬೇಕೆಂದು ಈ ಪ್ರಬಂಧವನ್ನು ಕೈಕೊಂಡಿದ್ದೇವೆ. ಇದು ಕೇವಲ ಇತಿಹಾಸವಲ್ಲ; ಆದರೆ ಕಟ್ಟುಕಥೆಯೂ ಅಲ್ಲ; ಕರ್ನಾಟಕದ ಇತಿಹಾಸದೊಳಗಿನ ಚಿತ್ತಾಕರ್ಷಕವಾದ ಹಲಕೆಲವು ಸಂಗತಿಗಳನ್ನು ಅನೇಕ ಪುಸ್ತಕಗಳನ್ನು ಆರಿಸಿ, ನಮಗೆ ತೋರಿದ ಕೆಲವು ವಿಧಾನಗಳನ್ನು ಅವುಗಳಲ್ಲಿ ಬೆರೆಸಿ, ಆ ಮಿಶ್ರಣವನ್ನು ಕಾಸಿ ಕರ್ನಾಟಕದ ಅಭಿಮಾನವೆಂಬ ಎರಕದಲ್ಲಿ ಕೈಲಾದಷ್ಟುಮಟ್ಟಿಗೆ ಹೊಯ್ದು ಈ ಪ್ರಬಂಧವನ್ನು ರಚಿಸಲಾಗಿದೆ”.

ಈ ಪುಸ್ತಕವು ಚಾಲುಕ್ಯರ ಆದಿಯಾಗಿ ಕರ್ನಾಟಕ ರಾಜ್ಯವನ್ನು ಆಳಿದ ಹಲವು ವಂಶಗಳ, ಅದರ ರಾಜರನ್ನು ಹಾಡಿ ಹೊಗಳುತ್ತಾ ಸಾಗುತ್ತದೆ. ಬಾದಾಮಿ ಚಾಲುಕ್ಯರನ್ನು ಕರ್ನಾಟಕದ ಮೊದಲ ಚಕ್ರವರ್ತಿಗಳೆಂದು ಗುರುತಿಸುವ ಈ ಹೊತ್ತಿಗೆಯು ವಿಜಯನಗರ ಸಾಮ್ರಾಜ್ಯವನ್ನು ಕನ್ನಡದ ಕಟ್ಟಕಡೆಯ ಸಾಮ್ರಾಜ್ಯವೆಂದು ವರ್ಣಿಸುತ್ತದೆ. ರಕ್ಕಸತಂಗಡಿ ಯುದ್ಧದಲ್ಲಿ ಸಾಮ್ರಾಜ್ಯ ಪತನವಾಗಿ, ಐವರು ಸುಲ್ತಾನರ ಕೈಸೇರಿದ್ದರಿಂದ, ಅದನ್ನು ‘ಮುಸ್ಲಿಮರ’ ತಲೆಗೆ ಕಟ್ಟುತ್ತದೆ. “ತೀರಿತು, ಅಂದಿಗೆ ಕರ್ನಾಟಕದ ವೈಭವಕ್ಕೆ ಕೊನೆಯಾಯಿತು! ಕರ್ನಾಟಕ ದೇವಿಯ ಹಣೆಯ ಕುಂಕುಮವು ಅಳಿಸಿತು! ಕೊರಳ ಮಂಗಳಸೂತ್ರವು ಹೆಚ್ಚಿತು! ಕರ್ನಾಟಕದ ಸಂಪತ್ತಿಯು ಸಮಾಧಿ ಹೊಂದಿತು. ಕರ್ನಾಟಕದ ವಿದ್ಯಾನಿಧಿಯು ಅಡಗಿಹೋಯಿತು! ಕರ್ನಾಟಕದ ಪ್ರತಾಪ ಸೂರ್ಯನು ಅಸ್ತನಾದನು…” ಎಂದು ಭಾವೋದ್ರೇಕಕಾರಿಯಾಗಿ ಪ್ರಚೋದನಾಕಾರಿಯಾಗಿ ವರ್ಣಿಸುತ್ತದೆ.

ಬಲಪಂಥೀಯ ನಿಲುವುಗಳನ್ನು ಹೊಂದಿದ್ದ ಬಾಲಗಂಗಾಧರ ತಿಲಕರ ಅನುಯಾಯಿ ಆಗಿದ್ದ ಆಲೂರು ವೆಂಕಟರಾಯರು ಈ ರೀತಿ ಬರೆದಿರುವುದರಲ್ಲಿ ಯಾವುದೇ ಆಶ್ಚರ್ಯ ಇಲ್ಲ. ಇದೊಂದು ಕಾಲ್ಪನಿಕ ಸಮುದಾಯವನ್ನು ಕಟ್ಟುವ ಜಾಗೃತ ಪ್ರಯತ್ನ ಎಂದು ಸ್ಪಷ್ಟವಾಗಿ ಆಲೂರರು ಹೇಳಿದ್ದಾರೆ. ಆದರೂ ಈ ನರೇಟಿವ್ ಕನ್ನಡ ಐಡೆಂಟಿಟಿಯಲ್ಲಿ ಆಳವಾಗಿ ಬೇರೂರಿದೆ. ಮುಸ್ಲಿಮರನ್ನು ಕನ್ನಡವು ಸುಲಭವಾಗಿ ‘ಅನ್ಯ’ಗೊಳಿಸುತ್ತದೆ. ಈ ನಾಡಿನ ಮುಸ್ಲಿಂ ಆಳ್ವಿಕೆಯ ಭಾಗಗಳೆಲ್ಲವನ್ನೂ ಅನ್ಯವಾಗಿಸುತ್ತದೆ.

PC : Udayavani

ಹಿಂದುತ್ವವು ನಮ್ಮ ಇತಿಹಾಸದ ಮುಸ್ಲಿಂ ಭಾಗಗಳನ್ನು ಪರಕೀಯರ ಆಕ್ರಮಣವೆಂದು ಬಗೆಯುತ್ತದೆ. ಇದನ್ನೇ ಸಮಾಜದಲ್ಲಿ ಬಿತ್ತುತ್ತಾ ಮುಸ್ಲಿಂ ದೊರೆಗಳ ಆಡಳಿತವನ್ನು ಜನದ್ರೋಹವೆಂಬಂತೆ ಚಿತ್ರಿಸುತ್ತದೆ. ಸಾಧಾರಣ ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುತ್ತಾ, ಮುಸ್ಲಿಮರನ್ನು ತಮ್ಮದೇ ನೆಲದಲ್ಲಿ ಪರಕೀಯಗೊಳಿಸುತ್ತಾ ಸಾಗುತ್ತದೆ. ಇಸ್ಲಾಂ ಧರ್ಮ ಈ ನೆಲದ್ದಲ್ಲವಾಗಿರಬಹುದು. ಆದರೆ ಹೈದರಾಲಿ ಟಿಪ್ಪು ಬಹಮನಿ ಸುಲ್ತಾನರು ಬಹುತೇಕ ಇದೇ ನೆಲದಲ್ಲಿ ಹುಟ್ಟಿಬೆಳೆದವರು. ಅವರು ಪರಕೀಯರಲ್ಲ. ಟಿಪ್ಪು ಅಥೆಂಟಿಕ್ ಆದ ರಾಜನೇ ಅಲ್ಲ ಆತ ಒಡೆಯರನ್ನು ಇಳಿಸಿ ಅಕ್ರಮವಾಗಿ ಸಿಂಹಾಸನವನ್ನು ಆಕ್ರಮಿಸಿಕೊಂಡ ಎಂದು ವಾದಿಸುತ್ತಾರೆ. ಅದು ಅವತ್ತಿನ ಸಮಾಜದ ನಿಯಮ. ಅಲ್ಲಿಗೆ ಹಿಂದೂ ಎಂದು ಒಡೆಯರ ಜೊತೆ ಗುರುತಿಸಿಕೊಳ್ಳುವುದೇ ಸಮಸ್ಯೆ. ಟಿಪ್ಪು ಪರಕೀಯನಲ್ಲ, ಇಲ್ಲೇ ದೇವನಹಳ್ಳಿಯಲ್ಲಿ ಹುಟ್ಟಿಬೆಳೆದವನು. ನಮ್ಮ ರಾಜ್ಯದಲ್ಲಿ ಹಂಪಿ, ರಾಷ್ಟ್ರಕೂಟ, ಹೊಯ್ಸಳ ಮತ್ತು ಕಿತ್ತೂರು ಉತ್ಸವಗಳನ್ನು ಸರ್ಕಾರ ಆಚರಿಸುತ್ತದೆ. ಆದರೆ ಬಹಮನಿ ಉತ್ಸವ ಆಚರಿಸಲು ಹೊರಟಾಗ ಹಿಂದುತ್ವದ ರಗಳೆ ಪ್ರಾರಂಭವಾಗುತ್ತದೆ. ವಿಜಯನಗರ ಹಿಂದೂ ಸಾಮ್ರಾಜ್ಯವನ್ನು ಕೆಡವಿದ ಮುಸ್ಲಿಂ ದೊರೆಗಳು ಎಂದು ಬಹಮನಿ ಉತ್ಸವವನ್ನು ವಿರೋಧಿಸಿದರು. ಇಲ್ಲಿಯೂ ವಿಜಯನಗರವನ್ನು ಹಿಂದೂ ಸಾಮ್ರಾಜ್ಯವೆಂದು ಬಗೆದೇ ಅದರ ಜೊತೆ ಗುರುತಿಸಿಕೊಳ್ಳುವುದು. ಬಹಮನೀ ಸುಲ್ತಾನರನ್ನು ಪರಕೀಯ ಎಂದು ಭಾವಿಸುವುದು. ಈ ಪ್ರಕ್ರಿಯೆಯ ಆಳದಲ್ಲಿ ನಮ್ಮ ನಾಡನ್ನು ಹಿಂದೂ ಆಗಷ್ಟೇ ವ್ಯಾಖ್ಯಾನಿಸುವ ಹುನ್ನಾರ ಇದೆ.

ಇನ್ನು ಈ ಎಲ್ಲವನ್ನೂ ಕನ್ನಡದ ಹೆಸರಿನಲ್ಲೂ ಮಾಡಬಹುದು ಮತ್ತು ಮಾಡಲಾಗಿದೆ ಕೂಡ. ವಿಜಯನಗರವನ್ನು ಕನ್ನಡ ಸಾಮ್ರಾಜ್ಯ ಎಂದು ಕರೆದ ಅಲೂರು ವೆಂಕಟರಾಯರು “ಕರ್ನಾಟಕದೇವಿಯ ಹಣೆಯ ಕುಂಕುಮವನ್ನು ಅಳಿಸಿದ್ದನ್ನು” ಸುಲಭವಾಗಿ ಮುಸ್ಲಿಮರ ತಲೆಗೆ ಕಟ್ಟುತ್ತಾರೆ. ಈ ಪುಸ್ತಕ ಬಂದ ಆಸುಪಾಸು, 1920ರಲ್ಲಿ ಮೊಟ್ಟಮೊದಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹೊಸಪೇಟೆಯಲ್ಲಿ ನಡೆಯಿತು. ಅದು ಕನ್ನಡದ ಕಡೆಯ ಸಾಮ್ರಾಜ್ಯವಾದ ವಿಜಯನಗರದ ರಾಜಧಾನಿ ಎಂದು ಅಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಇನ್ನು 2006ರಲ್ಲಿ ಅಂದಿನ ಉನ್ನತ ಶಿಕ್ಷಣ ಸಚಿವ ಡಿ.ಎಚ್. ಶಂಕರಮೂರ್ತಿ ಅವರು ಟಿಪ್ಪು ಸುಲ್ತಾನ್ ಬಗ್ಗೆ ಸಂಘಪರಿವಾರದವರು ಮೊದಲು ಎತ್ತಿದ ಆಕ್ಷೇಪದಂತೆ, ಆತ ಮತಾಂಧ ಎಂದಲ್ಲ, ಬದಲಿಗೆ ‘ಕನ್ನಡ ದ್ರೋಹಿ’ ಎಂದು ಕರೆದರು. ಅದಕ್ಕೆ ಕಾರಣ ಒಡೆಯರ ಕಾಲದಲ್ಲಿ ಕನ್ನಡ ಆಡಳಿತ ಭಾಷೆಯಾಗಿದ್ದರೆ ಟಿಪ್ಪುಸುಲ್ತಾನ ಅಧಿಕಾರಕ್ಕೆ ಬಂದಾಗ ಪರ್ಶಿಯನ್‍ಅನ್ನು ಆಡಳಿತ ಭಾಷೆ ಮಾಡಿದ ಎಂಬುದು. ಇನ್ನು 1993-94ರಲ್ಲಿ ಬಾಬ್ರಿ ಮಸೀದಿ ಧ್ವಂಸದ ನಂತರದ ಹಿಂದೂ-ಮುಸ್ಲಿಂ ಕೋಮುದಳ್ಳುರಿಯು, ಕರ್ನಾಟಕದಲ್ಲಿ ಮಾತ್ರ ಉರ್ದುನ್ಯೂಸ್ ಹೆಸರಲ್ಲಿ ಭಾಷೆಯ ಸಮಸ್ಯೆಯಾಗಿ ಅಭಿವ್ಯಕ್ತಗೊಂಡಿತು.

ಉರ್ದುನ್ಯೂಸ್‍ಅನ್ನು ಅನೇಕ ಪ್ರಗತಿಪರ ಕನ್ನಡ ಬರಹಗಾರರು ಒಳಗೊಂಡು ಕನ್ನಡ ಸಾಹಿತ್ಯ ಪರಿಷತ್ತು ಕೂಡ ವಿರೋಧಿಸಿತ್ತು. ನವ್ಯರ ಸಮಕಾಲೀನರಾಗಿದ್ದ ಕೆ. ಎಸ್. ನಿಸಾರ್ ಅಹಮದ್ ಅವರಲ್ಲಿ ಮಾತ್ರ, ಅವರ ಸಮಕಾಲೀನರಾಗಿದ್ದ ಯಾವ ಕವಿಗಳಲ್ಲೂ ಕಾಣದ ‘ಕನ್ನಡ ದೇವಿಯ ಆರಾಧನೆ’ಯನ್ನು ಯಾಕೆ ಕಾಣುತ್ತೇವೆ? ಇನ್ನು ಕಳೆದ ವರ್ಷ ಹಿಂದಿ ನಾಮಫಲಕ ಕಿತ್ತು ಆಕ್ರೋಶ ವ್ಯಕ್ತಪಡಿಸಿದ್ದ ಕನ್ನಡ ಹೋರಾಟಗಾರರಿಗೆ ಬಿಜೆಪಿಯ ಯುವ ಸಂಸದ ತೇಜಸ್ವಿ ಸೂರ್ಯ ಕೇಳಿದ ಪ್ರಶ್ನೆ, ಹಿಂದಿ ನಾಮಫಲಕಗಳನ್ನು ಕಿತ್ತೊಗೆಯುವ ಕನ್ನಡ ಹೋರಾಟಗಾರರು ಉರ್ದು ನಾಮಫಲಕಗಳನ್ನೇಕೆ ಮುಟ್ಟುವುದಿಲ್ಲ ಎಂದು. ಈ ಸಮಸ್ಯೆಗಳ ಬಗ್ಗೆ ನಾವು ಆಳವಾಗಿ ಯೋಚಿಸಬೇಕಿದೆ. ಎಲ್ಲರಂತೆ ಈ ನೆಲದವರೇ ಆದ ಮುಸ್ಲಿಮರನ್ನು ಅನ್ಯರನ್ನಾಗಿಸದ ರಾಷ್ಟ್ರೀಯತೆಯ ಬಗ್ಗೆ ಚಿಂತನೆ ನಡೆದಿದೆಯೇ?

ಹೀಗೆ ಭಾರತಾಂಬೆಯ ಪ್ರಭಾವದಲ್ಲಿಯೆ ಕನ್ನಡಾಂಬೆ-ತಾಯಿ ಭುವನೇಶ್ವರಿ ಹುಟ್ಟಿದ್ದಲ್ಲವೇ! ಸ್ವಾತಂತ್ರ್ಯಾನಂತರ ಮ. ರಾಮಮೂರ್ತಿ ಅವರ ಕನ್ನಡ ಪಕ್ಷಕ್ಕೆ ಅರಿಶಿನ-ಕುಂಕುಮಗಳ ಬಾವುಟ, ಹೀಗೆ ಹಿಂದೂ ಸಂಪ್ರದಾಯಗಳ ಚಿಹ್ನೆಗಳೊಂದಿಗೆ ಕನ್ನಡದ ಕಟ್ಟುವಿಕೆ ಭದ್ರಗೊಂಡಿದೆ. ನಮ್ಮ ಕನ್ನಡದ ಬಹುಪಾಲು ಪ್ರಗತಿಪರ ಬರಹಗಾರರು, ಚಿಂತಕರೂ ಸಹ ಇದನ್ನು ಒಪ್ಪಿಯೇ ಇದ್ದಾರೆ. ಕುವೆಂಪು ‘ಜಯ ಭಾರತ ಜನನಿಯ ತನುಜಾತೆ’ ಪದ್ಯದಲ್ಲಿ ಆಚಾರ್ಯತ್ರಯರಲ್ಲಿ ಶಂಕರ, ರಾಮಾನುಜರನ್ನು ಸೇರಿಸಿದರೂ, ಕನ್ನಡ ನೆಲದವರೇ ಆದ ಮಧ್ವರನ್ನು ಹೆಸರಿಸುವುದಿಲ್ಲ. ಅವರಿಗೆ ಕನ್ನಡ/ಕರ್ನಾಟಕದ ಈ ಕಲ್ಪಿತ ಸಮುದಾಯವನ್ನು ಕಟ್ಟುವಾಗ ಯಾವುದನ್ನು ಈ ನಾಡಿನ ಪರಂಪರೆಯಾಗಿ ಒಳಗೊಳ್ಳಬೇಕು ಮತ್ತು ಯಾವುದನ್ನು ಬಿಡಬೇಕು ಎನ್ನುವ ಪ್ರಜ್ಞೆಯಿತ್ತು. ಆದರೆ ಅವರೂ ಭಾರತ ಜನನಿ, ಕರ್ನಾಟಕ ಮಾತೆಯರನ್ನು ಒಪ್ಪಿದ್ದಾರೆ. ಈ ಬಾರಿಯ ರಾಜ್ಯೋತ್ಸವಕ್ಕೆ ಪ್ರಜಾವಾಣಿಯು ಕನ್ನಡಾಂಬೆಯ ದೇವಾಲಯಗಳ ಬಗ್ಗೆ ಒಂದು ಪುಟದ ವರದಿ ಹಾಕಿದ್ದನ್ನು ಸ್ಮರಿಸಬಹುದು.

ಕನ್ನಡದ ಕಟ್ಟುವಿಕೆಯಲ್ಲಿರುವ ಹಿಂದುತ್ವದ ಈ ಬೀಜಗಳನ್ನು ಕುರಿತ ಎಚ್ಚರ ನಮ್ಮ ಅನೇಕರಲ್ಲಿ ಇಲ್ಲ ಎಂತಲೇ ಹೇಳಬೇಕು. ಹಾಗಾಗಿಯೇ ನಾವು ಅನೇಕ ಬಾರಿ ದಾರಿ ತಪ್ಪಿದ್ದೇವೆ. ಚಿದಾನಂದಮೂರ್ತಿಯವರ ಬಗ್ಗೆ ಮಾತಾಡುವಾಗ ನಮ್ಮ ಬಹುತೇಕ ಪ್ರಗತಿಪರರು ಅವರು ಎಂಥ ದೊಡ್ಡ ಕನ್ನಡ ವಿದ್ವಾಂಸರು ಮತ್ತು ಹೋರಾಟಗಾರರಾಗಿದ್ದರು, ಆದರೆ ಅದೇನಾಯಿತೋ ವಯಸ್ಸಾಗುತ್ತಿದ್ದಂತೆ ಕೋಮುವಾದಿ ಆಗಿಬಿಟ್ಟರು ಎಂಬ ಹಳಹಳಿಕೆಯೊಂದಿಗೆ ಸೋಜಿಗವನ್ನೂ ವ್ಯಕ್ತಪಡಿಸುತ್ತಾರೆ. ಆದರೆ ಕನ್ನಡದ ಕಟ್ಟುವಿಕೆಯನ್ನು ಸೂಕ್ಷ್ಮವಾಗಿ ಅಭ್ಯಸಿಸಿದರೆ ತಿಳಿಯುತ್ತದೆ – ಅದು ಸರಾಗ ಮಾರ್ಗ, ಒಂದು ಸಣ್ಣ ನೆಗೆತ ಅಷ್ಟೆ. ಎಚ್ಚರ ತಪ್ಪಿದರೆ ನಾವೆಲ್ಲರೂ ಅದೇ ನಿಲ್ದಾಣದತ್ತ ಹೆಜ್ಜೆ ಹಾಕುತ್ತೇವೆ. ಅಷ್ಟೇ ಅಲ್ಲ, ಇವತ್ತು ನಾವು ಪ್ರತಿಪಾದಿಸುವ ಅನೇಕ ಕನ್ನಡದ ವಾದಗಳಲ್ಲಿ ಈ ಬೀಜಗಳು ಇನ್ನೂ ಉಳಿದಿವೆ.

ಕನ್ನಡದ ಅನೇಕ ಬರಹಗಾರರು, ಚಿಂತಕರು ಮಾತೃಭಾಷಾ ಶಿಕ್ಷಣವಾದಿಗಳು. ಆದರೆ
ಕರ್ನಾಟಕದಲ್ಲಿರುವವರೆಲ್ಲರ ಮಾತೃಭಾಷೆ ಖಂಡಿತ ಕನ್ನಡ ಅಲ್ಲ. ನಮ್ಮ ನಾಡಿನ ಭಾಷೆಗಳೇ ಆದ ತುಳು, ಕೊಂಕಣಿ, ಕೊಡವ, ಬ್ಯಾರಿ ಮತ್ತು ಉರ್ದು ಭಾಷೆಗಳಿವೆ. ಕನ್ನಡದ ನಂತರ ಉರ್ದು (ಸುಮಾರು 13%) ಅತಿ ಹೆಚ್ಚು ಜನರ ಮಾತೃಭಾಷೆಯಾಗಿದೆ. ಇನ್ನು ಪಕ್ಕದ ತೆಲುಗು, ತಮಿಳು, ಮಲಯಾಳಂ ಇವೆ. ಮಾತೃಭಾಷಾ ಮಾಧ್ಯಮದ ಶಿಕ್ಷಣವೇ ಶಕ್ತ ಎನ್ನುವುದು ಶಿಕ್ಷಣದ ವಾದವೇ ಆಗಿದ್ದರೆ ಈ ಮನೆಗಳ ಮಕ್ಕಳು ಯಾವ ಭಾಷೆಯಲ್ಲಿ ಓದಬೇಕು? ಅದಕ್ಕೆ ನಮ್ಮ ಕೆಲವು ಸಾಹಿತಿಗಳು ನಾಡಭಾಷೆ ಎನ್ನುವ ಕಲ್ಪನೆಯನ್ನು ಕಟ್ಟಿದ್ದಾರೆ. ಏನಿದು ನಾಡಭಾಷೆ, ಇದು ಬಹುಸಂಖ್ಯಾತವಾದವೇ ಅಲ್ಲವೇ?

ಏಕೀಕರಣದ ನಂತರದ ಕನ್ನಡದ ಅತಿದೊಡ್ಡ ಹೋರಾಟವಾಗಿದ್ದ ಗೋಕಾಕ್ ಚಳವಳಿ ಕಡೆಗೇಕೆ ವಿಫಲವಾಯಿತು? ಶಿಕ್ಷಣದಲ್ಲಿ ಕನ್ನಡದ ಪಾರಮ್ಯ ಸ್ಥಾಪಿಸುವ ವರದಿಯಾಗಿತ್ತದು. ಕರ್ನಾಟಕದಲ್ಲಿ ಓದುವ ಎಲ್ಲ ಮಕ್ಕಳು ಕಡ್ಡಾಯವಾಗಿ ಕನ್ನಡವನ್ನು ಮೊದಲ ಭಾಷೆಯಾಗಿ ಸ್ವೀಕರಿಸಬೇಕು ಎಂಬುದೇ ಅದರ ಸಾರ. ಡಾ. ರಾಜಕುಮಾರ್ ಅವರೂ ಸಹ ಈ ಚಳವಳಿಗೆ ನೇತೃತ್ವ ವಹಿಸಿದರು. ಇದನ್ನು ಮೂಲದಲ್ಲಿ ಕಟ್ಟಿದವರಲ್ಲಿ ಲೇಖಕ ಸಾಹಿತಿಗಳೇ ಹೆಚ್ಚು, ಚಂಪಾ ಅವರಾದಿಯಾಗಿ. ಅವತ್ತು ಅನಂತಮೂರ್ತಿಯಂತಹ ಕೆಲವರಷ್ಟೇ ಭಾಷಾ ಅಲ್ಪಸಂಖ್ಯಾತರ ಪ್ರಶ್ನೆಯನ್ನು ಮುಂದು ಮಾಡಿ ಈ ವರದಿಯನ್ನೂ, ಚಳವಳಿಯನ್ನೂ ವಿರೋಧಿಸಿದ್ದರು. ಕಡೆಗೆ ಇದೇ ಭಾಷಾ ಅಲ್ಪಸಂಖ್ಯಾತರು ಹೈಕೋರ್ಟ್‍ನಲ್ಲಿ ಈ ವರದಿಯ ಜಾರಿ ಆದೇಶಕ್ಕೆ ತಡೆ ತಂದರು.

ಇನ್ನು ಕನ್ನಡ ಚಳವಳಿಯು ಬಹುಬಾರಿ ಇತ್ತ ತಮಿಳು, ಅತ್ತ ಮರಾಠಿಯ ವಿರುದ್ಧ ಎಂಬಂತೆ ಸಂಘಟಿತವಾಗುತ್ತಾ ಬಂದಿದೆ. ಕನ್ನಡಕ್ಕೆ ಅಸಲಿ ಕುತ್ತು ಇರುವುದು ನಮ್ಮ ನಾಡಿನಲ್ಲಿ ನಮ್ಮ ಮಣ್ಣಿನ ಗುಣವನ್ನೇ ಇಲ್ಲವಾಗಿಸುವ ಸಂಸ್ಕೃತ, ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಮತ್ತು ನಮ್ಮ ಮಕ್ಕಳನ್ನು ಇಲ್ಲಿನ ಸಂಸ್ಕೃತಿಯಲ್ಲಿ ಬೇರುಬಿಡದಂತೆ ಮಾಡುವ ಇಂಗ್ಲಿಷ್. ಕನ್ನಡ, ತಮಿಳು, ಮರಾಠಿ ಈ ಮೂರೂ ಭಾಷೆಗಳಿಗೂ ಈ ಸಮಸ್ಯೆಗಳಿವೆ. ಈ ಎಲ್ಲಾ ಭಾಷಿಕರು ಕೈಜೋಡಿಸಿ ಅವುಗಳನ್ನು ಎದುರಿಸುವ ಕಲ್ಪನೆಯೆಡೆಗೆ ನಾವು ಸಾಗಬೇಕಿದೆ. ಕನ್ನಡವನ್ನು, ಕನ್ನಡಿಗರನ್ನು ಅದಕ್ಕೆ ಸಜ್ಜು ಮಾಡಬೇಕಿದೆ.

ಇದರೆಲ್ಲದ ಜೊತೆಗೆ ಹಿಂದುತ್ವದ ಬೀಜಗಳನ್ನು ಕಳಚಿಕೊಂಡು, ಕರ್ನಾಟಕದ ನೆಲದಲ್ಲಿ ಇರುವ ಎಲ್ಲ ಭಾಷಿಕ ಸಮುದಾಯಗಳನ್ನೊಳಗೊಂಡ ಕನ್ನಡ ರಾಷ್ಟ್ರೀಯತೆಯನ್ನು ಕಟ್ಟುವತ್ತ ಹೆಜ್ಜೆ ಹಾಕಬೇಕಿದೆ.


ಇದನ್ನೂ ಓದಿ: ಪಂಪನ ವಿಕ್ರಮಾರ್ಜುನ ವಿಜಯವೂ, ಕನ್ನಡ ರಾಷ್ಟ್ರೀಯತೆಯೂ: ಪ್ರೊ.ಶಿವರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...