ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಸಿಡಿದೆದ್ದು ದೆಹಲಿ ಚಲೋ ನಡೆಸುತ್ತಿದ್ದಾರೆ. ದೆಹಲಿ ಪೊಲೀಸರು ಇಂದು ಸಹ ಅವರ ಮೇಲೆ ಅಶ್ರವಾಯು, ಜಲಫಿರಂಗಿ ಸಿಡಿಸುತ್ತಿದ್ದಾರೆ. ಈ ನಡುವೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ “ಮುಂದಿನ ವಾರ ಮಾತುಕತೆ ನಡೆಸುತ್ತೇವೆ, ಈಗ ದಯವಿಟ್ಟು ಪ್ರತಿಭಟನೆ ಅಂತ್ಯಗೊಳಿಸಿ” ಎಂದು ಮನವಿ ಮಾಡಿದ್ದಾರೆ.
ರೈತರೊಂದಿಗೆ ಮಾತುಕತೆ ನಡೆಸಲು ನಮ್ಮ ಸರ್ಕಾರ ಸದಾ ಸಿದ್ದವಿದೆ. ಡಿಸೆಂಬರ್ ಮೂರರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದ್ದು ಅದಕ್ಕೆ ರೈತ ಸಂಘಟನೆಗಳ ಮುಖಂಡರನ್ನು ಆಹ್ವಾನಿಸಿದ್ದೇವೆ. ಈ ಚಳಿ ಮತ್ತು ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ರೈತರು ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.
ನಿನ್ನೆ ಮತ್ತು ಇಂದು ಎರಡು ದಿನ 500ಕ್ಕೂ ಹೆಚ್ಚು ರೈತಸಂಘಟನೆಗಳು ದೆಹಲಿ ಚಲೋ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದರು. ಕೇಂದ್ರ ಸರ್ಕಾರ ಅಂಗೀಕರಿಸಿರುವ ಮೂರು ಕೃಷಿ ಮಸೂದೆಗಳು ಕಾರ್ಪೋರೇಟ್‌ಗಳ ಪರವಿದ್ದು ರೈತರನ್ನು ಬೀದಿಗೆ ತಳ್ಳುತ್ತವೆ ಮತ್ತು ಕನಿಷ್ಠ ಬೆಂಬಲ ಬೆಲೆ ಕಿತ್ತಕೊಳ್ಳುತ್ತವೆ ಎಂಬುದು ರೈತರ ಆತಂಕ. ಆದರೆ ದೆಹಲಿ ಪೊಲೀಸರು ಪ್ರತಿಭಟನೆ ನಡೆಯದಂತೆ ಲಾಠೀ ಚಾರ್ಜ್ ಮಾಡಿದ್ದಲ್ಲದೇ ಅಶ್ರವಾಯು ಮತ್ತು ಜಲಫಿರಂಗಿ ಸಿಡಿಸಿ ರೈತರ ಮೇಲೆ ದೌರ್ಜನ್ಯವೆಸಗಿದ್ದರು.
ಕೇಂದ್ರ ಸರ್ಕಾರ ಅಂಗೀಕರಿಸಿರುವ ಹೊಸ ಕೃಷಿ ಕಾಯ್ದೆಗಳು ರೈತರ ಬದುಕಿನಲ್ಲಿ ಹೊಸ ಕ್ರಾಂತಿ ಉಂಟುಮಾಡಲಿವೆ ಎಂದು ತೋಮರ್ ಹೇಳಿದ್ದಾರೆ. ಆದರೆ ರೈತರು ಮೂರು ಕಾಯ್ದೆಗಳನ್ನು ಹಿಂಪಡೆಯಬೇಕು ಮತ್ತು ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕೆಂದು ಪಟ್ಟು ಹಿಡಿದಿವೆ.
ಇದನ್ನೂ ಓದಿ: ರೈತರ ಪ್ರತಿಭಟನೆಗೆ ಮಣಿದ ಸರ್ಕಾರ: ಕೊನೆಗೂ ದೆಹಲಿ ಪ್ರವೇಶಿಸಲು ರೈತರಿಗೆ ಅನುಮತಿ


