Homeಅಂಕಣಗಳುಅಂಬೇಡ್ಕರ್ ಚಿಂತನೆಗಳನ್ನು ತಿರುಚುವ ಕುತ್ಸಿತ ಶಕ್ತಿಗಳು ಮತ್ತು ಅವರ ಆಶಯಗಳನ್ನು ಮಣ್ಣುಗೂಡಿಸುವ ಕಾನೂನುಗಳು

ಅಂಬೇಡ್ಕರ್ ಚಿಂತನೆಗಳನ್ನು ತಿರುಚುವ ಕುತ್ಸಿತ ಶಕ್ತಿಗಳು ಮತ್ತು ಅವರ ಆಶಯಗಳನ್ನು ಮಣ್ಣುಗೂಡಿಸುವ ಕಾನೂನುಗಳು

ಅಂಬೇಡ್ಕರ್ ಅವರ ಪುಸ್ತಕವನ್ನು ತಮಗೆ ಬೇಕಾದಂತೆ ತಪ್ಪು ತಪ್ಪಾಗಿ ವ್ಯಾಖ್ಯಾನಿಸಿ, ಅದರ ಸಮಗ್ರತೆಯನ್ನು ಕಡೆಗಣಿಸಿ, ತನ್ನ ರಾಜಕೀಯ ಅಗತ್ಯಗಳಿಗೆ ತಕ್ಕಂತೆ ತಿರುಚಿ ಜನರಿಗೆ ತಪ್ಪು ಮಾಹಿತಿ ಹರಡಲಾಗುತ್ತಿದೆ.

- Advertisement -
- Advertisement -

“ಹಿಂದೂ ರಾಜ್ ವಾಸ್ತವವಾದರೆ, ಅದು, ಈ ದೇಶದ ಅತಿ ದೊಡ್ಡ ವಿಪತ್ತು ಆಗಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹಿಂದೂಗಳು ಏನನ್ನು ಹೇಳಿಕೊಂಡರೂ, ಹಿಂದೂಯಿಸಂ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳಿಗೆ ಆಪತ್ತಿನಂತಿದೆ. ಆ ನಿಟ್ಟಿನಲ್ಲಿ ಅದು ಪ್ರಜಾಪ್ರಭುತ್ವದ ಜೊತೆಗೆ ಹೊಂದಿಕೊಳ್ಳುವುದಿಲ್ಲ. ಎಂತಹದೇ ಸಂದರ್ಭದಲ್ಲಾದರೂ ಹಿಂದೂ ರಾಜ್ ಅನ್ನು ತಡೆಗಟ್ಟಬೇಕು” ಹೀಗೆ ಭವಿಷ್ಯದ ಎಚ್ಚರ ನುಡಿದದ್ದು ಈ ದೇಶದ ಬಹುತೇಕ ಎಲ್ಲ ಸಮುದಾಯಗಳ ವಿಮೋಚಕ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್. [BAWS, Vol-8, P. 358]

PC : The Indian Express

ಈ ಎಚ್ಚರಿಕೆಯನ್ನು ಕಡೆಗಣಿಸುತ್ತಾ ಬಂದು, ಇಂದು ಹಿಂದೂ ಬಹುಸಂಖ್ಯಾತರನ್ನು ಓಲೈಸುವ ಪಕ್ಷ ಅಧಿಕಾರ ನಡೆಸುತ್ತಿರುವ ಸಮಯದಲ್ಲಿ, ನವೆಂಬರ್ 26, ಸಂವಿಧಾನ ದಿನದಂದೇ ಈ ರಾಷ್ಟ್ರದ ರಾಜಧಾನಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಪೊಲೀಸರು ಬಲಪ್ರಯೋಗ ಮಾಡಿದ್ದನ್ನು ನೋಡುತ್ತಿದ್ದೇವೆ. ಇದೇ ಬಹುಸಂಖ್ಯಾತವಾದದ ಮುಂದುವರಿಕೆಯಾಗಿ, ‘ಲವ್ ಜಿಹಾದ್’ ಎಂಬ ಕೋಮುದ್ವೇಷಿ ಪದಪುಂಜದೊಂದಿಗೆ ಅಂತರಧರ್ಮೀಯ ಪ್ರೀತಿಗೆ-ಮದುವೆಗಳಿಗೆ ತಡೆ ಒಡ್ಡಲು ಸಾಧ್ಯವಾಗಿರುವ ಕಾನೂನುಗಳನ್ನು ಜಾರಿಗೊಳಿಸಲು ಬಿಜೆಪಿ ಆಡಳಿತದ ಹಲವು ರಾಜ್ಯ ಸರ್ಕಾರಗಳು ಮುಂದಾಗಿವೆ. ಇಲ್ಲಿಯವರೆಗೂ ನೈತಿಕ ಪೊಲೀಸ್‍ಗಿರಿ ಮಾಡುತ್ತಿದ್ದ ಫ್ರಿಂಜ್‍ಗಳ ಕೆಲಸವನ್ನು ಈಗ ಸರ್ಕಾರಗಳು ವಹಿಸಿಕೊಳ್ಳಲು ಮುಂದಾಗಿವೆ. ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಅತಿ ಹೆಚ್ಚು ಕೇಳಿ ಬರುತ್ತಿದ್ದ ಮತ್ತು ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಅಂತಹವರು ಬಹುವಾಗಿ ಪ್ರಚಾರ ಮಾಡಿತ್ತಿದ್ದ ‘ಕಾಲ್ಪನಿಕ’ ಲವ್ ಜಿಹಾದ್ ಈಗ ನಿಷೇಧಿತ ಕಾನೂನಾಗಿ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಭಡ್ತಿ ಪಡೆದಿದೆ ಅಥವಾ ಆ ಹಾದಿಯಲ್ಲಿದೆ. ಉತ್ತರ ಪ್ರದೇಶದಲ್ಲಿ ಈ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ದೊರಕುವ ಮೂಲಕ ನವೆಂಬರ್ 28ರಿಂದ ಕಾನೂನು ಜಾರಿಯಲ್ಲಿದೆ.

ಮತಾಂತರದ ಸಲುವಾಗಿಯೇ ಆಗುವ ಮದುವೆಯನ್ನು ರದ್ದುಗೊಳಿಸುವ ಮತ್ತು 10 ವರ್ಷ ಶಿಕ್ಷೆಗೆ ಗುರಿಯಾಗಿಸುವ ಕಠಿಣ ಶಿಕ್ಷೆಯನ್ನು ಈ ಕಾನೂನು ಹೊಂದಿದೆ. ಅಂತರಧರ್ಮೀಯ ವಿವಾಹಗಳನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳಲು, ಸುಳ್ಳು ಸುಳ್ಳೇ ಕಥೆಗಳಿಂದ ಕೋಮುದ್ವೇಷವನ್ನು ಇನ್ನಷ್ಟು ಹೆಚ್ಚಿಸುವ ಇರಾದೆ ಇರುವುದು ಮೇಲ್ನೋಟಕ್ಕೆ ತಿಳಿಯದದೇನಲ್ಲ. ಸಮಾನತೆ, ಕೋಮುಸೌಹಾರ್ದತೆ, ಸ್ವಾತಂತ್ರ್ಯಗಳ ಆಧಾರದ ಮೇಲೆ ದೇಶ ಕಟ್ಟಿದ ಹಿರಿಯ ನಾಯಕರ ತತ್ವ ಪ್ರಣಾಳಿಕೆಯನ್ನು, ಪ್ರೀತಿಗೂ ನಿರ್ಬಂಧ ಹೇರುವ ಕಾಯ್ದೆಗಳ ಮೂಲಕ ಗಾಳಿಗೆ ತೂರಲು ಈ ಸರ್ಕಾರಗಳು ಮುಂದಾಗಿವೆ.

ಲವ್ ಜಿಹಾದ್ ಬಗ್ಗೆ ಕೋಮುವಾದಿ ಮತ್ತು ಹಿಂದುತ್ವವಾದಿಗಳು ಕಪೋಲಕಲ್ಪಿತ ಕಥೆಗಳ ಜೊತೆಗೆ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‍ಗಳ ಕೆಲವು ತೀರ್ಪುಗಳು ಕೂಡ ಈ ಬಲಪಂಥೀಯ ಸರ್ಕಾರಗಳಿಗೆ ನೆರವಾಗಿ, ಅದನ್ನು ಗುಮ್ಮವಾಗಿಸಿ ಕಾಯ್ದೆ ರೂಪಿಸಲು ಅನುವುಮಾಡಿಕೊಟ್ಟಿತ್ತು. ತಮ್ಮ ವೈವಾಹಿಕ ಮತ್ತು ವೈಯಕ್ತಿಕ ಜೀವನದಲ್ಲಿ ಇತರರು ಹಸ್ತಕ್ಷೇಪ ನಡೆಸುವುದರ ವಿರುದ್ಧ ರಕ್ಷಣೆ ಕೋರಿ ಅಂತರಧರ್ಮೀಯ ದಂಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್, ಸೆಪ್ಟಂಬರ್ ಕೊನೆಯ ವಾರದಲ್ಲಿ ಅರ್ಜಿಯನ್ನು ವಜಾಗೊಳಿಸಿತ್ತು. ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಮದುವೆಯ ಒಂದು ತಿಂಗಳ ಹಿಂದೆ, ಮದುವೆಯ ಕಾರಣಕ್ಕಾಗಿಯೇ ಮಹಿಳೆ ಮತಾಂತರಗೊಂಡಿರುವುದು ಗಮನಕ್ಕೆ ಬಂದಿದೆ ಎಂದಿತ್ತಲ್ಲದೆ, ಅದೇ ನ್ಯಾಯಾಲಯ 2014ರಲ್ಲಿ ನೀಡಿದ್ದ ತೀರ್ಪನ್ನು ಉಲ್ಲೇಖಿಸಿತ್ತು. ನೂರ್ ಜಹಾನ್ ಬೇಗಮ್ ಅಲಿಯಾಸ್ ಅಂಜಲಿ ಮಿಶ್ರ ಹಾಗು ಮತ್ತೊಬ್ಬರು ವರ್ಸಸ್ ಉತ್ತರ ಪ್ರದೇಶ 2014ರ ಪ್ರಕರಣದಲ್ಲಿ, ವಿಚಾರಣೆ ನಡೆಸಿದ್ದ ನ್ಯಾಯಾಲಯ “ಮದುವೆಯ ಕಾರಣಕ್ಕಾಗಿ ಮತಾಂತರ ಒಪ್ಪಿತವಲ್ಲ” ಎಂದು ಹೇಳಿದ್ದನ್ನು ಸದರಿ ಪ್ರಕರಣದಲ್ಲಿ ಉಲ್ಲೇಖಿಸಲಾಗಿತ್ತು. ಈ ಸೆಪ್ಟಂಬರ್ ತೀರ್ಪನ್ನು ನವೆಂಬರ್‌ನಲ್ಲಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅದನ್ನು ‘ಲವ್ ಜಿಹಾದ್’ಗೆ ಬೆಸೆದು, ಅಂತರಧರ್ಮೀಯ ಮದುವೆಯ ಬಗ್ಗೆ ಕಠಿಣ ಕಾನೂನು ತರುವುದಾಗಿ ಹೇಳಿ ಅದಕ್ಕೆ ಮುಂದಾಗಿದ್ದರು.

ಆದರೆ ನ. 11ರಂದು ಈ ಎರಡೂ ತೀರ್ಪುಗಳನ್ನು ಬದಲಿಸುವಂತಹ ತೀರ್ಪು ನೀಡಿದ ಅಲಹಾಬಾದ್ ಉಚ್ಚ ನ್ಯಾಯಾಯಲದ ನ್ಯಾಯಮೂರ್ತಿ ಪಂಕಜ್ ನಖ್ವಿ ಮತ್ತು ನ್ಯಾಯಮೂರ್ತಿ ವಿವೇಕ ಅಗರ್ವಾಲ್ ಅವರುಗಳನ್ನು ಒಳಗೊಂಡ ದ್ವಿಸದಸ್ಯ ನ್ಯಾಯಪೀಠ, ಹಿಂದಿನ ಎರಡೂ ತೀರ್ಪುಗಳು ಸರಿಯಾದ ಕಾನೂನಿನ ಅಡಿಪಾಯದಲ್ಲಿಲ್ಲ ಎಂದದ್ದಲ್ಲದೆ, “ಯಾವುದೇ ಧರ್ಮವನ್ನು ಪಾಲಿಸುತ್ತಿರಲಿ, ಆಕೆಯ/ಆತನ ಆಯ್ಕೆಯ ವ್ಯಕ್ತಿಯೊಂದಿಗೆ ಬದುಕುವ ಹಕ್ಕು, ಜೀವಿಸುವ ಮತ್ತು ವ್ಯಯಕ್ತಿಕ ಸ್ವಾತಂತ್ರ್ಯದ ಹಕ್ಕಿನೊಂದಿಗೆ ಅಂತರ್ಗತವಾಗಿದೆ. ಈ ವೈಯಕ್ತಿಕ ಸಂಬಂಧದಲ್ಲಿ ಹಸ್ತಕ್ಷೇಪ ನಡೆಸುವುದು ಇಬ್ಬರು ಸ್ವತಂತ್ರ ವ್ಯಕ್ತಿಗಳ ಆಯ್ಕೆಯ ಸ್ವಾತಂತ್ರ್ಯದ ಮೇಲಿನ ಗಂಭೀರ ಆಕ್ರಮಣವಾಗುತ್ತದೆ” ಎಂದು ತೀರ್ಪು ನೀಡಿತ್ತು.

PC : The Indian Express

19, ಆಗಸ್ಟ್ 2019ರಲ್ಲಿ ಮದುವೆಯಾಗಿದ್ದ ಸಲಾಮತ್ ಅನ್ಸಾರಿ ಮತ್ತು ಪ್ರಿಯಾಂಕಾ ಖಾರ್ವಾರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಲ್ಲಿ ನೀಡಿದ ತೀರ್ಪು ಇದಾಗಿತ್ತು. ಖಾರ್ವಾರ್ ಅವರು ಇಸ್ಲಾಂ ಧರ್ಮಕ್ಕೆ ಮತಾಂತಾರವಾದ ಕಾರಣಕ್ಕೆ ಆಕೆಯ ತಂದೆ, ಸಲಾಮತ್ ಮತ್ತು ಅವರ ಕುಟುಂಬದವರ ಮೇಲೆ ದಾಖಲಿಸಿದ್ದ ಎಫ್‍ಐಆರ್ ವಜಾ ಮಾಡಲು ಈ ದಂಪತಿ ಅರ್ಜಿ ಸಲ್ಲಿಸಿದ್ದರು. “ಪ್ರಿಯಾಂಕಾ ಖಾರ್ವಾರ್ ಮತ್ತು ಸಲಾಮತ್ ಅನ್ಸಾರಿ ಅವರುಗಳನ್ನು ನಾವು ಹಿಂದೂ ಅಥವಾ ಮುಸ್ಲಿಂ ಆಗಿ ನೋಡುವುದಿಲ್ಲ, ಬದಲಾಗಿ ತಮ್ಮ ಮುಕ್ತ ಅಭಿಮತ ಮತ್ತು ಆಯ್ಕೆಗೆ ತಕ್ಕಂತೆ ಒಂದು ವರ್ಷದಿಂದ ಶಾಂತಿಯುತವಾಗಿ ಮತ್ತು ಸಂತಸದಿಂದ ಬದುಕುತ್ತಿರುವ ಇಬ್ಬರು ವಯಸ್ಕ ಸ್ವತಂತ್ರ ವ್ಯಕ್ತಿಗಳಾಗಿ ಕಾಣುತ್ತೇವೆ” ಎಂದಿದ್ದ ನ್ಯಾಯಪೀಠ, ಮಗಳನ್ನು ಭೇಟಿ ಮಾಡಲು ಅವಕಾಶ ಕೋರಿದ್ದ ತಂದೆಯ ಮನವಿಯನ್ನು ತಿರಸ್ಕರಿಸಿ “ಯಾರನ್ನು ಭೇಟಿ ಮಾಡಬೇಕು ಎನ್ನುವುದು ಆಕೆಯ ಆಯ್ಕೆ” ಎಂದಿತ್ತು.

ಹೀಗೆ ತನ್ನ ಹಿಂದಿನ ತೀರ್ಪನ್ನು ಸರಿಪಡಿಸಿಕೊಂಡಿದ್ದ ಅಲಹಾಬಾದ್ ಉಚ್ಚ ನ್ಯಾಯಾಲಯದ ಈ ಹೊಸ ತೀರ್ಪು ಕೂಡ ಬಿಜೆಪಿ ಸರ್ಕಾರಗಳ ಆಷಾಢಭೂತಿತನದ ‘ಲವ್ ಜಿಹಾದ್’ ಕಾಯ್ದೆ- ಕಾನೂನು ರಚನೆಗೆ ಅಡ್ಡಿಪಡಿಸಿಲ್ಲ. ಅಧಿಕಾರ ದುರುಪಯೋಗದಿಂದ, ಈ ನೆಲದ ಕಾನೂನನ್ನು ತಮ್ಮ ರಾಜಕೀಯ ಅವಕಾಶಗಳಿಗೆ ಬೇಕಂತೆ ಅನ್ವಯಪಡಿಸಿಕೊಳ್ಳುವ ನಿಟ್ಟಿನಲ್ಲಿ ಅವು ಮುಂದುವರೆದಿವೆ.

ಕಾನೂನಷ್ಟೇ ಅಲ್ಲ, ಸ್ವಾತಂತ್ರ್ಯಾನಂತರ ಭಾರತ ದೇಶ ಕಟ್ಟಲು ಹೋರಾಡಿದ ಧೀಮಂತ ನಾಯಕರನ್ನು ಕೂಡ ತನಗೆ ಬೇಕಾದಂತೆ ಬಳಸಿಕೊಂಡ, ತಿರುಚಿದ ಉದಾಹರಣೆಗಳಿಗೂ ಕಡಿಮೆಯೇನಿಲ್ಲ. ಉದಾಹರಣೆಗೆ ಅಂಬೇಡ್ಕರ್ ಅವರ ‘ಪಾಕಿಸ್ತಾನ್ ಆರ್ ಪಾರ್ಟಿಶನ್ ಆಫ್ ಇಂಡಿಯಾ’ ಕೃತಿ, ಹಿಂದೂ – ಮುಸ್ಲಿಂ ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳು, ಆ ಎರಡೂ ಧಾರ್ಮಿಕ ಸಮುದಾಯಗಳ ಸಣ್ಣತನಗಳು ಮತ್ತು ಸ್ವತಂತ್ರ ಪೂರ್ವದಲ್ಲಿ ಪಾಕಿಸ್ತಾನ ಬೇಡಿಕೆಯ ಬಗ್ಗೆ ಮಾಡಿರುವ ಸುದೀರ್ಘ ಪಾಂಡಿತ್ಯಪೂರ್ಣ ಅಧ್ಯಯನ. ಈ ಪುಸ್ತಕದ ಕೆಲವು ಅಧ್ಯಾಯಗಳ ಮಾತುಗಳನ್ನು ಸೆಲೆಕ್ಟಿವ್ ಆಗಿ ಆಯ್ಕೆ ಮಾಡಿ, ಉಲ್ಲೇಖಿಸಿ, ಜನರಿಗೆ ದಾರಿತಪ್ಪಿಸುವ ಕೆಲಸವನ್ನು ಇಂದಿಗೂ ಸಂಘಪರಿವಾರದವರು ನಡೆಸಿಕೊಂಡು ಹೋಗುತ್ತದ್ದಾರೆ. 2015ರಲ್ಲಿ, ಅಂಬೇಡ್ಕರ್ ಅವರ 125ನೇ ಜಯಂತಿಗಾಗಿ ಆರ್‌ಎಸ್‍ಎಸ್ ಮುಖವಾಣಿ ಪತ್ರಿಕೆ ‘ಆರ್ಗನೈಸರ್’, ‘ರಿವಿಸಿಟಿಂಗ್ ಅಂಬೇಡ್ಕರ್’ ಹೆಸರಿನಲ್ಲಿ ವಿಶೇಷ ಸಂಚಿಕೆ ಹೊರಡಿಸಿತ್ತು. ಅದರಲ್ಲಿ ಅಬೇಡ್ಕರ್ ಚಿಂತನೆಗಳ ಬಗ್ಗೆ ಬೇಕಂತಲೇ ತಿರುಚಿ ಬರೆದಿದ್ದ ತಪ್ಪು ಮಾಹಿತಿಗಳಿಗೆ ಉತ್ತರಿಸಿ ಅಂಬೇಡ್ಕರೈಟ್ ವಿದ್ವಾಂಸರಾದ ಬೊಜ್ಜ ಥಾರಕಮ್, ಕೆ ಸತ್ಯನಾರಾಯಣ, ಎಲ್ ಲಕ್ಷ್ಮಿನಾರಾಯಣ ಮತ್ತು ಕೆ ವೈ ರತ್ನಂ ಅವರು “ಹಿಂದುತ್ವವಾದಿಗಳಿಗೆ ಅಂಬೇಡ್ಕರ್ ಅವರನ್ನು ಅಡಾಪ್ಟ್ ಮಾಡಿಕೊಳ್ಳಲು ಅಥವಾ ಅಪ್ರಾಪ್ರಿಯೇಟ್ ಮಾಡಿಕೊಳ್ಳಲು ಸಾಧ್ಯವಿಲ್ಲ” ಎಂಬ ಕಿರುಹೊತ್ತಿಗೆಯನ್ನು ತಂದು, ಆ ವಿಶೇಷ ಸಂಚಿಕೆಯ ಪಿತೂರಿಯನ್ನು ಬಯಲಿಗೆಳೆದಿದ್ದರು.

PC : Rashtrotthana Sahitya

ಆಗಸ್ಟ್ 2020ರಲ್ಲಿ ರಾಕೇಶ್ ಶೆಟ್ಟಿ ಎಂಬುವವರು ‘ಮುಚ್ಚಿಟ್ಟ ದಲಿತ ಚರಿತ್ರೆ’ ಎಂಬ ಪುಸ್ತಕ ಬರೆದರು. ಅದು ಈಗಾಗಲೇ ಹಲವು ಮುದ್ರಣಗಳನ್ನು ಕಂಡಿದೆ ಎಂದು ಕೂಡ ಹೇಳಿಕೊಳ್ಳಲಾಗುತ್ತಿದೆ. ಅದರ ಒಂದು ಅಧ್ಯಾಯ “ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಇಸ್ಲಾಂ ಹಾಗೂ ಪಾಕಿಸ್ತಾನ”. ಈ ಅಧ್ಯಾಯಕ್ಕೆ ಬಳಸಿಕೊಂಡಿರುವ ರೆಫರೆನ್ಸ್ ಮತ್ತೆ ಮೇಲೆ ಹೇಳಿರುವ ‘ಪಾಕಿಸ್ತಾನ್ ಆರ್ ಪಾರ್ಟಿಶನ್ ಆಫ್ ಇಂಡಿಯಾ’ ಕೃತಿಯೇ. ಆದರೆ ತಮಗೆ ಬೇಕಾಂದಂತೆ ಸೆಲೆಕ್ಟಿವ್ ಆಗಿ ಪಠ್ಯವನ್ನು ಬಳಸಿಕೊಂಡು, “Citizenship Amendment Act (CAA) 2019 ಕುರಿತು ಮಾತನಾಡಲು ಹೊರಟರೆ, ಪಾಕಿಸ್ತಾನ ಸೃಷ್ಟಿಯಾದ ಇತಿಹಾಸದ ಬಗ್ಗೆ ಮಾತನಾಡಬೇಕಾಗುತ್ತದೆ. ಪಾಕಿಸ್ತಾನದ ಬಗ್ಗೆ ಮಾತನಾಡಲು ಹೊರಟಾಗ, ಪಾಕಿಸ್ತಾನದ ಸೃಷ್ಟಿಗೆ ಕಾರಣವಾದ ಇಸ್ಲಾಂ ಬಗ್ಗೆ ಮಾತನಾಡಬೇಕಾಗುತ್ತದೆ. ಇಸ್ಲಾಂ ಮತ್ತು ಪಾಕಿಸ್ತಾನದ ಬಗ್ಗೆ ಮಾತನಾಡುವಾಗ ಉಲ್ಲೇಖಿಸಲೇಬೇಕಾದ ಮಹತ್ವದ ಪುಸ್ತಕವೆಂದರೆ ಅದು ಅಂಬೇಡ್ಕರ್ ಅವರ Pakistan or The Partition of India. ಈ ಪುಸ್ತಕದಲ್ಲಿ ಇಸ್ಲಾಂನ ಗುಣಲಕ್ಷಣಗಳು, ಮುಸ್ಲಿಮರು ಪಾಕಿಸ್ತಾನವನ್ನು ಏಕೆ ಬಯಸುತ್ತಿದ್ದಾರೆ, ಹಿಂದೂಗಳು ಏಕೆ ಅದನ್ನು ವಿರೋಧಿಸುತ್ತಿದ್ದಾರೆ, ವಿಭಜನೆ ಆಗುವುದೇ ಆದರೆ ಮುಂದಿನ ನಡೆಯೇನಾಗಬೇಕು ಇತ್ಯಾದಿ ವಿಷಯಗಳ ಬಗ್ಗೆ ಅತ್ಯಂತ ವಿದ್ವತ್‍ಪೂರ್ಣವಾಗಿ ವಿವರಿಸುತ್ತಾರೆ ಅಂಬೇಡ್ಕರ್.” ಎಂದು ಪ್ರಾರಂಭಿಸುವ ಮೂಲಕ ಸಿಎಎ ಸಮರ್ಥಿಸಿಕೊಳ್ಳಲು ತಮ್ಮ ಮೂಗಿನ ನೇರಕ್ಕೆ ಈ ಪುಸ್ತಕವನ್ನು ವ್ಯಾಖ್ಯಾನಿಸುವ ಪಿತೂರಿಗೆ ತೊಡಗಿಕೊಳ್ಳುತ್ತಾರೆ. ಕೊನೆಗೆ ಡಿಜೆ ಹಳ್ಳಿ ಗಲಭೆಯನ್ನು ತಳಕುಹಾಕಲು ಕೂಡ ಇವರು ಪ್ರಯತ್ನಿಸುತ್ತಾರೆ.

ಅಂಬೇಡ್ಕರ್ ಅವರ ಪುಸ್ತಕವನ್ನು ತಮಗೆ ಬೇಕಾದಂತೆ ತಪ್ಪು ತಪ್ಪಾಗಿ ವ್ಯಾಖ್ಯಾನಿಸಿ, ಅದರ ಸಮಗ್ರತೆಯನ್ನು ಕಡೆಗಣಿಸಿ, ಅದರೊಳಗಿನ ಬರಹಗಳನ್ನು ತನ್ನ ರಾಜಕೀಯ ಅಗತ್ಯಗಳಿಗೆ ತಕ್ಕಂತೆ ಆಯ್ಕೆ ಮಾಡಿ ಜನರಿಗೆ ತಪ್ಪು ಮಾಹಿತಿ ತಲುಪಿಸುವ ಸಂಘಪರಿವಾರದ ಕೆಲಸದಲ್ಲಿ ಇದು ಮೊದಲೇನಲ್ಲ. ‘ಅಂಬೇಡ್ಕರ ಆನ್ ಮುಸ್ಲಿಮ್ಸ್ – ಮಿಥ್ಸ್ ಅಂಡ್ ಫ್ಯಾಕ್ಟ್ಸ್’ (ಮುಸ್ಲಿಮರ ಬಗ್ಗೆ ಅಂಬೇಡ್ಕರ್ – ಮಿಥ್ಯಗಳು ಮತ್ತು ವಾಸ್ತವ) ಎಂಬ ಪುಸ್ತಕದಲ್ಲಿ ಚಿಂತಕ ಆನಂದ ತೇಲ್ತುಂಬ್ಡೆ “ಮಿಥ್ 7- ಅಂಬೇಡ್ಕರ್ಸ್ ‘ಪಾಕಿಸ್ತಾನ್ ಆರ್ ಪಾರ್ಟಿಶನ್ ಆಫ್ ಇಂಡಿಯಾ’ ಇಸ್ ಆನ್ ಆಂಟಿ-ಮುಸ್ಲಿಮ್ ಟೆಕ್ಸ್ಟ್” ಎಂಬ ಅಧ್ಯಾಯದಲ್ಲಿ “ಪುಸ್ತಕದಲ್ಲಿ ವಿಶಾಲವಾಗಿ ವಾದಿಸಿರುವಂತೆ, ಅದು ಮುಸ್ಲಿಂ ವಿರೋಧಿ ಎಂಬ ಮಾತು ದೂರ ಉಳಿಯುತ್ತದೆ ಎಂಬುದು ವಾಸ್ತವ. ಹಿಂದುತ್ವದವರ ಅಖಂಡ ಭಾರತದ ವಾದಕ್ಕೆ ವಿರುದ್ಧವಾಗಿ ಅಂಬೇಡ್ಕರ್ ಅವರು ಪಾಕಿಸ್ತಾನದ ಪರವಾದ ಮುಸ್ಲಿಮರ ವಾದವನ್ನು ಎತ್ತಿಹಿಡಿಯುತ್ತಾರೆ. ಧಾರ್ಮಿಕ, ಇತಿಹಾಸ, ಸಾಮಾಜಿಕ, ರಾಜಕೀಯ, ಆಡಳಿತ ಮತ್ತು ಮಿಲಿಟರಿ ಆಧಾರಗಳಲ್ಲಿ ಹಲವು ವಾದಗಳನ್ನು ಮಂಡಿಸಿ, ಅಂದು ನೆಲೆಸಿದ್ದ ಸನ್ನಿವೇಶದಲ್ಲಿ, ಅವರು ಪ್ರಸ್ತಾಪಿಸಿದಂತೆ, ವಿಭಜನೆ, ಹೇಗೆ ಉತ್ತಮ ಪರಿಹಾರ ಎಂದು ತೋರಿಸಿಕೊಡುತ್ತಾರೆ. ಸಮಗ್ರವಾದ ವಾದ ಮಂಡಿಸಲು, ಎರಡೂ ಬಣಗಳ ಒಳ್ಳೆಯ ಮತ್ತು ಕೆಟ್ಟ ಅಂಶಗಳನ್ನು ಪಠ್ಯ ವಸ್ತುನಿಷ್ಟವಾಗಿ ಪ್ರಸ್ತುತಪಡಿಸುತ್ತದೆ. ಆದರೆ, ಅಲ್ಪಸಂಖ್ಯಾತರ ಜೊತೆಗೆ ಅಧಿಕಾರ ಹಂಚಿಕೊಳ್ಳುವುದಕ್ಕೆ ಹಿಂದೂ ಬಹುಸಂಖ್ಯಾತರಲ್ಲಿ ಅಂತರ್ಗತವಾಗಿರುವ ಅಸಾಧ್ಯತೆಯೇ ವಿಭಜನೆಯನ್ನು ಅನಿವಾರ್ಯಗೊಳಿಸಿತು ಎಂಬ ಪುಸ್ತಕದ ಮುಖ್ಯ ಅಂಶ ತಿಳಿಯದೇ ಇರದು” ಎನ್ನುತ್ತಾರೆ. ಹೀಗೇ ಎರಡೂ ಬಣಗಳ ಹುಳುಕುಗಳನ್ನು ತರಾಟೆಗೆ ತೆಗೆದುಕೊಂಡು ವಸ್ತುನಿಷ್ಠವಾಗಿ ಚರ್ಚಿಸುವ ಪುಸ್ತಕವನ್ನು ಬಳಸಿಕೊಂಡು ಅಂಬೇಡ್ಕರ್ ಅವರು ಇಸ್ಲಾಂ-ಮುಸ್ಲಿಂ ವಿರೋಧಿಯಾಗಿದ್ದರು ಎಂಬ ಕಟ್ಟುಕಥಾನಕಗಳನ್ನು ಸಂಘಪರಿವಾರದವರು ಬೆಳೆಸಿ ಪ್ರಚಾರಮಾಡುತ್ತಲೇ ಬರುತ್ತಿದ್ದಾರೆ. ರಾಕೇಶ್ ಶೆಟ್ಟಿ ಹೊಸ ಸೇರ್ಪಡೆ ಅಷ್ಟೇ.

ರಾಕೇಶ್ ತಮ್ಮ ಪುಸ್ತಕದದಲ್ಲಿ ಉಲ್ಲೇಖಿಸುವ ಅಂಬೇಡ್ಕರ್ ಅವರ ಮಾತುಗಳು, ಯಾವ ಸಂಪುಟದ, ಯಾವ ಅಧ್ಯಾಯದ ಎಷ್ಟನೇ ಪುಟದಲ್ಲಿವೆ ಎಂಬುದನ್ನು ನಮೂದಿಸುವುದೇ ಇಲ್ಲ. ಇದರಿಂದ ಈ ಲೇಖಕ ಉಲ್ಲೇಖ ಮಾಡುವ ಮಾತುಗಳ ಮುಂಚಿನ ಅಥವಾ ಮುಂದಿನ ಯಾವ ಮಾತುಗಳನ್ನು ಬೇಕಂತಲೇ ಬಿಟ್ಟಿದ್ದಾನೆ ಎಂಬುದನ್ನು ತಿಳಿಯಲು ಕಷ್ಟವಾಗುವಂತೆ ಮಾಡಿ, ತನ್ನ ವಿರೂಪ ವಾದಗಳನ್ನು ಮುಗ್ಧ ಓದುಗರಿಗೆ ದಾಟಿಸುವುದಕ್ಕೆ ಮಾಡಿರುವ ಪಿತೂರಿ ಎಂದು ಬೇರೆಯಾಗಿ ಹೇಳಬೇಕಿಲ್ಲ ಅಲ್ಲವೇ?

PC : Pothi.com

ಉದಾಹರಣೆಗೆ ಆತನ ಪುಸ್ತಕದ 49ನೇ ಪುಟದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಜನಸಂಖ್ಯಾ ವಿನಿಮಯದ ಬಗ್ಗೆ ಅಂಬೇಡ್ಕರ್ ಹೀಗಂದಿದ್ದರು ಎಂದು ಉಲ್ಲೇಖಿಸುತ್ತಾ, ಟರ್ಕಿ, ಬಲ್ಗೇರಿಯಾ ಮತ್ತು ಗ್ರೀಸ್ ದೇಶಗಳಲ್ಲಿ ಜರನ್ನು ವರ್ಗಾವಣೆ ಮಾಡಿದ್ದರ ಬಗ್ಗೆ ಅವರ ಅಭಿಪ್ರಾಯ ದಾಖಲಿಸುತ್ತಾ, ಎರಡೂ ದೇಶಗಳ ಅಲ್ಪಸಂಖ್ಯಾತರನ್ನು ವಿನಿಮಯ ಮಾಡಿಕೊಳ್ಳಲೇಬೇಕು ಎಂಬುದು ಅವರ ನಿಲುವಾಗಿತ್ತು ಎಂದು ತಿಳಿಸುತ್ತಾರೆ. ಆದರೆ Pakistan or The Partition of India ಪುಸ್ತಕದ ಐದನೇ ಭಾಗದ ‘ದ ಪ್ರಾಬ್ಲಮ್ಸ್ ಆಫ್ ಪಾಕಿಸ್ತಾನ’, 14ನೇ ಅಧ್ಯಾಯವನ್ನು ಓದಿದರೆ ಅಂಬೇಡ್ಕರ್ ಅವರ ಈ ಮಾತುಗಳು ರಾಕೇಶ್ ಅವರು ವ್ಯಾಖ್ಯಾನಿಸುವಂತೆ ಕೇಳಿಸುವುದೇ ಇಲ್ಲ: “ಗ್ರೀಸ್ ಮತ್ತು ಬಲ್ಗೇರಿಯಾದ ನಡುವೆ ಜನಸಮೂಹದ ವರ್ಗಾವಣೆ ಸ್ವಯಂಪ್ರೇರಿತವಾಗಿತ್ತು ಆದರೆ ಗ್ರೀಸ್ ಮತ್ತು ಟರ್ಕಿ ನಡುವೆ ಅದು ಕಡ್ಡಾಯವಾಗಿತ್ತು. ಕಡ್ಡಾಯ ವರ್ಗಾವಣೆ ಮೇಲ್ನೋಟಕ್ಕೆ ತಪ್ಪು ಎಂದು ಕಾಣಿಸುತ್ತದೆ. ಒಬ್ಬ ವ್ಯಕ್ತಿ ಅಲ್ಲಿ ವಾಸಿಸುವುದನ್ನು ಮುಂದುವರೆಸುವುದರಿಂದ ಪ್ರಭುತ್ವದ ಶಾಂತಿಯನ್ನು ಅಸಮತೋಲನಗೊಳಿಸುತ್ತದೆ ಅಥವಾ ಆತನ ಹಿತಾಸಕ್ತಿಗೋಸ್ಕರ ವರ್ಗಾವಣೆ ಅಗತ್ಯವಲ್ಲದ ಹೊರತು, ಒಬ್ಬ ವ್ಯಕ್ತಿಗೆ ಅದು ಬೇಕಿಲ್ಲದೆ ಹೋದರೆ, ತನ್ನ ವಾಸಸ್ಥಾನವನ್ನು ಬದಲಿಸುವಂತೆ ಒತ್ತಾಯಿಸುವುದು ನ್ಯಾಯಯುತವಲ್ಲ. ಬೇಕಿರುವುದೇನೆಂದರೆ ಯಾರಿಗಾದರೂ ವರ್ಗಾವಣೆ ಬಯಸಿದಲ್ಲಿ ಆತ ಯಾವುದೇ ತೊಂದರೆಗಳಿಲ್ಲದೆ ಮತ್ತು ನಷ್ಟವಿಲ್ಲದೆ ಅದು ಸಾಧ್ಯವಾಗಬೇಕು. ಆದುದರಿಂದ ನನ್ನ ಅಭಿಪ್ರಾಯದಲ್ಲಿ ವರ್ಗಾವಣೆಯನ್ನು ಬಲಪ್ರಯೋಗದಿಂದ ಮಾಡಬಾರದು ಬದಲಾಗಿ ವರ್ಗಾವಣೆ ಬಗ್ಗೆ ತಮ್ಮ ಸಮ್ಮತಿ ವ್ಯಕ್ತಪಡಿಸುವವರಿಗೆ ಅದು ಮುಕ್ತವಾಗಿರಬೇಕು” ಎಂದು ಬರೆಯುತ್ತಾರೆ. [BAWS, Vol-8, P. 382]

ಹೀಗೆ ಪ್ರಖರವಾಗಿ ಮತ್ತು ವಸ್ತುನಿಷ್ಠವಾಗಿ ತಮ್ಮ ಚಿಂತನೆಗಳನ್ನು ಪ್ರಸ್ತುತಪಡಿಸಿರುವ ಪುಸ್ತಕದಿಂದ ತಮ್ಮ ಕುತ್ಸಿತ ರಾಜಕೀಯಕ್ಕೆ ಬೇಕಂತೆ ಕೆಲವನ್ನಷ್ಟೇ ಎತ್ತಿಕೊಂಡು ಪ್ರಚಾರ ನಡೆಸುವ ಇಂತಹ ಬಲಪಂಥೀಯ ಶಕ್ತಿಗಳ ಹುನ್ನಾರವನ್ನು ನಾವು ಇಂದು ಧಿಕ್ಕರಿಸಬೇಕಾದ ತುರ್ತು ಒದಗಿಬಂದಿದೆ. ಅಂಬೇಡ್ಕರೈಟ್ ಚಿಂತಕರು-ವಿದ್ವಾಂಸರನ್ನು ಕಾನೂನುಬಾಹಿರವಾಗಿ ಟಾರ್ಗೆಟ್ ಮಾಡುತ್ತಿರುವ ಸಂದರ್ಭದಲ್ಲಿ ಎಲ್ಲರೂ ಅಂಬೇಡ್ಕರ್‌ವಾದಿಗಳಾಗಿ ಅವರ ಚಿಂತನೆಗಳನ್ನು ಹೆಚ್ಚು ಮೈಗೂಡಿಸಿಕೊಳ್ಳುವುದೇ ಇಂತಹ ಮತೀಯ ಶಕ್ತಿಗಳ ಪಿತೂರಿಗೆ ಉತ್ತರವಾಗಬಲ್ಲುದು.


ಇದನ್ನೂ ಓದಿ: ಬಹುಜನ ಭಾರತ: ಬಾಬಾಸಾಹೇಬರು ಮನುಸ್ಮೃತಿಯನ್ನು ಸುಟ್ಟಿದ್ದು ಸುಳ್ಳೇನು?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...