ಇತ್ತೀಚೆಗೆ ನಡೆದ ಗ್ರೇಟರ್ ಹೈದರಾಬಾದ್ ಮುನಿಸಿಪಾಲ್ ಕಾರ್ಪೋರೇಷನ್ ಚುನಾವಣೆಯಲ್ಲಿ ಬಿಜೆಪಿ ಹೇಗೆ ತನ್ನ ಹಿಂದುತ್ವ ರಾಜಕಾರಣದಿಂದ ಗಮನಾರ್ಹ ಸಾಧನೆ ಮಾಡಿತು ಎಂದು ತಿಳಿದಿದೆ. ಆದರೆ ಚುನಾವಣೆಯಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸಹ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿಆರ್‌ಎಸ್‌ಗಿಂತ ಕೇವಲ ಒಂದು ಹೆಜ್ಜೆ ಮಾತ್ರ ಹಿಂದಿದೆ ಎಂಬುದನ್ನು ಮತ ಎಣಿಕೆ ನಂತರದ ಅಂಕಿ ಅಂಶಗಳು ತೋರಿಸಿವೆ.
ಪಾಲಿಕೆ ಚುನಾವಣೆಯಲ್ಲಿ ಟಿಆರ್‌ಎಸ್ 55, ಬಿಜೆಪಿ 48, ಎಐಎಂಐಎಂ 44, ಕಾಂಗ್ರೆಸ್ 02 ಮತ್ತು ಪಕ್ಷೇತರ ಅಭ್ಯರ್ಥಿ 1 ಸ್ಥಾನಗಳಲ್ಲಿ ವಿಜಯಿಯಾಗಿವೆ. ಟಿಆರ್‌ಎಸ್ ಮತ್ತು ಬಿಜೆಪಿ ನಡುವೆ 7 ಸ್ಥಾನಗಳ ವ್ಯತ್ಯಾಸ ಕಂಡುಬಂದರೆ ಒಟ್ಟಾರೆ ಮತಗಳಿಕೆಯಲ್ಲಿ ಕೇವಲ 11 ಸಾವಿರ ಮತಗಳ ವ್ಯತ್ಯಾಸವಿದೆ. ಒಟ್ಟು ಚಲಾವಣೆಯಾದ ಮತಗಳಲ್ಲಿ ಟಿಆರ್‌ಎಸ್ 12.06 ಲಕ್ಷ (35.81%) ಮತಗಳನ್ನು ಪಡೆದರೆ ಬಿಜೆಪಿಯು 11.95 ಲಕ್ಷ (35.56%) ಮತಗಳನ್ನು ತನ್ನದಾಗಿಸಿಕೊಂಡಿದೆ. ಇಬ್ಬರ ನಡುವಿನ ವ್ಯತ್ಯಾಸ 11 ಸಾವಿರ ಮತಗಳು ಮಾತ್ರ.
ಬಿಜೆಪಿ ಹಿಂದುತ್ವದ ರಾಜಕಾರಣವನ್ನು ಯಶಸ್ವಿಯಾಗಿ ನಿರ್ವಹಿಸಿತು. ಮೊದಲು ಅದು ಟಿಆರ್‌ಎಸ್ ಮತ್ತು ಎಐಎಂಐಎಂ ನಡುವೆ ಒಳ ಒಪ್ಪಂದವಾಗಿದೆ ಎಂದು ಪ್ರಚಾರ ಮಾಡಿತು. ಹೈದರಾಬಾದಿನಲ್ಲಿ 30,000-40,000 ರೋಹಿಂಗ್ಯಾ ಮುಸ್ಲಿಮರಿದ್ದಾರೆ ಎಂದು ಅಪಪ್ರಚಾರ ಮಾಡಿತು. ತಾವು ಅಧಿಕಾರಕ್ಕೆ ಬಂದರೆ ಹೈದರಾಬಾದ್ ಬದಲು ಭಾಗ್ಯನಗರ ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿದರು. ಗೃಹ ಸಚಿವ ಅಮಿತ್ ಶಾ ಆದಿಯಾಗಿ ಹಿಂದುತ್ವದ ಪ್ರಖರ ಮುಖ ತೇಜಸ್ವಿ ಸೂರ್ಯ ಸೇರಿ ಘಟಾನುಘಟಿಗಳು ಪ್ರಚಾರಕ್ಕೆ ಬಂದು ಹೋದರು.
ಬಿಜೆಪಿಯ ಹಿಂದುತ್ವ ರಾಜಕಾರಣದ ಹೊರತಾಗಿಯೂ ಟಿಆರ್‌ಎಸ್ ಸರ್ಕಾರದ ಮೇಲಿನ ಆಡಳಿತ ವಿರೋಧಿ ಅಲೆ ಮತ್ತು ಇತ್ತೀಚೆಗೆ ಹೈದರಾಬಾದ್‌ನಲ್ಲಿ ಉಂಟಾದ ಪ್ರವಾಹವು ಜನರು ಟಿಆರ್‌ಎಸ್ ವಿರುದ್ಧ ಮತ ಹಾಕುವಂತೆ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅದಕ್ಕೆ ಪೂರಕವೆಂಬಂತೆ ಇತ್ತೀಚಿನ ಭಾರಿ ಮಳೆ ಮತ್ತು ಪ್ರವಾಹದ ಸಂದರ್ಭದಲ್ಲಿ ಭಾರಿ ಹಾನಿಗೊಳಗಾದ ಪ್ರದೇಶಗಳಾದ ಸರೂರ್‌ನಗರ, ಹಯಾತ್‌ನಗರ, ಗಡಿಯನ್ನಾರಂ, ನಾಗೋಲ್, ಮೂಸರಂಬಾಗ್, ಅಂಬರ್ಪೆಟ್, ರಾಮಂತಪುರ, ಉಪ್ಪಲ್, ಕವಡಿಗುಡ, ಗಾಂಧಿನಗರ ಮತ್ತು ಮೈಲಾರ್‌ದೇವ್‌ಪಲ್ಲಿ ವಾರ್ಡ್‌ಗಳಲ್ಲಿ ಬಿಜೆಪಿ ಗೆದ್ದಿದೆ.
ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಪ್ರತ್ಯೇಕ ತೆಲಂಗಾಣದಲ್ಲಿ ನಡೆದ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ತೆಲಂಗಾಣಿಗರು ವಾಸಿಸುವ ರಾಮ್‌ನಗರ, ಗಾಂಧಿನಗರ, ಕಚಿಗುಡ, ನಲ್ಲಕುಂತ, ಬಾಗ್ ಅಂಬರ್‌ಪೇಟೆ, ಮುಶೀರಬಾದ್ ಮುಂತಾದ ಪ್ರದೇಶಗಳಲ್ಲಿನ ಎಲ್ಲಾ ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಇದನ್ನು ಟಿಆರ್‌ಎಸ್‌ನ ಭದ್ರಕೋಟೆ ಎಂದೇ ಕರೆಯಲಾಗುತ್ತಿತ್ತು.
ಒಟ್ಟಿನಲ್ಲಿ ತೆಲಂಗಾಣದಲ್ಲಿ 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಭದ್ರ ಅಡಿಪಾಯ ಹಾಕಿಕೊಂಡಿದೆ. ಈ ಚುನಾವಣೆಯಲ್ಲಿ ಟಿಆರ್‌ಎಸ್-ಎಐಎಂಐಎಂ ಸರ್ಕಾರ ರಚಿಸಿದರೂ ಸಹ ಅಧಿಕೃತವಾಗಿ ಗೆದ್ದಿರುವುದು ಬಿಜೆಪಿ ಎಂತಲೇ ಹೇಳಲಾಗುತ್ತಿದೆ.
ಇದನ್ನೂ ಓದಿ; ಪರಿಷತ್ ಚುನಾವಣೆ: ದಶಕಗಳ ನಂತರ ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಬಿಜೆಪಿಗೆ ಹೀನಾಯ ಸೋಲು


