ದೇಶದಾದ್ಯಂತ ಹಲವಾರು ರೈತ ಸಂಘಟನೆಗಳು ಹಮ್ಮಿಕೊಂಡಿದ್ದ ಭಾರತ್ ಬಂದ್ ಬಹುತೇಕ ಯಶಸ್ವಿಯಾಗಿದ್ದು, “ಇದು ರೈತರು ಮತ್ತು ಕಾರ್ಪೋರೇಟ್ ಕಂಪನಿಗಳ ನಡುವಿನ ಹೋರಾಟವೇ ಹೊರತು ರಾಜಕೀಯ ಪಕ್ಷಗಳದ್ದಲ್ಲ” ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (AIKSCC) ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾನೂನುಗಳು ಮತ್ತು ವಿದ್ಯುತ್ ಕಾಯ್ದೆಯ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ದೇಶವ್ಯಾಪಿ ಹಮ್ಮಿಕೊಂಡಿದ್ದ ಭಾರತ್ ಬಂದ್ ಅನ್ನು ಯಶಸ್ವಿಗೊಳಿಸಿದ್ದಕ್ಕೆ AIKSCC ದೇಶದ ಜನತೆ ಮತ್ತು ಹತ್ತಾರು ಸಂಘಟನೆಗಳಿಗೆ ಧನ್ಯವಾದಗಳನ್ನು ಹೇಳಿದೆ.
ಇದನ್ನೂ ಓದಿ: ಭಾರತ್ ಬಂದ್ | ಕರ್ನಾಟಕದಲ್ಲಿ ಯಶಸ್ವಿ; ಜಿಲ್ಲಾವಾರು ಹೋರಾಟದ ಚಿತ್ರಗಳು!
“ದೇಶದಾದ್ಯಂತ ಎಲ್ಲಾ ವರ್ಗಕ್ಕೆ ಸೇರಿದ ಲಕ್ಷಾಂತರ ಜನರು ಈ ಹೋರಾಟದಲ್ಲಿ ಭಾಗವಹಿಸಿ ರೈತರ ನ್ಯಾಯಯುತವಾದ ಬೇಡಿಕೆಯನ್ನು ಗೌರವಿಸಿದ್ದಾರೆ. ಲಕ್ಷಾಂತರ ಸಂಖ್ಯೆಯ ರೈತರು ದೆಹಲಿಗೆ ನಡೆಸಿದ ಮೆರವಣಿಗೆಯಿಂದ ಬಿಜೆಪಿ ಸರ್ಕಾರ ಪಾಠ ಕಲಿತಿಲ್ಲ. ಪ್ರತಿಭಟನಾ ನಿರತರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಆದರೆ ಆ ಕುತಂತ್ರಗಳೆಲ್ಲವೂ ಇಂದು ವಿಫಲವಾಗಿವೆ. ಸರ್ಕಾರವು ಜನರ ಧ್ವನಿಯನ್ನ ಆಲಿಸಲಿ. ಬೇರೆಡೆಗೆ ತಿರುಗಿಸಲು ಪ್ರಯತ್ನಿಸಬಾರದು. ಇದು ರೈತರು ಮತ್ತು ಕಾರ್ಪೋರೇಟ್ ಕಂಪನಿಗಳ ನಡುವಿನ ಹೋರಾಟವೇ ಹೊರತು ರಾಜಕೀಯ ಪಕ್ಷಗಳದ್ದಲ್ಲ” ಎಂದು ಹೇಳಿದೆ.
AIKSCC ಸೇರಿದಂತೆ ಹತ್ತಾರು ರೈತ ಸಂಘಟನೆಗಳು ಸೇರಿದಂತೆ ದೇಶದ ಜನರು ಭಾರತ್ ಬಂದ್ ಕರೆಗೆ ಉತ್ಸಾಹದಿಂದ ಪ್ರತಿಕ್ರಿಯಿಸಿದ್ದು, ಈ ಸರ್ಕಾರ ನೀಡಿರುವ ‘ಆರ್ಥಿಕ ಉತ್ತೇಜಕ’ದ ಜವಾಬನ್ನು ದೇಶದ ಜನರು ತಿರಸ್ಕರಿಸಿದ್ದಾರೆ. ಹಲವು ದಿನಗಳಿಂದ ಸರ್ಕಾರದ ಮೊಂಡು ವಾದವನ್ನು ಕೇಳಿರುವ ರೈತರು ಸರ್ಕಾರದ ಧೋರಣೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.
ಇದನ್ನೂ ಓದಿ: ಭೂ ಸುದಾರಣೆ ಕಾಯ್ದೆ ತಿದ್ದುಪಡಿಗೆ ಅಂಗೀಕಾರ ವಿರೋಧಿಸಿ ಪ್ರತಿಭಟನೆ: ಹೋರಾಟಗಾರರ ಬಂಧನ!
ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರತ್ ಬಂದ್ ಬಹುತೇಕ ಯಶಸ್ವಿಯಾಗಿದ್ದರೆ, ಕರ್ನಾಟಕ, ಮಹಾರಾಷ್ಟ್ರ, ಬಿಹಾರ, ತ್ರಿಪುರ, ಕೇರಳ ಸೇರಿದಂತೆ ಒಟ್ಟು 22 ರಾಜ್ಯಗಳಲ್ಲಿ ಭಾರತ್ ಬಂದ್ ಅನ್ನು ವ್ಯಾಪಕವಾಗಿ ಆಚರಿಸಲಾಯಿತು. ಹಲವು ರಾಜ್ಯಗಳಲ್ಲಿ ಬೆಳಿಗ್ಗೆಯಿಂದಲೇ ರ್ಯಾಲಿಗಳು, ಧರಣಿಗಳು ನಡೆದಿದ್ದು, ಭಾರಿ ಪ್ರಮಾಣದಲ್ಲಿ ಜನತೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಕಾರ್ಮಿಕರು, ವಿದ್ಯಾರ್ಥಿಗಳು, ಅನೇಕ ವಿದ್ವಾಂಸರೂ ಸೇರಿದಂತೆ 1000 ಕ್ಕೂ ಹೆಚ್ಚು ಜಿಲ್ಲಾ ಮತ್ತು ತಹಸಿಲ್ ಬಾರ್ ಅಸೋಸಿಯೇಷನ್ಗಳು ರೈತರಿಗೆ ಬೆಂಬಲವಾಗಿ ನಿಂತಿದ್ದವು.
ಇದನ್ನೂ ಓದಿ: ಈ ಕೃಷಿ ಕಾನೂನುಗಳನ್ನು ಕಾಂಗ್ರೆಸ್ ಕೂಡಾ ತರಲು ಬಯಸಿತ್ತು ಎಂದ ಬಿಜೆಪಿ; ತಿರುಗೇಟು ನೀಡಿದ…
“ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಗುಜರಾತ್, ಉತ್ತರಪ್ರದೇಶ ಮತ್ತು ಹರಿಯಾಣ ಸರ್ಕಾರಗಳ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳನ್ನು AIKSCC ತೀವ್ರವಾಗಿ ಖಂಡಿಸುತ್ತದೆ. ಮತ್ತು ಬಂಧನಕ್ಕೊಳಗಾದ ಎಲ್ಲಾ ಹೋರಾಟಗಾರರನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಕಾರ್ಪೋರೇಟ್ ಪರ ಕಾನೂನುಗಳನ್ನು ಜಾರಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರ ನಿಲುವನ್ನು ಖಂಡಿಸುತ್ತೇವೆ. ರೈತರನ್ನು ರಕ್ಷಿಸುವ ಕಾನೂನುಗಳು ಎಂದು ಹೇಳುವ ನರೇಂದ್ರ ಮೋದಿ ವಾಸ್ತವದಲ್ಲಿ ಕಾರ್ಪೋರೇಟ್ ಕುಳಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರವು ಈ ಕರಾಳ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವವರೆಗೂ ಎಲ್ಲ ಸಂಘಟನೆಗಳೂ ತಮ್ಮ ಹೋರಾಟವನ್ನು ಮುಂದುವರಿಸಲಿವೆ” ಎಂದು ತಿಳಿಸಿದೆ.
ಇದನ್ನೂ ಓದಿ: ರೈತರನ್ನು ಬೆಂಬಲಿಸಿ ನಾಳೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕಾಲ್ನಡಿಗೆ ಜಾಥಾ


