ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಅಂಗೀಕರಿಸಿರುವ ರಾಜ್ಯ ಸರ್ಕಾದ ವಿರುದ್ಧ ರೈತರು ಇಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಸಿದ್ದಾರೆ. ರಾಜಭವನ ಚಲೋ ಕರೆ ನೀಡಿದ್ದ ಸಾವಿರಾರು ಪ್ರತಿಭಟನಾಕಾರರನ್ನು ಪೊಲೀಸರು ಫ್ರೀಡಂ ಪಾರ್ಕ್ ಬಳಿ ತಡೆದಿದ್ದಾರೆ. ರಾಜ್ಯಪಾಲರು ಮಸೂದೆಗೆ ಸಹಿ ಹಾಕಬಾರದು ಎಂದು ಒತ್ತಾಯಿಸಿ ರೈತ-ದಲಿತ-ಕಾರ್ಮಿಕ ಸಂಘಟನೆಗಳ ಐಕ್ಯಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಸಿದ್ದು, 20 ರೈತ ಮುಖಂಡರನ್ನು ರಾಜ್ಯಪಾಲರು ಮಾತುಕತೆಗೆ ಆಹ್ವಾನಿಸಿದ್ದಾರೆ.
ಇಂದು ಬೆಳಿಗ್ಗೆಯೇ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಬಳಿ ಜಮಾಯಿಸಿದ ಸಾವಿರಾರು ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈಲು ನಿಲ್ದಾಣದಿಂದ ಕೆ.ಆರ್ ಸರ್ಕಲ್ ಮತ್ತು ವಿಧಾನಸೌಧದ ಮುಂಭಾಗದಿಂದ ರಾಜಭವನ ತಲುಪಲು ಯೋಜಿಸಿದ್ದ ರೈತರನ್ನು ಸದ್ಯಕ್ಕೆ ಫ್ರೀಡಂ ಪಾರ್ಕ್ ಬಳಿ ಪೊಲೀಸರು ತಡೆದಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಲವನ್ನು ನಿಯೋಜಿಸಲಾಗಿದೆ. ಫ್ರೀಡಂ ಪಾರ್ಕ್ ರಸ್ತೆಯಲ್ಲಿ ವಾಹನ ಸಂಚಾರ ಸ್ತಭ್ದಗೊಂಡಿದೆ.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಚಾಮರಸ ಮಾಲೀಪಾಟೀಲ್, ಬಿ.ಆರ್ ಪಾಟೀಲ್, ಕುರುಬುರು ಶಾಂತಕುಮಾರ್, ಗುರುಪ್ರಸಾದ್ ಕೆರಗೋಡು, ಪ್ರಕಾಶ್ ಕಮ್ಮರಡಿ, ವಿ.ಗಾಯತ್ರಿ, ಮಾವಳ್ಳಿ ಶಂಕರ್, ಹಣ್ಣು ಮಾರಾಟಗಾರರ ಸಂಘದ ಸೈಯ್ಯದ್, ಸಿರಿಮನೆ ನಾಗರಾಜ್, ನೂರ್ ಶ್ರೀಧರ್, ಕೆ.ವಿ ಭಟ್, ನಂಜೇಗೌಡ, ನಾರಾಯಣಸ್ವಾಮಿ ರಾಜ್ಯಪಾಲರನ್ನು ಭೇಟಿ ಮಾಡಿದ ನಿಯೋಗದಲ್ಲಿದ್ದಾರೆ.
ಫ್ರೀಡಂ ಪಾರ್ಕ್ ಬಳಿಯ ರಸ್ತೆಯಲ್ಲಿ ರೈತರ ಹೋರಾಟ ಮುಂದುವರೆದಿದೆ. ಸಾವಿರಾರು ಜನ ರಸ್ತೆಯಲ್ಲಿಯೇ ಕುಳಿತು ರಾಜ್ಯ ಮತ್ತು ಕೇಂದ್ರ ಸರ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಸದನ ಬಹಿಷ್ಕರಿಸಿ ಕಾಂಗ್ರೆಸ್ ಮುಖಂಡರೊಡನೆ ವಿಧಾನಸೌಧದಿಂದ ಫ್ರೀಡಂ ಪಾರ್ಕ್‌ವರೆಗೂ ಪಾದಯಾತ್ರೆ ನಡೆಸಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಇದನ್ನೂ ಓದಿ: ರೈತವಿರೋಧಿ ಮಸೂದೆಗಳಿಗೆ ರಾಜ್ಯಪಾಲರು ಸಹಿ ಹಾಕಬಾರದು: ಬೆಂಗಳೂರಿನಲ್ಲಿ ರೈತರು ಗುಡುಗು


