Homeಮುಖಪುಟಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಹಿಂದುತ್ವ ಶಕ್ತಿಗಳು ಮೇಲುಗೈ ಪಡೆದಿದ್ದು ಹೇಗೆ?

ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಹಿಂದುತ್ವ ಶಕ್ತಿಗಳು ಮೇಲುಗೈ ಪಡೆದಿದ್ದು ಹೇಗೆ?

ವಿರಸಂನ (ಕ್ರಾಂತಿಕಾರಿ ಬರಹಗಾರರ ಸಂಘ) ಸಕ್ರಿಯ ಸದಸ್ಯರಾಗಿದ್ದ ಮತ್ತು ವೀಕ್ಷಣಂ ಪತ್ರಿಕೆಯ ಸಂಪಾದಕರಾದ ಎನ್ ವೇಣುಗೋಪಾಲ್‌ರವರು ನಾನುಗೌರಿ.ಕಾಂಗಾಗಿ ಬರೆದ ವಿಶೇಷ ಲೇಖನ

- Advertisement -
- Advertisement -

ಹೈದರಾಬಾದ್‌ನಲ್ಲಿ ಇತ್ತೀಚಿಗೆ ನಡೆದ ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ತಾನು ಗಳಿಸಿದ ಸ್ಥಾನಗಳಲ್ಲಿ ಪ್ರಗತಿ ಸಾಧಿಸಿರುವ ಸಂಗತಿ ಅನೇಕರಿಗೆ ಹುಬ್ಬೇರಿಸುವಂತೆ ಮಾಡಿದೆ ಹಾಗೂ ಇದರ ಬಗ್ಗೆ ಅನೇಕ ವಿಶ್ಲೇಷಣೆಗಳು ಮತ್ತು ಆತಂಕಗಳು ಸ್ವಾಭಾವಿಕವಾಗಿಯೇ ಕಾಣಿಸಿಕೊಂಡಿವೆ. ಅತ್ಯಂತ ಬಲಶಾಲಿ ಆಡಳಿತ ಪಕ್ಷ ಟಿಆರ್‌ಎಸ್‌ನ ಸೋಲು ಮತ್ತು ಕೋಮು ಗಲಭೆಗಳು ಹಾಗೂ ಆತಂಕಗಳಿಗೆ ಅತ್ಯಂತ ಸೂಕ್ಷ್ಮವಾಗಿರುವ ಹೈದರಾಬಾದ್ ಸಮಾಜದ ಈ ಸಂದರ್ಭದಲ್ಲಿ ಈ ಅದ್ಭುತ ಗೆಲುವು ಅತ್ಯಂತ ಮಹತ್ವದ ಬೆಳವಣಿಗೆ ಆಗಿದೆ. ಆದರೆ, ಹಿಂದುತ್ವದ ಶಕ್ತಿಗಳ ಈ ಬೆಳವಣಿಗೆಗೆ ಸ್ಪಷ್ಟ ಕಾರಣಗಳಿವೆ; ಆಡಳಿತ ಪಕ್ಷ ಮೂಡಿಸಿರುವ ನಿರಾಸೆ, ಯಾವುದೇ ಕಾರ್ಯಸಾಧುವಾದ ಪರ್ಯಾಯಗಳ ಆಯ್ಕೆಯ ಕೊರತೆ ಹಾಗೂ ಚುನಾವಣೆಗಳ ಮುಂಚೆ ಕೋಮುದ್ವೇಷ ಭಾವನೆಗಳನ್ನು ಹೆಚ್ಚಿಸುವ ತೀವ್ರ ಪ್ರಚಾರ.

ದಕ್ಷಿಣದಲ್ಲಿ, ಉತ್ತರ ಭಾರತದಂತೆ ಹಿಂದುತ್ವದ ಶಕ್ತಿಗಳು ತಮ್ಮ ಬಲವನ್ನು ವೃದ್ಧಿಸಿಕೊಳ್ಳಲಾರರು ಎಂಬುದಿರಲಿ ನೆಲೆಯನ್ನು ಕಂಡುಕೊಳ್ಳಲಾರರು ಎಂಬ ಗಟ್ಟಿಯಾದ ನಂಬಿಕೆ ಬಹಳ ಸಮಯದಿಂದ ಇತ್ತು. ಅದಕ್ಕೆ ಈ ಪ್ರದೇಶದಲ್ಲಿ ಇದ್ದ ಜಾತಿವಿರೋಧಿ, ಬ್ರಾಹ್ಮಣ್ಯವಿರೋಧಿ ಹೋರಾಟಗಳ ಭವ್ಯ ಪರಂಪರೆ ಹಾಗೂ ಕಮ್ಯೂನಿಸ್ಟರ ಪ್ರಭಾವಗಳನ್ನು ಕಾರಣಗಳಾಗಿ ನೀಡಲಾಗುತ್ತಿತ್ತು. ಅದರೊಂದಿಗೆ ದ್ರಾವಿಡರು ಎಂಬ ಪ್ರತ್ಯೇಕ ಐಡೆಂಟಿಟಿ ಕೂಡ ಕಾರಣ ಎಂದು ನಂಬಲಾಗಿತ್ತು. ಹೈದರಾಬಾದ್‌ನಲ್ಲಂತೂ ಶತಕಗಳಿಂದ ಕಾಸ್ಮೋಪಾಲಿಟನ್ ಸಂಸ್ಕೃತಿಯನ್ನು ಹೊಂದಿದ ಕಾರಣಕ್ಕೆ ಕೋಮುವಾದಿಗಳು ಮೇಲುಗೈ ಸಾಧಿಸಲು ಸಾಧ್ಯವಿಲ್ಲ ಎನ್ನಲಾಗಿತ್ತು. ಆದರೆ, ತುರ್ತುಪರಿಸ್ಥಿತಿಯ ಸಮಯದಲ್ಲಿ ತಮ್ಮ ಬಂಧನದಿಂದ ಸಂಘ ಪರಿವಾರದ ವ್ಯಕ್ತಿಗಳು ಪಡೆದ ಗೌರವ ಮತ್ತು ಜನತಾ ಪ್ರಯೋಗದಲ್ಲಿ ಅವರ ಪಾಲ್ಗೊಳ್ಳುವಿಕೆ, ಅದರೊಂದಿಗೆ 80ರ ದಶಕದಲ್ಲಿ ಇಡೀ ದೇಶದಲ್ಲಿ ಹೆಚ್ಚುತ್ತಿದ್ದ ಕೋಮು ದ್ರುವೀಕರಣ, ಇವೆಲ್ಲ ಕಾರಣಗಳು ದಕ್ಷಿಣದಲ್ಲಿ ಈ ಶಕ್ತಿಗಳ ಪ್ರವೇಶಕ್ಕೆ ಅನುವು ಮಾಡಿಕೊಟ್ಟವು. ಹಾಗೂ ನಾಲ್ಕು ಶತಕಗಳ ಮುಸ್ಲಿಮ್ ಆಳ್ವಿಕೆ ಇತಿಹಾಸವನ್ನು ಹೊಂದಿದ ಹೈದರಾಬಾದ್ ನಗರವು ಹಿಂದೂ ಕೋಮುವಾದಿ ಶಕ್ತಿಗಳಿಗೆ ದೊಡ್ಡ ರೀತಿಯಲ್ಲಿ ಕಾಲೂರಲು ಬಿಡಲಿಲ್ಲ, ಅನೇಕ ಸಲ ಕೋಮು ಉದ್ವಿಘ್ನತೆ- ಗಲಭೆಗಳು ಆದಾಗಲೂ ಇದು ಆಗಲಿಲ್ಲ.

ಹಾಗಾಗಿ, ಚುನಾವಣಾ ರಾಜಕೀಯದಲ್ಲಿ ಭಾರತೀಯ ಜನತಾ ಪಾರ್ಟಿಯ ಯಶಸ್ವೀ ಪಯಣವನ್ನು, ವಿಶೇಷವಾಗಿ ಹೈದರಾಬಾದ್‌ನಲ್ಲಿಯ ಪಯಣವನ್ನು ಮೂರು ಹಂತದಲ್ಲಿ ಅರ್ಥ ಮಾಡಿಕೊಳ್ಳಬೇಕು; ಐತಿಹಾಸಿಕ, ರಾಜಕೀಯ ಮತ್ತು ಸಮಾಜೋ-ಆರ್ಥಿಕ ಸ್ತರಗಳಲ್ಲಿ. ಬಿಜೆಪಿ ಅಥವಾ ಇದಕ್ಕೆ ಮುಂಚೆಯಿದ್ದ ಜನಸಂಘ ಅಥವಾ ಅದಕ್ಕೂ ಮುಂಚೆಯಿದ್ದ ತೆಲಂಗಾಣ ಆರ್ಯ ಸಮಾಜ ಮತ್ತು ಹಿಂದು ಮಹಾಸಭಾಗಳನ್ನು 1980ರ ತನಕ ಪಾಳೇಗಾರರ ಮತ್ತು ಮಾರವಾಡಿಗಳ ಪಕ್ಷ ಎಂದು ಕಾಣಲಾಗುತ್ತಿತ್ತು. ಇತ್ತೀಚಿನ ದಶಕಗಳಲ್ಲಿ ಮಾತ್ರ ರಾಜಕೀಯ ಅಧಿಕಾರಕ್ಕೋಸ್ಕರ ಹಿಂದುಳಿದ ಜಾತಿಗಳ ಕ್ಷೇತ್ರಗಳನ್ನು ಉತ್ತಲಾರಂಭಿಸಿತು. ಸಮಾಜದಲ್ಲಿ ಮತ್ತು ಸಂಸ್ಕೃತಿಯಲ್ಲಿ ಕೋಮುಭಾವನೆಗಳ ಒಟ್ಟಾರೆ ಬೆಳವಣಿಗೆಯೊಂದಿಗೆ ಇವರ ವಿಸ್ತರಣೆ ಸಾಧ್ಯವಾಯಿತು.

ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್‌ಎಮ್‌ಸಿ) ಚುನಾವಣೆಗಳಲ್ಲಿ ಬಿಜೆಪಿಯು 48 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ, 2016ರಲ್ಲಿ 4 ಸ್ಥಾನಗಳಲ್ಲಿ ಮಾತ್ರ ಯಶಸ್ಸು ಕಂಡಿತ್ತು. ಈ ಅದ್ಭುತ ಗೆಲುವು ಕಳೆದ ತಿಂಗಳಲ್ಲಿ ದುಬ್ಬಾಕ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಪಡೆದ ಗೆಲುವಿನ ನಂತರ ಬಂದಿದೆ. ಮುಂಚೆಯ ಆಂಧ್ರ ಪ್ರದೇಶ(1956-2014) ಮತ್ತು ತದನಂತರ ಇಬ್ಭಾಗವಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯದಲ್ಲಿ ಸಂಘ ಪರಿವಾರದ ಸವೆಸಿದ ದಾರಿಯು ಅಧ್ಯಯನಕ್ಕೆ ಅರ್ಹವಾಗಿದೆ, ಅದರಲ್ಲೂ ಈ ಜಿಎಚ್‌ಮ್‌ಸಿ ಚುನಾವಣೆಗಳಲ್ಲಿ ಬಿಜೆಪಿ ಪಡೆದ ಸ್ಥಾನಗಳನ್ನು ಪರಿಗಣಿಸಿದರೆ ಈ ಅಧ್ಯಯನ ಬಹುಮುಖ್ಯವಾಗುತ್ತದೆ.

ಬಿಜೆಪಿಯ ಹಿಂದಿನ ಅವತಾರವಾದ ಜನ ಸಂಘವು ಚುನಾವಣಾ ರಾಜಕೀಯದಲ್ಲಾಗಲಿ ಅಥವಾ ಸಮಾಜದಲ್ಲಾಗಲೀ ಎಂದೂ ಮೇಲುಗೈ ಸಾಧಿಸಿರಲಿಲ್ಲ. 1962ರಲ್ಲಿ 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಒಂದು ಕಡೆಯೂ ಗೆಲ್ಲಲಿಲ್ಲ ಹಾಗೂ 19ರಲ್ಲಿ ಕೇವಲ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಆಮೇಲೆ 1983 ತನಕ ಒಂದೂ ಗೆಲುವು ಕಾಣಲಿಲ್ಲ, ಆಗ ತನ್ನ ಹೆಸರನ್ನು ಭಾರತೀಯ ಜನತಾ ಪಾರ್ಟಿ ಎಂದು ಬದಲಾಯಿಸಿತ್ತು. 83ರಲ್ಲಿ ಮೂರು ಕ್ಷೇತ್ರಗಳಲ್ಲಿ, ಒಂದು ಆಂಧ್ರದಲ್ಲಿ (ಎಂ ವೆಂಕಯ್ಯ ನಾಯ್ಡು) ಮತ್ತು ಎರಡು ತೆಲಂಗಾಣದಲ್ಲಿ. ಆಗಿನಿಂದ 2014ರ ಚುನಾವಣೆಯ ತನಕ ಮೂರಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಾಗಲಿಲ್ಲ. 2014ರಲ್ಲಿ 119 ಕ್ಷೇತ್ರದ ತೆಲಂಗಾಣದಲ್ಲಿ ಮೊದಲ ಬಾರಿಗೆ ಐದು ಕ್ಷೇತ್ರಗಳಲ್ಲಿ ಹಾಗೂ 175 ಕ್ಷೇತ್ರಗಳುಳ್ಳ ಆಂಧ್ರ ಪ್ರದೇಶದಲ್ಲಿ ನಾಲ್ಕು ಕಡೆ ಗೆಲುವು ಸಾಧಿಸಿತು. 2019ರ ಚುನಾವಣೆಯಲ್ಲಿ ಎಲ್ಲಾ 175 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಒಂದು ಕಡೆಯೂ ಗೆಲ್ಲಲಿಲ್ಲ ಹಾಗೂ ತೆಲಂಗಾಣದಲ್ಲೂ ಎಲ್ಲಾ (118) ಕಡೆ ಸ್ಪರ್ಧಿಸಿ ಒಂದು ಕಡೆ ಮಾತ್ರ ಗೆಲ್ಲಲು ಸಾಧ್ಯವಾಯಿತು.

ಇಂತಹ ವಿಫಲ ದಾಖಲೆಯ ಹಿನ್ನೆಲೆಯಲ್ಲಿ, ಪ್ರಸಕ್ತ ಗೆಲುವು ಅದ್ಭುತ ಎನಿಸುತ್ತದೆ. ಆದರೆ, ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ವಿಫಲತೆಗಳು, ತನ್ನ ಭರವಸೆಗಳನ್ನು ಈಡೇರಿಸದೇ ಇರುವುದು ಹಾಗೂ ಅದರಿಂದ ಜನರಿಗೆ ಬೆಳೆದ ಅಸಮಾಧಾನ, ಅದರಲ್ಲೂ ವಿಶೇಷವಾಗಿ ಯುವಜನರ ಅಸಮಾಧಾನವು ಹಿಂದುತ್ವ ಶಕ್ತಿಗಳು ತಮ್ಮ ತೆಕ್ಕೆಗೆ ಈ ಹೊಸ ವಲಯಗಳನ್ನು ಸೇರಿಸಿಕೊಳ್ಳಲು ಅನುವು ಮಾಡಿಕೊಟ್ಟವು. ಅದೇ ಸಮಯದಲ್ಲಿ ಟಿಆರ್‌ಎಸ್ ತನ್ನ ಸರ್ವಾಧಿಕಾರಿ ಧೋರಣೆ ಹಾಗು ಪ್ರಜಾಸತ್ತಾತ್ಮಕವಲ್ಲದ ನೀತಿಗಳು ಮತ್ತು ಕೆಲಸಗಳ ಮೂಲಕ ಕಾಂಗ್ರೆಸ್ ಅನ್ನು ನಾಶಗೊಳಿಸಿ, ಯಾವುದೇ ಸಂಸದೀಯ ಮತ್ತು ಸಂಸದೀಯವಲ್ಲದ ವಿರೋಧವನ್ನು ಇಲ್ಲವಾಗಿಸಿ ಒಂದು ರೀತಿಯ ರಾಜಕೀಯ ನಿರ್ವಾತವನ್ನು ಉಂಟುಮಾಡಿತು.

ಸುಮಾರು 14 ವರ್ಷ ನಡೆದ ಜನಪ್ರಿಯ ಪ್ರಬಲ ಜನಾಂದೋಲನದ ಅಲೆಯ ಮೇಲೆ ಹೊಸದಾಗಿ ಅಧಿಕಾರಕ್ಕೆ ಬಂದ ಇವರು ಎಲ್ಲಾ ಜನಾಂದೋಲನಗಳನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ಯಶಸ್ವಿಯಾದರು ಹಾಗೂ ಒಂದು ಜನಪ್ರಿಯ ಪ್ರತಿಭಟನಾ ಸ್ಥಳವನ್ನೂ ನೀಡದಂತೆ ನೋಡಿಕೊಂಡರು. ಈ ಟಿಆರ್‌ಎಸ್ ಆಡಳಿತ ಸೃಷ್ಟಿಸಿದ ನಿರ್ವಾತದ ವಾತಾವರಣದಲ್ಲಿ ಬಿಜೆಪಿ ತನ್ನ ರಾಜಕೀಯ ಮತ್ತು ಆರ್ಥಿಕ ಶಕ್ತಿಯೊಂದಿಗೆ ಸುಲಭವಾಗಿ ಪ್ರವೇಶಿಸಿತು. ಅದರೊಂದಿಗೆ ಬಿಜೆಪಿಯು, ಎಮ್‌ಐಎಮ್ (ಮಜ್ಲಿಸ್ ಇತ್ತೇಹಾದುಲ್ ಮುಸಲ್‌ಮೀನ್) ಅಂಶವನ್ನೂ ಬಳಸಿಕೊಂಡಿತು, ಏಕೆಂದರೆ ಕೆಲವು ಎಮ್‌ಐಎಮ್‌ನ ಮುಖಂಡರು ಬಿಜೆಪಿಯ ನಾಯಕರ ಭಾಷಣಗಳನ್ನೂ ಸರಿಗಟ್ಟಬಲ್ಲಂತಹ ಅತ್ಯಂತ ವಿಷಕಾರಿಯಾದ ಕೋಮು ಪ್ರಚೋದನಾ ಭಾಷಣಗಳನ್ನು ಮಾಡಿದ್ದರು. ಹಾಗಾಗಿ, ಬಿಜೆಪಿ ಈ ಚುನಾವಣೆಯಲ್ಲಿ ಸಾಧಿಸಿದ್ದನ್ನು ಟಿಆರ್‌ಎಸ್ ಮತ್ತು ಎಮ್‌ಐಎಮ್ ಕಾರಣದಿಂದ ಆದ ನಕಾರಾತ್ಮಕ ಮತಗಳೆಂದೇ ಪರಿಗಣಿಸಬೇಕೇ ಹೊರತು ಬಿಜೆಪಿಯ ಪರವಾಗಿರುವ ಸಕಾರಾತ್ಮಕ ಮತಗಳೆಂದು ಪರಿಗಣಿಸಬಾರದು.

ಬಿಜೆಪಿಯು ತನ್ನ ಎಲ್ಲಾ ತಂತ್ರಗಳನ್ನು ಬಳಸಿ, ಚುನಾವಣಾ ಪ್ರಚಾರಕ್ಕಾಗಿ ಕೇಂದ್ರ ಸಚಿವರನ್ನು ಮತ್ತು ಇತರ ರಾಜ್ಯಗಳ ಮುಖ್ಯಮಂತ್ರಿಗಳನ್ನು ಬಳಸಿಕೊಂಡಿತು. ಅದರಿಂದ ಈ ಚುನಾವಣೆ ಅತ್ಯಂತ ಅಬ್ಬರದ ಚುನಾವಣೆಯಾಗಿ ಮಾರ್ಪಟ್ಟಿತು. ಹಳೆ ನಗರದ ಮೇಲೆ ಸರ್ಜಿಕಲ್ ಸ್ಟ್ರೈಕ್, ಶಹರದ ಹೆಸರು ಬದಲಾವಣೆ, ಚಾರ್ಮಿನಾರ್ ಆವರಣದಲ್ಲಿ ದೇವಸ್ಥಾನ ಇತ್ತು ಎಂಬ ಹುಸಿ ಪ್ರಚಾರ, ಬಹಿರಂಗವಾಗಿ ಮಾಡಿದ ಮುಸ್ಲಿಮ್ ವಿರೋಧಿ ಘೋಷಣೆಗಳು, ಅದರೊಂದಿಗೆ ಎಮ್‌ಐಎಮ್‌ನ ಹಿಂದೂವಿರೋಧಿ ನಿಲುವುಗಳೆಲ್ಲವೂ ಬೆಂಕಿಗೆ ತುಪ್ಪ ಸುರಿದಂತಾಯಿತು. ಟಿಆರ್‌ಎಸ್ ಕೂಡ ತನ್ನ ಮುಖವಾಣಿ ದಿನಪತ್ರಿಕೆಯಲ್ಲಿ ’ಇದೇ ನಿಜವಾದ ಹಿಂದುತ್ವ ಎಂಬ ಶೀರ್ಷಿಕೆಯ ಅಡಿಯಲ್ಲಿ ಕೆಸಿ ಚಂದ್ರಶೇಖರ್ ಅವರನ್ನು ಕೇಸರಿಬಟ್ಟೆಗಳಲ್ಲಿ ಪ್ರಸ್ತುತಪಡಿಸಿ, ಕೋಮು ಪ್ರಚಾರಕ್ಕೆ ಇಳಿಸಿತ್ತು. (ಅಂದಹಾಗೆ, ಮೊದಲು ಡಿಜಿಟಲ್ ಪ್ರತಿಯಲ್ಲಿ ಹಿಂದುತ್ವ ಎಂಬ ಪದ ಬಳಸಿದ್ದರೆ, ನಂತರ ಪ್ರಿಂಟ್ ಪ್ರತಿಯಲ್ಲಿ ’ಹಿಂದೂಯಿಸಂ’ ಎಂಬ ಪದ ಬಳಸಲಾಯಿತು.)

Bandi Sanjay Kumar

ಈ ಮೊದಲು, ಕೇಂದ್ರದ ಬಿಜೆಪಿ ನಾಯಕರನ್ನು ಸಂತುಷ್ಟಗೊಳಿಸಲು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಅತ್ಯಂತ ಅಪಾಯಕಾರಿ ತಂತ್ರಗಳನ್ನು ಬಳಸಿದ್ದಾರೆ. ನೋಟು ರದ್ದತಿ ಮತ್ತು ಜಿಎಸ್‌ಟಿ ಮಸೂದೆಯನ್ನು ಪ್ರಶಂಸಿಸುವಲ್ಲಿ ಕೆಸಿಆರ್ ಮೊದಲಿಗರಾಗಿದ್ದರು. ವಾಸ್ತವದಲ್ಲಿ, ಜಿಎಸ್‌ಟಿ ಮಸೂದೆಯನ್ನು ಅಂಗೀಕರಿಸುವ ಮೊದಲ ರಾಜ್ಯವಾಗುವಂತೆ ಭಾನುವಾರದಂದು ತೆಲಂಗಾಣ ವಿಧಾನಸಭೆ ಅಧಿವೇಶನ ಕರೆಯಲಾಗಿತ್ತು. ಅವರು ದೇಶದ ಇತರ ಬಿಜೆಪಿ ಮುಖ್ಯಮಂತ್ರಿಗಳಿಗಿಂತ ಹೆಚ್ಚು ಯಜ್ಞ ಮತ್ತು ಧಾರ್ಮಿಕ ಆಚರಣೆಗಳನ್ನು ಆಚರಿಸುವುದರಿಂದ ತಾನೇ ಹೆಚ್ಚಿನ ಹಿಂದೂ ಎಂತಲೂ ಬಹಿರಂಗವಾಗಿ ಘೋಷಿಸಿಕೊಂಡಿದ್ದರು. ತನ್ನ ಮುಖ್ಯಮಂತ್ರಿಯ ಗದ್ದುಗೆಯಲ್ಲಿ ತಾನು ಕೂರುವುಕ್ಕಿಂತ ಮುಂಚೆ ತನ್ನ ಹಿಂದೂ ಗುರುವನ್ನು ಕೂರಿಸುವ ಆಚರಣೆ ಮೆರೆದಿದ್ದರು.

ಕೆಸಿಆರ್ ಅವರ ಆಡಳಿತದಲ್ಲಿ ಜಾತಿ ವಿಭಜನೆಗಳು, ತಾರತಮ್ಯಗಳು ಮತ್ತು ದಬ್ಬಾಳಿಕೆಗಳು ಹಿಂದೆಂದೂ ಕಾಣದ ಪ್ರಮಾಣದಲ್ಲಿ ಹೆಚ್ಚಳ ಕಂಡಿವೆ ಹಾಗೂ ದುಷ್ಕರ್ಮಿಗಳ ವಿರುದ್ಧ ಯಾವುದೇ ಅಧಿಕೃತ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಹಿಂದುತ್ವದ ಬಗೆಗೆ ’ರಾಜನಿಗಿಂತ ಹೆಚ್ಚು ನಿಷ್ಠಾವಂತ’ ಎಂಬ ಧೋರಣೆಯಲ್ಲದೆ, ನೀರು, ಉದ್ಯೋಗ ಮತ್ತು ಹಣಕಾಸು ಹಂಚಿಕೆಯ ವಿಚಾರದಲ್ಲಿ ಆಕಾಂಕ್ಷೆಗಳನ್ನು ಹೊಂದಿದ, ಅದಕ್ಕಾಗಿ ಪ್ರತ್ಯೇಕ ತೆಲಂಗಾಣಕ್ಕಾಗಿ ಹೋರಾಟ ಮಾಡಿದ ಜನರನ್ನೂ, ಅವರ ಆಕಾಂಕ್ಷೆಗಳನ್ನೂ ಹತ್ತಿಕ್ಕಿದ್ದಾರೆ. ಅದರಲ್ಲೂ, ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ಕೆಸಿಆರ್ ಅವರ ಧೋರಣೆಯಿಂದ ಶಿಕ್ಷಿತ, ನಿರುದ್ಯೋಗಿ ಯುವಜನರು ಬೇಸತ್ತಿದ್ದಾರೆ.

ಚುನಾವಣೆಗಳು ಸ್ಥಳೀಯ ನಗರಸಭೆ ಚುನಾವಣೆಗಳಾಗಿದ್ದರೂ, ನೀರು, ರಸ್ತೆ, ಸಾರಿಗೆ, ವಿದ್ಯುತ್ ಮತ್ತು ಒಳಚರಂಡಿ ಮುಂತಾದ ವಿಷಯಗಳ ಬಗ್ಗೆ ಹೆಚ್ಚಿನ ಚರ್ಚೆಯಾಗದೆ, ಅವುಗಳು ಪ್ರಧಾನ ಅಂಶಗಳಾಗದೇ, ಕೋಮುವಾದದ ಸುತ್ತಲೇ ಪ್ರಚಾರ ನಡೆಯಿತು. ಅದರಿಂದ ಅತ್ಯಂತ ಅಪಾಯಕಾರಿ ಪರಿಣಾಮಗಳಿಗೆ ಎಡೆ ಮಾಡಿ ಕೊಟ್ಟಂತಾಯಿತು. ಹೈದರಾಬಾದ್‌ಗೆ ಹಿಂದುತ್ವ ಶಕ್ತಿಗಳ ಪ್ರವೇಶವನ್ನು ಒಂದು ಸೂಚನೆ ಎಂದು ಪರಿಗಣಿಸಿದರೆ, ಹೈದರಾಬಾದ್ ಮಾತ್ರವಲ್ಲದೆ ತೆಲಂಗಾಣದ ಭವಿಷ್ಯದ ಬಗ್ಗೆಯೂ ಆತಂಕ ಹುಟ್ಟಿಸುವಂತಿದೆ.

  • ಎನ್ ವೇಣುಗೋಪಾಲ್

ಅವಿಭಜಿತ ಆಂಧ್ರಪ್ರದೇಶದ ಸಾಂಸ್ಕೃತಿಕ ಲೋಕದ ವಿಶಿಷ್ಟ ಸಂಘಟನೆ ವಿರಸಂನ (ಕ್ರಾಂತಿಕಾರಿ ಬರಹಗಾರರ ಸಂಘ) ಸಕ್ರಿಯ ಸದಸ್ಯರಾಗಿದ್ದ ವೇಣುಗೋಪಾಲ್ ತಮ್ಮ ವಿಶ್ಲೇಷಣಾ ಬರಹಗಳಿಗೆ ಖ್ಯಾತರು. ವೀಕ್ಷಣಂ ಪತ್ರಿಕೆಯ ಸಂಪಾದಕರಾಗಿ ಅವರು ರೂಪಿಸುತ್ತಿರುವ ಚಿಂತನೆ ಗಮನಾರ್ಹವಾದುದು.

ಅನುವಾದ: ರಾಜಶೇಖರ ಅಕ್ಕಿ


ಇದನ್ನೂ ಓದಿ: ಹೈದರಾಬಾದ್ ಪಾಲಿಕೆ ಚುನಾವಣೆ: TRS-BJP ನಡುವಿನ ಮತಗಳ ವ್ಯತ್ಯಾಸ ಕೇವಲ 11,000!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...