Homeರಾಜಕೀಯಕಾರ್ಪೊರೇಟ್ ತೆರಿಗೆ ಕಳ್ಳರು!!

ಕಾರ್ಪೊರೇಟ್ ತೆರಿಗೆ ಕಳ್ಳರು!!

- Advertisement -
- Advertisement -

ತೆರಿಗೆ ವ್ಯವಹಾರದ ವಿವರಗಳಿಗೆ ಹೋಗುವ ಮುನ್ನ ಒಂದು ವಿಶೇಷ ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇಲ್ಲಿಗೆ ಕೆಲವು ವರ್ಷಗಳ ಹಿಂದೆ ಕೊಲ್ಕತ್ತಾ ಮಹಾನಗರದ ಜನನಿಬಿಡ ಚೌರಂಘೀ ಪ್ರದೇಶದ ಮುಖ್ಯರಸ್ತೆಯಲ್ಲಿ ಒಂದು ಸಿನಿಮೀಯ ಘಟನೆ ನಡೆಯಿತು. ಅಲ್ಲಿ ನಾನಾ ಕಾರ್ಪೊರೇಟ್ ಕಂಪನಿಗಳು ನೆಲೆಸಿರುವ ಒಂದು ಕಛೇರಿ ಸಂಕೀರ್ಣವಿದೆ. ಅಂದು ಬೆಳಿಗ್ಗೆ 10ರ ಸುಮಾರಿನಲ್ಲಿ ಆ ರಸ್ತೆಯಲ್ಲಿ ಸಾಗುತ್ತಿದ್ದ ದಾರಿಹೋಕರಿಗೆ ಅದೃಷ್ಟ ದೇವತೆ ಒಲಿದು ಬಂದಿತ್ತು. ಆ ಕಚೇರಿ ಸಂಕೀರ್ಣದ ಮಹಡಿಯ ಕಿಟಕಿಗಳಿಂದ ನೋಟಿನ ಕಂತೆಗಳು ಉದುರತೊಡಗಿದವು. ಆಶ್ಚರ್ಯಭರಿತರಾದ ಮಂದಿ ಕೈಗೆ ಸಿಕ್ಕಷ್ಟು ಬಾಚಿಕೊಳ್ಳತೊಡಗಿದರು. ಬಾಚಿದಷ್ಟೂ ನೋಟುಗಳು ಉದುರುತ್ತಲೇ ಇದ್ದವು. ಪರಿಣಾಮವಾಗಿ ನೂಕುನುಗ್ಗಲು ಉಂಟಾಯ್ತು.

ಕೊನೆಗೆ ಪೊಲೀಸ್ ಪಡೆಯನ್ನು ರವಾನಿಸಿ ಜನಜಂಗುಳಿಯನ್ನು ನಿಯಂತ್ರಿಸಿ, ನೋಟು ಉದುರುತ್ತಿದ್ದ ಪ್ರದೇಶವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಪೊಲೀಸರ ಪ್ರವೇಶವಾಗುವ ಮೊದಲೇ ನೋಟಿನ ಕಂತೆಗಳನ್ನು ಬಾಚಿಕೊಂಡಿದ್ದ ಅದೃಷ್ಟಶಾಲಿಗಳು ಅಲ್ಲಿಂದ ಪೇರಿ ಕಿತ್ತಿದ್ದರು.

ಅಂದು ನಡೆದದ್ದಿಷ್ಟು. ಸುಳ್ಳು ಲೆಕ್ಕಗಳ ಮೂಲಕ ತೆರಿಗೆ ವಂಚಿಸಿ ಲೆಕ್ಕಕ್ಕೆ ಸಿಗದ ಕೋಟಿಗಟ್ಟಲೆ ಹಣವನ್ನು ತಮ್ಮ ಕಚೇರಿಗಳಲ್ಲಿ ದಾಸ್ತಾನು ಮಾಡಿಕೊಂಡಿದ್ದರು. ಆ ಖಚಿತ ಮಾಹಿತಿ ಮೇರೆಗೆ ಆದಾಯ ತೆರಿಗೆ ಅಧಿಕಾರಿಗಳ ತಂಡ ಆ ಕಚೇರಿ ಸಂಕೀರ್ಣಕ್ಕೆ ದಾಳಿಯಿಟ್ಟಿತ್ತು. ಹೇಗೂ ಕಳ್ಳ ಹಣವನ್ನು ಕಳೆದುಕೊಳ್ಳಲೇಬೇಕು. ಕ್ರಿಮಿನಲ್ ಕೇಸಿನಿಂದಾದರೂ ತಪ್ಪಿಸಿಕೊಳ್ಳೋಣವೆಂದು ಆ ಕಂಪನಿಯ ಅಧಿಕಾರಿಗಳು ನೋಟಿನ ಕಂತೆಗಳನ್ನು ಕಿಟಕಿಯಿಂದ ತೂರಿದ್ದರು.

ತೆರಿಗೆ ವಂಚನೆಯ ಮಹಾಸಾಗರದಲ್ಲಿ ಮೇಲಿನ ಘಟನೆ ಕೇವಲ ಒಂದು ಹನಿಯಷ್ಟೆ. ಇಡೀ ದೇಶದ ಗಮನ ಸೆಳೆದಿದ್ದ ಈ ವಿಲಕ್ಷಣ ಕೇಸಿನಲ್ಲಿ ಇದುವರೆಗೆ ಯಾರಿಗಾದರೂ ಶಿಕ್ಷೆಯಾದ ಸುಳಿವೇ ಇಲ್ಲ. ಇದು ಈ ದೇಶದ ಜಾಯಮಾನ.

ಅಭಿವೃದ್ಧಿ ಯೋಜನೆಗಳು ಕಾರ್ಯಗತವಾಗಬೇಕಾದರೆ ಸರ್ಕಾರದ ಬೊಕ್ಕಸ ಸದೃಡವಾಗಿರಬೇಕು. ಬೊಕ್ಕಸ ಸದೃಡವಾಗಿರಬೇಕೆಂದರೆ ದೇಶದಲ್ಲಿ ತೆರಿಗೆ ಸಂಗ್ರಹ ಸಮರ್ಪಕವಾಗಿರಬೇಕು. ದೇಶದಲ್ಲಿ ವಹಿವಾಟು ನಡೆಸಿ ಲಾಭ ಮಾಡಿಕೊಳ್ಳುವ ಕಂಪನಿಗಳಿಂದ ಹಾಗೂ ವ್ಯಕ್ತಿಗಳಿಂದ ತೆರಿಗೆ ಸಂಗ್ರಹ ಮಾಡುವ ವ್ಯವಸ್ಥೆಯನ್ನು ರೂಪಿಸಿರುವುದು ಈ ಕಾರಣಕ್ಕಾಗಿಯೇ.

ಈ ತೆರಿಗೆಯ ವಿಚಾರಕ್ಕೆ ಸಂಬಂಧಿಸಿದಂತೆ ಜನಸಾಮಾನ್ಯರಲ್ಲಿ ಭಾರೀ ಮೂಢನಂಬಿಕೆಯೊಂದಿದೆ. ದೊಡ್ಡ ದೊಡ್ಡ ಕಂಪನಿಗಳು ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆಯನ್ನು ಬಹಳ ಶ್ರದ್ಧೆ ಮತ್ತು ಶಿಸ್ತಿನಿಂದ ಕಟ್ಟುತ್ತಾರೆ ಎಂಬುದು ಒಂದು ರೀತಿಯ ಆಧುನಿಕ ಮೂಢನಂಬಿಕೆ. ಆದರೆ ವಸ್ತುಸ್ಥಿತಿ ಬೇರೆಯೇ ಇದೆ.

ಇತ್ತೀಚೆಗೆ ಹಣಕಾಸು ಸಚಿವಾಲಯ ಹೊರಡಿಸಿರುವ ಅಂಕಿ ಸಂಖ್ಯೆಗಳು ಒಂದು ಅಂಶವನ್ನು ವಿವಾದಕ್ಕೆಡೆಯಿಲ್ಲದಂತೆ ರುಜುವಾತು ಪಡಿಸಿವೆ. ಏನೆಂದರೆ ಬಿಡಿಬಿಡಿ ವ್ಯಕ್ತಿಗಳಿಂದ ವಸೂಲಿ ಮಾಡುತ್ತಿರುವ ತೆರಿಗೆಯ ಪ್ರಮಾಣದ ದರಕ್ಕಿಂತಲೂ ಕಾರ್ಪೊರೇಟ್ ಕಂಪನಿಗಳಿಂದ ವಸೂಲಿಯಾಗುತ್ತಿರುವ ತೆರಿಗೆಯ ದರ ಭಾರೀ ಹಿಂದುಳಿದಿದೆ.

ಕೇಂದ್ರದ ಹಣಕಾಸು ಸಚಿವಾಲಯದ ಪ್ರಕಾರ 2013-14ನೇ ಆರ್ಥಿಕ ವರ್ಷದಲ್ಲಿ ವ್ಯಕ್ತಿಗತ ಕಾರ್ಪೊರೇಟ್ ತೆರಿಗೆಯ ಬೆಳವಣಿಗೆ ಶೇಕಡ 20.51ರಷ್ಟು ಏರಿಕೆ ಕಂಡಿದೆ. ಆದರೆ ಇದೇ ಅವಧಿಯಲ್ಲಿ ಕಾರ್ಪೊರೇಟ್ ತೆರಿಗೆ ಸಂಗ್ರಹದ ಬೆಳವಣಿಗೆಯ ದರ ಕೇವಲ 10.76ರಷ್ಟು. ಅಂದರೆ ವ್ಯಕ್ತಿಗತ ತೆರಿಗೆಯ ದರದ ಅರ್ಧಕ್ಕೆ ಕುಸಿದಿದೆ.

ಹಾಗೆ ನೋಡಿದರೆ ಒಟ್ಟು ರಾಷ್ಟ್ರೀಯ ಉತ್ಪನ್ನ(ಜಿಡಿಪಿ)ದ ಅಭಿವೃದ್ಧಿ ದರ ಶೇಕಡ 12.3 ಎಂದು ಅಂದಾಜಿಸಲಾಗಿದ್ದು ಕಾರ್ಪೊರೇಟ್‍ಗಳು ಪಾವತಿಸಿದ ತೆರಿಗೆ ಜಿಡಿಪಿಗಿಂತಲೂ ಹಿಂದುಳಿದಿದೆ.

ದಿನಬೆಳಗಾದರೆ ಮಾದ್ಯಮಗಳಲ್ಲಿ ಭಾರತದ ಕಂಪನಿಗಳು ಸಾವಿರಾರು ಕೋಟಿ ಲಾಭ ಮಾಡಿರುವ ಸುದ್ದಿಗಳ ಮಹಾಪೂರವೇ ಹರಿಯುತ್ತಿದೆ. ಅಂಬಾನಿ, ಟಾಟಾ, ಬಿರ್ಲಾ, ಅದಾನಿ, ಎಸ್ಸಾರ್, ಜಿಂದಾಲ್ ಮುಂತಾದ ಕಂಪನಿಗಳ ಬಂಡವಾಳ ದ್ವಿಗುಣಗೊಳ್ಳುತ್ತಾ ಸಾಗುತ್ತಿದೆ. ‘ನಮ್ಮ’ ಕಂಪನಿಗಳು ವಿದೇಶೀ ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡ ಸುದ್ದಿಗಳು, ಭಾರೀ ಗುತ್ತಿಗೆಗಳನ್ನು ಗಿಟ್ಟಿಸಿಕೊಂಡ ಸುದ್ದಿಗಳನ್ನು ಬಿತ್ತರಿಸಿ ಮಾದ್ಯಮಗಳು ಸಂಭ್ರಮ ಆಚರಿಸುತ್ತವೆ.

ಆಯಾ ಕಂಪನಿ ಅಥವ ವ್ಯಕ್ತಿ ಗಳಿಸುವ ಆದಾಯಕ್ಕೆ ಅನುಗುಣವಾಗಿ ತೆರಿಗೆ ಸಂಗ್ರಹ ನೀತಿಯಿರಬೇಕೆಂಬುದು ಕಾಮನ್‍ಸೆನ್ಸ್‍ನ ಸಂಗತಿ. ಆದರೆ ಅನಾದಿಯಿಂದಲೂ ಭಾರತದ ನೀತಿ ಎಲ್ಲ ಕಾಮನ್‍ಸೆನ್ಸ್‍ಗಳಿಗೂ  ತದ್ವಿರುದ್ಧ.

ವ್ಯಕ್ತಿಗತ ತೆರಿಗೆದಾರರು ಹಾಗೂ ಕಾರ್ಪೊರೇಟ್ ಕಂಪನಿಗಳಿಗೆ ತೆರಿಗೆ ವಿಧಿಸುವಾಗ ನಮ್ಮ ದೇಶದಲ್ಲಿ ವಿಭಿನ್ನ ಮಾನದಂಡಗಳನ್ನು ಅಳವಡಿಸಲಾಗುತ್ತಿದೆ. ವ್ಯಕ್ತಿಗತ ತೆರಿಗೆಗಳ ಬಹುಪಾಲು ವೇತನಗಳಿಂದ ಸಂಗ್ರಹವಾಗುವಂಥದ್ದು. ಈ ತೆರಿಗೆಯನ್ನು ಸಂಬಳ ವಿತರಣೆಯಾಗುವ ಹಂತದಲ್ಲೇ ಕಡಿತಗೊಳಿಸಿ ಸರ್ಕಾರದ ಬೊಕ್ಕಸಕ್ಕೆ ಸೇರಿಸಲಾಗುತ್ತದೆ.

ಆದರೆ ಕಾರ್ಪೊರೇಟ್ ತೆರಿಗೆಗಳ ಸಂಗತಿ ಹಾಗಲ್ಲ. ಈ ತೆರಿಗೆ ಪಾವತಿಸುವ ಸ್ವಾತಂತ್ರ್ಯ ಕಂಪನಿಗಳದ್ದೇ. ಎಲ್ಲ ರೀತಿಯ ಖರ್ಚುವೆಚ್ಚಗಳನ್ನು ಕಳೆದು ಬರುವ ನಿವ್ವಳ ಲಾಭದಲ್ಲಿ ಇಂತಿಷ್ಟು ಶೇಕಡ ತೆರಿಗೆ ಪಾವತಿಸಿದರೆ ಮುಗಿದಂತೆ.

ಈ ನೆಲದ ಸಂಪನ್ಮೂಲ, ಮಾರುಕಟ್ಟೆ, ಮಾನವ ಶ್ರಮ ಎಲ್ಲವನ್ನೂ ಬಳಸಿಕೊಂಡು ಸಾವಿರಾರು ಕೋಟಿಗಳನ್ನು ಬಾಚಿಕೊಳ್ಳುತ್ತಿರುವ ಕಾರ್ಪೊರೇಟ್ ಧಣಿಗಳಿಗೆ, ಇದಕ್ಕೆ ಪ್ರತಿಯಾಗಿ ಕನಿಷ್ಟ ಪ್ರಮಾಣದ ತೆರಿಗೆ ಕಟ್ಟಬೇಕೆಂದರೂ ಪ್ರಾಣ ಸಂಕಟ. ಹೀಗಾಗಿ ತೆರಿಗೆ ವಂಚಿಸಲು ನಾನಾ ಕಳ್ಳ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಕಂಪನಿ ತೆರಿಗೆ ವಂಚನೆಯ ಬಗ್ಗೆ ಅಧ್ಯಯನ ನಡೆಸಿರುವ ತಜ್ಞರು ಹೇಳುವ ಪ್ರಕಾರ ಕಾರ್ಪೊರೇಟ್ ಕಂಪನಿಗಳು ತೆರಿಗೆ ವಂಚಿಸಲು ಹಲವು ವಾಮ ಮಾರ್ಗಗಳನ್ನು ಅನುಸರಿಸಿತ್ತಿದ್ದಾರೆ.

1) ಲೆಕ್ಕಪತ್ರದಲ್ಲಿ ವೆಚ್ಚಗಳನ್ನು ಅತಿಯಾಗಿ ತೋರಿಸುವ ಮೂಲಕ ಲಾಭದ ಪ್ರಮಾಣವನ್ನು ಕಡಿಮೆ ತೋರಿಸುವುದು

2) ಮಾರಾಟ ಇತ್ಯಾದಿಗಳ ಮೂಲಕ ತಮಗೆ ಬರುವ ಆದಾಯದ ಮೊತ್ತವವನ್ನು ಕಡಿಮೆ ದಾಖಲಿಸುವುದು

3) ದಾಸ್ತಾನು ಮೌಲ್ಯವನ್ನು ಕಡಿತಗೊಳಿಸುವುದು

4) ತಮ್ಮ ಆದಾಯವನ್ನು ರಿಯಲ್ ಎಸ್ಟೇಟ್, ಷೇರು ಮಾರುಕಟ್ಟೆ ಮುಂತಾದವುಗಳಲ್ಲಿ ತೊಡಗಿಸಿ ಯಂತ್ರಗಳ ಖರೀದಿಯೆಂದೋ. ರಿಪೇರಿಯೆಂದೋ ಲೆಕ್ಕ ತೋರಿಸುವುದು ಇತ್ಯಾದಿ ತಂತ್ರಗಳ ಬಳಕೆ ಭಾರತದ ಕಂಪನಿ ವಲಯದಲ್ಲಿ ವ್ಯಾಪಕವಾಗಿದೆ.

ಕೆಲವು ಉದಾಹರಣೆಗಳನ್ನು ನೋಡೋಣ.

ಪ್ರದಾನಿ ನರೇಂದ್ರ ಮೋದಿಯ ಅತ್ಯಂತ ಆಪ್ತವಲಯದಲ್ಲಿರುವ ಉದ್ಯಮಿಗಳಲ್ಲಿ ಗೌತಮ್ ಅದಾನಿಯೂ ಒಬ್ಬ. ಈತ ಕಳೆದ ತಿಂಗಳು ನಮ್ಮ ಉಡುಪಿ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವೊಂದನ್ನು 6000 ಕೋಟಿಗಳಿಗೆ ಖರೀದಿಸಿ ಕರ್ನಾಟಕದಲ್ಲೂ ಸುದ್ದಿ ಮಾಡಿದ್ದ. ಹೀಗೆ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳ ಕೂಟದೊಂದಿಗೆ ಶಾಮೀಲಾಗಿ ದೇಶ ವಿದೇಶಗಳಲ್ಲಿ ತಮ್ಮ ಸಾಮ್ರಾಜ್ಯ ವಿಸ್ತರಿಸುತ್ತಿರುವ ಈ ಆಸಾಮಿ ತೆರಿಗೆ ವಂಚಿಸಿರುವ ಪ್ರಕರಣಗಳಿಗೆ ಲೆಕ್ಕವಿಲ್ಲ. ತೀರಾ ಇತ್ತೀಚಿಗೆ ಸುಮಾರು 600 ಕೋಟಿ ಮೊತ್ತದ ಸುಳ್ಳು ಇನ್‍ವಾಯ್ಸ್ ಸೃಷ್ಟಿಯ ಪ್ರಕರಣದಲ್ಲಿ ಸಿಬಿಐ ನೋಟೀಸ್ ಜಾರಿ ಮಾಡಿ, ತನಿಖೆ ಆರಂಭಿಸಿದೆ. ತಮ್ಮದೇ ಬೇನಾಮಿ ಕಂಪನಿಗೆ ಲಾಭದ ಹಣ ವರ್ಗಾವಣೆ ಮಾಡಿ, ಬೇರೊಂದು ಮಾರ್ಗದಲ್ಲಿ ಮರುಹೂಡಿಕೆ ಮಾಡುವ ಭಾರೀ ಷಡ್ಯಂತ್ರವೇ ಇದರ ಹಿಂದಿದೆ ಎಂಬುದು ಸಿಬಿಐನ ಗುಮಾನಿ.ಸ

ಅದಾನಿ ಗ್ರೂಪ್‍ನ ಈ ಅಕ್ರಮ ಪತ್ತೆಯಾದ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ 11ನೇ ತಾರೀಕು ಸಿಬಿಐ  ನಿರ್ದೇಶಕರಾಗಿರುವ ರಂಜಿತ್ ಸಿನ್ಹಾ ಹಣಕಾಸು ಸಚಿವ ಅರುಣ್ ಜೈಟ್ಲಿಯವರಿಗೆ ಈ ಬಗ್ಗೆ ಒಂದು ಪತ್ರ ಬರೆದಿದ್ದಾರೆ. ಸಿನ್ಹಾ ಪ್ರಕಾರ ಇದು ಕೇವಲ ಒಂದು ಉದಾಹರಣೆ ಮಾತ್ರವಾಗಿದ್ದು ಇಂಥಾ ಸಾವಿರಾರು ಪ್ರಕರಣಗಳು ತೆರೆಮರೆಯಲ್ಲಿ ನಡೆಯುತ್ತಲೇ ಇವೆ.

ಮತ್ತೊಂದು ಉದಾಹರಣೆ ನೋಡಿ. 2013ರ ಆಗಸ್ಟ್ ತಿಂಗಳಿನಲ್ಲಿ  ನಡೆದ ಘಟನೆಯಿದು. ಕಲ್ಲಿದ್ದಲು ಹಂಚಿಕೆಯ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ತಂಡ ಹಿಂಡಾಲ್ಕೋ ಕಂಪನಿಯ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿತು. ರಹಸ್ಯ ಸಂಕೇತಗಳಲ್ಲಿ ನಮೂದಾಗಿದ್ದ ಹಣ ಪಾವತಿ ವಿವರದಲ್ಲಿ ಬಿರ್ಲಾ ಸಮೂಹಕ್ಕೆ 25 ಕೋಟಿ ಹಣ ಪಾವತಿಯಾದ ಬಗ್ಗೆ ವಿವರಗಳು ಲಭ್ಯವಾದವು. ಇದರ ಜಾಡನ್ನು ಹಿಡಿದು ನವದೆಹಲಿಯಲ್ಲಿರುವ ಬಿರ್ಲಾ ಸಮೂಹದ ಕಚೇರಿಗೆ ದಾಳಿ ನಡೆಸಿದಾಗ ಯಾವುದೇ ಲೆಕ್ಕ ಪತ್ರವಿಲ್ಲದ 25 ಕೋಟಿ ಮೊತ್ತ ಪತ್ತೆಯಾಗಿತ್ತು. ಅಷ್ಟು ಮಾತ್ರವಲ್ಲ; ಸರಿಯಾಗಿ ಇದೇ ಅವಧಿಯಲ್ಲಿ ಬಿರ್ಲಾ ಒಡೆತನದ ಬಿರ್ಲಾ ಟ್ರಸ್ಟ್‍ನಿಂದ ನೂರಾರು ಸಂಸದರು ಹಾಗೂ ಇತರ ರಾಜಕಾರಣಿಗಳಿಗೆ ಹಣ ಸಂದಾಯವಾಗಿರುವ ವಿವರಗಳೂ ಬಯಲಾಗಿತ್ತು. ನಂತರದ ಬೆಳವಣಿಗೆಗಳು ಎಲ್ಲ ನಿಗೂಡ.

ಕಾರ್ಪೊರೇಟ್ ಕಂಪನಿಗಳು ತೆರಿಗೆ ವಿನಾಯಿತಿಯಿರುವ ವಿದೇಶಿ ನೆಲದಲ್ಲಿ ತಮ್ಮದೇ ಪ್ರಾಕ್ಸಿ ಕಂಪನಿಗಳನ್ನು ಸ್ಥಾಪಿಸಿ ನಾನಾ ಕಳ್ಳ ಮಾರ್ಗಗಳ ಮೂಲಕ ತಮ್ಮ ಲಾಭವನ್ನು ವಿದೇಶಕ್ಕೆ ಸಾಗಿಸುವ ದೇಶದ್ರೋಹಿ ಕೃತ್ಯಗಳಲ್ಲಿ ಹಲವಾರು ಪ್ರಮುಖ ಕಂಪನಿಗಳೇ ತೊಡಗಿಸಿಕೊಂಡಿವೆ. ಇದನ್ನು ‘ರೌಂಡ್ ಟ್ರಿಪ್ಪಿಂಗ್’ ಎಂದು ಕರೆಯಲಾಗುತ್ತದೆ. ಈ ವಿಷಯದಲ್ಲಿ ಆದಾಯ ತೆರಿಗೆ ಇಲಾಖೆಯ ಭ್ರಷ್ಟ ಅಧಿಕಾರಿಗಳು ಕಂಪನಿಗಳೊಂದಿಗೆ ಕೈಜೋಡಿಸಿರುವುದು ಮಾಮೂಲಿ.

ನಮ್ಮಲ್ಲಿ ತೆರಿಗೆ ವಸೂಲಿಗೆ ದಕ್ಷ ಹಾಗೂ ಪ್ರಾಮಾಣಿಕ ಪ್ರಯತ್ನಗಳು ತೀರಾ ಅಪರೂಪ. ಒಂದುವೇಳೆ ಅಂಥದ್ದೇನಾದರೂ ನಡೆದ ಪಕ್ಷದಲ್ಲಿ ಅಂಥವುಗಳನ್ನು ಪ್ರಶ್ನಿಸಿ ಇಂಕಮ್ ಟ್ಯಾಕ್ಸ್ ಟ್ರಿಬ್ಯೂನಲ್‍ಗಳ ಮೊರೆ ಹೋಗುವ ವ್ಯವಸ್ಥೆಯೂ ಇಲ್ಲಿದೆ. ಹೀಗೆ ಆದಾಯ ತೆರಿಗೆ ದಾಳಿಯ ಕೇಸುಗಳಲ್ಲಿ ಕೋಟಿಗಟ್ಟಲೆ ಹಣ, ವಡವೆ ಇತ್ಯಾದಿಗಳನ್ನು ವಶಪಡಿಸಿಕೊಂಡರೂ ಅಂತಿಮ ಪರಿಣಾಮ ತಿಳಿದದ್ದೇ.

ಅರುಣ್ ಜೈಟ್ಲಿಯಾಗಲಿ, ನರೇಂದ್ರ ಮೋದಿಯಾಗಲಿ ಇಂಥಾ ಪ್ರಕರಣಗಳನ್ನು ತಡೆಗಟ್ಟುತ್ತಾರೆ ಎಂದು ನಿರೀಕ್ಷೆ ಮಾಡುವುದು ಮೂರ್ಖತನ. ಯಾಕೆಂದರೆ ಈ ಬಾರಿ ಅವರ ಪಕ್ಷ ಭಾರೀ ಬಹುಮತದಿಂದ ಗೆದ್ದು ಬಂದಿದ್ದೇ ಅಂಬಾನಿ, ಅದಾನಿಯಂಥ ಕಾರ್ಪೊರೇಟ್ ಕುಳಗಳ ಬೆಂಬಲದಿಂದ ಎಂಬುದು ಈಗ ಬಹಿರಂಗ ಸತ್ಯ.

 

ಒಂದೆಡೆ ಕಾರ್ಪೊರೇಟ್ ಕಂಪನಿಗಳು ಪ್ರತಿ ತ್ರೈಮಾಸಿಕದಲ್ಲಿ ಸಾವಿರಾರು ಕೋಟಿಗಳ ಲಾಭವನ್ನು ಬಾಚುತ್ತಿದ್ದರೆ ಮತ್ತೊಂದೆಡೆ ದಿನಬಳಕೆ ವಸ್ತುಗಳ ಬೆಲೆ ತಾರಕಕ್ಕೇರಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ.

ಕಾರ್ಪೊರೇಟ್ ಕಂಪನಿಗಳಿಗೆ ಕೆಂಪುಹಾಸು ಹಾಸುವ ಸರ್ಕಾರಗಳು ಜನಸಾಮಾನ್ಯರಿಂದ ತೆರಿಗೆ ವಸೂಲಿ ಮಾಡುವ ವಿಷಯದಲ್ಲಿ ಮಾತ್ರ ನೇರ ಮತ್ತು ನಿಷ್ಟುರ.  ಸರ್ಕಾರಗಳ ನೇರ ನಿಯಂತ್ರಣದಲ್ಲಿರುವ ರೈಲು ದರ, ಪೆಟ್ರೋಲ್-ಡೀಸೆಲ್ ದರ, ವಿದ್ಯುತ್ ದರ, ಬಸ್ ದರ, ನೀರಿನ ದರ ಎಲ್ಲವೂ ಯದ್ವಾತದ್ವ ಏರುತ್ತಲೇ ಇವೆ. ಆಹಾರ ಪದಾರ್ಥ, ತರಕಾರಿಗಳ ಬೆಲೆಯಂತೂ ಯಾವುದೇ ಅಂಕೆಗೆ ಸಿಗುತ್ತಿಲ್ಲ. ಉದಾಹರಣೆಗೆ ವರ್ಷಕ್ಕೆ 3 ಲಕ್ಷಕ್ಕಿಂತ ಹೆಚ್ಚಿನ ವೇತನ ಪಡೆಯುವ ಸರ್ಕಾರಿ ಅಥವ ಖಾಸಗಿ ನೌಕರರ ಸಂಬಳದಿಂದಲೇ ನೇರವಾಗಿ ತೆರಿಗೆಯನ್ನು ಕಡಿತಗೊಳಿಸಿ ಸರ್ಕಾರದ ಬೊಕ್ಕಸ ಸೇರಿಸಲಾಗುತ್ತದೆ. ಬೆಲೆಯೇರಿಕೆ, ರೋಗ ರುಜಿನ ಮುಂತಾದ ವ್ಯಕ್ತಿಗತ ಸಮಸ್ಯೆಗಳು ಏನೇ ಇದ್ದರೂ, ಬದುಕು ದುಸ್ತರವಾಗಿದ್ದರೂ ತೆರಿಗೆ ಮೊತ್ತ ಮಾತ್ರ ಕಡಿಮೆಯಾಗುವುದಿಲ್ಲ.

ನಮ್ಮಲ್ಲಿ ನಿಜಕ್ಕೂ ಪ್ರಜೆಗಳ ಪರವಾದ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದ್ದಿದ್ದರೆ ತೆರಿಗೆ ಸಂಗ್ರಹಣೆಯ ದರದಲ್ಲಿ ಜನಸಾಮಾನ್ಯರ ತೆರಿಗೆಗಳಿಗೆ ವಿನಾಯಿತಿ ನೀಡಿ ಕಾರ್ಪೊರೇಟ್ ತೆರಿಗೆ ಹೆಚ್ಚಾಗಬೇಕಿತ್ತು. ಆದರೆ ದೇಶದ ರಾಜಕೀಯದಲ್ಲಿ ದಿನೇದಿನೇ ಕಾರ್ಪೊರೇಟ್ ಕಂಪನಿಗಳ ಹಿಡಿತ ಹೆಚ್ಚುತ್ತಲೇ ಸಾಗಿದೆ.

ಕಳೆದ ಸಾಲಿನಲ್ಲಿ ಹಾಕಿಕೊಂಡ ಕಾರ್ಪೊರೇಟ್ ತೆರಿಗೆ ಸಂಗ್ರಹದ ಗುರಿ 4,20,000 ಕೋಟಿಗಳು. ಸರ್ಕಾರಗಳಿಗೆ ತಾವೇ ಹಾಕಿಕೊಂಡ ಗುರಿಯನ್ನೂ ಮುಟ್ಟುವ ಇಚ್ಚಾಶಕ್ತಿಯಿಲ್ಲದೆ 27,000 ಕೋಟಿಗಳಷ್ಟು ಹಿಂದೆ ಬಿದ್ದಿದ್ದಾರೆ.

ನಮ್ಮ ರಾಜಕೀಯ ವ್ಯವಸ್ಥೆ ಔದ್ಯಮಿಕ ವಾತಾವರಣವನ್ನು ಉತ್ತೇಜಿಸುವ ಹೆಸರಿನಲ್ಲಿ ಕಾರ್ಪೊರೇಟ್ ಕಂಪನಿಗಳ ಲೂಟಿಗೆ ದಿಡ್ಡಿ ಬಾಗಿಲು ತೆರಿದಿಟ್ಟು, ಅವುಗಳ ಯಾವುದೇ ಅಕ್ರಮದ ವಿರುದ್ಧ ಚಕಾರವನ್ನೂ ಎತ್ತದ ದೈನೇಸಿ ಸ್ಥಿತಿ ತಲುಪಿದೆ.

ಹೀಗೇ ನಾನಾ ವಾಮ ಮಾರ್ಗಗಳ ಮೂಲಕ ಸಂಪತ್ತನ್ನು ರಾಶಿ ಹಾಕಿಕೊಳ್ಳುವ ಕಂಪನಿ ಧಣಿಗಳು ಅದನ್ನು ಷೇರು ಮಾರುಕಟ್ಟೆಯಲ್ಲೋ ಬೇನಾಮಿ ಹೆಸರಿನ ಕಂಪನಿಗಳಲ್ಲೋ ತೊಡಗಿಸುತ್ತಾರೆ. ಅಥವ ಹತ್ತಾರು ಕಳ್ಳದಾರಿಗಳ ಮೂಲಕ ವಿದೇಶಗಳಲ್ಲಿ ಹೂಡಿಕೆ ಮಾಡುತ್ತಾರೆ ಅಥವ ಬಚ್ಚಿಡುತ್ತಾರೆ.

ಫೋಬ್ರ್ಸ್ ಶ್ರೀಮಂತರ ಪಟ್ಟಿಗೆ ಹೆಚ್ಚುಹೆಚ್ಚು ಸೇರ್ಪಡೆಯಾಗುತ್ತಿರುವ ಧಣಿಗಳ ಬಗ್ಗೆ ಭಾರತದ ಮಾದ್ಯಮಗಳು ಪರಾಕು ಹಾಕುತ್ತಿವೆ. ಅದೇ ಸಂದರ್ಭದಲ್ಲಿ ಬಡವರಿಗೆ ನೀಡಲಾಗುತ್ತಿರುವ ಹುಳುಕು ಅಕ್ಕಿಯ ಬಗ್ಗೆ ಉಗ್ರವಾಗಿ ಟೀಕಿಸುತ್ತಿವೆ.

ಸದ್ಯದಲ್ಲೇ ಭಾರತ ಎಚ್ಚೆತ್ತುಕೊಳ್ಳುತ್ತದೆ ಎಂದು ನಿರೀಕ್ಷಿಸಬಹುದೆ?

 

 

ಬಾಕ್ಸ್-3

ಕಾರ್ಪೊರೇಟ್ ಸ್ವತ್ತಾದ ಸರ್ಕಾರಿ ಬ್ಯಾಂಕುಗಳು

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ(ಂIಃಇಂ) ಕೆಲವು ತಿಂಗಳ ಹಿಂದೆ ಒಂದು ಪಟ್ಟಿ ಬಿಡುಗಡೆ ಮಾಡಿದೆ. ಅದು ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಮರುಪಾವತಿ ಮಾಡದೆ ಸಾವಿರಾರು ಕೋಟಿ ನಷ್ಟ ಉಂಟು ಮಾಡಿರುವ ಹತ್ತು ಭಾರಿ ಕಾರ್ಪೊರೇಟ್ ಕಂಪನಿಗಳ ಪಟ್ಟಿ.

  1. ಕಿಂಗ್‍ಫಿಷರ್ ಏರ್‍ಲೈನ್ಸ್ – 2673 ಕೋಟಿ
  2. ವಿನ್‍ಸಮ್ ಡೈಮಂಡ್ ಅಂಡ್ ಜ್ಯುವೆಲರಿ – 2660 ಕೋಟಿ
  3. ಎಲೆಕ್ಟ್ರೋಥರ್ಮ್ ಇಂಡಿಯಾ ಲಿ. – 2211 ಕೋಟಿ
  4. ಝೂಮ್ ಡೆವಲಪರ್ಸ್ ಪ್ರೈ ಲಿ – 1810 ಕೋಟಿ
  5. ಸ್ಟರ್ಲಿಂಗ್ ಬಯೋ-ಟೆಕ್ ಲಿ – 1732 ಕೋಟಿ
  6. ಎಸ್.ಕುಮಾರ್ಸ್ ನೇಷನ್‍ವೈಡ್ – 1692 ಕೋಟಿ
  7. ಸೂರ್ಯ ವಿನಾಯಕ ಇಂಡಸ್ಟ್ರೀಸ್ – 1446 ಕೋಟಿ
  8. ಕಾರ್ಪೊರೇಟ್ ಇಸ್ಪಾಟ್ ಅಲಾಯ್ಸ್ – 1360 ಕೋಟಿ
  9. ಫಾರ್‍ಎವರ್ ಪ್ರೀಸಿಯಸ್ ಜ್ಯುವೆಲರಿ – 1254 ಕೋಟಿ
  10. ಸ್ಟೆರ್ಲಿಂಗ್ ಆಯಿಲ್ ರಿಸೋರ್ಸಸ್ – 1197 ಕೋಟಿ

 

ವಾಸ್ತವದಲ್ಲಿ ಇಂಥಾ ಒಂದು ಪಟ್ಟಿಯನ್ನು ಬ್ಯಾಂಕುಗಳ ಆಡಳಿತ ಮಂಡಳಿಯೇ ಸಿದ್ದಪಡಿಸಬೇಕಾಗಿತ್ತು. ಆದರೆ ಆ ಬ್ಯಾಂಕುಗಳ ನೌಕರರ ಸಂಘ ಇಂಥದೊಂದು ಪಟ್ಟಿ ಬಿಡುಗಡೆ ಮಾಡಬೇಕಾಗಿ ಬಂದಿದ್ದು ವಿಪರ್ಯಸವೇ ಸರಿ. ಅಂದಹಾಗೆ ಈ ಪಟ್ಟಿಯ ಪ್ರಕಾರ ಕೇವಲ 50 ಕಾರ್ಪೊರೇಟ್ ಗ್ರಾಹಕರು ಬ್ಯಾಂಕುಗಳಿಗೆ 40,000 ಕೋಟಿ ನಷ್ಟವುಂಟು ಮಾಡಿದ್ದಾರೆ.

ಬೆಳೆ ಸಾಲವೆಂದೋ ಬಾವಿ ತೋಡಿಸಲೆಂದೋ ಸಾಲ ಕೇಳಲು ಹೋದ ರೈತರನ್ನು ನಮ್ಮ ಬ್ಯಾಂಕುಗಳು ಯಾವ ರೀತಿ ನಡೆಸಿಕೊಳ್ಳುತ್ತಿವೆ? ಮನೆ ಕಟ್ಟಲಿಕ್ಕೆಂದೋ ಅಥವ ಸಣ್ಣ ಪುಟ್ಟ ವ್ಯಾಪಾರ ಮಾಡಲೆಂದೋ ಸಾಲ ಕೇಳಲು ಹೋಗುವ ಮಧ್ಯಮ ವರ್ಗದವರ ಬಗ್ಗೆ ಬ್ಯಾಂಕಿನ ಅಧಿಕಾರಿಗಳ ಧೋರಣೆ ಹೇಗಿರುತ್ತದೆ? ಒಂದುವೇಳೆ ಸಾಲ ಪಡೆದು ಯಾವುದೇ ಕಾರಣಕ್ಕೆ ಆದನ್ನು ತೀರಿಸಲಾಗದೆ ಹೋದರೆ ಬ್ಯಾಂಕುಗಳು ಯಾವ ರೀತಿಯ ಕ್ರಮಕೈಗೊಳ್ಳುತ್ತವೆ? ಯಾವುದೇ ಮುಲಾಜಿಲ್ಲದೆ ಬಡಪಾಯಿಗಳ ಆಸ್ತಿಯ ಜೊತೆ ಮಾನ ಮರ್ಯಾದೆಯನ್ನೂ ಹರಾಜು ಹಾಕುತ್ತವೆ ತಾನೇ?

ಆದರೆ ಇಂಥಾ ನೀತಿ ಕಾರ್ಪೊರೇಟ್ ಕಂಪನಿಗಳಿಗೆ ಅನ್ವಯಿಸುವುದಿಲ್ಲ. ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಸಾವಿರಾರು ಕೋಟಿಗಳನ್ನು ಅವರ ಬಾಯಿಗೆ ಹಾಕಿದ ಬ್ಯಾಂಕುಗಳು, ಆ ಸಾಲವನ್ನು ವಸೂಲಿ ಮಾಡುವ ಗೋಜಿಗೂ ಹೋಗುತ್ತಿಲ್ಲ ಎಂಬುದು ಒಂದು ವಿಚಿತ್ರ ಸತ್ಯ.
* ದೊಡ್ಡಿಪಾಳ್ಯ ನರಸಿಂಹಮೂರ್ತಿ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎನ್‌ಡಿಎ ಸೇರಿದರೆ ಪ್ರಧಾನಿ ಮೋದಿಯಿಂದ ಕೇರಳಕ್ಕೆ ದೊಡ್ಡ ಪ್ಯಾಕೇಜ್: ಪಿಣರಾಯಿ ವಿಜಯನ್‌ಗೆ ಆಫರ್ ಕೊಟ್ಟ ಅಠಾವಳೆ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಿಜೆಪಿ ನೇತೃತ್ವದ ಎನ್‌ಡಿಎ ಸೇರಬೇಕೆಂದು ಕೇಂದ್ರ ರಾಜ್ಯ ಸಚಿವ ರಾಮದಾಸ್ ಬಂಡು ಅಠಾವಳೆ ಬುಧವಾರ ಸಲಹೆ ನೀಡಿದ್ದಾರೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ...

ಸದನದಲ್ಲೇ ನೀಲಿ ಚಿತ್ರ ನೋಡಿ ರಾಜ್ಯದ ಮಾನ ಕಳೆದವರು ಯಾವ ಪಕ್ಷದವರು? ಬಿಜೆಪಿಗೆ ಹರಿಪ್ರಸಾದ್ ತಿರುಗೇಟು

ಸದನದ ಶಿಸ್ತು, ಘನತೆ, ಗೌರವದ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಕಿಂಚಿತ್ತಾದರೂ ನೈತಿಕತೆ ಇದೆಯೇ? ಎಂದು ವಿಧಾನಪರಿಷತ್ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ. ಗುರುವಾರ (ಜ.22) ವಿಶೇಷ ಅಧಿವೇಶನದ ವೇಳೆ...

ಆಂಧ್ರದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧ?

ಕಳೆದ ತಿಂಗಳು ಆಸ್ಟ್ರೇಲಿಯಾ ಜಾರಿಗೆ ತಂದಂತೆಯೇ, 16 ವರ್ಷದೊಳಗಿನ ಮಕ್ಕಳಿಗಾಗಿ ಸರ್ಕಾರವು ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲು ಯೋಜಿಸುತ್ತಿದೆ ಎಂದು ಆಂಧ್ರಪ್ರದೇಶ ಸಚಿವ ನಾರಾ ಲೋಕೇಶ್ ಬಹಿರಂಗಪಡಿಸಿದ್ದಾರೆ. ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ...

ಜಾರ್ಖಂಡ್| ಚೈಬಾಸಾ ಎನ್‌ಕೌಂಟರ್‌; ಕುಖ್ಯಾತ ಮಾವೋವಾದಿ ನಾಯಕ ‘ಅನಲ್ ದಾ’ ಸೇರಿ 8 ನಕ್ಸಲರ ಹತ್ಯೆ

ಜಾರ್ಖಂಡ್ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಪ್ರಮುಖ ಯಶಸ್ಸನ್ನು ಸಾಧಿಸಿದೆ. ಚೈಬಾಸಾ ಜಿಲ್ಲೆಯಲ್ಲಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ, ಭದ್ರತಾ ಪಡೆಗಳು 8 ನಕ್ಸಲರನ್ನು ಕೊಂದಿವೆ....

‘ಕರ್ನಾಟಕವನ್ನು ಎಲ್ಲಾ ರೀತಿಯಲ್ಲಿ ಕಡೆಗಣಿಸುತ್ತಿದ್ದ ಬಿಜೆಪಿ ಈಗ ರಾಜ್ಯಪಾಲರ ಮೂಲಕವೇ ಕನ್ನಡಿಗರನ್ನು ಅವಮಾನಿಸಿದೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಬಿಜೆಪಿ ಕನ್ನಡಿಗರನ್ನು ಅವಮಾನಿಸುವ ಪ್ರಕ್ರಿಯೆ ಮುಂದುವರೆದಿದೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.  2026 ಜನವರಿ 22ರ, ಗುರುವಾರ ಸದನದಲ್ಲಿ ನಡೆದ ಬೆಳವಣಿಗೆಗಳ ಕುರಿತು ತಮ್ಮ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಖರ್ಗೆ, ‘ಸರ್ಕಾರದ ಭಾಷಣವನ್ನು...

ಭೋಜಶಾಲಾ-ಕಮಾಲ್ ಮೌಲಾ ಮಸೀದಿ ವಿವಾದ : ವಸಂತ ಪಂಚಮಿ ಪೂಜೆ, ಜುಮಾ ನಮಾಜ್ ಶಾಂತಿಯುತವಾಗಿ ನಡೆಸಲು ಸುಪ್ರೀಂ ಆದೇಶ

ಮಧ್ಯಪ್ರದೇಶದ ಧಾರ್‌ನಲ್ಲಿರುವ ಭೋಜ ಶಾಲಾ-ಕಮಾಲ್ ಮೌಲಾ ಸಂಕೀರ್ಣದಲ್ಲಿ ವಸಂತ ಪಂಚಮಿ ಪೂಜೆ ಮತ್ತು ಶುಕ್ರವಾರದ ಜುಮಾ ನಮಾಝ್ ಎರಡನ್ನೂ ಶಾಂತಿಯುತವಾಗಿ ನಡೆಸುವಂತೆ ನೋಡಿಕೊಳ್ಳಲು ಸುಪ್ರೀಂ ಕೋರ್ಟ್ ಗುರುವಾರ (ಜ.22) ನಿರ್ದೇಶನಗಳನ್ನು ನೀಡಿದೆ. ಭೋಜ...

ಜಮ್ಮು-ಕಾಶ್ಮೀರ| 200 ಅಡಿ ಆಳದ ಕಂದಕಕ್ಕೆ ಉರುಳಿದ ವಾಹನ; 10 ಜನ ಸೇನಾ ಸಿಬ್ಬಂದಿ ಸಾವು

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಭದೇರ್ವಾ ಪ್ರದೇಶದಲ್ಲಿ 200 ಅಡಿ ಆಳದ ಕಂದಕಕ್ಕೆ ವಾಹನ ಉರುಳಿ 10 ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಒಟ್ಟು 17 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಸೇನಾ...

ಉತ್ತರ ಪ್ರದೇಶ ಮರ್ಯಾದೆಗೇಡು ಹತ್ಯೆ; ಅಂತರ್ಧರ್ಮೀಯ ಜೋಡಿಯನ್ನು ಕೊಂದ ಯುವತಿ ಸಹೋದರರು

ಉತ್ತರ ಪ್ರದೇಶದ ಮೊರಾದಾಬಾದ್‌ನ ಕಾಡಿನಲ್ಲಿ ಅಂತರ್ಧರ್ಮೀಯ ಜೋಡಿಯ ಶವ ಪತ್ತೆಯಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಆಕೆಯ ಸಹೋದರರು ಮರ್ಯಾದೆಗೇಡು ಹತ್ಯೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯನ್ನು 19 ವರ್ಷದ ಕಾಜಲ್ ಎಂದು ಗುರುತಿಸಲಾಗಿದ್ದು, ಮೃತ...

ತೀವ್ರ ವಿರೋಧದ ನಂತರ ಇಸ್ಲಾಮೋಫೋಬಿಕ್ ಹೇಳಿಕೆ ಹಿಂಪಡೆದು, ಕ್ಷಮೆಯಾಚಿಸಿದ ಕೇರಳದ ಸಿಪಿಐ(ಎಂ) ಸಚಿವ ಸಾಜಿ ಚೆರಿಯನ್

ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮುಸ್ಲಿಂ ವಿಜೇತರ ಬಗ್ಗೆ ತಮ್ಮ ಇಸ್ಲಾಮೋಫೋಬಿಕ್ ಹೇಳಿಕೆಗಳನ್ನು ನೀಡಿದ್ದ ಸಿಪಿಐ(ಎಂ) ಹಿರಿಯ ನಾಯಕ ಮತ್ತು ಕೇರಳ ಸಚಿವ ಸಾಜಿ ಚೆರಿಯನ್ ಬುಧವಾರ ತಮ್ಮ ಹೇಳಿಕೆಯನ್ನು  ಹಿಂತೆಗೆದುಕೊಂಡಿದ್ದಾರೆ. ಪಕ್ಷ,...

ರಾಜ್ಯಪಾಲರಿಂದ ಸಂವಿಧಾನದ ವಿಧಿಗಳ ಉಲ್ಲಂಘನೆ; ಜನಪ್ರತಿನಿಧಿಗಳ ಸಭೆಯನ್ನು ಅವಮಾನಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

"ವರ್ಷದ ಮೊದಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೇ, ಸಂವಿಧಾನದ ವಿಧಿಗಳನ್ನು ಉಲ್ಲಂಘಿಸಿದ್ದಾರೆ. ಅವರ ಈ ನಡೆ ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ. ಇದನ್ನು ನಾವು ಖಂಡಿಸುತ್ತೇವೆ. ಈ...