ಜಮ್ಮು ಕಾಶ್ಮೀರದ ರಾಜ್ಯದ ಸ್ಥಾನಮಾನ ರದ್ದಾದ ನಂತರ ನಡೆಯುತ್ತಿರುವ ನಡೆಯುತ್ತಿರುವ ಡಿಸ್ಟ್ರಿಕ್ಟ್ ಡೆವಲಪ್‌ಮೆಂಟ್ ಕೌನ್ಸಿಲ್ ಸ್ಥಳೀಯ ಚುನಾವಣೆಯಲ್ಲಿ ಫಾರೂಕ್ ಅಬ್ದುಲ್ಲಾ ನೇತೃತ್ವದ ಗುಪ್ಕರ್ ಒಕ್ಕೂಟ ಸ್ಪಷ್ಟ ಮುನ್ನಡೆ ಸಾಧಿಸಿದೆ. ಅತೀವ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿ ಎರಡನೇ ಸ್ಥಾನಕ್ಕೆ ಕುಸಿದಿದೆ.
ಇತ್ತೀಚಿನ ವರದಿಯ ಪ್ರಕಾರ ಫಾರೂಕ್ ಅಬ್ದುಲ್ಲಾರ ನ್ಯಾಷನಲ್ ಕಾನ್ಫರೆನ್ಸ್, ಮೆಹಬೂಬ ಮುಫ್ತಿಯವರ ಪಿಡಿಪಿ ಸೇರಿದ ಸ್ಥಳೀಯ ಪಕ್ಷಗಳ ಗುಪ್ಕರ್ ಒಕ್ಕೂಟವು 81 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ಬಿಜೆಪಿ 47 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಕಾಂಗ್ರೆಸ್ 21 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
280 ಸ್ಥಾನಗಳ ಮತ ಎಣಿಕೆ ಆರಂಭವಾಗಿದ್ದು, ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆದಿರುವುದರಿಂದ ಮತ ಎಣಿಕೆ ವಿಳಂಬವಾಗಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಕೇಂದ್ರದ ಬಿಜೆಪಿ ಸರ್ಕಾರ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದರ ವಿರುದ್ಧ ಸ್ಥಾಪನೆಯಾದ ಗುಪ್ಕರ್ ಒಕ್ಕೂಟವು ಸದ್ಯದ ವರದಿ ಪ್ರಕಾರ ಮುನ್ನಡೆ ಕಾಯ್ದುಕೊಂಡಿದೆ.
ಜಮ್ಮು ಕಾಶ್ಮೀರ ಕುರಿತ ಬಿಜೆಪಿಯ ತೀರ್ಮಾನ ಮತ್ತು ಹೊಸ ನಾಯಕತ್ವವನ್ನು ಜನ ಒಪ್ಪಿಕೊಳ್ಳುತ್ತಾರೆ ಮತ್ತು ಬಿಜೆಪಿಯನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ. ಬೆದರಿಕೆಯ ನಡುವೆಯೂ ಜನ ಹೊರಬಂದು ಮತದಾನ ಮಾಡಿರುವುದು ನರೇಂದ್ರ ಮೋದಿಯವರ ಮೇಲಿಟ್ಟಿರುವ ವಿಶ್ವಾಸಕ್ಕೆ ಎಂದು ಬಿಜೆಪಿ ಉಸ್ತುವಾರಿ ಅನುರಾಗ್ ಠಾಕೂರ್ ಹೇಳಿದ್ದಾರೆ.
ಇದನ್ನೂ ಓದಿ: ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಬಲಿಷ್ಠ, ವೈವಿಧ್ಯ ಭಾರತವನ್ನು ಪ್ರತಿನಿಧಿಸುತ್ತದೆ: ಪ್ರಧಾನಿ ಮೋದಿ


