ಇಂದು ನಾವು ಮುಖ್ಯವಾಗಿ ತಿಳಿದುಕೊಳ್ಳಬೇಕಾಗಿರುವುದು ಆರ್ಥಿಕತೆಯ ವಿನ್ಯಾಸದ ಬಗ್ಗೆ. ಅದು ಈಗ ಅಮೆರಿಕ ಅಥವಾ ಯುರೋಪ್ ಅಥವಾ ಭಾರತದಲ್ಲಿ ಪಾಲಿಸಲಾಗುತ್ತಿರುವುದಾಗಿರಲಿ – ಆರ್ಥಿಕತೆಯ ಈ ವಿನ್ಯಾಸ ಹೇಳುವುದೇನೆಂದರೆ, ಕೃಷಿಯನ್ನು ಮುಗಿಸಿಬಿಡಿ ಎಂದು. ಇದನ್ನು ನಾವು ಅರಿತುಕೊಳ್ಳುವುದು ಮುಖ್ಯ. ಅಮೆರಿಕದಲ್ಲಿ ರೈತರು ಇಲ್ಲವಾಗಿದ್ದಾರೆ. ಈಗ ಆ ದೇಶದ ಜನಸಂಖ್ಯೆಯ ಕೇವಲ 2% ಕ್ಕಿಂತ ಕಡಿಮೆ ಜನರು ಕೃಷಿಯಲ್ಲಿದ್ದಾರೆ. ಯುರೋಪಿನಲ್ಲಿ ಪ್ರತಿ ನಿಮಿಷಕ್ಕೊಬ್ಬ ರೈತಳು/ನು ಕೃಷಿಯನ್ನು ಬಿಟ್ಟು ಹೋಗುತ್ತಿದ್ದಾಳೆ/ನೆ. ನಿಮಗೆ ನೆನೆಪಿರಬಹದು, ವಿಶ್ವವಿಖ್ಯಾತ ಆರ್ಥಿಕ ತಜ್ಞ ರಘುರಾಮ್ ರಾಜನ್ ಒಂದು ಸಲ ಹೇಳಿದ್ದು: ’ಭಾರತದಲ್ಲಿ ಎಲ್ಲಕ್ಕಿಂತ ದೊಡ್ಡ ಸುಧಾರಣೆ ಸಾಧ್ಯವಾಗುವುದು ಯಾವಾಗ ಎಂದರೆ, ಕೃಷಿಯಿಂದ ರೈತನನ್ನು ಬಿಡಿಸಿ, ನಗರಕ್ಕೆ ತಂದಾಗ ಮಾತ್ರ. ಏಕೆಂದರೆ, ನಗರಗಳಲ್ಲಿ ಕೂಲಿಕಾರ್ಮಿಕರ ಅವಶ್ಯಕತೆ ಇದೆ’ ಎಂದು. ಇದು ಸ್ವತಃ ರಾಜನ್ ಹೇಳಿದ್ದು. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ; ನಮ್ಮ ಆರ್ಥಿಕ ನೀತಿಯ ವಿನ್ಯಾಸವೇ ಇದಾಗಿದೆ.
ನೀವು ಈಗ ರಾಷ್ಟ್ರೀಯ ಕೌಶಲ್ಯ ನೀತಿಯ (ನ್ಯಾಷನಲ್ ಸ್ಕಿಲ್ ಪಾಲಿಸಿ) ದಾಖಲೆಗಳನ್ನು ನೋಡಿ. ಅಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆಂದರೆ, ಕೃಷಿಯಲ್ಲಿ ತೊಡಗಿರುವ ಜನರನ್ನು 56%ನಿಂದ ಕಡಿಮೆ ಮಾಡಿ 18% ಇಳಿಸಬೇಕು ಎಂದು ಬರೆಯಲಾಗಿತ್ತು. ಈಗ ಅದನ್ನು ಬದಲಿಸಿ 38% ಎಂದು ಬರೆಯಲಾಗಿದೆ. ಅಂದರೆ, 2022ರೊಳಗೆ ಕೃಷಿಯಲ್ಲಿ ತೊಡಗಿರುವ ಜನರ ಪ್ರಮಾಣವನ್ನು 57% ಇಂದ 38% ಗೆ ಇಳಿಸಲಾಗುವುದು. ಇದರರ್ಥ, ಇದು ಉದ್ದೇಶಪೂರ್ವಕವಾಗಿ ಮಾಡಿದ ರಣತಂತ್ರದ ಒಂದು ಭಾಗವಾಗಿದೆ; ರೈತರನ್ನು ಕೃಷಿಯಿಂದ ಹೊರತಂದು, ನಗರಕ್ಕೆ ತರುವುದು ಇದರ ಉದ್ದೇಶ. ಇದನ್ನು ಮೊದಲು ತಿಳಿದುಕೊಳ್ಳಬೇಕಿದೆ. ಇದರ ಅನುಗುಣವಾಗಿಯೇ ಈ ಒಂದು ಆರ್ಥಿಕ ಸಂರಚನೆಯನ್ನು ತಯಾರಿಸಲಾಗುತ್ತದೆ.
ಈಗ ನೋಡಿ, ಕೃಷಿಯಲ್ಲಿ ಬಿಕ್ಕಟ್ಟು ಇದೆ. ಇತರ ವಲಯಗಳನ್ನು ನೋಡಿದರೆ ರೈತರಿಗೆ ಆದಾಯ ಆಗುತ್ತಿಲ್ಲ ಎಂದು ಹೇಳುತ್ತೇವೆ. ಒಂದು ಉದಾಹರಣೆ ಕೊಡುವೆ: 1970ರಲ್ಲಿ ಗೋದಿಯ ಬೆಲೆ ಒಂದು ಕ್ವಿಂಟಲ್‌ಗೆ 76 ರೂಪಾಯಿ ಇತ್ತು. ಅದು 2015ರಲ್ಲಿ ಅಂದರೆ 45 ವರ್ಷಗಳ ನಂತರ ಏರಿಕೆ ಆಗಿ, 1450 ರೂಪಾಯಿ ಆಯಿತು. ಅದೇ ಸಮಯದಲ್ಲಿ ನಾನು ಇತರ ವಲಯಗಳಲ್ಲಿ ಆದಾಯದ ಮಟ್ಟದಲ್ಲಿ ಏನಾಗಿದೆ ಎಂಬುದನ್ನು ನೋಡಿದೆ. ನಾನು ಕೇವಲ ಮೂಲ (ಬೇಸಿಕ್) ವೇತನ ಮತ್ತು ತುಟ್ಟಿ ಭತ್ಯೆ (ಡಿಎ) ಗಳನ್ನು ಪರೀಕ್ಷಿಸಿದೆ. ಸರಕಾರಿ ನೌಕರರ ಬೇಸಿಕ್ ಆದಾಯ ಮತ್ತು ಡಿಎ ಯಲ್ಲಿ ಆದ ಏರಿಕೆ 120ರಿಂದ 150ಪಟ್ಟು! ಅದೇ ಅವಧಿಯಲ್ಲಿ ಶಾಲಾ ಶಿಕ್ಷಕರ ಆದಾಯದಲ್ಲಿ ಆದ ವೃದ್ಧಿಯನ್ನು ನೋಡಿದರೆ, 280ರಿಂದ 320ಪಟ್ಟು. ಹಾಗು ಕಾಲೇಜು ಮತ್ತು ಯುನಿವರ್ಸಿಟಿಯ ಅಧ್ಯಾಪಕರ ವೇತನದಲ್ಲಿ ಆದ ವೃದ್ಧಿ- 150 ರಿಂದ 170 ಪಟ್ಟು. ಅದೇ ಸಮಯದಲ್ಲಿ ರೈತರ ಆದಾಯ ಎಷ್ಟು ಹೆಚ್ಚಾಗಿದೆ ಎಂದು ನೋಡಿದರೆ, ಅದಕ್ಕೆ ನಾನು ಗೋಧಿ ಹಾಗೂ ಭತ್ತದ ದರವನ್ನು ಗಮನದಲ್ಲಿಟ್ಟುಕೊಂಡು ಹೇಳುತ್ತಿದ್ದೇನೆ; ರೈತರ ಆದಾಯದಲ್ಲಿ ಆದ ಹೆಚ್ಚಳ – 19 ಪಟ್ಟು. ಒಂದು ವೇಳೆ ಈ ಸರಕಾರಿ ನೌಕರರು ಮತ್ತು ಶಿಕ್ಷಕರ ಆದಾಯವೂ ಇಷ್ಟೇ ವೃದ್ಧಿ ಆಗಿದ್ದಲ್ಲಿ, ಅವರೆಲ್ಲರೂ ಕೆಲಸ ಬಿಟ್ಟು ಹೋಗಿರುತ್ತಿದ್ದರು. ಈಗ ರೈತರ ಆದಾಯವೂ ಒಂದು ವೇಳೆ ಇತರ ವಲಯಗಳಂತೆ ವೃದ್ಧಿ ಆಗಿದ್ದಲ್ಲಿ, ಅವರ ಆದಾಯದ ಸಮಾನಂತರವಾಗಿ ವೃದ್ಧಿಯಾಗಿದ್ದಲ್ಲಿ, ಕೇವಲ ಒಂದು ನೂರು ಪಟ್ಟು ಹೆಚ್ಚಾಗಿದ್ದರೂ, ಗೋದಿಯ ಕನಿಷ್ಠ ಬೆಂಬಲ ಬೆಲೆ ಈಗ 7600 ರೂ ಪ್ರತಿ ಕ್ವಿಂಟಲ್ ಆಗಿರಬೇಕಿದೆ. ಇದು ಅವರ ಹಕ್ಕು. 7600 ರೂ ಆಗಿರಬೇಕಾಗಿದೆ, ಆದರೆ ಅವರಿಗೆ ಸಿಗುತ್ತಿರುವುದು 1450 ರೂಪಾಯಿಗಳು.

ಅನೇಕರು ಕೇಳುತ್ತಾರೆ; ಈ ದುಡ್ಡನ್ನು ಎಲ್ಲಿಂದ ತರುವುದು ಎಂದು. ನಾನು ಕೇಳುವುದು; ಕಾರ್ಪೊರೆಟ್‌ಗಳಿಗೆ ದುಡ್ಡು ಕೊಡುವಾಗ ಆ ದುಡ್ಡು ಎಲ್ಲಿಂದ ಬರುತ್ತೆ ಎಂದು ಕೇಳಿದ್ದೀರಾ? 7ನೇ ವೇತನ ಆಯೋಗದ ದುಡ್ಡು ಎಲ್ಲಿಂದ ಬರುತ್ತದೆ ಎಂದು ಎಂದಾದರೂ ಕೇಳಿದ್ದೀರಾ? 7ನೇ ವೇತನ ಆಯೋಗ ಸದ್ಯಕ್ಕೆ ಕೇಂದ್ರ ಸರಕಾರದ ಉದ್ಯೋಗಿಗಳಿಗಾಗಿ ಜಾರಿಯಲ್ಲಿದೆ. ಒಂದು ವೇಳೆ ಎಲ್ಲಾ ರಾಜ್ಯಗಳಲ್ಲೂ ಜಾರಿಯಾದರೆ, (ಕ್ರೆಡಿಟ್ ಸ್ವಿಸ್ ಬ್ಯಾಂಕ್‌ನ ಅಧ್ಯಯನದ ಅನುಗುಣವಾಗಿ) ಪ್ರತಿವರ್ಷ 4 ಲಕ್ಷ 80 ಸಾವಿರ ಕೋಟಿ ರೂಪಾಯಿಗಳ ಹೆಚ್ಚುವರಿ ಖರ್ಚು ಆಗುತ್ತೆ. ಈ ದುಡ್ಡು ಎಲ್ಲಿಂದ ಬರುವುದು ಎಂದು ಯಾರೂ ಕೇಳುವುದಿಲ್ಲ. ವಿತ್ತೀಯ ಕೊರತೆ (ಫಿಸ್ಕಲ್ ಡೆಫಿಸಿಟ್) ಹೆಚ್ಚುತ್ತೆ ಎಂದು ಯಾರೂ ಹೇಳುವುದಿಲ್ಲ.
ಆದರೆ ರೈತರಿಗೆ ಎರಡು ಲಕ್ಷ ಕೋಟಿ ಕೊಡುತ್ತೇವೆ ಎಂದು ಘೋಷಿಸಿದ ಕೂಡಲೇ, ಹಾಹಾಕಾರ ಶುರು ಆಗಿಬಿಡುತ್ತೆ. ದುಡ್ಡು ವ್ಯರ್ಥ ಆಗುತ್ತೆ, ಇವರಿಗೆ ಈ ರೀತಿ ಕೊಡುವುದು ಸೂಕ್ತವಿಲ್ಲ, ಇವರು ಡಿಸರ್ವ್ ಮಾಡುವುದಿಲ್ಲ, ವಿತ್ತೀಯ ಕೊರತೆ (ಫಿಸ್ಕಲ್ ಡೆಫಿಸಿಟ್) ಹೆಚ್ಚಾಗುತ್ತೆ ಎಂದೆಲ್ಲಾ ಹೇಳತೊಡಗುತ್ತಾರೆ. ಆದರೆ ಸರಕಾರಿ ನೌಕರರಿಗೆ ಆಯೋಗ ಸೂಚಿಸಿದ ವೇತನ ಜಾರಿ ಮಾಡಿದಾಗ ಯಾರಾದರೂ ಹೇಳಿದರಾ – ಫಿಸ್ಕಲ್ ಡೆಫಿಸಿಟ್ ಹೆಚ್ಚಾಗುತ್ತೆ ಎಂದು? ಇದೇ ಈ ಎಲ್ಲಾ ಆರ್ಥಿಕ ನೀತಿಗಳನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ ಎನ್ನುವುದನ್ನು ಸೂಚಿಸುತ್ತದೆ. ರೈತರನ್ನು ಬಡವರನ್ನಾಗಿಯೇ ಇಡಲೆಂದು ವಿನ್ಯಾಸಗೊಳಿಸಲಾಗಿದೆ ಎಂಬುದು ತಿಳಿಯುತ್ತದೆ. ಹಾಗೂ ಈ ನೀತಿಗಳು ಅನೇಕ ದಶಕಗಳಿಂದ ನಡೆದುಬರುತ್ತಿವೆ ಹಾಗಾಗಿ ಎಲ್ಲಾ ಸರಕಾರಗಳು ಇದರಲ್ಲಿ ಶಾಮೀಲಾಗಿವೆ.
ಈಗ ನಿಮ್ಮ ಪ್ರಶ್ನೆ, ಇದಕ್ಕೆ ಕಾರಣವೇನು? ಇದರಲ್ಲಿ ಮಧ್ಯದ ದಾರಿ ಇಲ್ಲವೇ? ಮಧ್ಯದ ದಾರಿ? ನನಗೊಂದು ವಿಷಯ ಹೇಳಿ; ನಿಮಗೆ ಏಳನೇ ವೇತನ ಆಯೋಗದ ಪ್ರಕಾರ ವೇತನ ಸಿಗುತ್ತೆ ಅಥವಾ ಮತ್ಯಾವುದೋ ವೇತನ ಸಿಗುತ್ತೆ, ಆ ವೇತನ ಪಡೆದುಕೊಳ್ಳುವಾಗ ರೈತನಿಗೆ ಯಾವಾಗಾದರೂ ಮನೆ ಬಾಡಿಗೆಯ ಭತ್ಯೆ ಸಿಗುತ್ತಾ ಎಂದು ಯೋಚಿಸಿದ್ದೀರಾ? ಯಾವಾಗಾದರೂ ಆರೋಗ್ಯ ಭತ್ಯೆ ಸಿಕ್ಕಿದೆಯೇ, ಯಾವಾಗಾದರೂ ಶಿಕ್ಷಣದ ಭತ್ಯೆ ಸಿಕ್ಕಿದಿಯೇ, ಮಕ್ಕಳ ಮೆಡಿಕಲ್ ಅಲೋವನ್ಸ್ ಸಿಕ್ಕಿದೆಯೇ? ಹೀಗೆ ಎಂದಾದರೂ ಯೋಚಿಸಿದ್ದೀರಾ? ಏಕೆ ಹೀಗೆ? ಯಾಕೆ ರೈತರು ಸಮಾಜದ ಭಾಗವಲ್ಲವೇ? ಸುಪ್ರೀಮ್ ಕೋರ್ಟಿನ ಅಧಿಕಾರಿಗಳಿಗೆ ಬಟ್ಟೆ ಒಗೆಯಲೆಂದೇ 21 ಸಾವಿರ ರೂಪಾಯಿ ಸಿಗುತ್ತದೆ ವರ್ಷಕ್ಕೆ. ಭದ್ರತಾ ಸಿಬ್ಬಂದಿಗಳಿಗೆ 20 ಸಾವಿರ ರೂಪಾಯಿ ಸಿಗುತ್ತೆ ಬಟ್ಟೆ ತೊಳೆಯುವ ಸಲುವಾಗಿ, ಹಾಗೂ ಈಗ ಭದ್ರತಾ ವಲಯದವರು ಸುಪ್ರೀಮ್ ಕೋರ್ಟಿನವರೊಂದಿಗೆ ವ್ಯಾಜ್ಯ ತೆಗೆದಿದ್ದಾರೆ; ಸುಪ್ರೀಮ್ ಕೋರ್ಟನವರಿಗೇಕೆ ಹೆಚ್ಚು, ನಮಗೇಕೆ ಕಡಿಮೆ, ಗಡಿಗಳಲ್ಲಿ ಇರುವವರು ನಾವು ಎಂದು. ನನ್ನ ಪ್ರಶ್ನೆ: ರೈತರ ಬಳಿ ಬಟ್ಟೆಗಳೇ ಇರುವುದಿಲ್ಲವೇ? ಅವುಗಳನ್ನು ತೊಳೆಯಬಾರದೇ? ರೈತರ ಬಟ್ಟೆ ತೊಳೆಯಲು 20 ಸಾವಿರ ಸೇರಿಸಲಾಗಿದೆ ಎಂದು ಎಂದಾದರೂ ಕೇಳಿದ್ದೀರಾ? ಕನಿಷ್ಠ ಬೆಂಬಲ ಬೆಲೆಯಲ್ಲಿ ನಾವು ಸೇರಿಸುವುದೇನು, ಅವಳಿ/ನಿಗೆ ಆ ಬೆಳೆ ಬೆಳೆಯಲು ತಗಲುವ ಖರ್ಚು ಮತ್ತು ಅವಳ/ನ ಕುಟುಂಬದ ವಹಿಸಿದ ಶ್ರಮ; ಇವರೆಡನ್ನು ಸೇರಿಸುತ್ತೇವೆ. ಇಷ್ಟೇ..,
ಹಾಗೂ ಈಗಂತೂ ನೌಕರರಿಗೆ 108 ಭತ್ಯೆಗಳೂ ಸಿಗುತ್ತವೆ; ಈಗ ವೇತನ ಮತ್ತು ತುಟ್ಟಿ ಭತ್ಯೆಯ (ಡಿಎ) ನಂತರ ಇತರೆ ಭತ್ಯೆಗಳು (ಅಲೋವನ್ಸ್‌ಸ್‌ಗಳು) ಸಿಗುತ್ತವೆ, ನನಗೊಂದು ಮಾತು ಹೇಳಿ; ಯಾವುದೇ ವ್ಯಕ್ತಿಗೆ 108 ಭತ್ಯೆಗಳು ಸಿಗುತ್ತಿದ್ದರೆ, ಆ ವ್ಯಕ್ತಿಗೆ ವೇತನದ ಅವಶ್ಯಕತೆ ಏನಿದೆ? ಇಲ್ಲ, ಅದೆಲ್ಲ ಸಿಗುತ್ತಿದೆ ಎಂದರೆ ನಾನು ಸಿಗಬಾರದು ಎಂದು ಹೇಳುತ್ತಿಲ್ಲ. ಆದರೆ, ರೈತ ಏನು ತಪ್ಪು ಮಾಡಿದ್ದಾನೆಂದು ಅವಳಿ/ನಿಗೆ ಇವೆಲ್ಲ ಸಿಗುವುದಿಲ್ಲ, ಅದಕ್ಕೆ ಕಾರಣ ಹೇಳಿ. ರೈತರ ಎಮ್‌ಎಸ್‌ಪಿ (ಕನಿಷ್ಠ ಬೆಂಬಲ ಬೆಲೆ)ಯಲ್ಲಿ ಮನೆ ಬಾಡಿಗೆಯನ್ನು ಸೇರಿಸಲಾಗಿದೆಯೇ? ವೈದ್ಯಕೀಯ ಭತ್ಯೆ ಸೇರಿಸಲಾಗಿದೆಯೇ? ಅವಳ/ನ ಮಕ್ಕಳಿಗೆ ಶಿಕ್ಷಣದ ಅಲೋವನ್ಸ್ ಸೇರಿಸಲಾಗಿದೆಯೇ? ಯಾಕೆ ಅವಳಿ/ನಿಗೆ ಮಕ್ಕಳಿರುವುದಿಲ್ಲವಾ, ಅವಳು/ನು ಮಕ್ಕಳನ್ನು ಬೆಳೆಸಬಾರದಾ? ರೈತರನ್ನು ದೇಶದ ಮೇಲಿನ ಹೊರೆ ಎಂದು ಯಾಕೆ ಭಾವಿಸಿದ್ದೇವೆ? ಅವರಿಗೆ ದಾನ ಮಾಡುತ್ತಿದ್ದೇವೆ ಎಂದು ನಮಗೇಕೆ ಅನಿಸತ್ತದೆ? ನೀವು ಅವಳಿ/ನಿಗೆ ದಾನ ನೀಡುತ್ತಿಲ್ಲ, ಅವಳ/ನ ಶೋಷಣೆ ಮಾಡುತ್ತಿದ್ದೀರ, ನೀವು ರೈತರನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದೀರಿ, ಹಾಗೂ ಅದೇ ಕಾರಣದಿಂದ ನಮ್ಮ ಆರ್ಥಿಕತೆ ನಡೆಯುತ್ತಿದೆ. ಈ ಅರ್ಥವ್ಯವಸ್ಥೆಯ ಸಂರಚನೆಯನ್ನು ನೋಡದಿದ್ದರೆ, ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ, ರೈತರಿಗೆ ಇಷ್ಟು ವರ್ಷಗಳಿಂದ ಯಾಕೆ ಈ ಪೆಟ್ಟುಗಳು ಬೀಳುತ್ತಿವೆ ಎಂಬುದು ನಮಗೆ ಗೊತ್ತಾಗುವುದಿಲ್ಲ.
( ಈ ಲೇಖನ ದೇವಿಂದರ್ ಶರ್ಮಾ ಅವರ ಭಾಷಣದ ಆಯ್ದ ಭಾಗದ ಪಠ್ಯರೂಪ)
ಪಠ್ಯರೂಪ ಮತ್ತು ಅನುವಾದ: ರಾಜಶೇಖರ ಅಕ್ಕಿ

ಪತ್ರಕರ್ತ ಹಾಗೂ ಕೃಷಿ ತಜ್ಞ. ಇಂಡಿಯನ್ ಎಕ್ಸ್‌ಪ್ರೆಸ್, ದಿ ವೈರ್ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೃಷಿ ಮತ್ತು ಆಹಾರ ನೀತಿ ಕುರಿತು ವಿಶೇಷ ವರದಿ, ಲೇಖನಗಳನ್ನು ಬರೆದಿದ್ದಾರೆ. ಕೃಷಿ ನೀತಿಗೆ ಸಂಬಂಧಿಸಿದ ಇವರ 5 ಕೃತಿಗಳು ಪ್ರಕಟಗೊಂಡಿವೆ.


