ವಿಧಾನ ಪರಿಷತ್‌ನ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅಸಹಜವಾಗಿ ಸಾವನ್ನಪ್ಪಿದ್ದು, ಅವರ ಮೃತದೇಹ ಚಿಕ್ಕಮಗಳೂರಿನ ಕಡೂರು ತಾಲ್ಲೂಕಿನ ಗುಣಸಾಗರ ಬಳಿಯ ರೈಲು ಹಳಿಯಲ್ಲಿ ರಕ್ತ ಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಸಖರಾಯಪಟ್ಟಣದ ಬಳಿ ತೋಟದ ಮನೆಯಿಂದ ಸೋಮವಾರ ಸಂಜೆ ಕಾರಿನಲ್ಲಿ ತೆರಳಿದ್ದ ಧರ್ಮೇಗೌಡ ಅವರು ರಾತ್ರಿಯಾದರೂ ಹಿಂತಿರುಗಲಿಲ್ಲ. ಇದರಿಂದ ಭಯಗೊಂಡ ಮನೆಯವರು ಹುಡುಕಾಡಿದ್ದಾರೆ. ಗುಣಸಾಗರ – ಕಬ್ಳಿ ಮಾರ್ಗದ ನಡುವೆ ತಡರಾತ್ರಿ ಶವ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜೀನಾಮೆ ನೀಡದೆ ಸರ್ಕಾರಿ ಮನೆ ತೊರೆದ ವಿಧಾನ ಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ
ಜೊತೆಗೆ ಧರ್ಮೇಗೌಡ ಅವರ ಮೃತದೇಹದ ಜತೆ ಡೆತ್ ನೋಟ್ ಸಿಕ್ಕಿದೆ. ವಿಧಾನ ಪರಿಷತ್‌ನಲ್ಲಿ ಈಚೆಗೆ ನಡೆದ ಘಟನೆಯ ಉಲ್ಲೇಖ ಅದರಲ್ಲಿ ಇದೆ ಎಂನ್ನಲಾಗಿದೆ.
ಧರ್ಮೇಗೌಡ ಅವರು ಬೀರೂರಿನ ಪರಿಚಯಸ್ಥರೊಬ್ಬರಿಗೆ ಸೋಮವಾರ ಸಂಜೆ ಫೋನ್ ಮಾಡಿ ಜನ ಶತಾಬ್ಧಿ ರೈಲಿನ ಸಮಯವನ್ನು ವಿಚಾರಿಸಿದ್ದರು. ಹುಬ್ಬಳ್ಳಿಯಿಂದ ಸ್ನೇಹಿತರೊಬ್ಬರು ರೈಲಿನಲ್ಲಿ ಬರುತ್ತಿದ್ದಾರೆ ಎಂದು ಅವರಿಗೆ ತಿಳಿಸಿದ್ದರು ಎಂದು ಆಪ್ತರೊಬ್ಬರು ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಈಚೆಗೆ ನಡೆದ ಘಟನೆಯಿಂದ ಧರ್ಮೇಗೌಡ ಅವರು ಮನನೊಂದಿದ್ದರು, ಸಹೋದರ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರೊಂದಿಗೆ ಬೇಸರ ಹಂಚಿಕೊಂಡಿದ್ದರು ಎಂದು ಧರ್ಮೇಗೌಡ ಅವರ ಆಪ್ತರೊಬ್ಬರು ಪ್ರಜಾವಾಣಿಗೆ ತಿಳಿಸಿದ್ದರು.
ಇದನ್ನೂ ಓದಿ: ಉಪಸಭಾಪತಿಯನ್ನು ಎಳೆದಾಡಿದ ಕಾಂಗ್ರೆಸ್-ಬಿಜೆಪಿ ಸದಸ್ಯರು: ವಿಧಾನ ಪರಿಷತ್‌ನಲ್ಲಿ ಭಾರಿ ಗದ್ದಲ
ಇವರಿಗೆ ಸಂತಾಪ ಸೂಚಿಸಿ ಯಡಿಯೂರಪ್ಪನವರು ಟ್ವೀಟ್ ಮಾಡಿದ್ದಾರೆ, “ವಿಧಾನಪರಿಷತ್ ಉಪಸಭಾಪತಿ ಶ್ರೀ ಎಸ್.ಎಲ್.ಧರ್ಮೇಗೌಡರ ನಿಧನದ ಸುದ್ದಿ ದಿಗ್ಭ್ರಮೆ ಮೂಡಿಸಿದೆ. ಇದನ್ನು ನಂಬಲಿಕ್ಕೇ ಸಾಧ್ಯವಾಗುತ್ತಿಲ್ಲ. ಶಾಸಕರಾಗಿ, ಉಪಸಭಾಪತಿಗಳಾಗಿ ಜನಮನ್ನಣೆ ಗಳಿಸಿದ್ದ ಅವರ ದುರಂತ ಅಂತ್ಯ ಅತ್ಯಂತ ದುಃಖವನ್ನುಂಟು ಮಾಡಿದೆ. ಹಿರಿಯ ಅಧಿಕಾರಿಗಳಿಂದ ಘಟನೆಯ ವಿವರ ಪಡೆದುಕೊಳ್ಳುತ್ತಿದ್ದೇನೆ. ಅವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ, ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ” ಎಂದು ಬರೆದುಕೊಂಡಿದ್ದಾರೆ.
ವಿಧಾನಪರಿಷತ್ ಉಪಸಭಾಪತಿ ಶ್ರೀ ಎಸ್.ಎಲ್.ಧರ್ಮೇಗೌಡರ ನಿಧನದ ಸುದ್ದಿ ದಿಗ್ಭ್ರಮೆ ಮೂಡಿಸಿದೆ. ಇದನ್ನು ನಂಬಲಿಕ್ಕೇ ಸಾಧ್ಯವಾಗುತ್ತಿಲ್ಲ. ಶಾಸಕರಾಗಿ, ಉಪಸಭಾಪತಿಗಳಾಗಿ ಜನಮನ್ನಣೆ ಗಳಿಸಿದ್ದ ಅವರ ದುರಂತ ಅಂತ್ಯ ಅತ್ಯಂತ ದುಃಖವನ್ನುಂಟು ಮಾಡಿದೆ. ಹಿರಿಯ ಅಧಿಕಾರಿಗಳಿಂದ ಘಟನೆಯ ವಿವರ ಪಡೆದುಕೊಳ್ಳುತ್ತಿದ್ದೇನೆ. (1/2)
— B.S. Yediyurappa (@BSYBJP) December 29, 2020
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ: 104
ಇದನ್ನೂ ಓದಿ: ವಿಧಾನ ಪರಿಷತ್ ಕೋಲಾಹಲ: ಬಿಜೆಪಿ-ಜೆಡಿಎಸ್‌ನ ಷಡ್ಯಂತ್ರ ಎಂದ ಸಿದ್ದರಾಮಯ್ಯ – ಸರಣಿ ಟ್ವೀಟ್


