JDU ಪಕ್ಷದ 17 ಶಾಸಕರು ತಮ್ಮ ಪಕ್ಷಕ್ಕೆ ಬರಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದ ಆರ್‌ಜೆಡಿ ಮುಖಂಡ ಶ್ಯಾಂ ರಾಜಕ್, ಈಗ ಇನ್ನೊಂದು ಸ್ಫೋಟಕ ಮಾಹಿತಿಯನ್ನು ನೀಡಿದ್ದಾರೆ. “ತಮ್ಮ ಪಕ್ಷಕ್ಕೆ ಬರುವ ಶಾಸಕರ ಸಂಖ್ಯೆ ಶೀಘ್ರವೇ 28 ಕ್ಕೆ ಏರಲಿದೆ” ಎಂದು ಹೇಳಿದ್ದಾರೆ.
ಈ ಕುರಿತು ಆರ್‌ಜೆಡಿ ಮುಖಂಡರ ಹೇಳಿಕೆಯನ್ನು ಎಎನ್‌ಐ ಟ್ವೀಟ್ ಮಾಡಿದ್ದು , “17 JDU ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದು, ಯಾವುದೇ ಸಮಯದಲ್ಲಿ ನಮ್ಮ ಪಕ್ಷಕ್ಕೆ ಸೇರಲು ಸಿದ್ಧರಾಗಿದ್ದಾರೆ. ಆದರೆ ಪಕ್ಷಾಂತರ ನಿಷೇಧ ಕಾನೂನನ್ನು ಉಲ್ಲಂಘಿಸಲು ನಾವು ಬಯಸುವುದಿಲ್ಲವಾದ್ದರಿಂದ, ಅವರು 28 ಶಾಸಕರ ಗುಂಪಿನಲ್ಲಿ ಬಂದಾಗ ಮಾತ್ರ ಅವರನ್ನು ಸ್ವಾಗತಿಸುತ್ತೇವೆ ಎಂದು ನಾವು ಅವರಿಗೆ ತಿಳಿಸಿದ್ದೇವೆ. ಅವರ ಸಂಖ್ಯೆ ಶೀಘ್ರದಲ್ಲೇ 28 ಕ್ಕೆ ಏರಲಿದೆ” ಎಂದು ಹೇಳಿರುವುದಾಗಿ ವರದಿ ಮಾಡಿದೆ.
ಇದನ್ನೂ ಓದಿ: JNU ಪ್ರತಿಭಟನೆ ಆಧಾರಿತ ಚಿತ್ರಕ್ಕೆ ತಡೆಯೊಡ್ಡಿದ ಸೆನ್ಸಾರ್ ಮಂಡಳಿಯ ಬಿಜೆಪಿ ಮುಖಂಡ!
17 JD(U) MLAs are in touch with us & are ready to join our party any time. Since we don't want to violate anti-defection law, we have told them that we will welcome them only when they come in a group of 28 MLAs. Their strength will grow to 28 very soon: RJD leader Shyam Rajak pic.twitter.com/86SyKCuU1b
— ANI (@ANI) December 30, 2020
ಇದನ್ನೂ ಓದಿ: ರೈತರ ಕೈಯಲ್ಲಿರುವ ರೊಟ್ಟಿಯನ್ನು ಕಿತ್ತುಕೊಳ್ಳಬೇಡಿ: ಭಾವನಾತ್ಮಕ ಟ್ವೀಟ್ ಮಾಡಿದ ರೈತ ಒಕ್ಕೂಟ
ಬಿಹಾರದ ಆಡಳಿತಾರೂಢ ಪಕ್ಷ ಜೆಡಿಯು ಅರುಣಾಚಲ ಪ್ರದೇಶದಲ್ಲಿ ಪಕ್ಷಾಂತರದ ಕಾವನ್ನು ಅನುಭವಿಸಿದ ಬೆನ್ನಲ್ಲೇ, ರಾಜ್ಯದ ವಿರೋಧ ಪಕ್ಷದ ಆರ್‌ಜೆಡಿ ಮುಖಂಡ ಶ್ಯಾಂ ರಾಜಕ್, “17 ಜೆಡಿಯು ಶಾಸಕರು ಆರ್‌ಜೆಡಿಯೊಂದಿಗೆ ಸಂಪರ್ಕದಲ್ಲಿದ್ದಾರೆ” ಎಂದು ಹೇಳಿದ್ದರು.
“ಜೆಡಿಯು ಪಕ್ಷದೊಳಗೆ ಮತ್ತು ಪಕ್ಷದ ವ್ಯವಹಾರಗಳ ಹಿಡಿತದಲ್ಲಿ ನಿತೀಶ್ ಕುಮಾರ್ ಅವರ ನಿರಂಕುಶಾಧಿಕಾರಿ ವರ್ತನೆ ಅಲ್ಲಿನ ಬಹುಪಾಲು ಶಾಸಕರಿಗೆ ಕಿರಿಕಿರಿಯನ್ನುಂಟು ಮಾಡಿದೆ. ನಿತೀಶ್ ಕುಮಾರ್ ತಮ್ಮ ರಾಜಕೀಯ ಚಿತ್ರಣದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ” ಎಂದು ವಿಧಾನಸಭಾ ಚುನಾವಣೆಗೆ ಮೊದಲು ನಿತೀಶ್ ಕುಮಾರ್ ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಿದ್ದ ಶಯಂ ರಾಜಕ್ ಆರೋಪಿಸಿದ್ದಾರೆ.
“ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರ ಶೀಘ್ರದಲ್ಲೇ ಬೀಳಲಿದೆ. ಮಿತ್ರಪಕ್ಷಗಳ ನಡುವೆ ಅಸಮಾಧಾನ ಹೆಚ್ಚುತ್ತಿದೆ. ಆಡಳಿತದಲ್ಲಿ ಪ್ರಾಬಲ್ಯ ಸಾಧಿಸಲು ಬಿಜೆಪಿ ಮತ್ತು ಜೆಡಿಯು ನಡುವೆ ಹೆಚ್ಚುತ್ತಿರುವ ಹೋರಾಟದಿಂದಾಗಿ ಈಗ ಇದು ಅನಿವಾರ್ಯವಾಗುತ್ತಿದೆ” ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿದ್ದಾರೆ.
ಇದನ್ನೂ ಓದಿ: ಉಪಸಭಾಪತಿ ಧರ್ಮೇಗೌಡರನ್ನು ಕೊಂದವರಾರು?!
“ಜನವರಿ 14 ರ ನಂತರ ಜೆಡಿಯು ತನ್ನ 17 ಶಾಸಕರ ಮತ್ತೊಂದು ಪಕ್ಷಾಂತರವನ್ನು ಎದುರಿಸಬೇಕಾಗಬಹುದು. ಏಕೆಂದರೆ ನಿತೀಶ್ ಕುಮಾರ್ ತಮ್ಮ ಪಕ್ಷವನ್ನು ಕಟ್ಟುವಲ್ಲಿ ವಿಫಲರಾಗಿದ್ದಾರೆ” ಎಂದು ಹೇಳಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಜೆಡಿಯುನ ಆರು ಶಾಸಕರು ಇತ್ತೀಚೆಗೆ ಬಿಜೆಪಿಗೆ ಪಕ್ಷಾಂತರವಾಗಿದ್ದರು. ಹಾಗಾಗಿ ಆರ್‌ಜೆಡಿ ಮುಖಂಡರ ಈ ಹೇಳಿಕೆ ನಿತೀಶ್ ಕುಮಾರ್ ಅವರಿಗೆ ಮತ್ತೊಂದು ಆಘಾತ ನೀಡಿದೆ.
ಇದನ್ನೂ ಓದಿ: ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ – ಯಾರಿಗೆ ಗೆಲುವು?


