ಸರ್ಕಾರ ಆಟವಾಡುತ್ತಿದೆ. ಮಾತುಕತೆ ಎಂಬ ನಾಟಕ ಆಡುತ್ತಿದೆ. ಪ್ರತಿಭಟಿಸುತ್ತಿರುವ ರೈತ ಸಂಘಟನೆಗಳು ಮಾತುಕತೆಗೆ ಹೋಗದಿದ್ದರೆ, ರೈತ ನಾಯಕರಿಗೆ ಸಮಸ್ಯೆ ಇತ್ಯರ್ಥವಾಗುವುದೇ ಬೇಕಿಲ್ಲ ಎಂದು ತನ್ನ ಬಾಲಂಗೋಚಿ ಮಾಧ್ಯಮಗಳ ಮೂಲಕ ಅಪಪ್ರಚಾರ ನಡೆಸುವ ಹುನ್ನಾರವನ್ನೂ ಸರ್ಕಾರ ಮಾಡುತ್ತಿದೆ.
ಆದರೆ ಮಾತುಕತೆಯ ಮಾರ್ಗವನ್ನು ಮುಕ್ತವಾಗಿ ಇಡುವ ಮೂಲಕ ರೈತ ಸಂಘಟನೆಗಳು ಪ್ರಜ್ಞಾವಂತಿಕೆ ಮೆರೆದಿವೆ. ಮಾತುಕತೆ ಹೆಸರಲ್ಲಿ ಪ್ರಭುತ್ವ ಎಂದಿನಂತೆ ರಮಿಸುವ ನಾಟಕ ಆಡುತ್ತಿದೆ. ಆದರೆ ರೈತರು ಇದಕ್ಕೆ ಬಗ್ಗುತ್ತಿಲ್ಲ. ಇನ್ನೊಂದು ಕಡೆ ಸರ್ಕಾರ ನಡೆಸುವ ಪಕ್ಷದ ವಿಕೃತ ಹಿಂಬಾಲಕ ಸಂಸ್ಥೆಗಳು ರೈತರನ್ನು, ಈ ಹೋರಾಟವನ್ನು ಸುಳ್ಳುಗಳ ಮೂಲಕ ಅವಹೇಳನ ಮಾಡುವುದು, ಪ್ರತಿಭಟನೆಗೆ ಕಳಂಕ ತರುವುದರಲ್ಲಿ ತುಂಬ ಕ್ರಿಯಾಶೀಲವಾಗಿವೆ. ಬಹುಪಾಲು ಮಾಧ್ಯಮಗಳು ಕೂಡ ಈ ಐತಿಹಾಸಿಕ ಹೋರಾಟವನ್ನು ನಿರ್ಲಕ್ಷ್ಯ ಮಾಡುವ ಮೂಲಕ ವೃತ್ತಿದ್ರೋಹ ಎಸಗುತ್ತಿವೆ.
ಪ್ರತಿ ಮಾತುಕತೆಯಲ್ಲೂ ಸರ್ಕಾರ ಏರ್ಪಡಿಸುವ ಭೋಜನ ನಿರಾಕರಿಸುತ್ತಿರುವ ರೈತ ಸಂಘಟನೆಗಳ ಮುಖಂಡರು, 6ನೆ ಸುತ್ತಿನ ಮಾತುಕತೆಯಲ್ಲಿ ಊಟ ಬೇಡಿದ ಕೇಂದ್ರ ಸಚಿವರಿಗೆ ರೊಟ್ಟಿ ನೀಡುವ ಮೂಲಕ ರೈತಾಪಿ ಸಮೂಹದ ನೀಡುವ ಪರಂಪರೆಗೆ ಸಾಂಕೇತಿಕ ಸಾಕ್ಷಿ ಒದಗಿಸಿದ್ದಾರೆ.
ಇತ್ತೀಚೆಗೆ ಮಾಜಿ ಹಣಕಾಸು ಸಚಿವ ಪಿ. ಚಿದಮಬರಂ ಈ ರೈತ ಹೋರಾಟದ ಬಗ್ಗೆ ಬರೆಯುತ್ತ, ‘ಇದು ನಮಗೆ 1942ರ ಅಗಸ್ಟ್ ತಿಂಗಳನ್ನು ನೆನಪಿಸುತ್ತಿದೆ. 1942 ಅಗಸ್ಟ್ 7-8 ರಂದು ಮುಂಬೈನ (ಆಗಿನ ಬಾಂಬೆ) ಗೋವಾಲಿಯಾ ಟ್ಯಾಂಕ್ ಮೈದಾನದಲ್ಲಿ ನಡೆದ ಐತಿಹಾಸಿಕ ಸಭೆಯಲ್ಲಿ, ಮಹಾತ್ಮ ಗಾಂಧಿ ‘ಮಾಡು ಇಲ್ಲವೇ ಮಡಿ’ ಘೋಷಣೆಯ ಮೂಲಕ ಭಾರತದಿಂದ ತೊಲಗಿ ಎಂದು ಬ್ರಿಟಿಷರನ್ನು ಎಚ್ಚರಿಸಿದ್ದರು. ಈಗಿನ ರೈತ ಹೋರಾಟದಲ್ಲಿ ಮಹಾತ್ಮ ಇಲ್ಲ, ಆದರೆ ರೈತರ ಮನಸ್ಸುಗಳ ತುಂಬ ಅಹಿಂಸಾತ್ಮಕ ಪ್ರತಿಭಟನೆಯ ಉತ್ಸಾಹವೇ ತುಂಬಿದೆ’ ಎಂದು ಉಲ್ಲೇಖಿಸಿದ್ದಾರೆ.

‘ಈ ರೈತ ಪ್ರತಿಭಟನೆಯು ಸರ್ಕಾರಗಳಿಗೆ (ಈಗಿನ ಮತ್ತು ಭವಿಷ್ಯದ ಸರ್ಕಾರಗಳಿಗೆ) ‘ಆಡಳಿತದಲ್ಲಿ ವಿನಮ್ರತೆ’ಯ ಅಗತ್ಯದ ಪಾಠಗಳನ್ನು ಕಲಿಸಲಿದೆ, ಸಂಸತ್ತಿನಲ್ಲಿ ಮಸೂದೆಗಳನ್ನು ಹೇಗೆ ಅಂಗೀಕಾರ ಮಾಡಬೇಕು, ಜನರ ಬಯಕೆಗಳ ಅನುಸಾರ ಹೇಗೆ ಆಡಳಿತ ನಡೆಸಬೇಕು ಎಂಬುದನ್ನೂ ಈ ಹೋರಾಟ ಕಲಿಸಲಿದೆ’ ಎಂದು ಚಿದಂಬರಂ ಬರೆದಿದ್ದಾರೆ.
ಇದಿರಲಿ, ಈ ಮಾತುಕತೆಯ ಆಟವನ್ನು ರೈತರೂ ಅರ್ಥ ಮಾಡಿಕೊಂಡಿದ್ದಾರೆ. ಪ್ರತಿಭಟನೆಯ ಸ್ಥಳದಲ್ಲಿ ಸಂಭವಿಸಿದ ಸಾವುಗಳು ಮತ್ತು ಆತ್ಮಹತ್ಯೆಗಳ ಕುರಿತು ದೇಶದ ನಂಬರ್ 1 ಟ್ವಿಟರಿಸ್ಟ್ ಮೋದಿ ಏನನ್ನೂ ಟ್ವೀಟ್ ಮಾಡಿಲ್ಲ. ವಲಸೆ ಕಾರ್ಮಿಕರ ಸಾವುಗಳಿಗೂ ಅವರು ಸ್ಪಂದಿಸಲೇ ಇಲ್ಲವಲ್ಲ? ಆದರೆ ಸೌರವ್ ಗಂಗೂಲಿಗೆ ಅನಾರೋಗ್ಯವಾದಾಗ ಅವರು ಟ್ವೀಟ್ ಮಾಡುವುದನ್ನು ಮರೆಯಲಿಲ್ಲ.
ಈಗ ಮಾತುಕತೆ ಸಂದರ್ಭದಲ್ಲಿ ರೈತ ಹೋರಾಟಗಾರರು ಸರ್ಕಾರದ ಒಂದು ತುತ್ತನ್ನೂ ಮುಟ್ಟದೇ, ಹನಿ ನೀರನ್ನೂ ಕುಡಿಯದೇ ಹೊಸ ಬಗೆಯ ಅಸಹಕಾರ ಚಳವಳಿಗೆ ನಾಂದಿ ಹಾಡಿದ್ದಾರೆ. ಇದು ನಮ್ಮೆಲ್ಲ ಪ್ರಗತಿಪರ ಸಂಘಟನೆಗಳಿಗೆ ಆದರ್ಶವಾಗಬೇಕಿದೆ.
ಏಳು ಸುತ್ತಿನ ಮಾತುಕತೆ ವಿಫಲವಾಗಿವೆ. ಕೊರೆವ ಚಳಿ, ಆಗಾಗ ಉದುರುತ್ತಿರುವ ಮಳೆಯನ್ನು ಎದುರಿಸುತ್ತಲೇ ರೈತರು ಸಂಯಮವನ್ನು ಕಾಪಾಡಿಕೊಂಡಿದ್ದಾರೆ. ಪ್ರೊ. ಅಮಿತ್ ಬಾಧುರಿ ಬರೆದಂತೆ, ಸಮುದ್ರದ ಅಲೆ ರಾಜಾಜ್ಞೆಗೆ ಕಾಯುವುದಿಲ್ಲ. ಈ ಸಲ ಅಲೆ ತನ್ನ ಶಕ್ತಿ ತೋರಿಸಬೇಕೆಂದರೆ ರೈತರೊಂದಿಗೆ ನಾವೆಲ್ಲ ಕೈ ಜೋಡಿಸಲೇಬೇಕು.
- ಮಲ್ಲನಗೌಡರ್ ಪಿ.ಕೆ
ಇದನ್ನೂ ಓದಿ: ರೈತ ಹೋರಾಟ ಅಪ್‌ಡೇಟ್ಸ್: 7ನೇ ಸುತ್ತಿನ ಮಾತುಕತೆ ವಿಫಲ – ಹೋರಾಟದ ಮುಂದೇನು ದಾರಿ?


