Homeಮುಖಪುಟಮಲ ಬಾಚುವ ಪದ್ಧತಿ ನಿರ್ಮೂಲನೆಗೆ ವಿಶೇಷ ಕಾಯ್ದೆ ಶಿಫಾರಸ್ಸು ಮಾಡಿದ NHRC: ಜಾರಿ ಸಾಧ್ಯವೇ?

ಮಲ ಬಾಚುವ ಪದ್ಧತಿ ನಿರ್ಮೂಲನೆಗೆ ವಿಶೇಷ ಕಾಯ್ದೆ ಶಿಫಾರಸ್ಸು ಮಾಡಿದ NHRC: ಜಾರಿ ಸಾಧ್ಯವೇ?

ಜಾತಿ ಪದ್ದತಿ ನಾಶವಾಗದೆ ಮಲ ಬಾಚುವ ಪದ್ದತಿ ನಿರ್ಮೂಲನೆಯಾಗುವುದಿಲ್ಲ ಎನ್ನುತ್ತಾರೆ ಹಿರಿಯ ಕಾರ್ಮಿಕ ಹೋರಾಟಗಾರರಾದ ಎಸ್. ಬಾಲನ್...

- Advertisement -
- Advertisement -

ವಿಜ್ಞಾನ, ನಾಗರಿಕತೆ ಎಷ್ಟೆಲ್ಲಾ ಅಭಿವೃದ್ದಿ ಹೊಂದಿದ್ದರೂ ಕೆಲ ಸಾಮಾಜಿಕ ಅನಿಷ್ಟ ಪದ್ಧತಿಗಳು ಇಂದಿಗೂ ಜಾರಿಯಲ್ಲಿರುವುದು ಇಡೀ ಭಾರತೀಯರು ತಲೆತಗ್ಗಿಸಬೇಕಾದ ವಿಚಾರ. ತಳಸಮುದಾಯದ ಜನರ ಮೇಲೆ ಮೇಲ್ಜಾತಿ, ಮೇಲ್ವರ್ಗದ ಜನರು ಹೇರಿದ ಮಲ ಹೊರುವ, ಮಲ ಬಾಚುವ (ಮ್ಯಾನುವಲ್ ಸ್ಕ್ಯಾವೆಜಿಂಗ್) ಕೆಲಸಗಳು 21ನೇ ಶತಮಾನದಲ್ಲಿಯೂ ಮುಂದುವರೆಯುತ್ತಿದ್ದರೂ ಜಡಗಟ್ಟಿದ ಸಮಾಜಕ್ಕೆ ಏನೇನು ಅನ್ನಿಸುತ್ತಿಲ್ಲ. ಈ ಕುರಿತು ಸಾವಿರಾರು ಚರ್ಚೆಗಳು ನಡೆದರೂ ಫಲಿತಾಂಶ ಮಾತ್ರ ತೀರಾ ಕಡಿಮೆ. ಇದಕ್ಕೆ ಕಾರಣ ಈ ಅನಿಷ್ಠ ಕೆಲಸವನ್ನು ಮಾಡುತ್ತಿರುವವರು ತಳಸಮುದಾಯದವರು. ಅವರ ಬಗ್ಗೆ ಯಾವ ಸರ್ಕಾರಗಳಿಗೂ, ಯಾವ ಪಕ್ಷಗಳಿಗೂ ಕಾಳಜಿಯಿಲ್ಲ ಮಾತ್ರವಲ್ಲ ಅವರಿರುವುದೇ ತಮ್ಮ ಸೇವೆ ಮಾಡುವುದಕ್ಕಾಗಿ ಎಂಬ ಫ್ಯೂಡಲ್ ಮನಸ್ಥಿತಿ. ಅಸಮಾನತೆ, ಅನ್ಯಾಯದ ತಳಹದಿಯ ಮೇಲಿರುವ ಈ ಸಮಾಜ ವ್ಯವಸ್ಥೆ ಇಂತಹ ಅನಿಷ್ಠ ಪದ್ಧತಿಗಳನ್ನು ಪೋಷಿಸುತ್ತಾ ಬರುತ್ತಿವೆ ಎನ್ನುವುದು ಚಾರಿತ್ರಿಕ ಸತ್ಯ.

ಕಳೆದ ಹಲವಾರು ದಶಕಗಳಿಂದ ಮಲಬಾಚುವ ಪದ್ದತಿಯನ್ನು ನಿರ್ಮೂಲನೆ ಮಾಡಬೇಕು, ಸಂಪೂರ್ಣ ಆಧುನಿಕ ಯಾಂತ್ರಿಕೃತ ವ್ಯವಸ್ಥೆ ಜಾರಿಗೊಳಿಸಬೇಕೆಂದು ಸಾವಿರಾರು ಹೋರಾಟಗಳು ನಡೆದಿವೆ. ಆದರೆ ಈ ಪದ್ದತಿ ಮಾತ್ರ ಕೊನೆಗೊಂಡಿಲ್ಲ. ಈಗ ಈ ವಿಚಾರದ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಎಚ್ಚೆತ್ತುಕೊಂಡಂತೆ ಕಂಡುಬಂದಿದ್ದು ಮಲ ಬಾಚುವ ಪದ್ದತಿ ನಿರ್ಮೂಲನೆಗೆ ವಿಶೇಷ ಕಾಯ್ದೆಯನ್ನು ಶಿಫಾರಸ್ಸು ಮಾಡಿದೆ.

ಬರಿಗೈಲಿ ಮಲಬಾಚುವ, ಶೌಚ ಗುಂಡಿ ಸ್ವಚ್ಛಗೊಳಿಸಲು ಆಳಕ್ಕೆ ಇಳಿಯುವ, ಮಲಹೊರುವ ಕೆಲಸಕ್ಕೆ ನೇಮಿಸಿಕೊಳ್ಳುವ ಸ್ಥಳೀಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತಹ ಹೊಸ ಕಾಯ್ದೆಯೊಂದಿಗೆ ಹಲವು ಸರಣಿ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರಕ್ಕೆ NHRC ಮಾಡಿದೆ.

ತಳಮಟ್ಟದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಮಲಬಾಚುವ ಕೆಲಸದಲ್ಲಿರುವ ಕುಟುಂಬ ಸದಸ್ಯರಿಗೆ ಕೇಂದ್ರ ಸರ್ಕಾರವು 10 ಲಕ್ಷ ರೂಗಳ ಸಾಲ ನೀಡಬೇಕೆಂದು NHRC ಒತ್ತಾಯಿಸಿದೆ. ಇದರಿಂದ ಆ ಕುಟುಂಬಗಳು ತಮ್ಮ ಬಡತನದ ಕಾರಣದಿಂದ ಅನಿವಾರ್ಯವಾಗಿ ಮಾಡಬೇಕಾದ ಈ ಕೆಲಸವನ್ನು ಬಿಟ್ಟು ಯಾವುದಾದರೂ ಸ್ವಂತ ಉದ್ಯಮವನ್ನು ಸ್ಥಾಪಿಸಬಹುದು ಎಂದು ಅದು ಹೇಳಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋವು ಈ ಮ್ಯಾನುವಲ್ ಸ್ಕ್ಯಾವೆಜಿಂಗ್ ನಲ್ಲಿ ಮೃತಪಟ್ಟ ಜನರ ವರದಿಗಳನ್ನು ಮೇಲ್ವಿಚಾರಣೆ ನಡೆಸಬೇಕು. ಕೆಲ ರಾಜ್ಯಗಳು ನಮ್ಮಲ್ಲಿ ಯಾವುದೇ ಮ್ಯಾನುವಲ್ ಸ್ಕ್ಯಾವೆಂಜರ್‌ಗಳನ್ನು ನೇಮಿಸಿಕೊಂಡಿಲ್ಲ, ಮಲಗುಂಡಿಗಳು ಇಲ್ಲ ಎಂದು ವರದಿ ನೀಡುತ್ತಿರುವುದು ಸತ್ಯಕ್ಕೆ ದೂರವಾದುದ್ದು ಎಂದು NHRC ದೂರಿದೆ. ಈ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಒತ್ತಾಯಿಸಿದೆ.

ಎಲ್ಲಾ ರೀತಿಯ ಸ್ವಚ್ಛಗೊಳಿಸುವಿಕೆಯನ್ನು ಮ್ಯಾನುವಲ್ ಸ್ಕ್ಯಾವೆಜಿಂಗ್ ನಡಿ ತರುವುದಲ್ಲದೆ ಅದರ ವ್ಯಾಖ್ಯಾನವನ್ನು ವಿಸ್ತರಿಸುವಂತೆ ಆಯೋಗವು ತಿಳಿಸಿದೆ. ಮಲ ಬಾಚುವವರು, ಪೌರಕಾರ್ಮಿಕರು ಮತ್ತು ಮಕ್ಕಳು ಕೆಲಸದ ಸ್ಥಳದಲ್ಲಿ ಎದುರಿಸುವ ಕಿರುಕುಳವನ್ನು ತಡೆಗಟ್ಟಲು ದಂಡವಿಭಾಗವನ್ನು ಹೊಸ ಕಾಯ್ದೆಯಲ್ಲಿ ಸೇರಿಸುವಂತೆ ತಿಳಿಸಿದೆ.

ಮಲಬಾಚುವ ಕೆಲಸ ತ್ಯಜಿಸುವವರಿಗೆ ಪುನರ್ವಸತಿ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ಆಯೋಗ ತಿಳಿಸಿದೆ. ಆ ಜನರಿಗೆ ನರೇಗದಂತಹ ತಕ್ಷಣದ ಕೆಲಸಗಳನ್ನು ನೀಡುವುದರ ಜೊತೆಗೆ ಕೆಲಸ ಬಿಡುವ ಸಮಯದಲ್ಲಿ 40,000 ರೂನಿಂದ 1 ಲಕ್ಷ ರೂಗಳವರೆಗೆ ನಗದು ಪರಿಹಾರ ನೀಡಬೇಕೆಂದು ಶಿಫಾರಸ್ಸು ಮಾಡಿದೆ.

ಪೌರಕಾರ್ಮಿಕರು ಮಲಬಾಚುವ ಪದ್ದತಿ ಬಿಟ್ಟು ಕೆಲವು ವ್ಯವಹಾರ ಚಟುವಟಿಕೆಗಳನ್ನು ಪ್ರಾರಂಭಿಸಲು ಅವರಿಗೆ ಮತ್ತು ಅವರ ಅವಲಂಬಿತರಿಗೆ 10 ಲಕ್ಷ ರೂ.ವರೆಗೆ ಸಾಲವನ್ನು ನೀಡುವ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಪ್ರತಿ ರಾಜ್ಯಕ್ಕೆ ನಿರ್ದಿಷ್ಟ ರಾಷ್ಟ್ರೀಕೃತ ಬ್ಯಾಂಕ್ ಅನ್ನು ನೇಮಿಸಲು ಹಣಕಾಸು ಸಚಿವಾಲಯಕ್ಕೆ ಕೋರಲಾಗಿದೆ.

“ಮಲ ಬಾಚುವ ಪದ್ದತಿ ನಿರ್ಮೂಲನೆಗಾಗಿ ತಂತ್ರಜ್ಞಾನದ ಬಳಕೆ, ತಂತ್ರಜ್ಞಾನದ ನಿರ್ವಹಣೆ ಮತ್ತು ತಂತ್ರಜ್ಞಾನವನ್ನು ನಿರ್ವಹಿಸಲು ಕಾರ್ಮಿಕರಿಗೆ ತರಬೇತಿ ನೀಡಲು ಅನುಕೂಲವಾಗುವಂತೆ ಸರ್ಕಾರವು ಸಾಕಷ್ಟು ಹೂಡಿಕೆಯನ್ನು ಯೋಜಿಸುವ ಅಗತ್ಯವಿದೆ” ಎಂದು ಎನ್‌ಎಚ್‌ಆರ್‌ಸಿ ಹೇಳಿದೆ.

“ಮೇಲ್ವಿಚಾರಣಾ ಹಂತದಲ್ಲಿರುವ ಅಧಿಕಾರಿ ಅಥವಾ ಪ್ರದೇಶದ ಉಸ್ತುವಾರಿ ಯಾವುದೇ ವ್ಯಕ್ತಿಗೆ ಒಳಚರಂಡಿ / ಸೆಪ್ಟಿಕ್ ಟ್ಯಾಂಕ್‌ಗೆ ಪ್ರವೇಶಿಸುವ ಮೊದಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಒದಗಿಸಲಾಗುತ್ತಿದೆ ಎಂದು ಆಯಾ ನಾಗರಿಕ ಸಂಸ್ಥೆಗೆ ಘೋಷಣೆ ಸಲ್ಲಿಸಬೇಕು” ಎಂದು ಅದು ಹೇಳಿದೆ.

ಆಯೋಗದ ಈ ಶಿಫಾರಸ್ಸುಗಳನ್ನು ಸ್ವಾಗತಿಸುತ್ತಲೇ ಇವು ನಿಜವಾಗಿಯೂ ಕಾರ್ಯರೂಪಕ್ಕೆ ಬರುವಂತೆ ಒತ್ತಾಯಿಸಬೇಕಾಗಿದೆ. ಕೆಲದಿನಗಳ ಹಿಂದೆ ತಾನೇ ಆಂಧ್ರಪ್ರದೇಶದಲ್ಲಿ ಪೌರಕಾರ್ಮಿಕರು ವಿವಿಧ ಯೋಜನೆಗಳಡಿ ಬ್ಯಾಂಕ್‌ಗಳಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ನೀಡಲಾಗಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಅವರು ಬ್ಯಾಂಕುಗಳ ಮುಂದೆ ಕಸ ಸುರಿದು ಪ್ರತಿಭಟನೆ ನಡೆಸಿದ್ದರು.

ಈ ಕುರಿತು ಬೆಂಗಳೂರಿನಲ್ಲಿ ಹತ್ತಾರು ವರ್ಷಗಳಿಂದ ಪೌರಕಾರ್ಮಿಕರನ್ನು ಸಂಘಟಿಸಿ ಹೋರಾಟ ನಡೆಸುತ್ತಿರುವ ಹಿರಿಯ ಕಾರ್ಮಿಕ ಮುಖಂಡರಾದ ಎಸ್.ಬಾಲನ್‌ರವರನ್ನು ನಾನುಗೌರಿ.ಕಾಂ ಮಾತನಾಡಿಸಿತು. “ಮಲ ಬಾಚುವ ಪದ್ದತಿಯು ಆದಿ ಆಂಧ್ರ, ಅರುಂಧತಿಯಾರ್, ಚಕ್ಲಿಯರ್, ಮಾದಿಗರು ಜಾತಿಗೆ ಸಂಬಂಧಿಸಿದೆ. ಈ ಜಾತಿಗಳು ಮಾತ್ರ ಈ ಕೆಲಸ ಮಾಡುತ್ತಿವೆ. ಬ್ರಿಟೀಷರು, ಈಗಿನ ಕಾಲದಲ್ಲಿಯೂ ಸಹ ಇವರು ಮೋರಿಗಳು ಎಲ್ಲಿವೆಯೋ ಅಲ್ಲಿಯೇ ಇವರು ವಾಸಿಸುತ್ತಿದ್ದಾರೆ. ಸಂವಿಧಾನದ 17ನೇ ಆರ್ಟಿಕಲ್ ಇದೆ, 1993ರಲ್ಲಿ ಮಲಹೊರುವ ಪದ್ದತಿ ನಿಷೇಧ ಕಾಯ್ದೆ ಬಂತು. ಎಷ್ಟೇ ಕಾನೂನುಗಳು ಬಂದರೂ ಈ ಅನಿಷ್ಠ ಪದ್ದತಿಯನ್ನು ತಡೆಗಟ್ಟಲು ಸಾಧ್ಯವಾಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ನಿಜವಾಗಿಯೂ ಇದು ಪರಿಹಾರವಾಗಬೇಕಾದರೆ ಜಾತಿ ವ್ಯವಸ್ಥೆ ನಾಶವಾಗಬೇಕು. ಆದರೆ ಇಂದು ಜಾತಿಗಳು ಮತ್ತಷ್ಟು ಸಂಘಟಿತವಾಗುತ್ತಿವೆ. ಹಿಂದೂ ಧರ್ಮ ಜಾತಿಪದ್ದತಿಯನ್ನು ಪೋಷಿಸುತ್ತಿದೆ. ಕಾರ್ಪೋರೇಟ್ ಕಂಪನಿಗಳು, ದೊಡ್ಡ ದೊಡ್ಡ ಮಾಲ್‌ಗಳಲ್ಲಿ ಈ ಜನರನ್ನು ಶೌಚಾಲಯಗಳ ಒಳಗಡೆಯೆ ಇವರನ್ನು ಬಂಧಿಸಲಾಗಿದೆ. ಈ ಕಾನೂನುಗಳನ್ನು ನಾನು ನಂಬುವುದಿಲ್ಲ. ಜಾತಿ ನಾಶವಾಗದೆ ಇದು ನಿರ್ಮೂಲನೆಯಾಗುವುದಿಲ್ಲ. ಮೋದಿಯವರು ಪೌರ ಕಾರ್ಮಿಕರ ಕಾಲು ತೊಳೆದು ನಾಟಕ ಮಾಡುತ್ತಾರೆ ಆದರೆ ಪೌರ ಕಾರ್ಮಿಕರ ನೌಕರಿಯನ್ನು ಕಾಯಂ ಮಾಡುವುದಿಲ್ಲ ಏಕೆ ಎಂದು ಬಾಲನ್ ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: ಸಾಲ ಕೊಡಲು ಹಿಂದೇಟು: ಬ್ಯಾಂಕ್‌ಗಳ ಮುಂದೆ ಕಸ ಸುರಿದ ಪೌರ ಕಾರ್ಮಿಕರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...