ಪೊಲೀಸ್ ಮೂಲಗಳ ಪ್ರಕಾರ, ದೆಹಲಿ ಪೊಲೀಸ್ ಕ್ರೈಮ್ ಬ್ರ್ಯಾಂಚ್‌ನ ವಿಶೇಷ ತನಿಖಾ ದಳ 15 ಆರೋಪಿಗಳನ್ನು (ಎಲ್ಲರೂ ವಿದ್ಯಾರ್ಥಿಗಳೇ) ಗುರುತಿಸಿದೆ. ಆದರೆ ಲಾಕ್‌ಡೌನ್‌ನಿಂದಾಗಿ ವಿದ್ಯಾರ್ಥಿಗಳು ಮನೆಗೆ ಮರಳಿದ ನಂತರ ತನಿಖೆ ಸ್ಥಗಿತಗೊಂಡಿತು.
ಒಂದೂ ಬಂಧನವಿಲ್ಲ, ಚಾರ್ಜ್‌ಶಿಟೂ ಇಲ್ಲ, ವಿಶ್ವವಿದ್ಯಾಲಯದ ಆಂತರಿಕ ತನಿಖೆಯನ್ನು ನಿಲ್ಲಿಸಲಾಗಿದೆ ಕೂಡ! ಮುಖಗವಸು (ಮಾಸ್ಕ್) ಹಾಕಿಕೊಂಡು JNU ಕ್ಯಾಂಪಸ್‌ನಲ್ಲಿ ಪುಂಡರು ದಾಂಧಲೆ ಮಾಡಿ ಇಂದಿಗೆ ವರ್ಷವಾದರೂ ತನಿಖೆಯಲ್ಲಿ ಏನೇನೂ ಪ್ರಗತಿಯಾಗಿಲ್ಲ.
ಕಳೆದ ವರ್ಷ ಸುಮಾರು 100 ಜನರ ಮಾಸ್ಕ್‌ಧಾರಿಗಳ ತಂಡವೊಂದು ದೆಹಲಿಯ ಜವಾಹರಲಾಲ್ ನೆಹರು ವಿವಿಯಲ್ಲಿ (JNU) ಸಿಕ್ಕಾಪಟ್ಟೆ ದಾಂಧಲೆ ಮಾಡಿ, 36 ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಇತರ ಸಿಬ್ಬಂದಿಯನ್ನು ಭೀಕರವಾಗಿ ಗಾಯಗೊಳಿಸಿದ್ದರು. ಇದಾದ ನಾಲ್ಕು ದಿನಗಳ ನಂತರ ಜನೆವರಿ 9 ರಂದು ದೆಹಲಿ ಪೊಲೀಸರು ಒಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಅಂದು 8 ಸಂಶಯಿತರನ್ನು (ಎಲ್ಲರೂ ವಿದ್ಯಾರ್ಥಿಗಳು) ಹೆಸರಿಸಿದ್ದ ಪೊಲೀಸರು ಅದರಲ್ಲಿ 7 ಜನ ಎಡಪಂಥೀಯ ಸಂಘಟನೆಗೆ ಸೇರಿದವರು ಎಂದು ಹೇಳಿದ್ದರು. ಇನ್ನಿಬ್ಬರು ಯಾವ ಸಂಘಟನೆ ಎಂದು ಹೇಳಿರಲಿಲ್ಲ. ಆದರೆ ಅವರಿಬ್ಬರು ಎಬಿವಿಪಿ ಸಂಘಟನೆಯವರಾಗಿದ್ದರು.
ಇದನ್ನೂ ಓದಿ: ಜೆಎನ್‌ಯು ಮರುನಾಮಕರಣವಾಗಲಿ ಎಂದ ಸಿ.ಟಿ. ರವಿಯನ್ನು ತರಾಟೆಗೆ ಪಡೆದ ನೆಟ್ಟಿಗರು!
ಉತ್ತರ ದೆಹಲಿಯ ವಸಂತ್‌ಕುಂಜ್‌ನಲ್ಲಿ ಮೂರು ಎಫ್‌ಐಆರ್ ದಾಖಲಿಸಲಾಗಿತ್ತು. ನಂತರ ಪ್ರಕರಣವನ್ನು ಕ್ರೈಮ್ ಬ್ರ್ಯಾಂಚ್‌ಗೆ ವರ್ಗಾಯಿಸಲಾಯಿತು. ಜೆಎನ್‌ಯು ಕ್ಯಾಂಪಸ್‌ನಲ್ಲೇ 20 ಪೊಲೀಸರ ಒಂದು ತನಿಖಾ ತಂಡವನ್ನು ಸ್ಥಾಪಿಸಲಾಯಿತು. ಫೆಬ್ರುವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗಳ ತನಿಖೆಯನ್ನು ಮತ್ತು ಕೊವಿಡ್ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಹೊತ್ತಿದ್ದ ನಿಜಾಮುದ್ದೀನ್ ಮರ್ಕಜ್‌ನ ಮೌಲಾನಾ ಸಾದ್ ತನಿಖೆಯನ್ನು ಇದೇ ತಂಡಕ್ಕೆ ವಹಿಸಲಾಗಿತು.
ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪೊಲೀಸ್ ಮೂಲಗಳು ಹೇಳಿದ ಪ್ರಕಾರ, ಪತ್ರಿಕಾಗೋಷ್ಠಿಯಲ್ಲಿ ಸಂಶಯಿತರು ಎಂದು ಕರೆದಿದ್ದ 9 ಜನರನ್ನು ಸೇರಿಸಿ 88 ಜನರನ್ನು ಎಸ್‌ಐಟಿ ಪ್ರಶ್ನಿಸಿತು. ದಾಂಧಲೆಯ ಆರೋಪ ಹೊತ್ತಿದ್ದ ಗಾಯಗೊಂಡ ಅಧ್ಯಾಪಕರು, ವಾರ್ಡನ್‌ಗಳು, ಸೆಕ್ಯುರಿಟಿ ಗಾರ್ಡ್ಸ್ ಮತ್ತು ವಿದ್ಯಾರ್ಥಿಗಳ ಹೇಳಿಕೆಯನ್ನೂ ಎಸ್‌ಐಟಿ ಪಡೆಯಿತು. ’ಪ್ರಶ್ನಿಸಿದ ನಂತರ ಇತರ ಸಂಶಯಿತರ ಮಾಹಿತಿಯೂ ದೊರಕಿತು. ಆದರೆ ಲಾಕ್‌ಡೌನ್ ಘೋಷಣೆಯಾದ ಪರಿಣಾಮ ತಂಡಕ್ಕೆ ಹೆಚ್ಚಿನ ಮಾಹಿತಿ ಪಡೆಯಲು ಆಗಲಿಲ್ಲ’ ಎಂದು ತಿಳಿಸಿವೆ.
ಇದನ್ನೂ ಓದಿ: ಜೆಎನ್‍ಯು, ಜಾಮಿಯಾ ಮತ್ತು ಬೀದರ್ ಪ್ರಕರಣ: ನಮ್ಮ ಪೊಲಿಸರು ಹಿಂಗ ಯಾಕ ಅದಾರ?
ಅವತ್ತಿನ ಹಿಂಸಾಚಾರದ ವಿಡಿಯೋದಲ್ಲಿ ’ಕಾಣಿಸಿಕೊಂಡಿದ್ದ’ ದೆಹಲಿ ವಿವಿಯ ಕೋಮಲ್ ಶರ್ಮಾಳನ್ನು ಎಸ್‌ಐಟಿ ವಿಚಾರಣೆ ಮಾಡಿತು ಎನ್ನಲಾಗಿದೆ. ಆದರೆ ಆಕೆ, ’ಕೆಲವರು ನನ್ನನ್ನು ಇದರಲ್ಲಿ ಸಿಕ್ಕಿಸಲು ಯತ್ನಿಸುತ್ತಿದ್ದಾರೆ. ಈ ದಾಂಧಲೆಯಲ್ಲಿ ನಾನು ಪಾಲ್ಗೊಂಡಿಲ್ಲ’ ಎಂಬ ಹೇಳಿಕೆ ನೀಡಿದ್ದಾಳೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ.
ದೆಹಲಿ ಪೊಲೀಸ್ ವಕ್ತಾರ ಏಯಿಷ್ ಸಿಂಘಾಲ್, ’ದಾಂಧಲೆಗೆ ಸಂಬಂಧಿಸಿ ಮೂರು ಎಫ್‌ಐಆರ್ ದಾಖಲಾಗಿವೆ, ಆದರೆ ತನಿಖೆ ಪೆಂಡಿಂಗ್‌ನಲ್ಲಿದೆ’ ಎಂದು ಹೇಳಿದ್ದಾರೆ.
ಜನೆವರಿ 5 ರ ದಾಂಧಲೆ ಕುರಿತು ನಿಷ್ಕ್ರಿಯತೆ ತೋರಿದ್ದಕ್ಕಾಗಿ ಮತ್ತು ಗಾಯಗೊಂಡ ಅಧ್ಯಾಪಕರು, ವಿದ್ಯಾರ್ಥಿಗಳನ್ನು ಸೌಜನ್ಯಕ್ಕೂ ಭೇಟಿಯಾಗದ ಕಾರಣಕ್ಕಾಗಿ ಟೀಕೆಗೆ ಗುರಿಯಾದ ವಿವಿಯ ಆಡಳಿತವು, ಘಟನೆಯ ತನಿಖೆಗೆ ಐವರು ಸದಸ್ಯರ ಸಮಿತಿಯನ್ನು ನೇಮಿಸಿತು. ಆದರೆ ದಾಂಧಲೆ ನಡೆದು ಒಂದು ವರ್ಷವಾದ ಈ ಸಂದರ್ಭದಲ್ಲಿ ವಿವಿಯ ರಿಜಿಸ್ಟ್ರಾರ್ ಪ್ರಮೋದ್‌ಕುಮಾರ್, ’ಪೊಲೀಸರ ತನಿಖೆ ಜಾರಿಯಲ್ಲಿರುವ ಕಾರಣ ಆಂತರಿಕ ತನಿಖೆಯನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ದಾಂಧಲೆಯಲ್ಲಿ ಗಾಯಗೊಂಡ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ವಿವಿ ಸಮಿತಿ ತಮ್ಮನ್ನು ಒಂದು ಸಲವೂ ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಿಮಗೆ ಇದೇ ಸರಿಯಾದ ಚಿಕಿತ್ಸೆ : ಜೆಎನ್‌ಯು, ಜಾಮಿಯ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ ಕೇಂದ್ರ ಸಚಿವ..
’ಪೊಲೀಸರು ತನಿಖೆ ಮಾಡುತ್ತಿರುವ ಕಾರಣಕ್ಕೆ ಸಮಿತಿ ವರದಿ ಸಲ್ಲಿಸಿಲ್ಲ. ಇಲ್ಲಿ ಸಮಸ್ಯೆ ಏನಿದೆ? ದಾಂಧಲೆ ಆರಂಭಿಸಿದವರು ಯಾರು ಎಂಬುದಷ್ಟೇ ಅಲ್ಲವಾ? ನಾವು ಪೊಲೀಸರಿಗೆ ಎಲ್ಲ ರೀತಿಯ ನೆರವು ನೀಡಿದ್ದೇವೆ’ ಎನ್ನುತ್ತಾರೆ ರಿಜಿಸ್ಟ್ರಾರ್ ಪ್ರಮೋದ್ ಕುಮಾರ್.
ಕಬ್ಬಿಣದ ರಾಡ್‌ನಿಂದ ಹಲ್ಲೆಗೊಳಗಾಗಿ, ತಲೆಗೆ 16 ಹೊಲಿಗೆ ಹಾಕಿಸಿಕೊಂಡ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯೀಷಾ ಘೋಷ್, ’ಒಂದು ವರ್ಷದ ನಂತರ ಪ್ರಕರಣದಲ್ಲಿ ಒಂದಿಷ್ಟಾದರೂ ಬೆಳವಣಿಗೆ ಆಗಬೇಕಿತ್ತು. ನಮ್ಮ ಜೊತೆ ಇದ್ದೇವೆಂದು ಪೊಲೀಸರು ಹೇಳುತ್ತಾರಾದರೂ, ನಮ್ಮ ಹೇಳಿಕೆ ಪಡೆದ ನಂತರ ಮತ್ತೆಂದೂ ನಮ್ಮನ್ನು ಸಂಪರ್ಕಿಸಿಲ್ಲ, ಅವರು ಫಾಲೋ-ಅಪ್ ಮಾಡಲೇ ಇಲ್ಲ. ನಮ್ಮನ್ನೆಂದೂ ಸಂಪರ್ಕಿಸದ ಆಂತರಿಕ ತನಿಖಾ ಸಮಿತಿ ಬಗ್ಗೆ ನಮಗೆ ಭರವಸೆಯಿಲ್ಲ’ ಎಂದು ನಿರಾಶೆಯಿಂದ ಹೇಳಿದ್ದಾರೆ.
Never Forget !
Never Forgive ! pic.twitter.com/7Kkpco6u4r— Aishe (ঐশী) (@aishe_ghosh) January 5, 2021
ಕಲ್ಲುಗಳ ಏಟಿನಿಂದಾದ ಗಾಯದಿಂದ ತಲೆಗೆ ನಾಲ್ಕು ಹೊಲಿಗೆ ಹಾಕಿಸಿಕೊಂಡ ಪ್ರೊ. ಸುಚಿತ್ರಾ ಸೇನ್, ’ಜನೆವರಿ 20 ರಂದು ವಿ.ಸಿಗೆ ಪತ್ರ ಬರೆದು ನಿಷ್ಪಕ್ಷಪಾತ ತನಿಖೆ ನಡೆಸಿ ಮತ್ತು ಜೆಎನ್‌ಯು ನೇಮಿಸಿಕೊಂಡಿರುವ ಸೆಕ್ಯುರಿಟಿ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದೆ. ಇವತ್ತಿಗೂ ಇದಕ್ಕೆ ಉತ್ತರ ಬಂದಿಲ್ಲ. ಪೊಲೀಸರು ಒಮ್ಮೆ ಮಾತ್ರ ನಮ್ಮನ್ನು ಸಂರ್ಕಿಸಿದ್ದರು’ ಎನ್ನುತ್ತಾರೆ.
ಇದನ್ನೂ ಓದಿ: ಜೆಎನ್‍ಯು ಘಟನೆ: ಸಂಪೂರ್ಣ ಹಿನ್ನೆಲೆ ಮತ್ತು ಉತ್ತರವಿಲ್ಲದ ಪ್ರಶ್ನೆಗಳು – ಪ್ರೊ. ಪುರುಷೋತ್ತಮ ಬಿಳಿಮಲೆ


