ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಂಜಾಬ್‍ನವರು ಮಾತ್ರ ಭಾಗಿಯಾಗಿದ್ದಾರೆ ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಹೇಳಿದ್ದರು. ಈ ಹೇಳಿಕೆಗೆ ಸಾಹಿತಿ ದೇವನೂರು ಮಹಾದೇವ ತಿರುಗೇಟು ನೀಡಿದ್ದು, “ಕಣ್ಣು ಕುರುಡಾಗಿ, ಕಿವಿ ಕಿವುಡಾಗಿ ಸಂವೇದನೆ ಹೊರಟುಹೋಗಿದೆಯೇ ಎಂದು ಮಾಧ್ಯಮದವರು ಕೇಳಬೇಕು” ಎಂದು ಹೇಳಿದ್ದಾರೆ.
ಮೈಸೂರಿನ ಕೃಷಿ ಅಧ್ಯಯನ ಸಂಸ್ಥೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ ದೇವನೂರು ಮಹಾದೇವ, “ಪ್ರತಿಭಟನೆಯಲ್ಲಿ ಪಂಜಾಬ್‍ನವರು ಮಾತ್ರವಲ್ಲದೆ ಉತ್ತರಾಖಂಡ, ಹರಿಯಾಣ ಮುಂತಾದ ರಾಜ್ಯದ ಜನರು ಭಾಗಿಯಾಗಿದ್ದಾರೆ. ಎಲ್ಲ ರಾಜ್ಯಗಳಲ್ಲಿಯೂ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಈ ಬಗ್ಗೆ ಅವರಿಗೇಕೆ ತಿಳಿದಿಲ್ಲ? ಕಣ್ಣು ಕುರುಡಾಗಿದೆಯೇ, ಕಿವಿ ಕಿವುಡಾಗಿದೆಯೇ, ಸಂವೇದನೆ ಹೊರಟು ಹೋಗಿದೆಯೇ ಎಂದು ಮಾಧ್ಯಮದವರು ಅವರನ್ನು ಪ್ರಶ್ನಿಸಬೇಕಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: JNU ಹಿಂಸಾಚಾರಕ್ಕೆ ಒಂದು ವರ್ಷ: ಒಂದೂ ಅರೆಸ್ಟ್ ಇಲ್ಲ, ಚಾರ್ಜ್‌ಶೀಟ್ ಇಲ್ಲ, ಆಂತರಿಕ ತನಿಖೆ…
“ಸ್ವರಾಜ್ ಇಂಡಿಯಾ, ದಲಿತ ಸಂಘರ್ಷ ಸಮಿತಿ, ರೈತ ಸಂಘದ ಬೆಂಬಲಿತ 100 ಕ್ಕೂ ಹೆಚ್ಚು ಅಭ್ಯರ್ಥಿಗಳು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಆಯ್ಕೆಯಾಗಿರುವುದು ನಮಗೇ ಅನಿರೀಕ್ಷಿತ. ಇದು ಬದಲಾವಣೆಯ ಕಡೆಗೆ ನಮ್ಮ ಮೊದಲ ಹೆಜ್ಜೆ. ಸ್ಥಳೀಯ ಹಿತಾಸಕ್ತಿಯಿಂದ ಜನರಿಗಾಗಿ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳು ಆಯ್ಕೆಯಾಗಿರುವುದು ನಮಗೆ ಸಂತಸ ತಂದಿದೆ. ಇದು ಸ್ವರಾಜ್ ಇಂಡಿಯಾ ಪಕ್ಷದ ಸಮತಾವಾದದ ಮೌಲ್ಯಗಳು, ಸಮಾಜಮುಖಿ ಆಶಯಗಳಿಗೆ ಸಿಕ್ಕ ಜಯ” ಎಂದು ಹರ್ಷ ವ್ಯಕ್ತಪಡಿಸಿದರು.
“ಈಗ ನೀವು ಸಾಧಿಸಿರುವ ಗೆಲುವು ಬಹಿರಂಗದ ಗೆಲುವು. ಇದರಿಂದಾಗಿ ನೀವು ಜವಾಬ್ದಾರಿಯ ನೊಗ ಹೊತ್ತಂತಾಗಿದೆ. ಮುಂದೆ ತಾಲೂಕು ಹಾಗೂ ಜಿಲ್ಲಾ ಪಂಚಾಯತ್‌ಗೆ ಸ್ಪರ್ಧಿಸುವ ಯೋಚನೆ ಮಾಡಬೇಕು. ಇನ್ನು ಮುಂದೆ ಪ್ರತಿನಿತ್ಯವೂ ನಿಮ್ಮನ್ನು ನೀವು ಗೆಲ್ಲಬೇಕು. ಇದು ಆಂತರಂಗದ ಗೆಲುವು. ಬೇರೆ ಪಕ್ಷಗಳು ಒಡ್ಡುವ ಆಮಿಷದ ಎದುರು ನೀವು ಗೆಲ್ಲಬೇಕು. ಅದು ನಿಜವಾದ ಗೆಲುವು. ಸ್ವರಾಜ್ ಇಂಡಿಯಾ ಪಕ್ಷಕ್ಕೆ ತನ್ನದೇ ಆದ ಸಿದ್ಧಾಂತಗಳಿವೆ. ನಿಷ್ಠೆಯಿಂದ ಒಳ್ಳೆಯ ಕೆಲಸ ಮಾಡಬೇಕು. ಗೆದ್ದವರು ಸೋತವರೊಂದಿಗೆ ವಿಶ್ವಾಸದಿಂದರಬೇಕು” ಎಂದು ಆಯ್ಕೆಯಾದವರಿಗೆ ಸಲಹೆ ನೀಡಿದರು.
ಇದನ್ನೂ ಓದಿ: ಸ್ಥಾನಮಾನ ಸಿಕ್ಕರೆ ಬಿಜೆಪಿ ಸೇರ್ಪಡೆ ಖಚಿತ: ಶಾಸಕ ಎನ್ ಮಹೇಶ್


