ನಮ್ಮೆಲ್ಲರ ಶತ್ರು ಒಬ್ಬನೇ ಎಂಬುದನ್ನು ಅರಿತು ಸಂಘಟನೆ ಕಟ್ಟುವುದು ಇಂದಿನ ಅಗತ್ಯ ಎಂದು ಟಿಕ್ರಿಗಡಿಯಲ್ಲಿ ರೈತ ಹೋರಾಟ ಮುನ್ನಡೆಸುತ್ತಿರುವ ಸುರೀಂದರ್ ಸಿಂಘ್ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ಮಾಸ್ ಮೀಡಿಯಾ ಫೌಂಡೇಷನ್ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಪಂಜಾಬಿನ ರೈತರು ಸಂಘಟಿತರಾಗಿದ್ದು ಹೇಗೆ, ಫ್ಯಾಸಿಸ್ಟ್ ಶಕ್ತಿಯ ದಬ್ಬಾಳಿಕೆ ವಿರುದ್ಧ ಹೋರಾಟ ಮೊದಲಾಗಿದ್ದು ಹೇಗೆ ಎಂಬುದನ್ನು ವಿವರಿಸಿದರು.
ಪಂಜಾಬಿನಲ್ಲಿ ಇದುವರೆಗೆ ನಡೆದ ಯಾವುದೇ ಯುದ್ಧ ಅನ್ಯಾಯ, ಹಿಂಸೆಗಳ ವಿರುದ್ಧ ನಡೆದಿದೆಯೇ ಹೊರತು, ಜಾತಿ ಮತಗಳ ವಿರುದ್ಧವಲ್ಲ ಎಂದು ಅವರು ಹೇಳಿದರು.
1980ರ ನಂತರ ಭಾರತದಲ್ಲಿ ಕೃಷಿ ಸಮಸ್ಯೆ ಹೆಚ್ಚಾಯಿತು. ಹಸಿರು ಕ್ರಾಂತಿಯ ಮೂಲಕ ಕಂಡ ಅಭಿವೃದ್ಧಿಯ ಕನಸು ಸಾಯಲಾರಂಭಿಸಿತ್ತು. ವಿವೇಕದ ಕೊರತೆಯೇ ಈ ಹಿನ್ನೆಡೆಗೆ ಕಾರಣ ಎಂಬುದನ್ನು ಅರಿತೆವು. ಆಗಿನಿಂದ ಸಂಘಟನೆ ಕಟ್ಟುತ್ತಿದ್ದೇವೆ ಎಂದರು.
ಸುರೀಂದರ್ ಸಿಂಘ್ ರವರ ವಿಡಿಯೋ ನೋಡಿ:
“ಪಂಜಾಬಿನ ವಿವಿಧ ಭಾಗಗಳಲ್ಲಿ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ರೈತರು ಹೋರಾಟ ನಡೆಸಿದ್ದರು. ಅವರೆಲ್ಲರನ್ನೂ ಒಗ್ಗೂಡಿಸಬೇಕಿತ್ತು. ಗೂಂಡಾ, ಪೊಲೀಸ್, ರಾಜಕಾರಣಿಯ ಒಕ್ಕೂಟದ ಎದರು ನಾವು ಒಟ್ಟಾಗಿ ಹೋರಾಡಬೇಕು ಎಂಬ ಘೋಷಣೆಯ ಮೂಲಕ ಭಿನ್ನ ವಿಚಾರಧಾರೆಯವರನ್ನು ಒಂದುಗೂಡಿಸಿದೆವು” ಎಂದು ರೈತ ಹೋರಾಟ ಸಂಘಟಿಸಿದ ಬಗೆಯನ್ನು ಸುರೀಂದರ್ ಸಿಂಘ್ ವಿವರಿಸಿದರು.
“ಮೋದಿ ಸರ್ಕಾರ ಬಂದ ಮೇಲೆ ಪಂಜಾಬ್ ಮೇಲೆ ಮತ್ತೊಂದು ರೀತಿಯ ದಾಳಿ ನಡೆಯಿತು. ಕಾಶ್ಮೀರದ ಮೇಲೆ ನಡೆದಂತೆ, ಸತ್ಯದ ಮಾತನಾಡಿದ ಗೌರಿ ಲಂಕೇಶರಂತಹವರ ಮೇಲೆ ದಾಳಿ ನಡೆದಂತೆ ಪಂಜಾಬಿನಲ್ಲಿ ಹಲವು ದಾಳಿಗಳು ನಡೆದವು. ಈ ಫ್ಯಾಸಿಸ್ಟ್ ದಾಳಿಯನ್ನು ವಿರೋಧಿಸಿ ಚಂಡೀಗಢದಲ್ಲಿ 20000 ಜನಕ್ಕೂ ಹೆಚ್ಚು ಮಂದಿ ಸೇರಿ ಪ್ರತಿಭಟನೆ ನಡೆಸಿದರು. ಹೀಗೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಒಕ್ಕೂಟವೊಂದು ರಚನೆಯಾಯಿತು” ಎಂದು ಸುರೀಂದರ್ ಸಿಂಘ್ ವಿವರಿಸಿದರು.
(ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ)
ಇದನ್ನೂ ಓದಿ: ಟ್ರ್ಯಾಕ್ಟರ್ ರ್‍ಯಾಲಿ: ದಿಟ್ಟ ರೈತ ಹೋರಾಟದ ಗಮನಸೆಳೆದ 10 ಫೋಟೊಗಳು


