Homeಮುಖಪುಟಉತ್ತರ ಪ್ರದೇಶ ದೇವಸ್ಥಾನದಲ್ಲಿ ಅತ್ಯಾಚಾರ, ಕೊಲೆ: ಅರ್ಚಕನ ಬಂಧನ

ಉತ್ತರ ಪ್ರದೇಶ ದೇವಸ್ಥಾನದಲ್ಲಿ ಅತ್ಯಾಚಾರ, ಕೊಲೆ: ಅರ್ಚಕನ ಬಂಧನ

ಈ ನಡುವೆ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯೊಬ್ಬರು ಆಕ್ಷೇಪಾರ್ಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- Advertisement -
- Advertisement -

ಉತ್ತರಪ್ರದೇಶದ ಬಡೌನ್ ಜಿಲ್ಲೆಯ ಗ್ರಾಮವೊಂದರಲ್ಲಿ 50 ವರ್ಷದ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಸಂತ್ರಸ್ತೆಯನ್ನು ಅವರ ಮನೆ ಎದುರು ಬಿಸಾಕಿ ಹೋದ ಅಮಾನವೀಯ ಘಟನೆ ಭಾನುವಾರ ನಡೆದಿತ್ತು. ದೇವಸ್ಥಾನದಲ್ಲಿಯೇ ಅತ್ಯಾಚಾರ ನಡೆದಿದೆ ಎಂದು ಹೇಳಲಾಗಿತ್ತು.

ಘಟನೆ ನಡೆದ ನಾಲ್ಕು ದಿನಗಳ ನಂತರ ಪೊಲೀಸರು ಪ್ರಮುಖ ಆರೋಪಿ ದೇವಸ್ಥಾನದ ಅರ್ಚಕ ಸತ್ಯಾನಂದ ಎಂಬುವವರನ್ನು ಬಂಧಿಸಿದ್ದಾರೆ. ಪಕ್ಕದ ಗ್ರಾಮದ ಭಕ್ತರೊಬ್ಬರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದ ಅವನನ್ನು ಗುರುವಾರ ತಡ ರಾತ್ರಿ ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕುಮಾರ್ ಪ್ರಶಾಂತ್ ಹೇಳಿಕೆ ಆಧರಿಸಿ ಪಿಟಿಐ ವರದಿ ಮಾಡಿದೆ.

ಅರ್ಚಕ ಮತ್ತು ಆತನ ಇಬ್ಬರು ಸಹಚರರು ಭಾನುವಾರ ರಾತ್ರಿ ಆಕೆಯನ್ನು ಅವರ ಮನೆ ಮುಂದೆ ಬಿಟ್ಟು ಹೋಗಿದ್ದರು ಎಂಬ ಆರೋಪವಿದ್ದು, ನಂತರ ಅತಿಯಾದ ರಕ್ತಸ್ರಾವದಿಂದ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.ಇನ್ನಿಬ್ಬರು ಆರೋಪಿಗಳನ್ನು ಬುಧವಾರವೇ ಬಂಧಿಸಲಾಗಿತ್ತು.

ಸ್ಥಳೀಯರೊಬ್ಬರು ಹೇಳುವಂತೆ, ಸಾವಿಗೀಡಾದ ಮಹಿಳೆ ನಿಯಮಿತವಾಗಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ರವಿವಾರ ಏನಾಯ್ತು ಎಂಬುದು ಯಾರಿಗೂ ಗೊತ್ತಿಲ್ಲ. ಗ್ರಾಮದ ಪ್ರಮುಖ ರಸ್ತೆಯ ಸಮೀಪದಲ್ಲೇ ದೇವಸ್ಥಾನವಿದ್ದು, ಅದರ ಆವರಣದ ಕೋಣೆಯೊಂದರಲ್ಲಿ ಅರ್ಚಕ ಸತ್ಯಾನಂದ ವಾಸವಾಗಿದ್ದಾರೆ. ಸ್ಥಳೀಯರ ಪ್ರಕಾರ, ಸತ್ಯಾನಂದ 5 ಬರ್ಷದ ಹಿಂದೆ ಗ್ರಾಮಕ್ಕೆ ಬಂದಿದ್ದು, ಜನರೊಡನೆ ಅಷ್ಟಾಗಿ ಬೆರೆಯುತ್ತಿರಲಿಲ್ಲ.

‘ಸಮೀಪದ ಪ್ರದೇಶಗಳಿಂದ ಜನರು ಅಲ್ಲಿಗೆ ಬರುತ್ತಿದ್ದ ಕಾರಣಕ್ಕಷ್ಟೇ ಸತ್ಯಾನಂದನ ಬಗ್ಗೆ ಸ್ಥಳೀಯರಿಗೆ ತಿಳಿದಿತ್ತು. ಈ ಘಟನೆ ಸಂಭವಿಸುವವರೆಗೆ ಜನರು ದೇವಸ್ಥಾನದ ಆಗು-ಹೋಗುಗಳಲ್ಲಿ ಅಷ್ಟಾಗಿ ಮಧ್ಯಸ್ಥಿಕೆ ವಹಿಸುತ್ತಿರಲಿಲ್ಲ ಮತ್ತು ಅರ್ಚಕನ ಬಗ್ಗೆ ತಿಳಿಯುವ ಪ್ರಯತ್ನ ಮಾಡಿರಲಿಲ್ಲ. ಆತನನ್ನು ಕೆಲವೊಮ್ಮೆ ದೇವಸ್ಥಾನದ ಅವರಣದ ಹೊರಗೆ ನೋಡಿದ್ದೇವೆ. ಆದರೂ, ಆತ ಹೊರಬಂದಿದ್ದು ತುಂಬ ವಿರಳ’ ಎಂದು ಸ್ಥಳೀಯ ನಿವಾಸಿ ನಂದು ಹೇಳಿದ್ದಾರೆ.

ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ ಭಕ್ತರು, ‘ತಮಗಾಗಿ ಸತ್ಯಾನಂದ ಪೂಜೆಯ ಆಚರಣೆಗಳನ್ನು ನಡೆಸುತ್ತಿದ್ದರು. ಜನರ ನೋವು ಶಮನಕ್ಕೆ ಸಭೆ ನಡೆಸುತ್ತಿದ್ದರು’ ಎಂದಿದ್ದಾರೆ.

‘ಬಂಧಿತರಾದ ಇತರ ಇಬ್ಬರು ಆರೋಪಿಗಳು, ಗಾಯಗೊಂಡ ಸ್ಥಿತಿಯಲ್ಲಿದ್ದ ಆ ಮಹಿಳೆಗೆ ಸಹಾಯ ಮಾಡಲು ತಾವು ಪ್ರಯತ್ನಿಸಿದ್ದಾಗಿ ಹೇಳುತ್ತಿದ್ದಾರೆ. ಆದರೆ ನಾನು ಅಪರಾಧ ನಡೆದ ಸ್ಥಳದ ಪರಿಶೀಲನೆ ನಡೆಸಿದ್ದು, ನಮಗೆ ಲಭ್ಯವಾದ ಆಧಾರಗಳ ಪ್ರಕಾರ ನಾವು ಇದನ್ನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ಪ್ರಕರಣ ಎಂದು ಪರಿಗಣಿಸಿದ್ದೇವೆ’ ಎಂದು ಬಡೌನ್ ಜಿಲ್ಲೆಯ ಎಸ್‌ಎಸ್‌ಪಿ ಸಂಕಲ್ಪ್ ಶರ್ಮಾ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಬಂಧಿತ ಇಬ್ಬರ ಹೇಳಿಕೆಯನ್ನು ಮೃತ ಮಹಿಳೆಯ ಕುಟುಂಬ ಒಪ್ಪಿಲ್ಲ. ‘ಮಹಿಳೆಗೆ ಸಹಾಯ ಮಾಡುವ ಉದ್ದೇಶವಿದ್ದಿದ್ದರೆ, ಅವರು ಗ್ರಾಮಸ್ಥರನ್ನು ಎಬ್ಬಿಸಬಹುದಿತ್ತು. ಆದರೆ ಅವರ ಉದ್ದೇಶ ಆಕೆ ಸಾಯಬೇಕು ಎಂಬುದೇ ಆಗಿತ್ತು. ದೇವರ ಭಕ್ತೆಯಾಗಿದ್ದ ಆಕೆಗೆ ದೇವಸ್ಥಾನದಲ್ಲಿ ಇಂಥದ್ದು ಸಂಭವಿಸುತ್ತದೆ ಎಂಬುದನ್ನು ನಾವು ಊಹಿಸಿರಲೂ ಇಲ್ಲ’ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಮಹಿಳಾ ಆಯೋಗದ ಸದಸ್ಯೆಯ ಹೇಳಿಕೆ

ಗುರುವಾರ ಗ್ರಾಮಕ್ಕೆ ಭೇಟಿ ನೀಡಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಚಂದ್ರಮುಖಿ ದೇವಿ, ‘ಸಂಜೆ ಹೊತ್ತಿನಲ್ಲಿ ಏಕಾಂಗಿಯಾಗಿ ಆ ಮಹಿಳೆ ಹೊರಬರದಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ’ ಎಂಬ ಹೇಳಿಕೆ ನೀಡಿದ್ದಾರೆ.

‘ಈ ಘಟನೆ ಮಾನವೀಯತೆಗೆ ಮಾಡಿದ ಅವಮಾನ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಮಹಿಳೆಯರು –ಯಾರದೇ ಪ್ರಭಾವಕ್ಕೆ ಒಳಗಾಗಿದ್ದರೂ-ಅಕಾಲಿಕವಾಗಿ ಮನೆಯಿಂದ ಹೊರ ಹೋಗಲೇಬಾರದು. ಮಹಿಳೆ ಸಂಜೆ ಹೊತ್ತು ಬರದಿದ್ದರೆ ಅಥವಾ ಹೊರ ಬಂದಾಗ ಜೊತೆಗೆ ಆಕೆಯ ಜೊತೆ ಒಬ್ಬ ಮಗನಾದರೂ ಇದ್ದಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ’ ಎಂದು ಚಂದ್ರಮುಖಿ ದೇವಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ‘ಆಯೋಗದ ಸದಸ್ಯೆ ಹಾಗೇಕೆ ಹೇಳಿದರು ಎಂಬುದು ನನಗೆ ಗೊತ್ತಿಲ್ಲ. ಆದರೆ ಯಾವುದೇ ಹೊತ್ತಿನಲ್ಲಿ, ಯಾವುದೇ ಸ್ಥಳಕ್ಕೆ ತನ್ನ ಇಚ್ಛಾನುಸಾರ ಹೋಗುವ ಸ್ವಾತಂತ್ರ್ಯ ಮಹಿಳೆಗಿದೆ’ ಎಂದಿದ್ದಾರೆ.


ಇದನ್ನೂ ಓದಿ: ಸೂಜಿ ತಯಾರಿಕಾ ಕಂಪೆನಿ ’ಸ್ಮಿಟ್ಝ್’ ಲಾಕೌಟ್: ನೂರಾರು ಕಾರ್ಮಿಕರು ಬೀದಿಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...