ಕರ್ನಾಟಕ ಬಹುಜನ ಕ್ರಾಂತಿದಳ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಬಿಎಸ್‌ಪಿ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷರಾಗಿದ್ದ ದಲಿತ ಮುಖಂಡ ಶ್ರೀನಿವಾಸ್ ಕೊಲೆ ಖಂಡಿಸಿ ಇಂದು ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಯಿತು.
ಶ್ರೀನಿವಾಸ್‌ರವರಿಗೆ ಬೆದರಿಕೆ ಕರೆಗಳು ಬರುತ್ತಿದ್ದವು. ಸ್ಲಂ ಭರತ್ ಕಡೆಯ ಹಲವು ರೌಡಿಗಳು ಅವರ ಮೇಲೆ ಕಣ್ಣಿಟ್ಟಿದ್ದರು. ಅವರ ರಕ್ಷಣೆಗಾಗಿ ಬಂದೂಕು ಹೊಂದಬೇಕಾದ ಪರಿಸ್ಥಿತಿ ಬಂದಿತ್ತು. ಇಷ್ಟೆಲ್ಲಾ ಮಾಹಿತಿಗಳು ಪೊಲೀಸರಿಗೆ, ಗುಪ್ತಚರ ಇಲಾಖೆಗೆ ಗೊತ್ತಿದ್ದರೂ ಅವರು ಕ್ರಮ ತೆಗೆದುಕೊಳ್ಳದಿರುವುದೇ ಕೊಲೆಗೆ ಕಾರಣ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಬೆಂಗಳೂರಿನ ರಾಜಗೋಪಾಲನಗರದಲ್ಲಿ ಶ್ರೀನಿವಾಸ್‌ರವರು ಜನರ ಮೂಲಭೂತ ಸಮಸ್ಯೆಗಳ ವಿರುದ್ದ ಹಲವಾರು ಹೋರಾಟ ಮಾಡಿದ್ದರು. ರಾಜ್ಯದ ಹಲವು ಕಡೆ ದಲಿತರ ಮೇಲಿನ ದೌರ್ಜನ್ಯವಾದಾಗ ಪ್ರತಿಭಟನೆ ನಡೆಸಿದ್ದರು. ಇಂತಹವರನ್ನು ರೌಡಿಗಳು ಕೊಲೆಗೈದಿದ್ದಾರೆ. ಆದರೆ ಇದೆಲ್ಲಾ ಪೊಲೀಸರಿಗೆ ತಿಳಿದಿದ್ದರೂ ಅವರು ಏನು ಮಾಡಿಲ್ಲ. ಕನಿಷ್ಠ ಪಕ್ಷ ಆರೋಪಿಗಳನ್ನು ಬಂಧಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಬಿಎಸ್‌ಪಿ ಮುಖಂಡರಾದ ಗುರುಮೂರ್ತಿಯವರು “ಶ್ರೀನಿವಾಸ್‌ರವರ ಬಿಎಸ್‌ಪಿ ಪಕ್ಷದ ವತಿಯಿಂದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಎನ್‌ಕೌಂಟರ್ ಆದ ಸ್ಲಂ ಭರತ ಇವರಿಗೆ ಹಫ್ತಾ ಕೊಡುವಂತೆ ಇವರನ್ನು ಪದೇ ಪದೇ ಒತ್ತಾಯಿಸಿದ್ದ. ಆದರೆ ಶ್ರೀನಿವಾಸ್ ನಾನು ದುಡಿದುದರಲ್ಲಿ ನಿಮಗೇಕೆ ಕೋಡಬೇಕು ಎಂದು ಪ್ರಶ್ನಿಸಿದ್ದರು. ಆಗ ಇವರಿಬ್ಬರ ನಡುವೆ ವೈಷಮ್ಯ ಬೆಳೆದಿತ್ತು. ಈ ಕುರಿತು ಶ್ರೀನಿವಾಸ್ ಪೊಲೀಸರಿಗೆ ದೂರು ನೀಡಿದ್ದರು. ಆ ಸಮಯದಲ್ಲಿಯೇ ಸ್ಲಂ ಭರತ್ ಎನ್‌ಕೌಂಟರ್ ಆಗಿತ್ತು. ಅವರ ಬೆಂಬಲಿಗರು ದ್ವೇಷ ಸಾಧಿಸಿ ನಿನ್ನೆ ಶ್ರೀನಿವಾಸ್‌ರವನ್ನು ಕೊಲೆಗೈಯಲಾಗಿದೆ” ಎಂದಿದ್ದಾರೆ.
ಇದನ್ನೂ ಓದಿ: ಅಂಬಾನಿ 5G ಗಾಗಿ ಥಿಯೇಟರ್ ಓಪನ್ ಮಾಡ್ತಿಲ್ಲ; ಇದು ಬಹುದೊಡ್ಡ ಹಗರಣ ಎಂದ ನಟ ದರ್ಶನ್!


