ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಪ್ರಧಾನಿ ಭಾಷಣಕ್ಕೆ ಅಡ್ಡಿಪಡಿಸದೇ ದೆಹಲಿಯಲ್ಲಿ ಟ್ರ್ಯಾಕ್ಟರ್ ಗಳೊಂದಿಗೆ ರೈತರು ಪರೇಡ್ ನಡೆಸಲಿದ್ದಾರೆ. ಅಂದು ಬೆಂಗಳೂರಿನಲ್ಲಿ ಕೂಡ ಪ್ರತಿಭಟನೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೃಷಿ ಮಾರುಕಟ್ಟೆ ಮುಚ್ಚಲ್ಲ ಎಂದು ಹೇಳಿತ್ತು. ಆದರೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರದೆ ಎಪಿಎಂಸಿ ಕಾಯ್ದೆಯನ್ನೇ ಬೈಪಾಸ್ ಮಾಡಿದೆ. ಇದರಿಂದ ಈ ಕಾಯ್ದೆಯನ್ನು ತಿದ್ದುವುದು, ಬರೆಯುವುದಕ್ಕೆ ಬರುವುದಿಲ್ಲ. ರೈತರಿಗೆ ಸಬ್ಸಿಡಿ ಕೊಡುತ್ತೇವೆ ಎಂದು ಕೇಂದ್ರ ಹೇಳುತ್ತದೆ. ಆದರೆ ಈ ಅಂಶ ಕಾನೂನಿನಲ್ಲಿ ಒಳಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರದಂತೆ ರಾಜ್ಯ ಸರ್ಕಾರವೂ ರೈತರಿಗೆ ಸುಳ್ಳು ಹೇಳುತ್ತಿದೆ. ತಾನು ರೂಪಿಸಿದ ಕಾಯ್ದೆಯನ್ನು ಸಮರ್ಥಿಸಿಕೊಳ್ಳಲು ಸುಳ್ಳಿನ ಕೋಟೆಯನ್ನು ಕಟ್ಟುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕಾನೂನು ಸಚಿವರನ್ನೇ ಹೊರಗಿಟ್ಟು ಕಾಯ್ದೆಯನ್ನು ರೂಪಿಸಲಾಗಿದೆ. ಕಾಯ್ದೆಯ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ವಿದೇಶದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಉದ್ದೇಶದಿಂದ ಕಾನೂನು ರೂಪಿಸಲಾಗುತ್ತಿದೆ. ಗ್ರಾಮೀಣ ಭಾಗದ ಹೈನುಗಾರಿಕೆಗೆ ಕೊನೆ ಹಾಡಲು ಸರ್ಕಾರಗಳು ಪ್ರಯತ್ನಿಸುತ್ತಿವೆ. ಗ್ರಾಮೀಣ ಮಹಿಳೆಯರು ಹೈನುಗಾರಿಕೆ ನಂಬಿ ಜೀವನ ಸಾಗಿಸುತ್ತಿದ್ದಾರೆ. ನಾಲ್ಕೈದು ಹಸುಗಳನ್ನು ಸಾಕಿ ಹಾಲು ಮಾರಾಟದಿಂದ ಮನೆ ನಿರ್ವಹಣೆ ಮಾಡಲಾಗುತ್ತಿದೆ. ಮಕ್ಕಳ ಹೊಟ್ಟೆ ಬಟ್ಟೆಗೆ, ಶಿಕ್ಷಣಕ್ಕೆ ಇದೇ ಹಣವನ್ನು ಬಳುಸುತ್ತಿದ್ದಾರೆ. ಹೈನುಗಾರಿಕೆಯನ್ನು ಕೃಷಿಯಿಂದ ಹೊರಗಿಡುವ ಕೆಲಸ ನಡೆಯುತ್ತಿದ್ದು, ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಬೃಹತ್ ಬಂಡವಾಳಿಗರಿಗೆ, ಕಾರ್ಪೋರೇಟ್ ಕುಳಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಲಾಗುತ್ತಿದೆ. ಬಂಡವಾಳಿಗರು ಕೃಷಿಯಲ್ಲಿ ಬಂಡವಾಳ ತೊಡಗಿಸಿ ಕೃಷಿಯಿಂದ ರೈತರನ್ನು ದೂರ ಮಾಡುವ ಮತ್ತು ಕಾರ್ಪೋರೇಟ್ ಕಂಪನಿಗಳು ಕೃಷಿ ಉತ್ಪನ್ನ ಮಾರಾಟ ದಿಂದ ಲಾಭ ಪಡೆಯುವುದಕ್ಕೆ ಪ್ರೋತ್ಸಾಹ ನೀಡುವಂತಹ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರು ಗೋಹತ್ಯೆ ನಿಷೇಧ ಕಾಯ್ದೆಗೆ ಅಂಕಿತ ಹಾಕುವ ಮೊದಲು ಯೋಚಿಸಬೇಕಿತ್ತು. ಗೋಹತ್ಯೆ ನಿಷೇಧ ಕಾಯ್ದೆ ವಿಧಾನಪರಿಷತ್ ನಲ್ಲಿ ಅಂಗೀಕಾರಗೊಳ್ಳದಿದ್ದರೂ ರಾಜ್ಯಪಾಲರು ಅದಕ್ಕೆ ಅಂಕಿತ ಹಾಕಿದ್ದಾರೆ. ಇದು ಅವರ ಅಲ್ಪಮತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದಪಟೇಲ್ ಮೊದಲಾದವರು ಇದ್ದರು.
ಇದನ್ನೂ ಓದಿ; ಕೃಷಿ ಕಾಯ್ದೆಗಳು & ರೈತ ಹೋರಾಟದ ಕುರಿತು ಇಂದು ಸುಪ್ರೀಂ ಕೋರ್ಟ್‌ನಲ್ಲಿನ ವಾದ-ವಿವಾದ ಹೀಗಿತ್ತು..


