Homeಮುಖಪುಟಕೃಷಿ ಕಾಯ್ದೆಗಳು & ರೈತ ಹೋರಾಟದ ಕುರಿತು ಇಂದು ಸುಪ್ರೀಂ ಕೋರ್ಟ್‌‌ನಲ್ಲಿನ ವಾದ-ವಿವಾದ ಹೀಗಿತ್ತು..

ಕೃಷಿ ಕಾಯ್ದೆಗಳು & ರೈತ ಹೋರಾಟದ ಕುರಿತು ಇಂದು ಸುಪ್ರೀಂ ಕೋರ್ಟ್‌‌ನಲ್ಲಿನ ವಾದ-ವಿವಾದ ಹೀಗಿತ್ತು..

ಇಂದು ಸುಪ್ರೀಂನಲ್ಲಿ ನಡೆದ ಚರ್ಚೆಗಳಿಗೆ ಪ್ರತಿಕ್ರಿಯಿಸಿದ ಹೋರಾಟ ನಿರತ ರೈತರು, ’ನಮ್ಮನ್ನು ದೆಹಲಿಯಿಂದ ಹೊರಹಾಕುವ ಪ್ರಯತ್ನವಿದು. ಕಾನೂನು ಜಾರಿಗೆ ತಾತ್ಕಲಿಕ ತಡೆ ತರುವುದಲ್ಲ, ಕಾನೂನು ಹಿಂಪಡೆಯಬೇಕೆಂಬುದೇ ನಮ್ಮ ಆಗ್ರಹ’ ಎಂದಿದ್ದಾರೆ

- Advertisement -
- Advertisement -

ವಿವಾದಾತ್ಮಕ ನೂತನ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಗಳಲ್ಲಿ ಪ್ರತಿಭಟನಾನಿರತರಾಗಿರುವ ರೈತರನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ನೇತೃತ್ವದ ಸುಪ್ರೀಂ ಕೋರ್ಟ್‌ ಪೀಠ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತು. ಸುಪ್ರೀಂನಲ್ಲಿ ನಡೆದ ವಾದ-ವಿವಾದ ಹೀಗಿತ್ತು.

ಕೇಂದ್ರ ಸರ್ಕಾರ ರೈತ ಪ್ರತಿಭಟನೆಯನ್ನು ನಿಭಾಯಿಸಿದ ರೀತಿ ನಿಜಕ್ಕೂ ಅತೀವ ನಿರಾಶೆ ಉಂಟು ಮಾಡಿದೆ. ಈ ಕಾನೂನು ಜಾರಿಗೆ ತರಲು ಕೇಂದ್ರ ಸರ್ಕಾರ ಯಾವ ರೀತಿಯ ಸಮಾಲೋಚನಾ ಪ್ರಕ್ರಿಯೆ ಅನುಸರಿಸಿದೆಯೋ ಗೊತ್ತಿಲ್ಲ. ಆದರೆ ಈ ಕಾನೂನಗಳ ವಿರುದ್ಧ ಹಲವು ರಾಜ್ಯಗಳ ರೈತರು ಬಂಡೆದಿದ್ದಾರೆ ಎಂದು ಕೋರ್ಟ್‌ ಹೇಳಿದೆ.

ಸರ್ಕಾರದ ಪರ ವಕೀಲ, ಅಟರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌, ಹಿಂದಿನ ಸರ್ಕಾರ ತಜ್ಞ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಈ ಕಾನೂನುಗಳನ್ನು ರೂಪಿಸಲಾಗಿದೆ. ಎಪಿಎಂಪಿ ವ್ಯವಸ್ಥೆಯಲ್ಲಿ ನಿರ್ಬಂಧಗಳನ್ನು ತೆಗೆದು ಹಾಕಲು ಮತ್ತು ನೇರ ಮಾರುಕಟ್ಟೆಗೆ ಮುಕ್ತ ಅವಕಾಶ ಕಲ್ಪಿಸುವಂತೆ ಸಮಿತಿಗಳು ಸಲಹೆ ನೀಡಿದ್ದವು ಎಂದು ಸಮಜಾಯಿಷಿ ನೀಡಿದರು.

“ನಮ್ಮ ಉದ್ದೇಶ ಸ್ಪಷ್ಟ. ಸಮಸ್ಯೆಗೆ ಸೌಹಾರ್ದಯುತವಾದ ಪರಿಹಾರ ಕಂಡುಕೊಳ್ಳಬೇಕು. ಇದೇ ಕಾರಣಕ್ಕೆ ಕಳೆದ ಬಾರಿಯೇ ಈ ಕಾನೂನುಗಳಿಗೆ ತಾತ್ಕಲಿಕವಾಗಿ ತಡೆಯಬಾರದೇಕೆ ಎಂದು ಕೇಳಿದ್ದೆವು. ಆದರೆ ನೀವು ಮತ್ತೆ ಮತ್ತೆ ಸಮಯಾವಕಾಶ ಕೇಳುತ್ತಿದ್ದೀರಿ” ಎಂದು ನ್ಯಾಯಪೀಠ ಹೇಳಿತು.

ನಿಮಗೆ ಕೊಂಚವಾದರೂ ಹೊಣೆಗಾರಿಕೆ ಪ್ರಜ್ಞೆ ಎಂಬುದಿದ್ದರೆ ಮತ್ತು ನೀವು ಕಾನೂನುಗಳ ಜಾರಿಯನ್ನು ತಡೆಯುವುದಾಗಿ ನೀವು ಹೇಳುವಿರಾದರೆ, ನಾವು ಸಮಿತಿಯೊಂದನ್ನು ಈ ವಿಷಯ ನಿರ್ಧರಿಸುವುದಕ್ಕೆ ರಚಿಸುತ್ತೇವೆ. ಈ ಕಾನೂನುಗಳು ಜಾರಿಯಾಗಲೇ ಬೇಕು ಎಂದು ಪಟ್ಟುಹಿಡಿಯುವುದಕ್ಕೆ ಕಾರಣ ಕಾಣುತ್ತಿಲ್ಲ ಎಂದು ನ್ಯಾಯಪೀಠ ಹೇಳಿತು.

ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ನ್ಯಾಯಪೀಠ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ನಾವು ಪರಿಹಾರದ ಭಾಗವಾಗಿದ್ದೇವೆ. ಈ ಕಾನೂನುಗಳು ಪ್ರಗತಿಪರವಾಗಿ ಎಂದು ಹೇಳುವ ಹಲವು ರೈತ ಸಂಘಟನೆಗಳಿವೆ ಎಂದು ಸರ್ಕಾರದ ಪರ ವಕಾಲತ್ತು ನೀಡಿದರು.

‘ಆದರೆ ಇದುವರೆಗೂ ಈ ಕಾನೂನುಗಳು ಉತ್ತಮವಾಗಿವೆ ಎಂದು ಸಮರ್ಥಿಸುವ ಒಂದೇ ಒಂದು ಪಿಟಿಷನ್‌ ಬಂದಿಲ್ಲ’ ಎಂದು ಬೋಬ್ಡೆ ನೇತೃತ್ವದ ನ್ಯಾಯಪೀಠ ತಿರುಗೇಟು ನೀಡಿತು.

ವಾದ ಮುಂದುವರೆಸಿದ ಸಾಲಿಸಿಟರ್‌ ಜನರಲ್‌, ಕೆಲವು ಗುಂಪುಗಳು ಪ್ರತಿಭಟಿಸಿದವು ಎಂಬ ಕಾರಣಕ್ಕೆ ನಮಗೆ ಲಾಭದಾಯಕವಾಗಿದ್ದ ಕಾನೂನುಗಳನ್ನು ಯಾಕೆ ತಡೆದಿರಿ ಎಂದು ಕೇಳಿದರೆ ಏನು ಮಾಡುವುದು ಎಂಬ ತಕರಾರನ್ನು ನ್ಯಾಯಪೀಠದ ಮುಂದೆ ಇಟ್ಟರು.

ನ್ಯಾಯಪೀಠ, ನಾವು ಇದರಲ್ಲಿ ಭಾಗಿಯಾಗಬಯಸುವುದಿಲ್ಲ. ಇದನ್ನು ಸಮಿತಿ ಚರ್ಚಿಸಲಿ ಎಂದು ಉತ್ತರಿಸಿ, ಕೇಂದ್ರ ಸರ್ಕಾರಕ್ಕೆ ಸಮಿತಿ ನೇಮಿಸಲಾಗದಿದ್ದರೆ, ನಾವೇ ನೇಮಿಸುವುದಾಗಿ ಖಾರವಾಗಿ ಉತ್ತರಿಸಿತು.

ಜನ ಚಳಿಯಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಬಿಗಡಾಯಿಸುತ್ತಿದೆ. ಈ ಕುರಿತು ನೀವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತು.

ರೈತ ಮುಖಂಡರು ಮತ್ತು ಸರ್ಕಾರದ ನಡುವೆ ನಡೆಯುತ್ತಿರುವ ಮಾತುಕತೆಗಳು ಬಿದ್ದು ಹೋಗುತ್ತಿವೆ. ಸರ್ಕಾರ ಅನುಚ್ಛೇದಗಳ ಮೇಲೆ ಚರ್ಚೆ ನಡೆಸಲು ಬಯಸುತ್ತಿದೆ. ಆದರೆ ರೈತರು ಕಾಯ್ದೆ ಹಿಂಪಡೆಯುವುದಕ್ಕೆ ಪಟ್ಟು ಹಿಡಿದಿದ್ದಾರೆ. ಹಾಗಾಗಿ ಸಮಿತಿ ನಿರ್ಣಯದವರೆಗೆ ಕಾಯ್ದೆಗಳ ಜಾರಿಯನ್ನು ತಡೆಯಲು ಸೂಚಿಸುತ್ತೇವೆ ಎಂದು ಬೋಬ್ಡೆ ನೇತೃತ್ವದ ನ್ಯಾಯಪೀಠ ಹೇಳಿತು.

‘ಆದರೆ, ಒಂದು ವೇಳೆ ಕಾಯ್ದೆ ಜಾರಿಯಾಗುವುದನ್ನು ತಡೆ ಹಿಡಿದರೆ, ಪ್ರತಿಭಟನೆಯನ್ನು ಸ್ಥಳಾಂತರಿಸಬಹುದೆ? ಯಾರಾದರೂ ಈ ಶಾಂತಿ ಕದಡುವ ಪ್ರಯತ್ನ ಮಾಡಬಹುದು ಎಂಬ ಆತಂಕವಿದೆ. ಹಾಗೇನಾದರೂ ಆದರೆ ನಾವೆಲ್ಲರೂ ಅದಕ್ಕೆ ಹೊಣೆಗಾರರಾಗಿರುತ್ತೇವೆ. ನಮ್ಮ ಕೈಗಳಿಗೆ ರಕ್ತ, ಗಾಯಗಳು ಅಂಟಿಕೊಳ್ಳುವುದು ಬೇಡ” ಎಂದು ನ್ಯಾಯಪೀಠ ಹೇಳಿತು.

ಎರಡೂ ಗಂಟೆಗಳ ಕಾಲ ವಾದ ವಿವಾದ ಬಳಿಕ ಸಮಿತಿ ರಚನೆಗೆ ಸೂಚಿಸಿದ್ದು, ಸಮಿತಿ ನಿರ್ಧಾರಗಳ ಆಧಾರದ ಮೇಲೆ ತೀರ್ಪು ತೆಗೆದುಕೊಳ್ಳಲಾಗುವುದು ಎಂದು ಬೋಬ್ಡೆ, ಎ ಎಸ್‌ ಬೋಪಣ್ಣ ಮತ್ತು ವಿ ರಾಮಾಸುಬ್ರಮಣ್ಯನ್‌ ಒಳಗೊಂಡ ಪೀಠ ತಿಳಿಸಿತು.

ಇನ್ನೊಂದೆಡೆ ಸುಪ್ರೀಂ ಆದೇಶದ ಕುರಿತು ಪ್ರತಿಕ್ರಿಯಿಸಿರುವ ದೆಹಲಿಯಲ್ಲಿನ ಧರಣಿ ನಿರತ ರೈತರು ಕಾಯ್ದೆಗಳಿಗೆ ತಾತ್ಕಾಲಿಕ ತಡೆ ತಂದಿದ್ದಾರೆ. ಆದರೆ ಕರಾಳ ಕೃಷಿ ಕಾಯ್ದೆಗಳು ಸಂಪೂರ್ಣ ವಾಪಸ್ ಆಗಬೇಕು ಎನ್ನುವುದು ನಮ್ಮ ಹಕ್ಕೊತ್ತಾಯ. ತಾತ್ಕಾಲಿಕ ತಡೆಯ ಮುಖಾಂತರ ರೈತರನ್ನು ಇಲ್ಲಿಂದ ಒಕ್ಕಲೆಬ್ಬಿಸುವ ಹುನ್ನಾರವಿದೆಯೆಂಬ ಅನುಮಾನವಿದೆ. ಅದಕ್ಕೆ ನಾವು ಆಸ್ಪದ ಕೊಡುವುದಿಲ್ಲ, ಹೋರಾಟ ಮುಂದುವರೆಸುತ್ತೇವೆ ಎಂದು ನಾನುಗೌರಿ.ಕಾಂಗೆ ತಿಳಿಸಿದ್ದಾರೆ.


ಇದನ್ನೂ ಓದಿ: ಹೊಸ ಚರಿತ್ರೆ ಬರಿಯಲಿರುವ ಜನವರಿ 26ರ ರೈತ ಹೋರಾಟ: ಇದರಲ್ಲಿ ನಿಮ್ಮ ಪಾತ್ರವೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...