ಕೃಷಿ ಕಾಯ್ದೆಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯ ನಾಲ್ವರು ಸದಸ್ಯರಲ್ಲೊಬ್ಬರಾದ ಭೂಪಿಂದರ್ ಸಿಂಗ್ ಮನ್ ಸಮಿತಿಯಿಂದ ಸ್ವಯಂ ಹೊರಗುಳಿಯುವುದಾಗಿ ಘೋಷಿಸಿದ್ದಾರೆ.
ಮಾಜಿ ಸಂಸದ ಮತ್ತು ಅಖಿಲ ಭಾರತ ಕಿಸಾನ್ ಸಮನ್ವಯ ಸಮಿತಿಯ ಅಧ್ಯಕ್ಷರರಾಗಿದ್ದ ಅವರು ಸುಪ್ರೀಂ ಕೋರ್ಟ್ ನೇಮಿಸಿದ ಕೃಷಿ ಕಾನೂನು ಸಮಿತಿಯ ನಾಲ್ವರು ಸದಸ್ಯರಲ್ಲಿ ಒಬ್ಬರಾಗಿದ್ದರು. ಇಂದು ಪತ್ರಿಕಾ ಹೇಳಿಕೆ ನೀಡಿರುವ ಅವರು, “ನಾನೊಬ್ಬ ರೈತ ಮತ್ತು ರೈತ ಮುಖಂಡನಾಗಿ ರೈತರಲ್ಲಿರುವ ಭಾವನೆಗಳು ಮತ್ತು ಆತಂಕದ ದೃಷ್ಟಿಯಿಂದ ನಾನು ಸಮಿತಿಯಿಂದ ಹೊರಗುಳಿಯುತ್ತಿದ್ದೇನೆ ಮತ್ತು ರೈತರ ಹಿತಾಸಕ್ತಿಗಳಿಗೆ ಧಕ್ಕೆಯುಂಟುಮಾಡುವುದಿಲ್ಲ” ಎಂದು ತಿಳಿಸಿದ್ದಾರೆ.
ಸಮಿತಿಗೆ ನಾಮನಿರ್ದೇಶನ ಮಾಡಿದ್ದಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ತಿಳಿಸಿರುವ ಅವರು, ಪಂಜಾಬ್ ಮತ್ತು ದೇಶದ ರೈತರ ಹಿತಾಸಕ್ತಿಗಳಲ್ಲಿ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ. ಹಾಗಾಗಿ ನಾನು ಯಾವಾಗಲೂ ರೈತರು ಮತ್ತು ಪಂಜಾಬ್ ಪರ ನಿಲ್ಲುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
S. Bhupinder Singh Mann Ex MP and National President of BKU and Chairman of All India Kisan Coordination Committee has recused himself from the 4 member committee constituted by Hon'ble Supreme Court pic.twitter.com/pHZhKXcVdT
— Bhartiya Kisan Union (@BKU_KisanUnion) January 14, 2021
2020ರ ಡಿಸೆಂಬರ್ 14 ರಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿ ಮಾಡಿ, ವಿರೋಧಗಳಿಗೆ ತಲೆಬಾಗಬೇಡಿ, ಕಾನೂನುಗಳನ್ನು ಜಾರಿಗೆ ತನ್ನಿ ಎಂದು ಭೂಪಿಂದರ್ ಸಿಂಗ್ ಮನ್ ಮನವಿ ಪತ್ರ ನೀಡಿದ್ದರು. ಆ ಮೂಲಕ ಅವರು ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ಬೆಂಬಲಿಸಿದ್ದರು. ಹಾಗಾಗಿ ಸಮಿತಿಯಲ್ಲಿ ಇವರನ್ನು ನೇಮಿಸಿದ್ದಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
ಸಮಿತಿಯಲ್ಲಿ ಭೂಪಿಂದರ್ ಸಿಂಗ್ ಮಾನ್ ಜೊತೆಗೆ ಡಾ. ಪ್ರಮೋದ್ ಕುಮಾರ್ ಜೋಷಿ, ಅಶೋಕ್ ಗುಲಾಟಿ, ಮತ್ತು ಅನಿಲ್ ಘನ್ವತ್ ಇದ್ದು ಇವರೆಲ್ಲರೂ ಈಗಾಗಲೇ ಒಂದಲ್ಲ ಒಂದು ರೀತಿಯಲ್ಲಿ ಕಾಯ್ದೆಯ ಪರವಾಗಿರುವವರು ಎಂದು ಆರೋಪಿಸಲಾಗಿದೆ. ಇದಕ್ಕೆ ಆಧಾರವೆಂಬುವಂತೆ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡಿರುವ ಇವರ ಹೇಳಿಕೆಗಳು, ಲೇಖನಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ಸುಪ್ರೀಂ ನೇಮಿಸಿದ ಸಮಿತಿಯಲ್ಲಿನ ಸದಸ್ಯರೆಲ್ಲರೂ ಕೃಷಿ ಕಾಯ್ದೆ ಸಮರ್ಥಕರು!: ಭುಗಿಲೆದ್ದ ಆಕ್ರೋಶ


