ರಾಜ್ಯ ಸರ್ಕಾರ ಈಗಾಗಲೇ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ(ಗೋಹತ್ಯೆ ನಿಷೇಧ ಮಸೂದೆ) ಮತ್ತು ಸಂರಕ್ಷಣಾ ಕಾನೂನನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದೆ. ಈ ಕಾನೂನು ಜನವರಿ 18 ರಿಂದ ರಾಜ್ಯದಲ್ಲಿ ಜಾರಿಯಾಗಲಿದ್ದು, ಈ ಮೂಲಕ ಗೋವುಗಳ ಹತ್ಯೆ ಹಾಗೂ ಅಕ್ರಮ ಸಾಗಾಟ ಸಂಪೂರ್ಣ ನಿಷೇಧಿಸಲಾಗುತ್ತದೆ ಎಂದು ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.
ಪಶು ಸಂಗೋಪನಾ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಶನಿವಾರ ಆದೇಶ ಹೊರಡಿಸಿ, ರಾಜ್ಯಪತ್ರವನ್ನು ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬರಲಿದ್ದು, ನಿಯಮಗಳನ್ನು ರೂಪಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಶೀಘ್ರದಲ್ಲೆ ಅವುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಗೋಹತ್ಯೆ ಮಸೂದೆಗೆ ಸುಗ್ರೀವಾಜ್ಞೆ: ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದ ಹೈಕೋರ್ಟ್
ಜಾನುವಾರು ಸಾಗಾಣಿಕೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಿ ಜಾರಿಗೊಳಿಸಲಾಗುವುದು. ರಾಜ್ಯದಲ್ಲಿ ರೈತರು, ಕೃಷಿ ಉದ್ದೇಶಕ್ಕಾಗಿ ಜಾನುವಾರು ಸಾಗಣೆ ಮಾಡುವವರು ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೃಷಿ ಉದ್ದೇಶಕ್ಕಾಗಿ ಜಾನುವಾರು ಸಾಗಾಣೆ ಮಾಡುವವರು ತಮ್ಮ ಸಂಪೂರ್ಣ ವಿಳಾಸ, ಆಧಾರ್ ಸಂಖ್ಯೆ, ಮೊಬೈಲ್‍ಸಂಖ್ಯೆ, ಸಾಗಾಣೆ ಉದ್ದೇಶ, ಜಾನುವಾರುಗಳ ವಯಸ್ಸು ಸೇರಿದಂತೆ ದೃಢೀಕರಣ ನೀಡಬೇಕು ಎಂದು ಸೂಚಿಸಲಾಗಿದೆ.
ಪೊಲೀಸ್ ಇಲಾಖೆಯು ಗೋವುಗಳ ಸಂರಕ್ಷಣೆಯಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಗಳು(ಎನ್‍ಜಿಒ) ಹಾಗೂ ಪ್ರಾಣಿ ಕಲ್ಯಾಣ ಮಂಡಳಿಯ ಜೊತೆಗೆ ಕೈಜೋಡಿಸಲು ಹಾಗೂ ಎಲ್ಲ ಹಂತಗಳಲ್ಲಿ ಕಾಯ್ದೆಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಅಲ್ಲದೆ, ಗೋಹತ್ಯೆ, ಅಕ್ರಮ ಸಾಗಾಟದ ಮೇಲೆ ಪೊಲೀಸ್ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆ ಹೆಚ್ಚು ನಿಗಾವಹಿಸಬೇಕು ಎಂದು ಪ್ರಭು ಚೌಹಾಣ್ ಹೇಳಿದ್ದಾರೆ.
ಅಕ್ರಮ ಗೋವುಗಳ ಸಾಗಾಟ ಮತ್ತು ವಧೆ ಆಗುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆ, ಜಿಲ್ಲೆ, ತಾಲೂಕಿನ ವ್ಯಾಪ್ತಿಯ ಪಶುಪಾಲನಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲು ಸಾರ್ವಜನಿಕರಿಗೆ ಮನವಿ ಮಾಡುತ್ತೇನೆ ಎಂದು ಪ್ರಭು ಚೌಹಾಣ್ ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ: ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ – ಶೃಂಗೇರಿಯಲ್ಲಿ ದಾಖಲಾದ ಮೊದಲ ಪ್ರಕರಣವೆ ಸುಳ್ಳು?


