ರೈತ ಪ್ರತಿಭಟನೆಯಲ್ಲಿ 60 ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ಈ ಘಟನೆಗೆ ಕಲ್ಲು ಕೂಡ ಕರಗಬಹುದು, ಆದರೆ ಪ್ರಧಾನಿ ಮೋದಿಯ ಹೃದಯ ಕರಗಲಿಲ್ಲ. ಅವರು ಸೌರಭ್ ಗಂಗೂಲಿಯ ಹೃದಯಾಘಾತಕ್ಕಾಗಿ ಟ್ವೀಟ್ ಮಾಡಿದ್ದಾರೆಯೇ ಹೊರತು ರೈತರಿಗಾಗಿ ಮರುಗಿಲ್ಲ ಎಂದು ರೈತ ಹೋರಾಟದ ಮುಖಂಡ, ಸ್ವರಾಜ್ ಇಂಡಿಯಾ ಪಕ್ಷದ ನಾಯಕ ಯೋಗೇಂದ್ರ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತ-ಕಾರ್ಮಿಕ-ದಲಿತ-ಜನಪರ ಸಂಘಟನೆಗಳ “ಐಕ್ಯ ಹೋರಾಟ’’ವು ಶನಿವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ, “ರಾಷ್ಟ್ರೀಯ ನಾಯಕರೊಡನೆ ಮುಕ್ತ ಸಂವಾದ” ಕಾರ್ಯಕ್ರಮದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಇದನ್ನೂ ಓದಿ: ಕೃಷಿ ಕಾಯ್ದೆಗಳ ಸಮರ್ಥನೆ: ತೊಂದರೆಗೊಳಗಾದವರಿಗೆ ರಕ್ಷಣೆ ಅಗತ್ಯವೆಂದ IMF
“ರೈತ ಮುಖಂಡರಾದ ಗೋಪಾಲ್ ಗೌಡ, ನಂಜುಂಡಸ್ವಾಮಿ, ಪುಟ್ಟಣ್ಣಯ್ಯ ಅವರು ರೈತರು ಯಾವಾಗ ಎದ್ದೇಳುತ್ತಾರೆ ಎಂದು ಮಾತನಾಡುತ್ತಿದ್ದರು. ಆ ದಿನ ಇಂದು ಬಂದಿದೆ. ಅವರುಗಳ ಆತ್ಮಗಳು ಈ ಎಲ್ಲವನ್ನು ಮೇಲಿನಿಂದ ನೋಡುತ್ತಿವೆ ಮತ್ತು ನಮಗೆ ಆಶೀರ್ವಾದ ಮಾಡುತ್ತಿವೆ” ಎಂದು ಯೋಗೇಂದ್ರ ಯಾದವ್ ಹೇಳಿದ್ದಾರೆ.
ಈ ಕಾನೂನುಗಳನ್ನು ಹೇರುವ ಮೂಲಕ ರೈತರಿಗೆ ಐತಿಹಾಸಿಕ ಉಡುಗೊರೆಯನ್ನು ನೀಡಲು ಬಯಸುತ್ತೇನೆ ಎಂದು ಮೋದಿ ಹೇಳುತ್ತಾರೆ. ಆದರೆ ರೈತರೇ ಇದು ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಕೃಷಿ ಕಾನೂನಿನ ಬಗ್ಗೆ ಚರ್ಚಿಸಲು ನೀವು ಯಾವುದಾದರೂ ರೈತ ಸಂಘಟನೆಗಳನ್ನು ಸಂಪರ್ಕಿಸಿದ್ದೀರಾ? ಎಂದು ಪ್ರಶ್ನಿಸಿದ ಯೋಗೇಂದ್ರ ಯಾದವ್, “ಈ ಬಗ್ಗೆ ಚರ್ಚಿಸಿರುವ ದೊಡ್ಡ ಸಂಖ್ಯೆಯ ಸದಸ್ಯರನ್ನು ಹೊಂದಿರುವ ಯಾವುದಾದರೂ ರೈತ ಸಂಘಟನೆಗಳ ಹೆಸರನ್ನು ಬಹಿರಂಗ ಪಡಿಸಿ” ಎಂದು ಕೇಂದ್ರ ಸರ್ಕಾರಕ್ಕೆ ಸವಾಲೆಸೆದರು.
“ಸ್ವತಃ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಜೊತೆ ಗುರುತಿಸಿಕೊಂಡಿರುವ ರೈತ ಸಂಘಗಳು ಕೂಡಾ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಹೇಳುತ್ತಿವೆ. ಈಗ ಮೋದಿ ಮಾತ್ರ ನಾನು ರೈತರಿಗೆ ಉಡುಗೊರೆ ನೀಡಿದ್ದೇನೆ ಎಂದು ಹೇಳುತ್ತಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೆಎಫ್‌ಸಿ ಎಂದರೆ ಏನು ಗೊತ್ತಾ…? ನಮ್ಮ ರೈತರು ಹೇಳುತ್ತಾರೆ ಕೇಳಿ..!
