ವಿದೇಶಿ ಕಂಪನಿಯಾದರು ದೇಶದಾದ್ಯಂತ ತನ್ನದೆ ಛಾಪು ಮೂಡಿಸಿರುವ ಕೆಎಫ್‌ಸಿ ಫಾಸ್ಟ್ ಫುಡ್ ಅಂಗಡಿ ಮಳಿಗೆಗಳು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಮೆರಿಕಾ ಮೂಲದ ಕರ್ನಲ್ ಹರ್ಲ್ಯಾಂಡ್ ಸಾಂಡರ್ಸ್ ಎಂಬ ವೃದ್ಧ ವ್ಯಕ್ತಿಯಿಂದ ಆರಂಭವಾದ ಕೆಂಚುಕಿ ಫ್ರೈಡ್ ಚಿಕನ್ (KFC) ಎಂಬ ಈ ಕಂಪನಿ ನಮ್ಮ ದೇಶದ್ದೆ ಎನ್ನುವ ಮಟ್ಟಿಗೆ ಜನಪ್ರಿಯವಾಗಿದೆ.
ಇಂತಹ ಒಂದು ವಿದೇಶಿ ಕಂಪನಿಗೆ, ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಸಮರ ಸಾರಿರುವ ರೈತರು ಇಟ್ಟಿರುವ ಹೆಸರು ಮತ್ತಷ್ಟು ಕುತೂಹಲಕಾರಿಯಾಗಿದೆ. ಹೌದು. ಕೆಎಫ್‌ಸಿ ಎಂದರೆ ಕೆಂಚುಕಿ ಫ್ರೈಡ್ ಚಿಕನ್ ಅಲ್ಲವಂತೆ, ಪ್ರತಿಭಟನಾ ನಿತರ ರೈತರ ಪ್ರಕಾರ ಕಿಸಾನ್ ಫುಡ್ ಕಾರ್ನರ್ (Kisaan Food Corner) ಎಂದು.
ಸಿಂಘು ಗಡಿಯಲ್ಲಿ ಕಳೆದ 50 ದಿನಗಳಿಂದ ಹೋರಾಟ ನಿರತ ರೈತರು ಇಲ್ಲಿಯೇ ಇರುವ ಕೆಎಫ್‌ಸಿ ಮಾಲ್ ಅನ್ನು ರೈತ ಹೋರಾಟಕ್ಕಾಗಿ ಪಡೆದಿದ್ದಾರೆ!. ಇಲ್ಲಿ ರೈತರಿಗೆ, ಪ್ರತಿಭಟನೆಯಲ್ಲಿ ಭಾಗವಹಿಸುವವರಿಗೆ ನೀಡಲಾಗುವ ಲಂಗರ್‌ಗಾಗಿ (ಆಹಾರಕ್ಕಾಗಿ) ಬೇಕಾಗುವ ಎಲ್ಲಾ ಬಗೆಯ ಆಹಾರ ಸಾಮಾಗ್ರಿಗಳನ್ನು ಇಲ್ಲಿ ಶೇಖರಿಸಲಾಗಿದೆ.
ಇದನ್ನೂ ಓದಿ: ರೈತ ಹೋರಾಟದಲ್ಲಿ ಮಾವೋವಾದಿಗಳಿಲ್ಲ ಎಂದ ಗೃಹ ಸಚಿವಾಲಯ: ಬಿಜೆಪಿ ನಾಯಕನಿಗೆ ಮುಖಭಂಗ
ಕೆಎಫ್‌ಸಿ ಮಳಿಗೆ ಮೇಲೆ ಈ ರೀತಿಯ ಬರಹ ಹಾಕಿರುವ ಭಿತ್ತಿಪತ್ರವನ್ನು ಪ್ರತಿಭಟನಾಕಾರರು ಅಂಟಿಸಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಲ್ಯಾಂಡ್ ಮಾರ್ಕ್ ಆಗಿ ಕಾಣಿಸಿಕೊಂಡಿರುವ ಈ ಮಾಲ್, ಹೊಸ ಹೆಸರಿನೊಂದಿಗೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಅದಕ್ಕೆ ಈ ಕಿಸಾನ್ ಫುಡ್ ಕಾರ್ನರ್ ಕೂಡ ಕಾರಣ. ದೆಹಲಿ ಚಲೋ ಆರಂಭವಾದ ನವೆಂಬರ್ 26, 27 ರಿಂದಲೂ ಲಂಗರ್‌ಗಳನ್ನು ಹಾಕಿರುವ ತಂಡಗಳು ಇಲ್ಲಿ ದಿನಸಿ ಸಾಮಗ್ರಿಗಳನ್ನು ದಾಸ್ತಾನು ಮಾಡಿದ್ದಾರೆ.
ʼಪ್ರತಿಭಟನೆ ಆರಂಭವಾದಾಗಿನಿಂದ ಈ ಮಾಲ್‌ನಲ್ಲಿ ನಾವು ಇಲ್ಲಿಯ ಹತ್ತಿರದ ಲಂಗರ್‌ಗಳಿಗೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ಇಡುತ್ತಿದ್ದೆವೆ. ಈ ಕಾರಣದಿಂದಲೇ ನಾವು ಕೆಎಫ್‌ಸಿ ಎಂಬ ಹೆಸರನ್ನು ಕಿಸಾನ್ ಫುಡ್ ಕಾರ್ನರ್ ಎಂದು ನಾಮಕರಣ ಮಾಡಿದ್ದೆವೆ. ಈಗ ಇಲ್ಲಿ ಎಲ್ಲರೂ ಇದನ್ನು ಕಿಸಾನ್ ಫುಡ್ ಕಾರ್ನರ್ ಎಂದು ಕರೆಯುತ್ತಿದ್ದಾರೆ. ಮಾಲ್ ಮೇಲೆ ಇರುವ ಕೆಎಫ್‌ಸಿ ಎಂಬ ದೊಡ್ಡ ಬೋರ್ಡ್ ಪಕ್ಕದಲ್ಲಿಯೂ ನಾವು K- Kisaan, F-Food C-Corner ಎಂದು ಅದರ ಅರ್ಥವನ್ನು ಬಿಡಿಸಿ ಬರೆದಿದ್ದೇವೆʼ ಎಂದು ಮಾರುತಿ ಮಾನವ್ ಎಂಬ ಪ್ರತಿಭಟನಾ ನಿರತ ವಿದ್ಯಾರ್ಥಿ ತಿಳಿಸಿದ್ದಾರೆ.
ಕೆಎಫ್‌ಸಿ ಕೂಡಾ ಹೋರಾಟದಲ್ಲಿ ನಮಗೆ ಬೆಂಬಲ ನೀಡುತ್ತಿದೆ ಎಂದು ಹೆಮ್ಮೆ ಪಡುತ್ತಾರೆ ರೈತರು. ಇಷ್ಟೇ ಅಲ್ಲದೆ ಪ್ರವಾಸಿ ತಾಣವಾಗಿ, ಹೊಸ ನಗರವಾಗಿ ಮಾರ್ಪಾಡಾಗಿರುವ ಪ್ರತಿಭಟನಾ ಸ್ಥಳಗಳಾಗಿರುವ ದೆಹಲಿಯ ಗಡಿಗಳಿಗೆ ಹಲವಾರು ಮಂದಿ ನಗರ ಪ್ರದೇಶದವರು ಭೇಟಿ ನೀಡುತ್ತಿದ್ದಾರೆ. ಕೆಲವರು ಪ್ರತಿಭಟನೆ ನೋಡಲು ಬರುತ್ತಾರೆ. ಮತ್ತೆ ಕೆಲವರು ಸೇವೆ ಮಾಡಲು, ಇನ್ಯಾರೋ ರೈತರಿಗೆ ಬೆಂಬಲ ನೀಡಲು ಮತ್ತಷ್ಟು ಜನ ರೈತರಿಗಾಗಿ ದೇಣಿಗೆ ನೀಡಲು ಇಲ್ಲಿಗೆ ಪ್ರತಿ ದಿನ ಬರುತ್ತಿದ್ದಾರೆ.
ಇದನ್ನೂ ಓದಿ: ಸದ್ಯಕ್ಕೆ ಕೃಷಿ ಕಾಯ್ದೆ ಜಾರಿ ತಡೆಹಿಡಿಯಿರಿ, ಇಲ್ಲದಿದ್ದರೆ ನಾವು ತಡೆಯುತ್ತೇವೆ: ಕೇಂದ್ರಕ್ಕೆ ಸುಪ್ರೀಂ ತರಾಟೆ

💕🙏💐