Homeಅಂತರಾಷ್ಟ್ರೀಯಮೋದಿ ಗೆದ್ರೆ ಒಳ್ಳೇದು ಅಂತ ಪಾಕ್ ಪ್ರಧಾನಿ ಹೇಳಿದ್ಯಾಕೆ?

ಮೋದಿ ಗೆದ್ರೆ ಒಳ್ಳೇದು ಅಂತ ಪಾಕ್ ಪ್ರಧಾನಿ ಹೇಳಿದ್ಯಾಕೆ?

- Advertisement -
- Advertisement -

ಇಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‍ಖಾನ್ ಅವರು ಹೇಳಿದ ಒಂದು ಮಾತು ಎಲ್ಲಾ ಕಡೆ ಸದ್ದು ಮಾಡ್ತಿದೆ. ಇದು ಪಾಕಿಸ್ತಾನದ ಜೊತೆಗೆ ಮೋದಿಗಿರುವ ಮ್ಯಾಚ್ ಫಿಕ್ಸಿಂಗ್ ಅಲ್ವಾ ಎಂತಲೂ, ಮೋದಿ ಗ್ಯಾಂಗೇ ತುಕ್ಡೇ ತುಕ್ಡೇ ಗ್ಯಾಂಗ್ ಎಂತಲೂ ನೆಟ್ಟಿಗರು ಜಡಾಯಿಸುತ್ತಿದ್ದಾರೆ. ಹಾಗಾದರೆ ಅವರ ಮಾತಿನ ಅರ್ಥ ಇಷ್ಟೇನಾ?

ನಿಜವಾಗಲೂ ಅಲ್ಲ. ಇಮ್ರಾನ್‍ಖಾನ್ ಹೇಳಿರುವ ಮಾತಿನ ಮುಂದುವರೆದ ಭಾಗ ಹೀಗಿದೆ. ಒಂದು ಬಲಪಂಥೀಯ ಸರ್ಕಾರ ಇದ್ದರೆ, ಶಾಂತಿ ಮಾತುಕತೆ ಸಾಧ್ಯ, ಕಾಶ್ಮೀರದ ಕುರಿತೂ ಚರ್ಚೆ ಮಾಡಬಹುದು ಎಂದು ಅವರು ಹೇಳಿದ್ದಾರೆ. ಈ ಮಾತಿಗೆ ಅರ್ಥ ಇದೆ. ಯಾವುದೇ ಎರಡು ದೇಶಗಳ ನಡುವೆ ಬಹಳ ಟೆನ್ಶನ್ ಇದ್ದರೆ, ಎರಡೂ ದೇಶಗಳಲ್ಲೂ ಅದರ ದುರುಪಯೋಗ ಮಾಡಿಕೊಳ್ಳುವ ಶಕ್ತಿಗಳು ಇದ್ದೇ ಇರುತ್ತವೆ. ಆ ದೇಶವನ್ನು ತೋರಿಸಿ ಇವರು, ಈ ದೇಶವನ್ನು ತೋರಿಸಿ ಅವರು ಹುಸಿ ರಾಷ್ಟ್ರೀಯವಾದ ಬಿತ್ತುತ್ತಾ ಇರುತ್ತಾರೆ. ದೇಶದೊಳಗೆ ತಾವು ಮಾಡುವ ಎಲ್ಲಾ ಅನ್ಯಾಯಗಳಿಗೂ ಅದನ್ನೊಂದು ಗುರಾಣಿಯಾಗಿ ಬಳಸುತ್ತಾ ಇರುತ್ತಾರೆ.

ಒಂದು ವೇಳೆ ಎರಡೂ ದೇಶಗಳಲ್ಲಿನ ಬಹುಸಂಖ್ಯಾತ ಜನರು ಭಿನ್ನ ಭಿನ್ನ ಧರ್ಮಕ್ಕೆ ಸೇರಿದ್ದರಂತೂ ಮುಗಿದೇ ಹೋಯಿತು, ಈ ನಕಲಿ ರಾಷ್ಟ್ರೀಯವಾದಿಗಳಿಗೆ ಹಬ್ಬ. ಪಾಕಿಸ್ತಾನ ಅಭಿವೃದ್ಧಿ ಹೊಂದದೇ ಈ ರೀತಿ ಹಾಳಾಗಿ ಹೋಗಿರುವುದರಲ್ಲಿ ಇದರ ಪ್ರಮುಖ ಪಾತ್ರ ಇದೆ. ಒಂದು ವೇಳೆ ಎರಡೂ ಕಡೆ, ಅಥವಾ ಒಂದು ಕಡೆ ಈ ನಕಲಿ ರಾಷ್ಟ್ರೀಯವಾದಿಗಳೇ ಅಧಿಕಾರಕ್ಕೆ ಬಂದು, ಅವರೇ ಮಾತುಕತೆಯಲ್ಲಿ ಭಾಗಿಯಾದರೆ?

ಈ ಸನ್ನಿವೇಶವನ್ನು ಊಹಿಸಿಕೊಳ್ಳಿ. ಇಂತಹ ಹುಸಿ ರಾಷ್ಟ್ರೀಯವಾದಿಗಳಲ್ಲದೇ, ಬೇರೆ ಒಂದು ಪಕ್ಷ ಅಧಿಕಾರದಲ್ಲಿರುತ್ತದೆ. ಅದು ಆ ಇನ್ನೊಂದು ರಾಷ್ಟ್ರದ ಜೊತೆಗೆ ಮಾತುಕತೆಗೆ ಕೂರುತ್ತದೆ. ಮಾತುಕತೆ ಎಂದ ಮೇಲೆ ಕೊಟ್ಟು ತೆಗೆದುಕೊಳ್ಳುವುದು ಇರುತ್ತದೆ. ಅದು ಸಾಧ್ಯವಾಗುವುದೇ ಇಲ್ಲ. ಏಕೆಂದರೆ ಅವರೇನಾದರೂ ಸ್ವಲ್ಪ ಆ ಕಡೆ ಈ ಕಡೆ ಮಾತಾಡಿದರೂ, ಶುರುವಾಗುತ್ತದೆ ‘ಇವರು ದೇಶದ ಹಿತಾಸಕ್ತಿಯನ್ನು ಬಲಿ ಕೊಟ್ಟರು. ಇವರು ಆ ಇನ್ನೊಂದು ದೇಶದ ಏಜೆಂಟರು’ ಇತ್ಯಾದಿ. ಒಂದು ವೇಳೆ ನಕಲಿ ರಾಷ್ಟ್ರೀಯವಾದಿಗಳೇ ಅಧಿಕಾರದಲ್ಲಿದ್ದರೆ? ಆ ಅಪಾಯ ಅಷ್ಟೊಂದು ಇರುವುದಿಲ್ಲ. ಅವರಿಗಿಂತ ಉಗ್ರ ನಕಲಿ ರಾಷ್ಟ್ರೀಯವಾದಿಗಳು ಯಾರಾದರೂ ಇದ್ದರೆ ಅವರು ಸ್ವಲ್ಪ ಕೂಗಾಡಬಹುದು ಅಷ್ಟೆ. ಈಗ ಮೋದಿ ವಿರುದ್ಧ ಪ್ರವೀಣ್ ತೊಗಾಡಿಯಾ ಕೂಗಾಡುತ್ತಿಲ್ಲವೇ? ಹಾಗೆ.

ವಾಜಪೇಯಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ದಿನಗಳನ್ನು ನೆನಪಿಸಿಕೊಳ್ಳಿ. ಯುದ್ಧಾನಂತರವೂ, ಯುದ್ಧಕ್ಕೆ ಕಾರಣನಾದ ಜನರಲ್ ಮುಷರಫ್ ಜೊತೆಗೇ ಮಾತುಕತೆ ನಡೆಸಿದರು. ಸಂಝೋತಾ ಎಕ್ಸ್‍ಪ್ರೆಸ್ ಬಿಟ್ಟರು. ಕಾಶ್ಮೀರವೂ ಚೆನ್ನಾಗಿತ್ತು.

ಆದರೆ ಇಮ್ರಾನ್ ಖಾನ್ ಮೋಸ ಹೋಗುತ್ತಿರುವುದು ಇಲ್ಲೇ. ಮೋದಿ ಮತ್ತು ವಾಜಪೇಯಿ ಒಂದೇ ಅಲ್ಲ. ಯಾವ ಕಾರಣಕ್ಕೂ ಎರಡೂ ದೇಶಗಳ ನಡುವಿನ ಸಮಸ್ಯೆ ಬಗೆಹರಿಯುವುದು ಅವರಿಗೆ ಬೇಕಿಲ್ಲ. ಆದರೂ ಒಂದು ಅವಕಾಶ ಇದೆ. ಏಕೆಂದರೆ, ಮೋದಿಯ ಪರಮಾಪ್ತರಾದ ಅಂಬಾನಿ ಮತ್ತು ಅದಾನಿಗಳಿಗೆ ಪಾಕಿಸ್ತಾನದಲ್ಲಿ ವ್ಯಾವಹಾರಿಕ ಸಂಬಂಧದ ಅಗತ್ಯವಿದೆ. ಚುನಾವಣೆ ಮುಗಿದ ನಂತರ ಪಾಕಿಸ್ತಾನವನ್ನು ಬಯ್ದು ಏನು ಪ್ರಯೋಜನ? ಆಗ ಬಿಸಿನೆಸ್ ಡೀಲ್ ಮಾಡಿಕೊಳ್ಳುವುದು. ನಂತರ ದೇಶದೊಳಗೆ ಜನವಿರೋಧಿ ಕೆಲಸವನ್ನೇ ಮುಂದುವರೆಸುವುದು. ಮತ್ತೆ ಚುನಾವಣೆ ಬರುವ ಹೊತ್ತಿಗೆ ‘ರಾಷ್ಟ್ರೀಯವಾದ’ ತರುವುದು.

ಇಲ್ಲೇ ಇನ್ನೊಂದು ಮಾತನ್ನೂ ಹೇಳಬೇಕು. ಇಮ್ರಾನ್‍ಖಾನ್ ಸಹಾ ಎಲ್ಲಿಯವರೆಗೆ ತಮ್ಮಲ್ಲಿ ಉಗ್ರರಿಲ್ಲ, ಉಗ್ರರಿಗೆ ಪ್ರೋತ್ಸಾಹ ಕೊಡುತ್ತಿಲ್ಲ ಎಂಬ ಸುಳ್ಳುಗಳನ್ನು ಹೇಳುತ್ತಿರುತ್ತಾರೋ ಅಲ್ಲಿಯವರೆಗೆ ಅವರ ಬಗ್ಗೆಯೂ ನಂಬಿಕೆ ಬರಲ್ಲ. ಅವರ ನೆಲದಿಂದ ಭಾರತದಲ್ಲಿ ಅಶಾಂತಿ, ಹಿಂಸೆಗಳಿಗೆ ಕಾರಣರಾಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವ ತನಕ, ಭಾರತದ ಮಟ್ಟಿಗೆ ಅವರೂ ಸಹಾ ಇನ್ನೊಬ್ಬ ಪಾಕ್ ಪ್ರಧಾನಿ ಅಷ್ಟೇ.

ಇವೆಲ್ಲಾ ಕಾರಣಗಳಿಂದ ಭಾರತ ಮತ್ತು ಪಾಕಿಸ್ತಾನಗಳು ಪರಸ್ಪರ ಸ್ನೇಹಭಾವದಿಂದ ಅಭಿವೃದ್ಧಿಯ ಕಡೆಗೆ ಗಮನ ಕೊಡುವ ವಿಚಾರ ಇನ್ನೂ ದೂರವೇ ಉಳಿದಿವೆ ಎಂಬುದೇ ವಿಷಾದಕರ ಸಂಗತಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...