“ನಾನೂ ಬಿಜೆಪಿಗೆ ಹೋಗಿದ್ದರೆ ಮೈಸೂರಿನ ಉಸ್ತುವಾರಿ ಸಚಿವನಾಗಿರುತ್ತಿದ್ದೆ” ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ ಮೈಸೂರಿನಲ್ಲಿ ಹೇಳಿದ್ದಾರೆ. ಆರಂಭದಿಂದಲೂ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಜಿ.ಟಿ ದೇವೇಗೌಡ ಬಿಜೆಪಿಯ ಪರವಾಗಿ ಮೃದು ಧೋರಣೆ ಹೊಂದಿದ್ದರು.
“ಮೈಸೂರಿಗೆ ಬಂದು ನನ್ನನ್ನು ಪಕ್ಷದಿಂದ ಕಿತ್ತು ಹಾಕುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಪದೇಪದೇ ಏಕೆ ನನ್ನ ವಿಚಾರ ಮಾತನಾಡಬೇಕು? ನಟನೆ ಮಾಡುವುದನ್ನು ಎಚ್.ಡಿ.ಕುಮಾರಸ್ವಾಮಿ ಅವರನ್ನು ನೋಡಿಯೇ ಕಲಿಯಬೇಕು” ಎಂದು ವ್ಯಂಗ್ಯವಾಡಿದ್ದಾರೆ.
ಉಸ್ತುವಾರಿ ಸಚಿವರಾಗಿದ್ದಾಗಲೇ ನನ್ನನ್ನು ಕಡೆಗಣಿಸಲಾಗಿತ್ತು. ಇನ್ನು, ಈಗ ನನ್ನ ಮಾತು ಕೇಳುತ್ತಾರಾ? ಮೈಸೂರಿನ ಹೈಕಮಾಂಡ್ ಸಾ.ರಾ.ಮಹೇಶ್ ಅವರ ಮಾತನ್ನು ಮಾತ್ರ ಕೇಳುತ್ತಾರೆ. ನನ್ನನ್ನು ಯಾವುದೇ ಸಭೆಗೆ ಕರೆಯುತ್ತಿಲ್ಲ. ಮಾಧ್ಯಮಕ್ಕೆ ಹೇಳುವುದೊಂದು ಒಳಗೆ ಮಾಡುವುದೊಂದು ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಮರಾಠ ಪ್ರಾಧಿಕಾರ ರಚನೆಯೇ ಉದ್ಧವ್ ಠಾಕ್ರೆ ಹೇಳಿಕೆಗೆ ಪ್ರೇರಣೆ: ಡಿ.ಕೆ. ಶಿವಕುಮಾರ್ ಆರೋಪ
“ಎಲ್ಲರಂತೆ ನಾನೂ ಅಧಿಕಾರಕ್ಕೆ ಆಸೆಪಟ್ಟಿದ್ದರೆ ನಾರಾಯಣಗೌಡ, ಎಚ್.ವಿಶ್ವನಾಥ್, ಗೋಪಾಲಯ್ಯ ಜೊತೆ ಬಿಜೆಪಿಗೆ ಹೋಗುತ್ತಿದ್ದೆ. ಹಾಗೆ ಮಾಡಿದ್ದರೆ ಈಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ ಇರಬಹುದಿತ್ತು” ಎಂದು ಹೇಳಿದರು.
“ಎಚ್.ಡಿ.ದೇವೇಗೌಡರ ಮನೆಗೆ ಹೋಗಿ ಕೈ ಮುಗಿದು ಬಂದಿದ್ದೇನೆ. ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಎರಡು ವರ್ಷ ಶಾಸಕನಾಗಿ ಕ್ಷೇತ್ರದ ಕೆಲಸ ಮಾಡಿಕೊಂಡಿರುತ್ತೇನೆ” ಎಂದು ಜೆಡಿಎಸ್ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜೆ.ಪಿ. ನಡ್ಡಾ ಯಾರು, ಅವರಿಗೆ ನಾನ್ಯಾಕೆ ಉತ್ತರಿಸಲಿ: ರಾಹುಲ್ ಗಾಂಧಿ
ಕೆಲವು ದಿನಗಳ ಹಿಂದೆ ಪಕ್ಷದ ಪರ ಇಲ್ಲದವರನ್ನು ಮೈಸೂರಿನಿಂದಲೇ ಉಚ್ಚಾಟಿಸುವುದಾಗಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈಗ ಜೆಡಿಎಸ್ ವೀಕ್ಷಕರ ಪಟ್ಟಿಯಿಂದ ಕೈಬಿಡುವ ಮೂಲಕ ಜಿ.ಟಿ ದೇವೇಗೌಡ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಮುನ್ಸೂಚನೆ ತೋರಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಮೈಸೂರು ವಿಭಾಗದ ವೀಕ್ಷಕರುಗಳಾಗಿ ಶಾಸಕರಾದ ಎಚ್.ಡಿ ರೇವಣ್ಣ, ಸಾರಾ ಮಹೇಶ್, ಪುಟ್ಟರಾಜು, ಅಶ್ವಿನ್ ಕುಮಾರ್, ಅನ್ನದಾನಿ, ಮಾಜಿ ಶಾಸಕ ಚಿಕ್ಕಣ್ಣ, ನಿಖಿಲ್ ಕುಮಾರಸ್ವಾಮಿ, ಮೊಹಮ್ಮದ್ ಜಫ್ರುಲ್ಲಖಾನ್, ಅಬ್ದುಲ್ ಅಜೀಜ್. ಅಬ್ದುಲ್ಲಾ ಅವರನ್ನು ನೇಮಿಸಲಾಗಿದೆ. ಆದರೆ ಜಿ.ಟಿ ದೇವೇಗೌಡ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿ.ಟಿ ದೇವೇಗೌಡ, “ವಯಸ್ಸಾಗಿದೆ ಅಂತ ನನ್ನ ಹೆಸರು ಕೈಬಿಟ್ಟಿರಬಹುದು” ಎಂದು ಹೇಳಿದರು.
ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದಿದ್ದ ವ್ಯಕ್ತಿ ಸಾವು: ಸಾವಿಗೆ ಲಸಿಕೆ ಕಾರಣವಲ್ಲ ಎಂದ ಸಚಿವ ಸುಧಾಕರ್


