ಕಳೆದ ವರ್ಷ ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದ ಗಲಭೆ ಸೇರಿದಂತೆ, ಪ್ರಸ್ತುತ ರೈತರ ಆಂದೋಲನ ಮತ್ತು ಕೊರೊನಾ ಸಾಂಕ್ರಾಮಿಕವನ್ನು ಉತ್ತಮವಾಗಿ ನಿಭಾಯಿಸಿ ದೆಹಲಿ ಪೊಲೀಸರು ಸಾಧನೆ ಮಾಡಿದ್ದಾರೆ ಮತ್ತು ಈ ಪರೀಕ್ಷೆಗಳಲ್ಲಿ ಅವರು ಉತ್ತೀರ್ಣರಾಗಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಮಂಗಳವಾರ ಶ್ಲಾಘಿಸಿದ್ದಾರೆ.
ದೆಹಲಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಅಮಿತ್ ಶಾ, “ನಾನು ಫೆಬ್ರವರಿ 2020 ರಲ್ಲಿ ಇಲ್ಲಿಗೆ ಬಂದಿದ್ದೆ. ಆ ಸಮಯದಲ್ಲಿ ಪೊಲೀಸರು ಯಾವಾಗಲೂ ಸಾರ್ವಜನಿಕರೊಂದಿಗೆ ಇದ್ದಾರೆ ಎಂದು ನಾನು ಹೇಳಿದ್ದೆ. ಇಂದು ಒಂದು ವರ್ಷವಾಗಿದೆ. ಹಿಂತಿರುಗಿ ನೋಡಿದರೆ ಸಾಂಕ್ರಾಮಿಕ ಸಮಯದಲ್ಲಿ ಪೊಲೀಸರು ಸಾರ್ವಜನಿಕ ನಂಬಿಕೆಯನ್ನು ಹೇಗೆ ಗೆದ್ದರು ಎಂದು ಕಾಣುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಚಿವ ಸ್ಥಾನದ ಆಸೆ ಕೈಬಿಡಿ: ಅತೃಪ್ತರಿಗೆ ಖಡಕ್ ಎಚ್ಚರಿಕೆ ನೀಡಿದ ಅಮಿತ್ ಶಾ!
“2020 ರಲ್ಲಿ ದೆಹಲಿ ಮತ್ತು ದೇಶ ಅನೇಕ ಸವಾಲುಗಳು ಎದುರಿಸಿದ್ದವು. ಈಶಾನ್ಯ ದೆಹಲಿ ಗಲಭೆಗಳು, ಲಾಕ್‌ಡೌನ್ ಮತ್ತು ಅನ್-ಲಾಕ್ ಪ್ರಕ್ರಿಯೆ, ವಲಸಿಗರು ಮನೆಗೆ ತಲುಪಲು ಸಹಾಯ ಮಾಡುವುದು ಮತ್ತು ರೈತರ ಆಂದೋಲನವನ್ನು ಶಾಂತಿಯುತವಾಗಿ ನಿರ್ವಹಿಸುವುದು ಸೇರಿದಂತೆ. ಈ ವರ್ಷದ ಎಲ್ಲಾ ಪರೀಕ್ಷೆಗಳಲ್ಲಿ ಪೊಲೀಸರು ಉತ್ತಮ ಸಾಧನೆ ಮಾಡಿದ್ದಾರೆ ಹಾಗೂ ಉತ್ತೀರ್ಣರಾಗಿದ್ದಾರೆ” ಎಂದು ಅವರು ಶ್ಲಾಘಿಸಿದ್ದಾರೆ.

ಅಮಿತ್ ಶಾ, ಕೆಲವು ಪೊಲೀಸ್ ಸಿಬ್ಬಂದಿಯನ್ನು ಅವರ ಕಾರ್ಯಕ್ಷಮತೆಗಾಗಿ ಗೌರವಿಸಿದರು ಮತ್ತು ಕೊರೊನಾದಿಂದಾಗಿ ಪ್ರಾಣ ಕಳೆದುಕೊಂಡವರಿಗೆ ಗೌರವ ಸಲ್ಲಿಸಿದರು. ಗಣರಾಜ್ಯೋತ್ಸವದ ಮುನ್ನ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನೂ ಅವರು ವಹಿಸಿದ್ದರು.
“ಸವಾಲುಗಳನ್ನು ನಿಭಾಯಿಸುವ ಮೊದಲು ಅವುಗಳನ್ನು ಅರ್ಥಮಾಡಿಕೊಳ್ಳಬೇಕು. ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುವ ರೀತಿಯಲ್ಲಿ ಬದಲಾವಣೆಗಳನ್ನು ತರಬೇಕಾಗುತ್ತದೆ. ಆಗ ಮಾತ್ರ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ” ಎಂದು ಅಮಿತ್ ಶಾ ಹೇಳಿದ್ದಾರೆ.
2022 ರ ವೇಳೆಗೆ ದೇಶವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸಲಿದ್ದು, ಸುಧಾರಣೆ ಮತ್ತು ಉತ್ತಮ ಕಾರ್ಯಕ್ಷಮತೆಗಾಗಿ ಐದು ಗುರಿಗಳನ್ನು ನಿಗದಿಪಡಿಸುವಂತೆ ಪ್ರತಿ ಪೊಲೀಸ್ ಠಾಣೆಯನ್ನು ಕೇಳಿದ್ದಾರೆ.
ಇದನ್ನೂ ಓದಿ: ’ಅಮಿತ್ ಶಾ ಮನೆ ಮುಂದೆ ಈ ಇಬ್ಬರು ಪ್ರತಿಭಟಿಸುವಂತಿಲ್ಲ’: ದೆಹಲಿ ಪೊಲೀಸರ ’ವಿಚಿತ್ರ’ ನಿರ್ಧಾರ!


